ಬೆಂಗಳೂರಲ್ಲಿ ರಸ್ತೆ ಬದಿಯಲ್ಲಿ ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿದ್ದ ವಾಹನಗಳಿಗೆ ಒಂದು ಗತಿ ಕಾಣಿಸಿ, ಅವುಗಳನ್ನು ಸರಿಯಾದ ಜಾಗಕ್ಕೆ ಕಳಿಸುವ ಕೆಲಸವನ್ನ ಕರ್ನಾಟಕ ಸರ್ಕಾರ ಈಗ ಮಾಡ್ತಿದೆ. ಅದರಲ್ಲೂ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಆಯ್ಕೆಯಾದ ನಂತರ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಆಯ್ಕೆ ಆಗಿರುವ, ಕೃಷ್ಣ ಬೈರೇಗೌಡ ಅವರ ಖಡಕ್ ಆದೇಶದ ಹಿನ್ನೆಲೆ ಅಧಿಕಾರಿಗಳು ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಹೀಗೆ ಬೆಂಗಳೂರಿನ ಫುಟ್‌ಪಾತ್ ಖಾಲಿ ಮಾಡಿಸುವ ಕೆಲಸ ಮೊದಲು ನಡೆದಿತ್ತು, ನಂತರ ಬೆಂಗಳೂರು ನಗರದ ರಸ್ತೆಗಳ ಪಕ್ಕದಲ್ಲೇ ಅನಾಥವಾಗಿ ಹಲವು ವರ್ಷಗಳಿಂದ ಬಿದ್ದಿರುವ ವಾಹನಗಳಿಗೆ ಒಂದು ಗತಿ ಕಾಣಿಸಲಾಗುತ್ತಿದೆ.
ಅಂದಹಾಗೆ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಬಳಕೆ ಆಗದೆ ನಿಂತಿರುವ ಸಾವಿರಾರು ವಾಹನಗಳ ವಿರುದ್ಧ ಆಡಳಿತ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದೆ. ಗಾರ್ಡನ್ ಸಿಟಿ ಬೆಂಗಳೂರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ & ಸಾರ್ವಜನಿಕರ ಸ್ಥಳ ಆಕ್ರಮಿಸಿರುವ ವಾಹನಗಳನ್ನು ತೆರವುಗೊಳಿಸುವ ಉದ್ದೇಶದಿಂದ ನಗರ ಮಟ್ಟದಲ್ಲಿ ವಿಶೇಷ ಟೋಯಿಂಗ್ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಬೆಂಗಳೂರು ನಗರವನ್ನು ಮತ್ತಷ್ಟು ಕಟ್ಟುನಿಟ್ಟಿನ ನಗರವಾಗಿ ಮಾಡಲು ಕರ್ನಾಟಕ ಸರ್ಕಾರ ಇದೀಗ ಮುಂದಾಗಿದೆ.
ವಾಹನಗಳ ಮಾಲೀಕರಿಗೆ ಸರ್ಕಾರದಿಂದ ಶಾಕ್!
ಒಂದು ವಾರದ ಹಿಂದೆಯೇ GBA & ಬೆಂಗಳೂರು ಸಂಚಾರ ಪೊಲೀಸರು ಜಂಟಿಯಾಗಿ ನಗರದಾದ್ಯಂತ ರಸ್ತೆ ಬದಿಗಳಲ್ಲಿ ಬಿದ್ದ ಬಿಡಾಡಿ ವಾಹನಗಳನ್ನ ಗುರುತಿಸಿ ನೋಟಿಸ್ ಜಾರಿ ಮಾಡಿದ್ದರು. 7 ದಿನಗಳ ಒಳಗಾಗಿ ಸೂಕ್ತವಾಗಿ ಮಾಲೀಕರು ತಮ್ಮ ತಮ್ಮ ವಾಹನಗಳನ್ನು ಖಾಸಗಿ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಬೇಕು ಎಂದು ಗಡುವು ನೀಡಲಾಗಿತ್ತು. ಆದರೂ ಈ ಎಚ್ಚರಿಕೆ ನಿರ್ಲಕ್ಷಿಸಿ ವಾಹನಗಳನ್ನು ತೆರವುಗೊಳಿಸದ ಮಾಲೀಕರಿಗೆ ಜಿಬಿಎ ಶಾಕ್ ನೀಡಿದ್ದು, ಟೋಯಿಂಗ್ ಪ್ರಕ್ರಿಯೆಯ ತೀವ್ರಗೊಳಿಸಿ ಮಾತು ಕೇಳದ ಮಾಲೀಕರಿಗೆ ದಿಢೀರ್ ಶಾಕ್ ಕೊಡಲು ಮುಂದಾಗಿದೆ. ಹೀಗೆ, ನಮ್ಮ ಬೆಂಗಳೂರಲ್ಲಿ ಒಟ್ಟಾರೆ 1,500ಕ್ಕೂ ಹೆಚ್ಚು ವಾಹನಗಳು ದೀರ್ಘಕಾಲದಿಂದ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗಿದ್ದು ಈಗ ಪತ್ತೆ ಆಗಿದೆ. ಇನ್ನು ಬೆಂಗಳೂರಿನಲ್ಲಿ ಪ್ರಥಮ ಹಂತದಲ್ಲಿ 500ಕ್ಕೂ ಹೆಚ್ಚು ವಾಹನಗಳಿಗೆ ಎಚ್ಚರಿಕೆ ನೋಟಿಸ್ ಅಂಟಿಸಿದ್ದು, ಅವುಗಳನ್ನು ಒಂದೊಂದಾಗಿ ಟೋಯಿಂಗ್ ಮಾಡಲು ಶುರು ಮಾಡಲಾಗಿದೆ.
ಟೋಯಿಂಗ್ ನಂತರ ದಂಡ ಗ್ಯಾರಂಟಿ!
ಹೇ.. ಹೋದರೆ ಹೋಗಲಿ ಬಿಡಿ, ಆಮೇಲೆ ನಮ್ಮ ವಾಹನ ಸಿಗುತ್ತೆ ಅಂತಾ ಉಡಾಫೆ ಮಾತನಾಡುವ ವಾಹನಗಳ ಮಾಲೀಕರಿಗೆ ಮತ್ತೊಂದು ಶಾಕ್ ನೀಡಲಾಗಿದೆ. ಟೋಯಿಂಗ್ ಮಾಡಿದ ಬಳಿಕ, ದಂಡ ಕಟ್ಟಲು ಸೂಚಿಸಲಾಗಿದೆ. ಗಾಂಧಿನಗರ ವಿಧಾನಸಭೆ ಕ್ಷೇತ್ರದ ವರಾಹಿ ದೇವಸ್ಥಾನದ ಬಳಿ ಸಚಿವ ಕೃಷ್ಣಬೈರೇಗೌಡ ಅವರು ಖುದ್ದಾಗಿ ವಾಹನಗಳಿಗೆ ನೋಟಿಸ್ ಅಂಟಿಸಿ, ಬಿಡಾಡಿ ವಾಹನ ಟೋಯಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ನೋಟಿಸ್ ನೀಡಿರುವ 7 ದಿನಗಳ ನಂತರವೂ ವಾಹನ ತೆರವು ಮಾಡದಿದ್ದರೆ, ಅವುಗಳನ್ನ ಟೋಯಿಂಗ್ ಮಾಡಿ ನಿಗದಿಪಡಿಸಿದ ಸ್ಥಳಕ್ಕೆ ಶಿಫ್ಟಿಂಗ್ ಮಾಡಲಾಗುತ್ತದೆ. ಹೀಗೆ ವಾಹನಗಳನ್ನ ಜಿಬಿಎ ಅಧಿಕಾರಿಗಳು ಟೋಯಿಂಗ್ ಮಾಡಿದ ಬಳಿಕ ಮಾಲೀಕರು ದಂಡ ಹಾಗೂ ಟೋಯಿಂಗ್ ಶುಲ್ಕ ಪಾವತಿಸಿ ತಮ್ಮ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ.
ವಾಹನ ಮಾಲೀಕರಿಗೆ ಶಾಕ್ ಮೇಲೆ ಶಾಕ್
ಒಟ್ನಲ್ಲಿ ವಾಹನಗಳನ್ನು ಸರಿಯಾದ ಜಾಗದಲ್ಲಿ ಪಾರ್ಕಿಂಗ್ ಮಾಡದೇ, ಬೆಂಗಳೂರಿನಲ್ಲಿ ಸಂಚಾರಕ್ಕೆ ತೊಂದರೆಗೆ ಕಾರಣ ಆಗಿದ್ದ ಅನಾಥ ವಾಹನಗಳಿಗೆ ಇದೀಗ ಒಂದು ಗತಿ ಕಾಣಿಸಲಾಗುತ್ತಿದೆ. ಅಕಸ್ಮಾತ್ ವಾಹನಗಳ ಮಾಲೀಕ ಬಂದು ವಾಹನದ ದಂಡ ಕಟ್ಟಿ ಬಿಡಿಸಿಕೊಂಡು ಹೋಗದೇ ಇದ್ದರೆ, ಅವುಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಕೂಡ ಸರ್ಕಾರ ಚಿಂತನೆ ನಡೆಸುತ್ತಿದೆ. ಕರ್ನಾಟಕ ಸರ್ಕಾರ ಇದೀಗ ಐಟಿ ಸಿಟಿ ನಮ್ಮ ಬೆಂಗಳೂರಿನಲ್ಲಿ ಕೈಗೊಂಡಿರುವ ಈ ಖಡಕ್ ಕ್ರಮ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಾಗೇ ನಮ್ಮ ಭಾರತದ ಇತರ ನಗರಗಳಲ್ಲಿ ಕೂಡ ಬೆಂಗಳೂರು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಾ? ಎಂಬುದನ್ನ ಕಾದು ನೋಡಬೇಕಿದೆ.