Bengaluru Footpath: ಬೆಂಗಳೂರಿನ ರಸ್ತೆಗಳ ಮೇಲೆ ಕನ್ನಡದ ಕಣ್ಣೀರು, ಕನ್ನಡಿಗನೇ ಸಾರ್ವಭೌಮನಾಗುವುದು ಯಾವಾಗ?

bengaluru diaries | July 11, 2026 - 4:30 pm

ಕನ್ನಡಿಗರನ್ನ ಬೆದರಿಸುವುದು & ಹೆದರಿಸುವುದು.. ಕನ್ನಡಿಗರು ವ್ಯಾಪಾರ ಮಾಡುತ್ತಿದ್ದರೆ ರಾಜಧಾನಿ ಬೆಂಗಳೂರಿನಲ್ಲಿ ಅವರ ಮೇಲೆ ಹಲ್ಲೆ ನಡೆಸುವುದು.. ಹೀಗೆ ಪದೇ ಪದೇ ಕನ್ನಡ ನಾಡಲ್ಲೇ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಕೇವಲ ಬೆಂಗಳೂರಿನ ರಸ್ತೆಗಳ ಕಥೆಯಲ್ಲ, ಈ ಮಣ್ಣಿನ ಮಗನ ಒಡಲಾಳದ ಆಕ್ರೋಶ. 2 ವಾರಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಫುಟ್‌ಪಾತ್‌ಗಳ ಮೇಲೆ ಜೆಸಿಬಿ ಗರ್ಜಿಸುತ್ತಿವೆ. ಒತ್ತುವರಿ ತೆರವು ಕಾರ್ಯಾಚರಣೆ ಜೋರಾಗಿ ನಡೆದಿದೆ. ಆದರೆ, ಆ ಇಂಚಿಂಚು ಜಾಗದ ಹಿಂದೆ ಅಡಗಿರುವ ಅಸಲಿ ಸತ್ಯವೇನು ಗೊತ್ತಾ? ಆ ಫುಟ್‌ಪಾತ್‌ಗಳ ಮೇಲೆ ನಿಂತು ವ್ಯಾಪಾರ ಮಾಡುತ್ತಿರುವವರ ಮುಖಗಳನ್ನು ಒಮ್ಮೆ ಹತ್ತಿರದಿಂದ ನೋಡಿ. ಅಲ್ಲಿ ಕನ್ನಡದ ಧ್ವನಿ ಕ್ಷೀಣಿಸುತ್ತಿದೆ, ಹೊರ ರಾಜ್ಯದವರ ಅಬ್ಬರ ಜೋರಾಗುತ್ತಿದೆ.

ದೊಡ್ಡ ದೊಡ್ಡ ಮಾಲ್‌ಗಳು, ಶೋರೂಂ ಕಥೆ ಬಿಡಿ ಅವು ಕಾರ್ಪೊರೇಟ್ ಜಗತ್ತು. ಆದರೆ ಬಡವನ ಹೊಟ್ಟೆಪಾಡಿನ ತಾಣವಾಗಿ ನಿಂತಿರುವ ಬೀದಿಬದಿ ವ್ಯಾಪಾರದಲ್ಲೂ ಇಂದು ಕನ್ನಡಿಗನಿಗೆ ಜಾಗವಿಲ್ಲದಂತಹ ಸ್ಥಿತಿ ನಿರ್ಮಾಣ ಆಗುತ್ತಿದೆ. ಹೊರಗಿನಿಂದ ಬಂದವರು ಇಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾ, ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ದುರಂತವೆಂದರೆ ನಮ್ಮದೇ ನೆಲದಲ್ಲಿ ನಮ್ಮವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದರೂ ಕೇಳುವವರಿಲ್ಲದಂತಾಗಿದೆ. ನ್ಯಾಯಕ್ಕಾಗಿ ಕೈಚಾಚುವ ಕನ್ನಡಿಗನಿಗೆ ಸಿಗುತ್ತಿರುವುದು ಕೇವಲ ಆಶ್ವಾಸನೆಗಳ ತಣ್ಣನೆಯ ನಿರಾಸೆ ಮಾತ್ರ. ಕೋಟಿ ದಾಟಿರುವ ಬೆಂಗಳೂರು ಮಹಾನಗರದಲ್ಲಿ ಇಂದು ಕನ್ನಡಿಗರೇ ಅಲ್ಪಸಂಖ್ಯಾತರಾ?? ಎಂಬ ಆತಂಕ ಕಾಡದೇ ಇರದು. ನೆನಪಿರಲಿ, ಬೆಂಗಳೂರು ಇರುವುದು ಕನ್ನಡಿಗರಿಗಾಗಿ, ಇದು ಕನ್ನಡಿಗರ ಸ್ವತ್ತು.


ಶೇಕಡಾ 80ರಷ್ಟು ಜಾಗ ಕನ್ನಡಿಗರಿಗೆ ಬೇಕು

ಹಾಗಾದರೆ, ಈ ಪರಿಸ್ಥಿತಿಯನ್ನು ಬದಲಾಯಿಸಲು ರಾಜ್ಯ ಸರ್ಕಾರ ಏನು ಮಾಡಬೇಕು? ಕನ್ನಡಿಗರ ಏಳಿಗೆಗೆ ಯಾವ ರೀತಿಯ ಕಠಿಣ ಹೆಜ್ಜೆಗಳನ್ನು ಇಡಬೇಕು? ಅಂತ ನಿರಂತರವಾಗಿ ದಶಕಗಳಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದು ಜಾರಿಗೆ ಬರೋ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ರಾಜ್ಯ ಸರ್ಕಾರವು ಕಣ್ಣು ತೆರೆದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನ ಸರಿದೂಗಿಸಿದರೆ ಅಲ್ಪಸಂಖ್ಯಾತನಾಗಿ ಬದುಕುತ್ತಿರುವ ಕನ್ನಡಿಗ ಸಾರ್ವಭೌಮನಾಗಿ ಬದುಕುತ್ತಾನೆ. ಸರ್ಕಾರ ಮೊದಲು ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು. ಜಿಬಿಎ ವತಿಯಿಂದ ನೀಡಲಾಗುವ ವ್ಯಾಪಾರ ಪರವಾನಗಿ ಮತ್ತು ಗುರುತಿನ ಚೀಟಿಗಳನ್ನು ನೀಡುವಾಗ ಕನ್ನಡಿಗರಿಗೆ, ಅಂದರೆ ಕನಿಷ್ಠ 15 ವರ್ಷಗಳಿಂದ ರಾಜ್ಯದಲ್ಲಿ ವಾಸವಿರುವವರಿಗೆ ಮೊದಲ ಆದ್ಯತೆಯನ್ನ ನೀಡಬೇಕು. ಶೇಕಡಾ 80ರಷ್ಟು ಜಾಗಗಳು ಸ್ಥಳೀಯರಿಗೇ ಸಿಗುವಂತೆ ಕಾನೂನು ತರಬೇಕು.

ಸಣ್ಣ ಗೂಡಂಗಡಿಯಿಂದ ಹಿಡಿದು ದೊಡ್ಡ ಶೋರೂಂ ತನಕವೂ ಪ್ರತಿಯೊಬ್ಬ ವ್ಯಾಪಾರಿಯೂ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಗ್ರಾಹಕರೊಂದಿಗೆ ವ್ಯವಹರಿಸುವ ವೇಳೆ ಕನ್ನಡಕ್ಕೆ ಮೊದಲ ಗೌರವವು ಸಿಗಬೇಕು. ಇದನ್ನು ಉಲ್ಲಂಘಿಸುವವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸುವ ಧೈರ್ಯವನ್ನು ಸರ್ಕಾರ ತೋರಿಸಬೇಕು. ಆದರೆ ಜನಪ್ರತಿನಿಧಿಗಳೇ ಚುನಾವಣೆ ಸಂದರ್ಭದಲ್ಲಿ ಹಿಂದಿ, ಉರ್ದು ಮತ್ತು ಮರಾಠಿಯಲ್ಲಿ ಪ್ರಚಾರ ಮಾಡಿ ಕನ್ನಡವನ್ನ ಮತ್ತು ಕನ್ನಡಿಗರನ್ನ ಕೊಲ್ಲುತ್ತಿದೆ ಎಂಬ ಆರೋಪ ಕನ್ನಡಿಗರದ್ದು.

ಕನ್ನಡಿಗರಿಗೆ ಬೇಕು ಸರ್ಕಾರದ ಬೆಂಬಲ

ಹೊರ ರಾಜ್ಯದವರು ಬಂಡವಾಳದ ಬಲದಿಂದ ಇಲ್ಲಿನ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಬೀದಿಬದಿ ವ್ಯಾಪಾರ ಮಾಡಲು ಬಯಸುವ ಬಡ ಕನ್ನಡಿಗರಿಗೆ ಸರ್ಕಾರವೇ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಅಥವ ಬಡ್ಡಿ ರಹಿತವಾಗೇ ಸಾಲ ಸೌಲಭ್ಯ ನೀಡಿ ನಮ್ಮವರು ಸ್ವಾವಲಂಬಿಗಳಾಗಲು ದಾರಿ ಮಾಡಿಕೊಡಬೇಕು. ಸ್ಥಳೀಯ ವ್ಯಾಪಾರಿಗಳ ಮೇಲೆ ನಡೆಯುವ ದೌರ್ಜನ್ಯ, ಬೆದರಿಕೆಗಳನ್ನ ತಡೆಯಲು ಪೋಲಿಸ್ ಇಲಾಖೆ ಮತ್ತು ಪಾಲಿಕೆಯ ಸಹಯೋಗದಲ್ಲಿ ಒಂದು ವಿಶೇಷ ವಿಭಾಗವನ್ನು ತೆರೆಯಬೇಕು. ನಮ್ಮ ನೆಲದಲ್ಲಿ ನಮ್ಮವರಿಗೆ ಅನ್ಯಾಯವಾದರೆ ಕ್ಷಿಪ್ರವಾಗಿ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು.

ಬೆಂಗಳೂರು ಉದಾರಿಯೂ ಹೌದು, ಬಂದವರನ್ನೆಲ್ಲಾ ಬದುಕಿಸುವ ಅನ್ನಪೂರ್ಣೆಯೂ ಹೌದು. ಆದರೆ, ಆ ಉದಾರತೆ ಇಂದು ಕನ್ನಡಿಗನ ಪಾಲಿಗೆ ಶಾಪವಾಗಬಾರದು. ಹೆತ್ತ ಕರುಳನ್ನು ಹಸಿವಿನಿಂದ ಇಟ್ಟು, ನೆರೆಮನೆಯವರಿಗೆ ಉಣಬಡಿಸುವ ಔದಾರ್ಯ ಯಾರಿಗೂ ಒಳ್ಳೆಯದಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರ ಸ್ವಾಭಿಮಾನ, ಬದುಕು & ಆರ್ಥಿಕ ಏಳಿಗೆಗೆ ಮೊದಲ ಆದ್ಯತೆ ನೀಡದಿದ್ದರೆ, ಮುಂದೊಂದು ದಿನ ನಮ್ಮದೇ ರಾಜಧಾನಿಯಲ್ಲಿ ನಾವು ಭಿಕ್ಷುಕರಾಗುವ ದಿನ ದೂರವಿಲ್ಲ.