Bengaluru Footpath: ವಾಹನ ಸವಾರರೇ ಗಮನಿಸಿ, ಫುಟ್‌ಪಾತ್ ಮೇಲೆ ಗಾಡಿ ಓಡಿಸಿದರೆ ನೀವು ಲಾಕ್!

bengaluru diaries | July 23, 2026 - 6:25 pm

ನಮ್ಮ ಬೆಂಗಳೂರಿನಲ್ಲಿ ಜನರಿಗೆ ಸಮಸ್ಯೆಗಳು ಹೆಚ್ಚಾಗಿದ್ದು, ಇವುಗಳನ್ನು ಸರಿ ಮಾಡಬೇಕು ಅಂತಾ ಸರ್ಕಾರ & ಅಧಿಕಾರಿಗಳಿಗೆ ಪದೇ ಪದೇ ಜನರು ಮನವಿ ಮಾಡಿ ಮಾಡಿ ಸಾಕಾಗಿ ಹೋಗಿತ್ತು. ಆದರೆ ಇದೀಗ ಸರ್ಕಾರ, ಎಲ್ಲಾ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಜನ ಸಾಮಾನ್ಯರ ಬದುಕಿಗೆ ಅಡ್ಡಿಯಾಗಿದ್ದ ವಿಚಾರಗಳನ್ನು ರಿಪೇರಿ ಮಾಡಲು ಸಜ್ಜಾಗಿದೆ ಸರ್ಕಾರ. ಈ ಪೈಕಿ ಈಗ ಫುಟ್‌ಪಾತ್ ವಿಚಾರದಲ್ಲಿ ಹೊಸ ಹೊಸ ಖಡಕ್ ರೂಲ್ಸ್ ಜಾರಿಗೆ ಬರುತ್ತಿವೆ. ಇಂತಹ ಸಮಯದಲ್ಲೇ ವಾಹನ ಸವಾರರೇ ಗಮನಿಸಿ, ಫುಟ್‌ಪಾತ್ ಮೇಲೆ ಗಾಡಿ ಓಡಿಸಿದರೆ ನೀವು ಲಾಕ್!

ಹೌದು, ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತೊಂದು ಹೊಸ ರೂಲ್ಸ್ ಜಾರಿಗೆ ತರಲು ಸಜ್ಜಾಗಿದೆ. ಪ್ರಮುಖವಾಗಿ ಇದೀಗ ಟ್ರಾಫಿಕ್ ಜಾಮ್ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಾಹನ ಸವಾರರಿಂದ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗ್ತಾ ಇತ್ತು. ಮತ್ತೆ, ಮತ್ತೆ ಫುಟ್‌ಪಾತ್ ಮೇಲೆ ಗಾಡಿಗಳನ್ನು ಓಡಿಸುವ ವಿಡಿಯೋಗಳು ವೈರಲ್ ಆಗುತ್ತಾ ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅದರಲ್ಲೂ ಕೆಲವು ಕಡೆ ಪಾದಚಾರಿಗಳಿಗೆ ವಾಹನ ತಗುಲಿದ ಘಟನೆಗಳು ಕೂಡ ಆಗಾಗ ನಡೆಯುತ್ತಿದ್ದವು. ಇದೆಲ್ಲವನ್ನೂ ನೋಡಿ ಇದೀಗ ಖಡಕ್ ಕ್ರಮಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರ, ಯಾವ ರೂಲ್ಸ್ ತರುತ್ತಿದೆ ಗೊತ್ತಾ?


ಫುಟ್‌ಪಾತ್ ಮೇಲೆ ಗಾಡಿ ಓಡಿಸಿದರೆ...

ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು ಎನ್ನುವಂತೆ ಇಷ್ಟುದಿನ ಸಮಾಧಾನವಾಗಿ ಹೇಳಿ & ಹೇಳಿ ಸಾಕಾಗಿ ಹೋಗಿದೆ ಈ ರೀತಿ ಫುಟ್‌ಪಾತ್ ಮೇಲೆ ವಾಹನ ಓಡಿಸುವವರಿಗೆ. ಇದೇ ಕಾರಣಕ್ಕೆ ಈಗ ದೊಣ್ಣೆ ಹಿಡಿದು ಬುದ್ಧಿ ಕಲಿಸುವ ಪರಿಸ್ಥಿತಿ ನಿರ್ಮಾಣ ಆಗಿತ್ತು, ಹೀಗಿದ್ದಾಗಲೇ ಫುಟ್‌ಪಾತ್‌ನ ಮೇಲೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲು & ದಂಡದ ಮೊತ್ತವನ್ನು ₹5,000ಕ್ಕೆ ಹೆಚ್ಚಿಸಲು ಅಗತ್ಯ ಕಾನೂನು ತಿದ್ದುಪಡಿ ತರುವಂತೆ ಕೋರಿ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಅಧಿಕೃತ ಪತ್ರ ಬರೆದು ಮನವಿ ಮಾಡಿದ್ದಾರೆ.

ಆದಷ್ಟು ಬೇಗ ಜಾರಿಗೆ ಮನವಿ

ಈ ಮೂಲಕ ಫುಟ್‌ಪಾತ್‌ಗಳ ಮೇಲೇ ಬೈಕ್ ಹಾಗೂ ಇತರ ವಾಹನಗಳನ್ನ ಚಲಾಯಿಸುವ ಪ್ರವೃತ್ತಿಗೆ ಕಡಿವಾಣ ಹಾಕುವ ಸಲುವಾಗಿ, ದಂಡದ ಮೊತ್ತ ಭಾರಿ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಚರ್ಚೆಗು ಬಂದಿದೆ. ಈ ಕ್ರಮ ಜಾರಿಯಾದರೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಹೊರೆ ಆಗುವ ಮೂಲಕ ಸರಿಯಾಗಿಯೆ ಬುದ್ಧಿ ಕಲಿಯುವುದು ಕೂಡ ಫಿಕ್ಸ್ ಆಗಿದೆ. ಹೀಗಾಗಿಯೇ ಇದೀಗ ಈ ನಿಯಮ ಆದಷ್ಟು ಬೇಗ ಜಾರಿಗೆ ಬಂದು ಫುಟ್‌ಪಾತ್ ಮೇಲೆ ವಾಹನ ಓಡಿಸುವ ಘಟನೆಗಳು ನಿಂತು ಹೋಗಲಿ ಎಂದು ಆಗ್ರಹಿಸುತ್ತಿದ್ದಾರೆ ಜನ. ಆದರೆ, ಈ ಬಗ್ಗೆ ಸಾರಿಗೆ ಸಚಿವರು ಏನು ಅಂತಾರೆ? ಹಾಗೇ ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಅನ್ನೋದನ್ನು ಕಾದು ನೋಡಬೇಕಿದೆ.

ಸಿಲಿಕಾನ್ ಸಿಟಿಗೆ ಬೇಕಿದೆ ಹೊಸ ರೂಪ

ಬೆಂಗಳೂರು ಐಟಿ & ಬಿಟಿ ನಗರ, ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಇಷ್ಟೆಲ್ಲಾ ಬೆಳೆದರೂ ಕೆಲವು ಜನ ಮನಸ್ಸಿಗೆ ಬಂದಂತೆ ವರ್ತಿಸುತ್ತಾ ನಗರದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅತ್ತ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕಠಿಣ ಕ್ರಮ ಜಾರಿಗೆ ತರಲು ಮುಂದಾಗಿದ್ದಾರೆ. ಈ ಸಮಯದಲ್ಲೇ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕಾಗಿತ್ತು, ಈ ರೀತಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಕಠಿಣ ಕ್ರಮ ಜಾರಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಿದೆ ಕರ್ನಾಟಕ ಸರ್ಕಾರ.