ಬೆಂಗಳೂರು: ಹಳ್ಳಿಯಿಂದ ದಿಲ್ಲಿ ತನಕ ಮಾತ್ರವಲ್ಲ, ಇಂಡಿಯಾ ಟು ಲಂಡನ್ ಜನರು ನಮ್ಮ ಬೆಂಗಳೂರು ಮೆಟ್ರೋ ಬಗ್ಗೆ ಚರ್ಚೆ ನಡೆಸುತ್ತಾರೆ ಹಾಗೂ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಆದರೆ ಕೆಲವರಿಂದ ಪದೇ ಪದೇ ನಮ್ಮ ಮೆಟ್ರೋದ ಹೆಸರು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇದ್ದು, ಇದನ್ನು ಮೆಟ್ರೋ ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಬೇಸರವನ್ನು ಲಕ್ಷಾಂತರ ಪ್ರಯಾಣಿಕರು ಹೊರ ಹಾಕುತ್ತಿದ್ದಾರೆ. ಈ ಎಲ್ಲಾ ತಿಕ್ಕಾಟಗಳ ನಡುವೆ ಪದೇ, ಪದೇ ಮೆಟ್ರೋ ಹಳಿಗೆ ಜಂಪ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೇ ರೀತಿ ಇಂದು ಕೂಡ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ ನಮ್ಮ ಬೆಂಗಳೂರಿನಲ್ಲಿ.
ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ನಿಲ್ದಾಣಗಳು ಇತ್ತೀಚಿನ ದಿನಗಳಲ್ಲಿ ಆತ್ಮ** ಯತ್ನದ ತಾಣವಾಗಿ ಮಾರ್ಪಡು ಆಗುತ್ತಿಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಯಾಕೆ ಅಂದ್ರೆ, ಇಂದು ಅಂದ್ರೆ ಶನಿವಾರ ಮಧ್ಯಾಹ್ನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಒಬ್ಬರು ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆಯೇ ಹಳಿಗೆ ಜಿಗಿದಿದ್ದು, ಘಟನೆ ಆಘಾತವನ್ನೇ ಈಗ ತರಿಸಿದೆ. ಆದರೆ ಅದೃಷ್ಟವಶಾತ್ ಮೆಟ್ರೋ ಸಿಬ್ಬಂದಿ ಸಮಯಪ್ರಜ್ಞೆ ಹಿನ್ನೆಲೆಯಲ್ಲಿ ಮಹಿಳೆಯು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮಾತ್ರ ಈ ಸುದ್ದಿ ಕೇಳಿ ದಿಢೀರ್ ಆಘಾತವೇ ಎದುರಾಗಿದೆ.
ಹಾಗಾದರೆ ಮೆಟ್ರೋ ನಿಲ್ದಾಣದಲ್ಲಿ ಏನಾಯ್ತು?
ಶನಿವಾರ ಮಧ್ಯಾಹ್ನ ಸುಮಾರು 12.25ರ ವೇಳೆಗೆ ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ರೈಲು ಬರ್ತಿದ್ದಂಗೆ ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದ ಮಹಿಳೆ ಒಬ್ಬರು ದಿಢೀರ್ ಅಂತಾ ಮೆಟ್ರೋ ಹಳಿಯ ಮೇಲೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ನಿಲ್ದಾಣ ನಿಯಂತ್ರಕರು, ಲೋಕೋ ಪೈಲಟ್ & ಭದ್ರತಾ ಸಿಬ್ಬಂದಿ ಆ ತಕ್ಷಣವೇ ಕಾರ್ಯಪ್ರವೃತ್ತರಾಗಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ರೈಲನ್ನ ಫಟಾಫಟ್ ಅಂತಾ ಸಕಾಲದಲ್ಲಿ ನಿಲ್ಲಿಸಿ, ಹಳಿಗೆ ಜಿಗಿದಿದ್ದ ಮಹಿಳೆ ರಕ್ಷಣೆ ಮಾಡಿದ್ದಾರೆ. ಈ ಸಮಯದಲ್ಲಿ ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಮಹಿಳೆಯನ್ನು ಮೇಲೆ ಕರೆದುಕೊಂಡು ಬರಲಾಗಿದೆ.
ಹೀಗೆ ಮೆಟ್ರೋ ಹಳಿಗೆ ಜಿಗಿಯಲು ಯತ್ನಿಸಿದ 50 ವರ್ಷದ ಮಹಿಳೆ ವೃತ್ತಿಯಲ್ಲಿ ಹೂವಿನ ವ್ಯಾಪಾರಿ ಆಗಿದ್ದಾರೆ. ವೈಯಕ್ತಿಕ ಸಮಸ್ಯೆಗಳಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಸುಮಾರು 10 ನಿಮಿಷಗಳ ಕಾಲ ವಿಳಂಬ ಉಂಟಾಯಿತು. ಹಳಿ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸುರಕ್ಷತೆ ಖಾತ್ರಿಪಡಿಸಿಕೊಂಡ ನಂತರವಷ್ಟೇ ಮತ್ತೆ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆ ಮೂಲಕ ಮಧ್ಯಾಹ್ನ ಸುಮಾರು 12.34ಕ್ಕೆ ರೈಲು ಸಂಚಾರವನ್ನು ಎಂದಿನಂತೆ ಪುನರಾರಂಭಿಸಲಾಯಿತು, ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಬಿಎಂಆರ್‌ಸಿಎಲ್ ಮುಂಜಾಗ್ರತಾ ಕ್ರಮಗಳು ಎಲ್ಲಿ?
ಈ ಘಟನೆ ಸುಖಾಂತ್ಯ ಕಂಡಿದ್ದರೂ ಮೆಟ್ರೋ ನಿಲ್ದಾಣಗಳಲ್ಲಿ ಪದೇ ಪದೇ ಮರುಕಳಿಸುತ್ತಿರುವ ಈ ರೀತಿಯ ಆಘಾತಕಾರಿ ಘಟನೆಗಳು ಸಾರ್ವಜನಿಕರ ಮತ್ತು ನಮ್ಮ ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. "ಪ್ರತೀ ಬಾರಿ ಟಿಕೆಟ್ ದರ ಹಾಗೂ ಸಾರಿಗೆ ವೆಚ್ಚವನ್ನು ಏರಿಕೆ ಮಾಡುವ ಬಿಎಂಆರ್‌ಸಿಎಲ್, ಸಾರ್ವಜನಿಕರ ತೀವ್ರ ವಿರೋಧದ ನಡುವೆಯು ಕೂಡ ದರ ಇಳಿಕೆ ಮಾಡಿಲ್ಲ. ಆದರೆ, ಪ್ರಯಾಣಿಕರ ಸುರಕ್ಷತೆಗೆ ಬೇಕಾದ ಕನಿಷ್ಠ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅದ್ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ?" ಎಂದು ಸಾರ್ವಜನಿಕರು ಆಕ್ರೋಶವನ್ನ ಹೊರಹಾಕುತ್ತಿದ್ದಾರೆ.
ಪಿಎಸ್‌ಡಿ ಅಳವಡಿಕೆ ವಿಳಂಬ ಏಕೆ?
ನಮ್ಮ ಮೆಟ್ರೋ ಅಂದ್ರೆ ಒಂದು ಹೆಮ್ಮೆ ಇದ್ದು, ಇಡೀ ಜಗತ್ತಿಗೆ ನಮ್ಮ ಬೆಂಗಳೂರಿನ ಮೆಟ್ರೋ ಮಾದರಿ ಆಗಬೇಕಿದೆ. ಹೀಗಿದ್ದಾಗ ಪಿಎಸ್‌ಡಿ (Platform Screen Doors) ಅಳವಡಿಸಿ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲು ಒತ್ತಾಯ ಮಾಡಲಾಗಿತ್ತು. ಇಂತಹ ಅನಾಹುತ ತಡೆಯಲು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳನ್ನು (ರೈಲು ಬಂದಾಗ ಮಾತ್ರ ತೆರೆದುಕೊಳ್ಳುವ ಸ್ವಯಂಚಾಲಿತ ಗೇಟ್‌ಗಳು) ಎಲ್ಲಾ ನಿಲ್ದಾಣಗಳಲ್ಲೂ ಅಳವಡಿಸಬೇಕು, ಎನ್ನುವ ಬೇಡಿಕೆ ದೀರ್ಘಕಾಲದಿಂದ ಕೂಡ ಇದೆ. ಆದರೆ ಬಿಎಂಆರ್‌ಸಿಎಲ್ ಆ ನಿಟ್ಟಿನಲ್ಲಿ ಮಂದಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಒಬ್ಬರು ಮಾಡುವ ಈ ರೀತಿಯ ಕೃತ್ಯಗಳಿಂದ ಇಡೀ ನಮ್ಮ ಮೆಟ್ರೋ ವ್ಯವಸ್ಥೆ ಏರುಪೇರಾಗುತ್ತದೆ. ಕಚೇರಿ, ಆಸ್ಪತ್ರೆ, ತುರ್ತು ಕೆಲಸಕ್ಕೆ ತೆರಳುವ ಸಾವಿರಾರು ಪ್ರಯಾಣಿಕರು ಪ್ರತೀಬಾರಿ ತೊಂದರೆ ಅನುಭವಿಸುವಂತಾಗಿದೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಅಥವಾ ವೈಯಕ್ತಿಕ ಸಮಸ್ಯೆ ಇದ್ದರೂ ಇಂತಹ ನಿರ್ಧಾರ ಎಂದಿಗೂ ಪರಿಹಾರವಲ್ಲ. ಆವೇಶದಲ್ಲಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಕುಟುಂಬವನ್ನು ಬೀದಿಗೆ ತಳ್ಳುತ್ತವೆ. ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ ದಯವಿಟ್ಟು ಸಹಾಯವಾಣಿಗಳನ್ನು ಸಂಪರ್ಕಿಸಿ, ಆಪ್ತಸಮಾಲೋಚನೆ ಪಡೆಯಿರಿ. ನಿಮ್ಮ ಜೀವ ಅಮೂಲ್ಯವಾದದ್ದು.