ಫುಟ್‌ಪಾತ್ ಹೋಟೆಲ್ ಚನ್ನಾಗಿರಲ್ಲ.. ಫುಟ್‌ಪಾತ್ ಹೋಟೆಲ್ ಆಹಾರ ತಿಂದರೆ ಆರೋಗ್ಯ ಕೆಡುತ್ತೆ.. ಸ್ಟಾರ್ ಹೋಟೆಲ್ ಆಹಾರ ಸೇಫ್ & ಆರೋಗ್ಯಕ್ಕೆ ಒಳ್ಳೆಯದು... ಹಿಂಗೆಲ್ಲಾ ಪುಂಗುವ ಖಾಲಿ ಗಿರಾಕಿಗಳನ್ನು ನೀವು & ನಾವು ನಮ್ಮ ಸುತ್ತಮುತ್ತ ನೋಡೇ ಇರುತ್ತೇವೆ. ಅದರಲ್ಲೂ ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ಹೀಗೆ ಖಾಲಿ ಶೋಕಿ ತೋರಿಸುವ ಜನರೇ ಹೆಚ್ಚಾಗಿ ಕಂಡುಬರುತ್ತಾರೆ ಇತ್ತೀಚೆಗೆ. ಫುಟ್‌ಪಾತ್ ಹೋಟೆಲ್‌ಗಳ ಕುರಿತು & ಅಲ್ಲಿನ ಆಹಾರದ ಕುರಿತು ಮಾತಾಡುವ ಶ್ರೀಮಂತರಿಗೆ ಫೈವ್ ಸ್ಟಾರ್, 3 ಸ್ಟಾರ್ ಹೋಟೆಲ್‌ಗಳಲ್ಲಿ ತಿಂದರೆ ಮಾತ್ರ ತಿಂದ ಅನ್ನ ಅರಗೋದು ಅನ್ನೋ ರೀತಿ ಆಡುವವರು ಕೂಡ ಇದ್ದಾರೆ. ಆದರೆ ಸ್ಟಾರ್ ಹೋಟೆಲ್‌ಗಳ ಹಣೆಬರಹ ಇದೀಗ ಬಟಾಬಯಲಾಗಿದೆ, ಈ ಸ್ಟೋರಿ ತುಂಬಾ ಮಹತ್ವದ್ದಾಗಿದ್ದು ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ ಇಲ್ಲಿ...
ಹೌದು, ಬೆಂಗಳೂರು ನಗರದಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಿರುವ ಆಹಾರ ಇಲಾಖೆ ಕಳೆದ 4 ದಿನಗಳಿಂದ ನಿರಂತರವಾಗಿ ತಪಾಸಣೆ ನಡೆಸುತ್ತಿದೆ. ಬೆಂಗಳೂರಿನ ಪ್ರಮುಖ ಐಶಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್ & ಪಬ್‌ಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆ ವೇಳೆ, ಆರೋಗ್ಯಕ್ಕೆ ಅಪಾಯ ತರಬಹುದಾದ ಹಲವಾರು ಪದಾರ್ಥಗಳು ಪತ್ತೆ ಆಗಿವೆ. ಅಧಿಕಾರಿಗಳ ತಪಾಸಣೆ ವೇಳೆ ಸ್ಟಾರ್ ಹೋಟೆಲ್ ಒಳಗೆ ಕೊಳೆತ ಮಾಂಸ, ಬಳಕೆಗೆ ಯೋಗ್ಯವಲ್ಲದ ತರಕಾರಿಗಳು, ಅವಧಿ ಮೀರಿದ ಹಾಲು, ವಿವಿಧ ಹಾಲಿನ ಉತ್ಪನ್ನ ಸೇರಿ ಹಲವು ರೀತಿಯ ಆಹಾರ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಈವರೆಗೂ ನಡೆದಿರುವ ಕಾರ್ಯಾಚರಣೆ ವೇಳೆ ರಾಜಧಾನಿ ಬೆಂಗಳೂರಲ್ಲಿ ಸುಮಾರು 350 ಕೆಜಿಗೂ ಹೆಚ್ಚು ಕಳಪೆ ಮಾಂಸ ಸೀಜ್ ಮಾಡಲಾಗಿದೆ.
350 ಕೆಜಿಗೂ ಹೆಚ್ಚು ಕಳಪೆ ಮಾಂಸ?
ಹೌದು, ಸ್ಟಾರ್ ಹೋಟೆಲ್ ಅಂದ ತಕ್ಷಣ ಕೆಲವರು ಕಣ್ಣು ಮುಚ್ಚಿಕೊಂಡು ಆಹಾರ ಸೇವನೆ ಮಾಡುತ್ತಾರೆ. ಆ ಮೂಲಕ ತಮ್ಮ ಬಳಿ ಹಣ ಇದೆ ಹಾಗೂ ಶ್ರೀಮಂತಿಕೆ ಅನ್ನೋದನ್ನ ತೋರಿಸಲು ಕೆಲವರು ಮುಂದಾಗುತ್ತಾರೆ. ಹೀಗಿದ್ದಾಗ ಆಹಾರ ಇಲಾಖೆ ಅಧಿಕಾರಿಗಳು ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದಾಗ ಹಲವು ಭಯಾನಕ ವಿಚಾರಗಳು ಗೊತ್ತಾಗಿವೆ. 350 ಕೆಜಿಗೂ ಹೆಚ್ಚು ಕಳಪೆ ಮಾಂಸ ಮಾತ್ರವಲ್ಲ, ಸುಮಾರು 232 ಕೆಜಿ ಬಳಕೆಗೆ ಯೋಗ್ಯ ಅಲ್ಲದ ತರಕಾರಿ, 32 ಲೀಟರ್ ಅವಧಿ ಮೀರಿದ ಹಾಲು & ಹಾಲಿನ ಉತ್ಪನ್ನಗಳು ಆಹಾರ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿವೆ. ಬೇಕರಿ ಉತ್ಪನ್ನಗಳ ಮೇಲೂ ದಾಳಿ ನಡೆದು 100 ಕೆಜಿಗೂ ಹೆಚ್ಚು ಬೇಕರಿ ಪದಾರ್ಥ ಸೀಜ್ ಮಾಡಿದ್ದಾರೆ ಈಗ ಅಧಿಕಾರಿಗಳು. ಇದುವರೆಗೂ ಸುಮಾರು 35 ಬಗೆಯ ಆಹಾರ ಪದಾರ್ಥಗಳನ್ನ ಕಳಪೆ ಗುಣಮಟ್ಟದ ಹಿನ್ನೆಲೆ ವಶಕ್ಕೆ ಪಡೆದು ಟೆಸ್ಟಿಂಗ್ ಮಾಡಲಾಗುತ್ತಿದೆ.
ಮತ್ತೊಂದು ಕಡೆ ಈ ವಿಶೇಷ ಕಾರ್ಯಾಚರಣೆಗಾಗಿ ಆಹಾರ ಇಲಾಖೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಧಿಕಾರಿಗಳನ್ನು ಒಳಗೊಂಡ 30 ವಿಶೇಷ ತಂಡ ರಚಿಸಿದೆ. ಈ ತಂಡಗಳು, ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಈಗಾಗಲೇ 60ಕ್ಕೂ ಹೆಚ್ಚು ಐಶಾರಾಮಿ ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್‌ಗಳ ಕಿಚನ್ ಏರಿಯಾ ಸ್ಕ್ಯಾನ್ ಮಾಡಿದೆ. ಬೆಂಗಳೂರಿನ ಹಲವು ಪ್ರತಿಷ್ಠಿತ ಹೋಟೆಲ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಆಹಾರ ಸಂಗ್ರಹಣೆ, ಗುಣಮಟ್ಟ & ಬಳಕೆಯ ಸ್ಥಿತಿ ಪರಿಶೀಲಿಸಿದ್ದಾರೆ. ಈ ಪಟ್ಟಿಯಲ್ಲಿ ಬೆಂಗಳೂರಿನ ದೊಡ್ಡ ದೊಡ್ಡದಾದ ಹೋಟೆಲ್‌ಗಳೇ ಇರುವುದು ಶ್ರೀಮಂತರಿಗೆ ಆಘಾತ ತಂದಿದೆ.
1 ಲಕ್ಷ ರೂಪಾಯಿ, 2 ಲಕ್ಷ ರೂಪಾಯಿ...
ಮಾಂಸ & ತರಕಾರಿ ಜೊತೆಗೆ ಅಡುಗೆಗೆ ಬಳಸುವ ಎಣ್ಣೆ, ಹಾಲು, ಹಾಲಿನ ಉತ್ಪನ್ನ & ಕೇಕ್ ಸೇರಿ ಇತರೇ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈಗಾಗಲೇ ಹಲವು ಕಡೆ ಕಳಪೆ ಆಹಾರ ಪತ್ತೆಯಾಗಿರುವ ಹಿನ್ನೆಲೆ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಒಟ್ನಲ್ಲಿ ಒಂದು ರೂಪಾಯಿ ಬೆಲೆ ಬಾಳುವ ಆಹಾರ ಪದಾರ್ಥಕ್ಕೆ ಸಾವಿರಾರು ರೂಪಾಯಿ ಚಾರ್ಜ್ ಮಾಡುವ ಸ್ಟಾರ್ ಹೋಟೆಲ್‌ಗಳ ಹಣೆಬರಹ ಬಟಾ ಬಯಲಾಗಿದೆ ಈಗ. 1 ಲಕ್ಷ, 2 ಲಕ್ಷ ರೂಪಾಯಿ ಅಂತಾ ಒಂದು ಹೊತ್ತಿನ ಊಟಕ್ಕೆ ಖರ್ಚು ಮಾಡಿ ತಿನ್ನುವ ಶ್ರೀಮಂತ ವರ್ಗ ಈಗ ಬೆಚ್ಚಿಬಿದ್ದು ಕಂಗಾಲಾಗಿದೆ, ಆದರೆ 40 ರೂಪಾಯಿ & 50 ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡುವ ಫುಟ್‌ಪಾತ್ ಅಂಗಡಿಗಳ ಗ್ರಾಹಕರು ಶ್ರೀಮಂತರನ್ನು ನೋಡಿ ನಗುವಂತಾಗಿದೆ.