ಕಾವೇರಿ ನೀರಿನ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಾ, ಕನ್ನಡಿಗರ ನೀರನ್ನು ಕದ್ದು ತೆಗೆದುಕೊಂಡು ಹೋಗುವ ತಮಿಳುನಾಡು ಇನ್ನೂ ಬುದ್ಧಿ ಕಲಿತಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಇಷ್ಟುದಿನ ಕಾವೇರಿ ನೀರಿನ ವಿಚಾರ ಮುಂದೆ ಇಟ್ಟುಕೊಂಡು ಜಗಳ ಮಾಡುತ್ತಿದ್ದ ಕರ್ನಾಟಕದ ನೆರೆ ರಾಜ್ಯ, ಇದೀಗ ಹೊಸ ಪ್ರಸ್ತಾವನೆಯ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಅದರಲ್ಲೂ ಇದೀಗ ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆ ಮಾಡಿರುವ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ತಲ್ಲಣ ಎಬ್ಬಿಸುವ ನಿರ್ಧಾರ ಕೈಗೊಂಡಿದೆ. ಅತ್ತ ಕಾವೇರಿ ನೀರಿನ ವಿಚಾರದಲ್ಲಿ ಕೋರ್ಟ್ ಮೆಟ್ಟಿಲು ಹತ್ತಿರುವ ಇದೇ ತಮಿಳುನಾಡು, ಬೆಂಗಳೂರಿನ ಮೇಲೆ ಕೂಡ ಕಣ್ಣಿಟ್ಟಂತೆ ಕಾಣುತ್ತಿದೆ.
ಬೆಂಗಳೂರು ಕನ್ನಡಿಗರ ಕೋಟೆ, ಶತ ಶತಮಾನಗಳಿಂದ ಕನ್ನಡಿಗರ ಆಡಳಿತದಲ್ಲಿ ಬೆಂಗಳೂರು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ನಮ್ಮ ಬೆಂಗಳೂರು ಜಗತ್ತಿನ ಐಟಿ ತವರು ಎಂಬ ಬಿರುದು ಪಡೆಯಲು ಕಾರಣ ಕನ್ನಡಿಗರ ಪರಿಶ್ರಮ, ಆದರೆ ತಮಿಳುನಾಡು ರಾಜಕೀಯ ನಾಯಕರು ಮಾತ್ರ ಸಮಯ ಬಂದಾಗೆಲ್ಲಾ ಕನ್ನಡಿಗರ ರಾಜಧಾನಿ ಬೆಂಗಳೂರಿನ ಮೇಲೆ ಕಣ್ಣಿಟ್ಟು ಕಿರಿಕ್ ಮಾಡುತ್ತಿದ್ದಾರೆ. ಈ ಹಿಂದೆ ತಮಿಳುನಾಡು ಆಳಿದ್ದ ಹಲವು ಮುಖ್ಯಮಂತ್ರಿಗಳು ಬೆಂಗಳೂರು ತಮಿಳುನಾಡಿಗೆ ಬಿಟ್ಟುಕೊಡಿ ಎಂದು ದರ್ಪದಿಂದ ಹೇಳಿ, ಕನ್ನಡಿಗರ ಕೈಯಿಂದ ಸರಿಯಾಗಿ ಒದೆ ತಿಂದಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಕಿರಿಕ್ ಪಾರ್ಟಿಗಳು, ಈಗ ಮತ್ತೊಮ್ಮೆ ಬೆಂಗಳೂರು ತಂಟೆಗೆ ಬಂದಿದ್ದಾರೆ. ಹಾಗಿದ್ರೆ ಏನಿದು ತಮಿಳುನಾಡು ರಾಜಕೀಯ ನಾಯಕರ ಹೊಸ ಕಿರಿಕ್? ಬನ್ನಿ ತಿಳಿಯೋಣ.
ಮೇಕೆದಾಟು ಸಮಯದಲ್ಲೇ ಹೊಸ ಕಿತಾಪತಿ!
ತಮಿಳುನಾಡು ರಾಜ್ಯದ ರಾಜಕೀಯ ನಿಂತಿರುವುದೇ ಕಾವೇರಿ ನೀರಿನ ವಿಚಾರದಲ್ಲಿ, ಇಷ್ಟುದಿನ ಡಿಎಂಕೆ ಮತ್ತು ಎಐಡಿಎಂಕೆ ನಾಯಕರು ಇದೇ ಕಾವೇರಿ ನದಿ ನೀರಿನ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಿ ಚುನಾವಣೆ ಗೆದ್ದಿದ್ದರು. ನಂತರ ತಮಿಳು ನಟ ವಿಜಯ್ ಹೊಸ ಪಕ್ಷ ಕಟ್ಟಿ, ಟಿವಿಕೆ ಪಕ್ಷದ ಮೂಲಕ ಸರ್ಕಾರ ರಚಿಸಿದ್ದರೂ ತಮಿಳುನಾಡಿನ ಕಾವೇರಿ ಕಿರಿಕ್ ಮುಕ್ತಾಯ ಆಗಿಲ್ಲ. 2026 ಮುಂಗಾರು ಮಳೆ ಆರಂಭದಲ್ಲಿ ಕೈಕೊಟ್ಟಿದ್ದ ನೆಪ ಇಟ್ಟುಕೊಂಡು ಕಾವೇರಿ ನೀರಿಗೆ ಕಿರಿಕ್ ಶುರು ಮಾಡಿದ್ದ ತಮಿಳುನಾಡು, ನೇರವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೆಟ್ಟಿಲು ಹತ್ತಿತ್ತು. ಆ ನಂತರ ಸುಪ್ರೀಂಕೋರ್ಟ್ ಬಳಿ ಕೂಡ ಮನವಿ ಮಾಡಿ ಅರ್ಜಿ ಸಲ್ಲಿಸಿದೆ. ಇಷ್ಟೆಲ್ಲಾ ಇರುವಾಗಲೇ, ಬೆಂಗಳೂರಿನ ಹೆಸರು ಕಿತ್ತುಕೊಳ್ಳಲು ತಮಿಳುನಾಡು ಸರ್ಕಾರ ಕಿತಾಪತಿ ಮಾಡಿದಂತೆ ಕಾಣುತ್ತಿದೆ.
ಬೆಂಗಳೂರು ಮೇಲೆ ತಮಿಳುನಾಡು ಕಣ್ಣು!
ಹೌದು, ನಮ್ಮ ಬೆಂಗಳೂರಿನ ಹೆಮ್ಮೆ ಎಂದರೆ ಅದು ನಮ್ಮ ಮೆಟ್ರೋ ಸಾರಿಗೆ ಸೇವೆ ಎಂದು ಎದೆ ತಟ್ಟಿಕೊಂಡು ಹೇಳಬಹುದು. ಇಡೀ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಬೆಂಗಳೂರಿನ ನಮ್ಮ ಮೆಟ್ರೋ ಸೇವೆ ಹೆಸರು ಮಾಡಿದ್ದು, ಸಾವಿರಾರು ಕಿಲೋ ಮೀಟರ್ ದೂರದ ದೇಶಗಳಲ್ಲೂ ಕೀರ್ತಿ ಸಂಪಾದಿಸಿದೆ. ಆದರೆ ಇದೇ ಮೆಟ್ರೋ ವಿಚಾರ ಮುಂದಿಟ್ಟು ಕನ್ನಡಿಗರನ್ನು ಮರಳು ಮಾಡಲು ತಮಿಳುನಾಡು ಇದೀಗ ಪ್ರಯತ್ನ ಮಾಡುತ್ತಿರುವ ರೀತಿ ಕಾಣುತ್ತಿದೆ. ಅದು ಹೇಗೆ ಎಂದರೆ ತಮಿಳುನಾಡು ಗಡಿಗೆ ಸಮೀಪದಲ್ಲೇ ಇರುವ ಬೊಮ್ಮಸಂದ್ರ ಮೆಟ್ರೋ ವಿಚಾರ ಮತ್ತೆ ಕೆದಕಿರುವ ತಮಿಳುನಾಡು ಸರ್ಕಾರ, ಹೊಸೂರು ಟು ಬೊಮ್ಮಸಂದ್ರ ಮೆಟ್ರೋ ಬಗ್ಗೆ ತನ್ನ ಬಜೆಟ್‌ನಲ್ಲಿ ಹಣ ಮೀಸಲು ಇಡುವ ಘೋಷಣೆ ಹೊರಡಿಸಿದೆ.
ಅಕಸ್ಮಾತ್ ಈ ಯೋಜನೆ ಜಾರಿಗೆ ಬಂದರೆ ಕನ್ನಡಿಗರಿಗೆ ಅದು ದೊಡ್ಡ ಆಘಾತ ಉಂಟುಮಾಡಲಿದ್ದು, ಬೆಂಗಳೂರಿನ ಕೈಗಾರಿಕೆಗಳನ್ನ ಈ ಮೂಲಕ ತಮಿಳುನಾಡು ರಾಜ್ಯದ ಹೊಸೂರಿಗೆ ಸೆಳೆಯಲು ತಮಿಳುನಾಡು ಸ್ಕೆಚ್ ಹಾಕಿದೆಯಾ ಎಂಬ ಚರ್ಚೆ ಶುರುವಾಗಿದೆ. ಏಕೆಂದರೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಸೇರಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲು ಇರುವ ಕೈಗಾರಿಕೆಗಳಿಗೆ ಆಫರ್ ಕೊಟ್ಟು ತನ್ನ ನೆಲಕ್ಕೆ ಸೆಳೆಯುವ ಸಂಚು ಇದಾಗಿರುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಯೋಜನೆಗೆ ಕನ್ನಡಿಗರು ಭಾರಿ ವಿರೋಧ ಮಾಡುತ್ತಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಬೆಂಗಳೂರಿನ ಐಟಿ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ ಮೇಲೆ ಕೂಡ, ಇದಿರಂದ ದುಷ್ಪರಿಣಾಮ ಉಂಟುಮಾಡುವ ಕುತಂತ್ರ ಇದೆ ಎಂದು ಕೂಡ ಆರೋಪಿಸಲಾಗಿದೆ. ಇಷ್ಟೆಲ್ಲಾ ವಿರೋಧ ಇದ್ದರೂ ತಮಿಳುನಾಡು ಸರ್ಕಾರ ಮಾತ್ರ ಬಜೆಟ್‌ನಲ್ಲಿ ಈಗ ಹೊಸೂರು ಟು ಬೊಮ್ಮಸಂದ್ರ ಮೆಟ್ರೋ ಯೋಜನೆಗೆ ಅನುದಾನ ಘೋಷಣೆ ಮಾಡಿದೆ.