ನವೀನ್ ಕುಮಾರ್ ಗೌಡ ಎಂದರೆ ಸಾಮಾನ್ಯರಿಗೆ ತಟ್ಟನೆ ನೆನಪಾಗದೇ ಇರಬಹುದು, ಆದರೆ ರಾಕಿ ಭಾಯ್ ಅಂದರೆ ಸಾಕು ಯುವ ಸಮೂಹದ ರೋಮಗಳು ಎದ್ದು ನಿಲ್ಲುತ್ತವೆ. ಆ ಧ್ವನಿಗೆ & ಆ ಆಕರ್ಷಕ ವ್ಯಕ್ತಿತ್ವಕ್ಕೆ ಅಳುವ ಮಗು ಕೂಡ ಕಿವಿಗೊಟ್ಟು ಕೇಳುತ್ತದೆ. ಸ್ಯಾಂಡಲ್‌ವುಡ್‌ನಿಂದ ಭಾರತೀಯ ಚಿತ್ರರಂಗದ ಉತ್ತುಂಗಕ್ಕೇರಿ, ಇಂದು ಇಂಗ್ಲಿಷ್ ಅಂದ್ರೆ ಹಾಲಿವುಡ್ ಮಟ್ಟದಲ್ಲೂ ಸೌಂಡ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಪಯಣವು ಕೇವಲ ಒಬ್ಬ ನಟನ ಕಥೆಯಲ್ಲ. ಬದಲಿಗೆ ಪರಿಶ್ರಮ & ದೂರದೃಷ್ಟಿ ಹಾಗೂ ಬದ್ಧತೆಯ ನಿಜ ರೂಪ ಎಂದರೆ ಸರಿಯಾಗುತ್ತದೆ.
ರಾಕಿಂಗ್ ಸ್ಟಾರ್ ಯಶ್ ಅವರ ಹಿನ್ನೆಲೆ ಅತ್ಯಂತ ಸರಳವಾಗಿದೆ. ಯಶ್ ತಂದೆ ಅರುಣ್ ಕುಮಾರ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದರೆ, ತಾಯಿ ಪುಷ್ಪ ಗೃಹಿಣಿ. ಎಸಿ ಸಿಟಿ ಅಂತಾನೇ ಹೆಸರು ಮಾಡಿರುವ ನಮ್ಮ ಮೈಸೂರಿನ ಮಹಾಜನ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಯಶ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಪ್ರಸಿದ್ಧ ನಾಟಕಕಾರ ಬಿ.ವಿ. ಕಾರಂತ ಅವರ ಬೆನಕ ನಾಟಕ ತಂಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗಭೂಮಿಯ ಗಟ್ಟಿ ತಳಪಾಯ ಹಾಕಿಕೊಂಡರು. ಆ ಮೂಲಕ ಯಶ್ ಅವರಿಗೆ ನಟನೆ ಮೇಲೆ ಬಿಗಿಯಾದ ಹಿಡಿತವು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಿಕ್ಕಿತ್ತು. ಆ ನಂತರವೇ ನೋಡಿ ಯಶ್ ಬಾಳಲ್ಲಿ ಹೊಸ ತಂಗಾಳಿ ಬೀಸಲು ಶುರುವಾಗಿದ್ದು, ಅಂದಹಾಗೆ ಕಿರುತೆರೆಗೆ ಪ್ರವೇಶಿಸಿ ನಂದಗೋಕುಲ, ಉತ್ತರಾಯಣ, ಮಳೆಬಿಲ್ಲು ಮುಂತಾದ ಕನ್ನಡದ ಜನಪ್ರಿಯ ಧಾರಾವಾಹಿ ಸ್ಕ್ರೀನ್ ಮೇಲೆ ನಟಿಸುವ ಮೂಲಕ ಮನೆಮಾತಾದರು ಕನ್ನಡಿಗ ರಾಕಿಂಗ್ ಸ್ಟಾರ್ ಯಶ್.
ಯಶ್ ಮೊದಲ ಸಿನಿಮಾ ಯಾವುದು?
ಅದು 2007ರ ಸಮಯ, ಅದೇ ವರ್ಷ ಯಶ್ ಅವರ ಸಿನಿಮಾ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಅಷ್ಟಕ್ಕೂ ಜಂಬದ ಹುಡುಗಿ ಚಿತ್ರದ ಪೋಷಕ ಪಾತ್ರದ ಮೂಲಕ ಬೆಳ್ಳಿ ಪರದೆ ಪಯಣ ಆರಂಭ ಮಾಡಿದರು ಯಶ್. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದ ಯಶ್ ಅವರು, ಅತ್ಯುತ್ತಮ ಸಹನಟ ಪ್ರಶಸ್ತಿಯನ್ನು ಗೆದ್ದು ಬೀಗುವ ಮೂಲಕ ಹೊಸ ಹವಾ ಎಬ್ಬಿಸಿದರು. ಹಾಗೇ ಮೊಗ್ಗಿನ ಮನಸ್ಸು ಸಿನಿಮಾ, ದೊಡ್ಡ ಮಟ್ಟದ ಸದ್ದು ಮಾಡುವ ಜೊತೆಯಲ್ಲೇ ವಿಮರ್ಶಕರಿಂದಲೂ ಉತ್ತಮ ಹೆಸರು ಪಡೆಯಿತು. ಆ ನಂತರ ರಾಕಿ & ಕಿರಾತಕ ಸೇರಿದಂತೆ ರಾಜಧಾನಿ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದವು. ಈ ಸಿನಿಮಾಗಳ ಮೂಲಕವೇ ನಟ ಯಶ್ ತಮ್ಮ ಸಿನಿಮಾ ಪಯಣದ ಆರಂಭದ ಹಂತದಲ್ಲೇ ನಟನಾ ಸಾಮರ್ಥ್ಯವನ್ನೂ ಸಾಬೀತು ಪಡಿಸಿದ್ದರು.
ಒಂದು ಸಿನಿಮಾ ಮುಗಿದ ತಕ್ಷಣ ಗೆಳೆಯರ ಜೊತೆ ಪಾರ್ಟಿ ಅಥವ ಮೋಜು ಮಸ್ತಿಯಲ್ಲಿ ಕಾಲ ಕಳೆಯುವುದು ಯಶ್ ಅವರ ಸ್ಟೈಲ್ ಅಲ್ಲವೇ ಅಲ್ಲ. ಬದಲಾಗಿ ಒಂದು ಸಿನಿಮಾ ರಿಲೀಸ್ ಆಗಿ ಹಿಟ್ ಆಗುತ್ತಿದ್ದಂತೆ ಯಶ್ ಮುಂದಿನ ಸಿನಿಮಾ ಬಗ್ಗೆ ಹಾಗೂ ಅದರ ಬಿಡುಗಡೆ ಬಗ್ಗೆ ಚರ್ಚೆ ಮಾಡುತ್ತಾರೆ. ಅದನ್ನು ಜನರಿಗೆ ತಲುಪಿಸುವುದು ಹೇಗೆ? ಸಿನಿಮಾ ಮಂದಿರಗಳಲ್ಲಿ ಪ್ರಚಾರ ತಂತ್ರ ರೂಪಿಸುವುದು ಹೇಗೆ? ಎಂಬ ಚರ್ಚೆ ಅವರಲ್ಲಿ ಸದಾ ಇರುತ್ತಿತ್ತು. ಹೀಗಾಗಿ ಯಶ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಅತ್ಯಂತ ಬೇಗನೇ, ಯಾರದ್ದೇ ಬೆಂಬಲ ಇಲ್ಲದೇ ತುಂಬಾ ದೊಡ್ಡ ಹಂತಕ್ಕೆ ಹೋಗಿ ನಿಂತರು.
ಕನ್ನಡಿಗ ಯಶ್ ಪ್ರಯತ್ನಗಳು ಬೆಂಕಿ!
ಆರಂಭಿಕ ದಿನಗಳಲ್ಲೇ ಯಶ್ ಅವರಲ್ಲಿ ಅಪಾರ ಸಹೋದ್ಯೋಗಿ ಪ್ರೀತಿ ಇತ್ತು. ಲೂಸ್ ಮಾದ ಯೋಗಿ ಅವರಂತಹ ಸಹ ನಟರ ಸಿನಿಮಾಗಳ ರಿಲೀಸ್ ವೇಳೆ, ಅವರ ಜೊತೆ ಒಟ್ಟಾಗಿ ಮಾಧ್ಯಮ ಸಂದರ್ಶನಗಳನ್ನ ನೀಡುತ್ತಿದ್ದರು. ನನ್ನ ಸಿನಿಮಾ ಮಾತ್ರವಲ್ಲ, ನನ್ನ ಗೆಳೆಯರ ಸಿನಿಮಾ ಹಾಗೂ ಪ್ರತಿಯೊಂದು ಕನ್ನಡ ಸಿನಿಮಾವೂ ಓಡಬೇಕು. ಆಗಷ್ಟೇ ಕನ್ನಡ ಚಿತ್ರರಂಗ ಬೆಳೆಯಲು ಸಾಧ್ಯ ಎಂಬುದು ನಟ ಯಶ್ ಅವರ ನಿಲುವಾಗಿತ್ತು. ಅದಕ್ಕಾಗಿ ಸಾಕಷ್ಟು ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡಿದ್ದಾರೆ ಯಶ್. ಪಾರ್ಕ್ ಒಳಗೆ ಓಡಾಡಿ, ಗೆಳೆಯರಿಗೆ ಪ್ರ್ಯಾಂಕ್ ಮಾಡುವ ಮೂಲಕ ಹಾಗೂ ಪ್ರಮುಖವಾಗಿ ಆಟೋ ಓಡಿಸುವ ಮೂಲಕ ತಮ್ಮ ಸಿನಿಮಾಗಳಿಗೆ ಪ್ರಚಾರ ಮಾಡಿದ್ದಾರೆ. ಅದೇ ಅವರನ್ನು ಇಂದಿನ ಹಂತಕ್ಕೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲ್ಲ ಬಿಡಿ. ಇದೇ ಕಾರಣಕ್ಕೆ ಹೇಳುವುದು ನಟ ಯಶ್ ಅವರನ್ನು ಅವರೇ ಕೆತ್ತಿಕೊಂಡ ಶಿಲ್ಪಿ ಅಂತಾ...
ಯಶ್ ಹೆಸರು ಸತತವಾಗಿ ಟ್ರೆಂಡ್
ಅಂದು ಕನ್ನಡದ ನ್ಯೂಸ್ ಚಾನಲ್‌ಗಳ ಮೂಲಕ ಪ್ರಚಾರಕ್ಕಾಗಿ ಓಡಾಡುತ್ತಿದ್ದ ಯಶ್ ಅವರ ಸಂದರ್ಶನಕ್ಕೆ ಇಂದು ರಾಷ್ಟ್ರೀಯ & ಅಂತಾರಾಷ್ಟ್ರೀಯ ಮಾಧ್ಯಮಗಳು ಸರತಿ ಸಾಲಿನಲ್ಲಿ ಕಾಯುತ್ತಿವೆ. 2018ರ ವೇಳೆ ತೆರೆಕಂಡ ಕೆಜಿಎಫ್ ಚಾಪ್ಟರ್-1 & 2022ರ ಕೆಜಿಎಫ್ ಚಾಪ್ಟರ್-2 ಸಿನಿಮಾಗಳು ಯಶ್ ಅವರಿಗೆ ದೊಡ್ಡ ಹೆಸರನ್ನೇ ತಂದುಕೊಟ್ಟವು. ಆದರೆ, ಕೆಜಿಎಫ್ ಸಿನಿಮಾದ 2 ಪಾರ್ಟ್ ರಿಲೀಸ್ ಆದ ಬಳಿಕ ಯಾವುದೇ ಸಿನಿಮಾ ರಿಲಿಸ್ ಆಗದೇ ಇದ್ದರೂ ಕಳೆದ 4 ವರ್ಷಗಳಿಂದ ಭಾರತ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಕನ್ನಡಿಗ ಯಶ್ ಅವರ ಹೆಸರು ಸದಾ ಟ್ರೆಂಡ್‌ನಲ್ಲೇ ಇದೆ. ಯಶ್ ಹೆಸರಿಗೆ ಇಷ್ಟು ಹವಾ ಯಾಕೆ ಗೊತ್ತಾ? ಅದು ಯಶ್ ಅವರು ಸಿನಿಮಾ ಮಾಡುವಾಗ ತೋರಿಸುವ ಬದ್ಧತೆಗೆ ಸಾಕ್ಷಿಯಾಗಿದೆ.