ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಫುಟ್‌ಪಾತ್ ಅಂದ್ರೆ ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ಈಗ ಅಬ್ಬರದಿಂದ ಸಾಗಿದೆ. ಈಗಾಗಲೇ ನೂರಾರು ಕಿಲೋ ಮೀಟರ್ ಉದ್ದದ ಪಾದಚಾರಿ ಮಾರ್ಗದ ಒತ್ತುವರಿ ತೆರವು ಯಶಸ್ವಿಯಾಗಿ ಮುಗಿದಿದ್ದು, ಘಟಾನುಘಟಿ ಆಸಾಮಿಗಳಿಗೆ ಶಾಕ್ ಕೊಟ್ಟಿದೆ ಸರ್ಕಾರ. ಇಂತಹ ಸಮಯದಲ್ಲೇ ಬೆಂಗಳೂರಿನ ಶಿವಾಜಿನಗರ ಭಾಗದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಂದ್ರೆ ಜಿಬಿಎ ಅಧಿಕಾರಿಗಳು ಹೋಗಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಹೀಗಿದ್ದಾಗ ನಡೆಯಬಾರದ ಘಟನೆ ಒಂದು ನಡೆದಿದ್ದು, ಇಡೀ ಕರ್ನಾಟಕ ಈ ಘಟನೆ ಕಂಡು ಬೆಚ್ಚಿಬಿದ್ದಿದೆ. ಅಲ್ಲದೆ ಈ ಘಟನೆ ಹಿನ್ನೆಲೆ ಕಠಿಣ ಕ್ರಮ ಕೈಗೊಳ್ಳಲು, ಆ ಮೂಲಕ ತಪ್ಪಿತಸ್ಥರಿಗೆ ಬುದ್ಧಿ ಕಲಿಸಲು ಕರ್ನಾಟಕ ಪೊಲೀಸ್ ಪಡೆ ಮುಂದೆ ನುಗ್ಗಿದೆ.
ಕರ್ನಾಟಕ ಪೊಲೀಸರು ಎಷ್ಟು ದಕ್ಷರು & ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಏನಾಗುತ್ತದೆ? ಅನ್ನೋದು ತಪ್ಪು ಮಾಡಿದವರಿಗೆ ಮಾತ್ರ ಗೊತ್ತು. ಇಂತಹ ಸಮಯದಲ್ಲಿ ಶಿವಾಜಿನಗರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ತಪ್ಪು ಮಾಡಿದ್ದವರನ್ನು ಪೊಲೀಸರು ಇದೀಗ ಹುಡುಕಿ & ಹುಡುಕಿ ಹೆಡೆಮುರಿ ಕಟ್ಟಿ ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲೇ ದೊಡ್ಡ ಶಾಕ್ ಸಿಕ್ಕಿದ್ದು, ಅತ್ತ ಅಧಿಕಾರಿಗಳ ಮೇಲೆ ಕೈಮಾಡಿದ್ದ ಕಿರಾತಕರ ಬಣ್ಣ ಬಯಲಾಗಿದೆ. ಆರಂಭದಲ್ಲಿ ಆಕ್ರೋಶದಿಂದ ನಡೆದ ಘಟನೆ ಎಂದು ಭಾವಿಸಲಾಗಿದ್ದ ಈ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ...
ಅಧಿಕಾರಿಗಳ ಮೇಲೆ ದಾಳಿಗೆ ಮೊದಲೇ ಸ್ಕೆಚ್!
ಬೆಂಗಳೂರು ಅತ್ಯಂತ ಸುರಕ್ಷಿತ ನಗರ ಎಂಬ ಬಿರುದು ಪಡೆದಿದ್ದು, ಕನ್ನಡಿಗರ ರಾಜಧಾನಿ ಇಡೀ ಜಗತ್ತಿನಲ್ಲೇ ದೊಡ್ಡ ಹೆಸರು ಮಾಡಿದೆ. ಇದೇ ಕಾರಣಕ್ಕೆ, ಲಕ್ಷಾಂತರ ಜನರು ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿದ್ದಾಗ ನಮ್ಮ ಬೆಂಗಳೂರಿನಲ್ಲೇ ಸರ್ಕಾರಿ ಅಧಿಕಾರಿಗಳ ಮೇಲೆ ಪುಂಡರು ಕೈಮಾಡಿದ್ದು ತಲ್ಲಣ ಎಬ್ಬಿಸಿದೆ. ಶಿವಾಜಿನಗರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ತನಿಖೆಯಲ್ಲಿ ಹಲವು ಆಘಾತಕಾರಿ ವಿಚಾರಗಳು ಹೊರ ಬಂದಿವೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಬೆಳಗಿನ ಜಾವವೇ ಪಕ್ಕಾ ಪ್ಲಾನ್ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.
ಕಿರಾತಕ ಮಾಡಿದ ಪ್ಲಾನ್ ಏನು?
ಅಷ್ಟಕ್ಕೂ, ಶಿವಾಜಿನಗರದ ಭೀಕರ ಘಟನೆಯ ಪ್ರಮುಖ ಆರೋಪಿ ಆದ ಬಸವರಾಜ್ ಪಡುಕೋಟೆ ತನ್ನ ಚಾಲಕನ ಮೂಲಕವೇ ಮೊದಲಿಗೆ ಖತರ್ನಾಕ್ ಪ್ಲಾನ್ ಮಾಡಿ ಪೆಪ್ಪರ್ ಸ್ಪ್ರೇ ಖರೀದಿಸಿ ಇಟ್ಟುಕೊಂಡಿದ್ದ. ಇದಾದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗುತ್ತಿರುವ ಮಾಹಿತಿ ಪಡೆಯುತ್ತಿದ್ದಂತೆ, ಅಲ್ಲಿ ಯಾವುದೇ ಮಾಧ್ಯಮ ಪ್ರತಿನಿಧಿಗಳು ಅಥವಾ ಪೊಲೀಸರು ಇಲ್ಲದಿರುವುದನ್ನ ಖಚಿತಪಡಿಸಿಕೊಂಡು ದಿಢೀರ್ ದಾಳಿ ನಡೆಸಿದ ಎನ್ನಲಾಗಿದೆ. ಈ ಘಟನೆ ದೊಡ್ಡದಾದ ನಂತರ ಪೊಲೀಸರು ಈತನ ಬಂಡವಾಳ ಬಯಲು ಮಾಡುತ್ತಿದ್ದು, ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಈಗಾಗಲೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.