Bengaluru Site: ಬೆಂಗಳೂರಿನ ಸೈಟ್ ಮಾಲೀಕರೇ ಗಮನಿಸಿ, ಇಲ್ಲವಾದರೆ 1.28 ಲಕ್ಷ ರೂಪಾಯಿ ತನಕ ದಂಡ!

bengaluru diaries | August 10, 2026 - 11:46 am

ಬೆಂಗಳೂರಲ್ಲಿ ಒಂದು ಮನೆ ಮಾಡಬೇಕು, ಬೆಂಗಳೂರಿನಲ್ಲಿ ಒಂದು ಮನೆ ಕಟ್ಟಬೇಕು ಅನ್ನೋದು ಸಾಕಷ್ಟು ಜನ ಇಟ್ಟುಕೊಂಡ ಆಸೆ. ಆದರೆ ಇನ್ನೂ ಕೆಲವರು ಇದೇ ಸೈಟ್‌ಗಳನ್ನ ಖರೀದಿ ಮಾಡಿ ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಹೀಗೆ ರಿಯಲ್ ಎಸ್ಟೇಟ್ ದುನಿಯಾ ದೊಡ್ಡ ಮಟ್ಟದಲ್ಲಿ ಬೆಳೆದಿರುವ ನಮ್ಮ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಸೈಟ್‌ಗಳ ವಿಚಾರದಲ್ಲಿ ಹೊಸ ರೂಲ್ಸ್ ಬಂದಿದೆ. ಅಂದಹಾಗೆ ಇಷ್ಟು ದಿನ ಬೇಕಾಬಿಟ್ಟಿ ಖಾಲಿ ಸೈಟ್‌ಗಳನ್ನ ಇಟ್ಟುಕೊಂಡು, ಕಸ ತುಂಬಿಕೊಂಡು ಬೆಂಗಳೂರು ನಗರದ ಸ್ವಚ್ಛತೆಯ ಹಾಳು ಮಾಡುತ್ತಿದ್ದ ಖಾಲಿ ಸೈಟ್‌ಗಳ ಮಾಲೀಕರಿಗೆ ದಿಢೀರ್ ಆಘಾತ ಎದುರಾಗಿದೆ. ಈ ಬಗ್ಗೆ ತಿಳಿಯೋಣ ಬನ್ನಿ...

ಹೌದು, ಬೆಂಗಳೂರು ನಗರದಲ್ಲಿ ಖಾಲಿ ನಿವೇಶನಗಳನ್ನು ನಿರ್ಲಕ್ಷ್ಯವಾಗಿ ಬಿಟ್ಟಿರುವ ಮಾಲೀಕರಿಗೆ ಇದೀಗ ಪಾಲಿಕೆ ಕಡೆಯಿಂದ ಎಚ್ಚರಿಕೆ ಗಂಟೆ ಮೊಳಗಿದೆ. ತಮ್ಮ ಜಾಗದಲ್ಲಿ ಕಸ, ಗಿಡಗಂಟಿ & ತ್ಯಾಜ್ಯ ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಲು ಮಾಲೀಕರಿಗೆ ಸೂಚನೆ ನೀಡಲಾಗಿದ್ದು, ನಿಗದಿತ ಗಡುವಿನ ಒಳಗೆ ಸ್ವಚ್ಛತೆ ಕೈಗೊಳ್ಳದಿದ್ದರೆ ಪಾಲಿಕೆಯೇ ಸ್ಥಳಕ್ಕೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಲಿದೆ. ಈ ಕಾರ್ಯಕ್ಕೆ ತಗುಲುವ ಸಂಪೂರ್ಣ ವೆಚ್ಚ ಸಂಬಂಧಪಟ್ಟ ನಿವೇಶನ ಮಾಲೀಕರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಆಗಸ್ಟ್ 15 ಭಾರತದ ಸ್ವಾತಂತ್ರ್ಯ ದಿನಾಚಣೆಯ ಒಳಗಾಗಿ ಖಾಲಿ ನಿವೇಶನ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಗಡುವು ಮುಗಿದ ಬಳಿಕವೂ ಜಾಗದಲ್ಲಿ ಕಸ ಅಥವಾ ತ್ಯಾಜ್ಯ ಕಂಡುಬಂದರೆ ಪಾಲಿಕೆ ಸಿಬ್ಬಂದಿ ಅದನ್ನ ತೆರವುಗೊಳಿಸುತ್ತಾರೆ. ಅಲ್ಲದೆ ಹತ್ತಾರು ಸಾವಿರ ರೂಪಾಯಿಂದ ಹಿಡಿದು, ಲಕ್ಷ ರೂಪಾಯಿ ತನಕ ದಂಡ ಕೂಡ ಬೀಳಲಿದೆ.


ಸ್ವಚ್ಛತೆ ಕಾಪಾಡಲು ಖಡಕ್ ಆದೇಶ

ಅಂದಹಾಗೆ, ಇದೀಗ ಘನತ್ಯಾಜ್ಯ ನಿರ್ವಹಣಾ ಉಪವಿಧಿ–2020 18(1)(ಬಿ) ಅಡಿಯಲ್ಲಿ ಖಾಲಿ ನಿವೇಶನ ಸ್ವಚ್ಛತೆ, ಆರೋಗ್ಯಕರ ಪರಿಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಸೈಟ್ ಮಾಲೀಕರ ಕಡ್ಡಾಯ ಹೊಣೆಗಾರಿಕೆ ಅಂತ ನಮ್ಮ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆ ಸ್ವಂತ ಜಾಗವನ್ನ ನಿರ್ವಹಿಸದೆ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರಕ್ಕೆ ತೊಂದರೆ ಉಂಟುಮಾಡುವ ರೀತಿ ಕಸವನ್ನು ಸೈಟ್‌ಗಳಲ್ಲಿ ಹಾಗೇ ಬಿಡುವವರಿಗೆ ಈಗ ಆರ್ಥಿಕ ಹೊರೆ ಎದುರಾಗಲಿದೆ. ಪ್ರಮುಖವಾಗಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಖಾಲಿ ಸೈಟ್  ಸ್ವಚ್ಛತಾ ಕಾರ್ಯಕ್ಕೆ ವಿಧಿಸುವ ಹಣ ನಿವೇಶನದ ಗಾತ್ರ & ತಡೆಗೋಡೆ ಇರುವುದೇ ಅಥವಾ ಇಲ್ಲವೇ? ಎಂಬುದನ್ನು ಆಧರಿಸಿರುತ್ತದೆ. ಅದರಲ್ಲೂ ಸೈಟ್ ಗಾತ್ರ ದೊಡ್ಡದಾದಷ್ಟು ಮಾಲೀಕರು ಕಟ್ಟಬೇಕಾದ ದಂಡ ಕೂಡ ಹೆಚ್ಚಲಿದೆ ಈಗ.

1.28 ಲಕ್ಷ ರೂಪಾಯಿ ತನಕ ದಂಡ!

ಅಂದಹಾಗೆ 20×30 ಅಡಿ ನಿವೇಶನಕ್ಕೆ ತಡೆಗೋಡೆ ಇಲ್ಲದಿದ್ದರೆ ಸ್ವಚ್ಛತಾ ವೆಚ್ಚವಾಗಿ ಜಿಬಿಎ ಅಧಿಕಾರಿಗಳು 6,700 ರೂಪಾಯಿ ವಿಧಿಸಲಿದ್ದಾರೆ. ಹಾಗೇ ತಡೆಗೋಡೆ ಇದ್ದರೆ, 7,700 ರೂಪಾಯಿ, ತ್ಯಾಜ್ಯ ಸಾಗಣೆ ವೆಚ್ಚವಾಗಿ 19,200 ರೂಪಾಯಿ ಪಡೆಯಲಿದೆ ಇನ್ನು 30×40 ಅಡಿ ನಿವೇಶನಕ್ಕೆ ತಡೆಗೋಡೆ ಇಲ್ಲದಿದ್ದರೆ ₹13,400, ತಡೆಗೋಡೆ ಇದ್ದರೆ ₹14,400 ಹಾಗೂ ತ್ಯಾಜ್ಯ ಸಾಗಣೆ ಇದ್ದರೆ 38,400 ರೂಪಾಯಿ ಚಾರ್ಜ್ ಮಾಡಲಿದೆ. 30×50 ಅಡಿ ನಿವೇಶನಕ್ಕೆ ತಡೆಗೋಡೆ ಇಲ್ಲದಿದ್ದರೆ 16,750 ರೂಪಾಯಿ ಹಾಗೂ ತಡೆಗೋಡೆ ಇದ್ದರೆ ₹14,750 ವೆಚ್ಚವನ್ನು ಪಡೆಯಲಿದೆ. ಇನ್ನು ತ್ಯಾಜ್ಯ ಸಾಗಣೆಗೆ 48,000 ರೂಪಾಯಿ ವೆಚ್ಚ ಆಗಲಿದೆ.

40×60 ಅಡಿ ನಿವೇಶನಕ್ಕೆ ತಡೆಗೋಡೆ ಇಲ್ಲದಿದ್ದರೆ 26,800 ರೂಪಾಯಿ, ತಡೆಗೋಡೆ ಇದ್ದರೆ 27,800 ರೂಪಾಯಿ, ತ್ಯಾಜ್ಯ ಸಾಗಣೆ ಮಾಡುವ ಅವಶ್ಯಕತೆ ಇದ್ದರೆ 76,800 ರೂಪಾಯಿ ಆಗಲಿದೆ. ಇನ್ನುಳಿದಂತೆ 50×80 ಅಡಿ ನಿವೇಶನ ತಡೆಗೋಡೆ ಇಲ್ಲದಿದ್ದರೆ 46,700 ರೂಪಾಯಿ ಹಾಗೂ ತಡೆಗೋಡೆ ಇದ್ದರೆ 47,700 ರೂಪಾಯಿ ಪಡೆಯಲಿದೆ ಜಿಬಿಎ. ಇದಕ್ಕಿಂತ ಮುಖ್ಯವಾಗಿ ತ್ಯಾಜ್ಯ ಸಾಗಣೆ ವೆಚ್ಚವಾಗಿ ಬರೋಬ್ಬರಿ 1.28 ಲಕ್ಷ ಚಾರ್ಜ್ ಮಾಡಲಿದೆಯಂತೆ. ಹೀಗಾಗಿ ಆದಷ್ಟು ಬೇಗ ಸೈಟ್‌ಗಳ ಮಾಲೀಕರೇ ಖಾಲಿ ನಿವೇಶನ ಸ್ವಚ್ಛಗೊಳಿಸಲು ಸೂಚನೆ ನೀಡಿ ಗಡುವು ವಿಧಿಸಲಾಗಿದೆ.