Air India Pilot: ಸೊಪ್ಪು ಹೊಡೆದು ಫ್ಲೈಟ್ ಓಡಿಸಿದ ನಶೆ ಗಿರಾಕಿ ಪೈಲೆಟ್, ಏನ್ ಗುರೂ ಕಥೆ?

bengaluru diaries | August 13, 2026 - 11:08 am

ವಿಮಾನ ಪ್ರಯಾಣ ಅಂದ್ರೆ ಮೊದಲೇ ಜನರು ಭಯಪಡುವ ಪರಿಸ್ಥಿತಿ ಇದೆ, ಯಾಕಂದ್ರೆ ಇತ್ತೀಚೆಗೆ ಎದುರಾದ ಸಾಲು ಸಾಲು ವಿಮಾನ ದುರಂತಗಳು ಜನರಲ್ಲಿ ಭಯ ಹುಟ್ಟಿಸಿವೆ. ಹೀಗಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಜನರು ಇದೀಗ ಅತಿ ಅಗತ್ಯ ಇದ್ದಾಗ ಮಾತ್ರ ವಿಮಾನ ಪ್ರಯಾಣ ಮಾಡಲು ಮುಂದಾಗುತ್ತಿದ್ದಾರೆ. ಹೀಗಿದ್ದಾಗ ವಿಮಾನ ಓಡಿಸುವ ಡ್ರೈವರ್ ಅಂತಾನೂ ಕರೆಯಲಾಗುವ ಪೈಲಟ್ ಕೈಯಲ್ಲಿ ನೂರಾರು ಜನರ ಜೀವದ ಅಳಿವು & ಉಳಿವಿನ ಪ್ರಶ್ನೆ ಅಡಗಿರುತ್ತದೆ. ಆದರೆ ಇದೇ ಪೈಲಟ್ ನಶೆ ಮಾಡಿ, ಪ್ರಯಾಣಿಕರ ಜೀವದ ಜೊತೆಗೆ ಆಟ ಆಡಿದ್ರೆ ಹೇಗೆ ಆಗಿರಬೇಡ? ಇಂತಹ ಘಟನೆ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ. ಈ ಸಮಯದಲ್ಲೇ ಖಡಕ್ ನಿರ್ಧಾರ ಒಂದನ್ನ ಕೈಗೊಂಡಿದೆ ಸಂಸ್ಥೆ.

ಹೌದು, ಏರ್ ಇಂಡಿಯಾ ಸಂಸ್ಥೆ ಈಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಫುಕೆಟ್-ದೆಹಲಿ ವಿಮಾನದಲ್ಲಿ ನಡೆದ ಗಂಭೀರ ಘಟನೆ & ಆ ವಿಮಾನದ ಕ್ಯಾಪ್ಟನ್‌ ಗಾಂ* ಅಂದ್ರೆ ನಶೆ ಏರಿಸುವ ಸೊಪ್ಪು ಸೇವಿಸಿದ್ದು ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ ತಲ್ಲಣ ಉಂಟಾಗಿದೆ. ಅತ್ಯಂತ ಕಟ್ಟುನಿಟ್ಟಿನ ಕೆಲಸ ಎಂಬ ಹೆಸರು ಪಡೆದಿರುವ ಪೈಲಟ್ ವೃತ್ತಿ ಬಗ್ಗೆಯೇ ಇದೀಗ ಅನುಮಾನ ಮೂಡುವ ವಾತಾವರಣ ನಿರ್ಮಾಣ ಆಗಿದೆ. ಹೀಗಿದ್ದಾಗ ಏರ್ ಇಂಡಿಯಾ ಸಂಸ್ಥೆ ತನ್ನ ಪೈಲಟ್‌ಗಳಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ನಡೆಸಲು ಈಗ ಮುಂದಾಗಿದೆ. ಆಗಸ್ಟ್ 13, 2026 ಗುರುವಾರ ಅಂದ್ರೆ ಇಂದಿನಿಂದಲೇ ಈ ಹೊಸ ಖಡಕ್ ನಿಯಮ ಜಾರಿಗೆ ಬಂದಿದೆ. ವಿಮಾನ ಸುರಕ್ಷತೆ, ಪ್ರಯಾಣಿಕರ ವಿಶ್ವಾಸ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.


ವಿಮಾನ ಪೈಲಟ್ & ಸಿಬ್ಬಂದಿಗೆ ನಶೆ ಪರೀಕ್ಷೆ!

ಅಂದಹಾಗೆ ಏರ್ ಇಂಡಿಯಾ ಸಿಬ್ಬಂದಿ ಇನ್ನುಮುಂದೆ ವಿಮಾನ ಹತ್ತುವ ಮೊದಲು ನಶೆ ತೆಗೆದುಕೊಂಡಿದ್ದಾರಾ? ಎಂಬ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪರೀಕ್ಷೆ ಪ್ರಯಾಣಿಕರಲ್ಲಿ ಒಂದಷ್ಟು ಧೈರ್ಯ ತರುವ ನಿರೀಕ್ಷೆಯು ಈಗ ಮೂಡಿದೆ. ಏರ್ ಇಂಡಿಯಾ ಹಿರಿಯ ಉಪಾಧ್ಯಕ್ಷ & ಫ್ಲೈಟ್ ಆಪರೇಷನ್ಸ್ ವಿಭಾಗದ ಮುಖ್ಯಸ್ಥ, ಕ್ಯಾಪ್ಟನ್ ಮನೀಶ್ ಉಪ್ಪಲ್ ಅವರು ಎಲ್ಲಾ ಪೈಲಟ್‌ಗಳಿಗೆ ಸಂದೇಶ ಕಳುಹಿಸಿ ಹೊಸ ಕ್ರಮದ ಮಾಹಿತಿ ನೀಡಿದ್ದಾರೆ. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಪೈಲಟ್‌ಗಳು & ಇತರ ಸಿಬ್ಬಂದಿ ಗಳಿಸಿದ ಪ್ರಯಾಣಿಕರ ನಂಬಿಕೆ ಸಂಸ್ಥೆಯ ಪಾಲಿಗೆ ಪ್ರಮುಖ ಆಸ್ತಿ ಎಂಬ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲೂ ಏರ್ ಇಂಡಿಯಾದ ಈ ನಿರ್ಧಾರ ಗಮನ ಸೇಳೆದಿದೆ.

ಪೈಲಟ್‌ಗಳ ಮೇಲೆ ಹದ್ದಿನ ಕಣ್ಣು!

ಮತ್ತೊಂದು ಪ್ರಮುಖ ವಿಚಾರ ಏನೆಂದರೆ, ಸಾಮಾನ್ಯ ನಿಯಂತ್ರಣ ವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಈ ಕ್ರಮ ಜಾರಿಗೆ ತರಲಾಗಿದೆ. ಈ ಮೂಲಕ, ವಿಮಾನಯಾನ ಸುರಕ್ಷತೆ & ವೃತ್ತಿಪರ ಗುಣಮಟ್ಟ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಸ್ಥೆಯ ಬದ್ಧತೆ ತೋರಿಸುತ್ತದೆ. ಪೈಲಟ್‌ಗಳು ಯಾವುದೇ ರೀತಿಯ ನಿಷೇಧಿತ ಮಾದಕ ವಸ್ತು ಅಥವಾ ನಿಯಮ ಬಾಹೀರ ಔಷಧ ಸೇವನೆ ಮಾಡಬಾರದು, ಈ ರೀತಿ ವಸ್ತುಗಳಿಂದ ದೂರವಿರುವಂತೆ ಮಾಡುವುದೇ ಪರಿಕ್ಷೆ ಉದ್ದೇಶವಾಗಿದೆ ಎನ್ನಲಾಗಿದೆ. ಹಾಗೇ ಪ್ರಯಾಣಿಕರು, ಪಾಲುದಾರರು, ಸಾರ್ವಜನಿಕರಲ್ಲಿ ಏರ್ ಇಂಡಿಯಾ ವಿಮಾನ ಸುರಕ್ಷತೆ ಬಗ್ಗೆ ಮತ್ತಷ್ಟು ಭರವಸೆ ಮೂಡಿಸುವ ಪ್ರಯತ್ನವೂ ಇದಾಗಿದೆ. ಒಟ್ನಲ್ಲಿ ಈಗ ಏರ್ ಇಂಡಿಯಾ ಸಂಸ್ಥೆ ಜಾರಿಗೆ ತಂದಿರುವ ಹೊಸ ನಿಯಮ ವಿಮಾನ ಪ್ರಯಾಣಿಕರ ದೃಷ್ಟಿಯಿಂದ ಉತ್ತಮ & ಮಾದರಿ ಅಂತಿದ್ದಾರೆ ತಜ್ಞರು. ಇದರ ಜೊತೆ ಭಾರತೀಯ ವಿಮಾನಯಾನ ಕ್ಷೇತ್ರದಲ್ಲೂ ಇದೊಂದು ಕ್ರಾಂತಿಕಾರಿ ನಿರ್ಧಾರ ಎನ್ನಬಹುದು.