ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹೆಸರು ಪಡೆದು ಇಡೀ ಜಗತ್ತಿಗೆ ಬೇಕಾದ ಐಟಿ ನಗರವಾಗಿ ಬೆಳೆದು ನಿಂತಿದೆ. ಹೀಗೆ ನಮ್ಮ ಬೆಂಗಳೂರು ಅಭಿವೃದ್ಧಿ ಹೊಂದಿದಂತೆ ನಾನಾ ರೀತಿಯ ಸಮಸ್ಯೆಗಳು ಕೂಡ ಉದ್ಭವ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಬೆಂಗಳೂರಿನ ನಿವಾಸಿಗಳ ಸಮಸ್ಯೆ ಬಗೆಹರಿಸಲು ಬೇಕಾದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ಫುಟ್‌ಪಾತ್ ತೆರವು ಕಾರ್ಯಾಚರಣೆ ಈಗಾಗಲೇ ದೊಡ್ಡ ಸದ್ದು ಮಾಡುತ್ತಿದೆ. ಹಾಗೇ ಇದೇ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಪರ ಹಾಗೂ ವಿರೋಧ ಕೂಡ ವ್ಯಕ್ತವಾಗಿತ್ತು, ಇಂತಹ ಸಮಯದಲ್ಲೇ ಫುಟ್‌ಪಾತ್ ಕಾರ್ಯಾಚರಣೆ ಬಳಿಕ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ!
ಹೌದು, ಬೆಂಗಳೂರು ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಲಾದ ಬಳಕೆಯಲ್ಲಿ ಇಲ್ಲದೆ ಹಾಳಾಗಿ ಹೋಗಿರುವ ಹಲವು ವಾಹನಗಳನ್ನು ತೆರವುಗೊಳಿಸಲು ಬೆಂಗಳೂರು ನಗರಾಡಳಿತ ಮಹತ್ವದ ಕ್ರಮಕ್ಕೆ ಈಗ ಮುಂದಾಗಿದೆ. ಇತ್ತೀಚೆಗೆ ಫುಟ್‌ಪಾತ್ ಒತ್ತುವರಿ ತೆರವು ಅಭಿಯಾನಕ್ಕೆ ಚಾಲನೆ ನೀಡಿದ್ದ ಅಧಿಕಾರಿಗಳು, ಇದೀಗ ಸಾರ್ವಜನಿಕ ಸ್ಥಳ ಆಕ್ರಮಿಸಿಕೊಂಡಿರುವ ಅನಾಥ ವಾಹನಗಳನ್ನ ತೆರವುಗೊಳಿಸುವ ವಿಶೇಷ ಅಭಿಯಾನವನ್ನ ಜುಲೈ 10ರಿಂದ ನಗರಾದ್ಯಂತ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಬೆಂಗಳೂರಿಗರು ಸಂಚಾರ ಮಾಡಲು ಅಡ್ಡಿ ಆಗಿರುವ ಹಳೆಯ ವಾಹನಗಳಿಗೆ ಒಂದು ಗತಿ ಕಾಣಿಸುವುದು & ರಸ್ತೆಗಳನ್ನು ಒತ್ತಡದಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತಾಗಿ ಸಂಪೂರ್ಣ ಮಾಹಿತಿ ಮುಂದೆ ಓದಿ ತಿಳಿಯಿರಿ.
ವಾಹನಗಳ ಮಾಲೀಕರಿಗೆ ಎಚ್ಚರಿಕೆ ಸಂದೇಶ
ಕರ್ನಾಟಕ ಸರ್ಕಾರ ಈಗಾಗಲೇ ಈ ರೀತಿಯ ಹಳೆಯ ವಾಹನಗಳನ್ನು ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಿತ್ತು, ಇದೇ ವಿಚಾರವಾಗಿ ಹಳೆಯ ವಾಹನಗಳ ಮಾಲೀಕರಿಗೂ ಈಗಾಗಲೇ ಎಚ್ಚರಿಕೆ ಸಂದೇಶವನ್ನು ಕೂಡ ರವಾನೆ ಮಾಡಲಾಗಿತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹೊಸ ಕಾರ್ಯಾಚರಣೆಯ ರೂಪುರೇಷೆ ಅಂತಿಮಗೊಳಿಸಲಾಗಿದೆ. ರಸ್ತೆಗಳ ಅಂಚಿನಲ್ಲಿ ವರ್ಷಗಳ ಕಾಲ ಕೆಟ್ಟು ನಿಂತ ಕಾರು, ಬೈಕ್, ಆಟೋರಿಕ್ಷಾಗಳು ಸೇರಿದಂತೆ ವಿವಿಧ ವಾಹನಗಳನ್ನ ಗುರುತಿಸಿ ಕಾನೂನುಬದ್ಧವಾಗಿ ತೆರವುಗೊಳಿಸಲು ಇದೀಗ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಂದಹಾಗೆ ಕಳೆದ ಸಭೆಯಲ್ಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅನಾಥ ವಾಹನಗಳ ಪಟ್ಟಿ ಮಾಡಿ, ನೋಟಿಸ್ ನೀಡಲು ಸೂಚಿಸಿದ್ದರೂ ಅಧಿಕಾರಿಗಳು ಇನ್ನೂ ಪ್ರಕ್ರಿಯೆಯ ಆರಂಭಿಸದ ಕಾರಣಕ್ಕೆ ಭಾರಿ ಬೇಸರ ಹೊರ ಹಾಕಿದರು. ಅಲ್ಲದೆ ಅಧಿಕಾರಿಗಳಿಗೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿರುವ ಸಚಿವರು, ಇದೇ ಶುಕ್ರವಾರ ಅಂದರೆ ಜುಲೈ 10 ರಿಂದಲೇ ಕಾರ್ಯಾಚರಣೆ ಆರಂಭಿಸಲು ತಾಕೀತು ಮಾಡಿದ್ದಾರೆ. ಈ ಮೂಲಕ ಬೆಂಗಳೂರಿನ ಅಂದ ಕೆಡಿಸುತ್ತಾ, ವಾಹನ ಸವಾರರು ಹಾಗೂ ಪ್ರಮುಖವಾಗಿ ಪಾದಚಾರಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದ ಹಳೆಯ ವಾಹನಗಳು ಈಗ ಮುಕ್ತಿ ಪಡೆಯಲು ಸಜ್ಜಾಗಿವೆ.
1,518 ಅನಾಥ ವಾಹನಗಳಿಗೆ ಮುಕ್ತಿ?
ಇನ್ನು ಸದ್ಯದ ಸರ್ವೆಯ ಪ್ರಕಾರ ಬೆಂಗಳೂರಿನಾದ್ಯಂತ ಸರಿಸುಮಾರು 1,518 ವಾಹನಗಳನ್ನು ಅನಾಥ ವಾಹನಗಳು ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಹಳೆಯ ಕಾರು, ದ್ವಿಚಕ್ರ ವಾಹನಗಳು ಹಾಗೂ ಆಟೋಗಳು ಸೇರಿವೆ. ಇವು ಸಾರ್ವಜನಿಕ ಜಾಗ ಆಕ್ರಮಿಸಿಕೊಳ್ಳುವುದಲ್ಲದೆ, ಸೊಳ್ಳೆಗಳ ಉತ್ಪತ್ತಿ ತಾಣವಾಗಿಯೂ ಮಾರ್ಪಡುತ್ತಿವೆ. ಜುಲೈ 10 ರಿಂದ ಬೆಂಗಳೂರಿನ ರಸ್ತೆಗಳಿಗೆ ಕಾಯಕಲ್ಪ ನೀಡಲು ಅಧಿಕಾರಿಗಳ ಪಡೆ ರಸ್ತೆಗಿಳಿಯಲಿದೆ, ಸಾರ್ವಜನಿಕರು ತಮ್ಮ ಹಳೆಯ ವಾಹನಗಳನ್ನು ರಸ್ತೆ ಬದಿಯಿಂದ ತಾವಾಗಿಯೇ ತೆರವು ಮಾಡಲು ಇದು ಕೊನೆಯ ಅವಕಾಶವಾಗಿದೆ ಎಂದು ಈಗ ತಿಳಿಸಲಾಗಿದೆ. ಅಕಸ್ಮಾತ್ ಗಡುವು ಮೀರಿದರೆ ಸರ್ಕಾರವೇ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಆಗಿದೆ.