Bidadi Township: ಬಿಡದಿ ಬಡಿದಾಟ ಜೋರು, ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿದ ಮಹಿಳೆಯರು...

bengaluru diaries | July 13, 2026 - 12:30 pm

ಬಿಡದಿ ಬಡಿದಾಟ ಜೋರು ಜೋರಾಗಿದ್ದು, ನೋಡ ನೋಡುತ್ತಲೇ ಈ ತಿಕ್ಕಾಟದ ಪರಿಣಾಮ ರಾಮನಗರ ಜಿಲ್ಲೆ ಅಂದ್ರೆ ಈಗಿನ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮತ್ತೊಮ್ಮೆ ರಾಜಕೀಯ ತಲ್ಲಣ ಏರ್ಪಟ್ಟಿದೆ. ಅದರಲ್ಲೂ ಬಿಡದಿ ಟೌನ್‌ಶಿಪ್ ಯೋಜನೆ ನಮಗೆ ಬೇಡವೇ ಬೇಡ ಎಂದು ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲೇ ಈಗ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಭೈರಮಂಗಲ ಹಾಗೂ ಕೊಡಿಯಾಲ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಹೀಗೆ, ಜಮೀನು ಸರ್ವೆ ನಡೆಸಲು ಅಧಿಕಾರಿಗಳು ಆಗಮಿಸಿದ ಸಮಯದಲ್ಲಿ ದೊಡ್ಡ ಆಘಾತವನ್ನೇ ನೀಡಿದ್ದಾರೆ ಬಿಡದಿ ಜನರು.

ಹೌದು, ಬಿಡದಿ ಸಮೀಪದ ಭೈರಮಂಗಲ & ಕೊಡಿಯಾಲ ಪ್ರದೇಶಗಳಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಮಹತ್ವದ ಯೋಜನೆ ರೂಪಿಸಿದೆ. ಆದರೆ, ಯೋಜನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಕೆಲವು ದಿನಗಳ ಕಾಲ ಸರ್ಕಾರವು ಸೈಲೆಂಟ್ ಆಗಿತ್ತು. ಇಷ್ಟೆಲ್ಲದರ ನಡುವೆ ಇಂದು ದಿಢೀರ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಹೆಜ್ಜೆ ಇಟ್ಟಾಗ ದೊಡ್ಡ ಗಲಾಟೆ ಶುರುವಾಗಿತ್ತು. ಸರ್ವೇ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು & ಕೈಗೆ ಸಿಕ್ಕ ವಸ್ತುಗಳಿಂದ ಸ್ಥಳೀಯರು ದಾಳಿ ನಡೆಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ನಮ್ಮ ಜಾಗಕ್ಕೆ ಬರಬೇಡಿ, ನಮಗೆ ಈ ಯೋಜನೆ ಬೇಡ ಎಂದು ಸ್ಥಳೀಯರು ಭಾರಿ ಆಕ್ರೋಶ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಧಿಕಾರಿಗಳಿಗೆ ಮಹಿಳೆಯರ ಪೊರಕೆ ಸೇವೆ...

ಪೊಲೀಸರು ಮಧ್ಯಪ್ರವೇಶ ಮಾಡಿ ತಕ್ಷಣ ಎಲ್ಲವನ್ನೂ ನಿಭಾಯಿಸಿದರು, ಈ ಸಮಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕು ಹಾಗೂ ರೈತರ ಅಭಿಪ್ರಾಯ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜಾಯಿಂಟ್ ಮೆಷರ್‌ಮೆಂಟ್ ಅಧಿಕಾರಿ (JMO) ನೇತೃತ್ವದ ತಂಡವು ಸರ್ವೆ ಆರಂಭಿಸಲು ಮುಂದಾದ ವೇಳೆ, ಪೊರಕೆ ಹಿಡಿದು ರಸ್ತೆಗೆ ಇಳಿದ ಮಹಿಳೆಯರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಭೂಮಿ ಸರ್ವೆ ನಡೆಸಬಾರದು ಎಂದು ಒತ್ತಾಯಿಸಿದ ಅವರು, ತಮ್ಮ ಕೃಷಿ ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಆರೋಪಿಸಿದರು. ಇನ್ನು ಈ ಗಲಾಟೆ ಜೋರಾಗಿದ್ದೇ ತಡ ರಾಜ್ಯಾದ್ಯಂತ ಮಾತ್ರವಲ್ಲ ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಹಾಗೇ ರಾಜ್ಯ ಸರ್ಕಾರದ ಮುಂದಿನ ನಡೆ ಏನು? ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ಸಂದೇಶ

ಹಾಗೇ ಭೂಸ್ವಾಧೀನ ವಿಚಾರದಲ್ಲಿ ಸರ್ಕಾರ ರೈತರ ಜೊತೆ ಸಮಾಲೋಚನೆ ನಡೆಸಿ, ನ್ಯಾಯಸಮ್ಮತ ಪರಿಹಾರ & ಸ್ಪಷ್ಟವಾದ ಭರವಸೆ ನೀಡಬೇಕು ಎಂಬುದು ಪ್ರತಿಭಟನಾನಿರತ ರೈತರ ಪ್ರಮುಖ ಬೇಡಿಕೆಯಾಗಿದೆ. ಇಷ್ಟೆಲ್ಲದರ ನಡುವೆ ಇಂದು ನಡೆದ ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆಯನ್ನ ನೀಡಿದ್ದಾರೆ. ಅಷ್ಟಕ್ಕೂ ಇಂದು ನಡೆದ ಘಟನೆಯು ಸರ್ಕಾರದ ಚಿತಾವಣೆಯಿಂದ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು.

ರೈತರು ಇಂತಹ ಘಟನೆಗಳಿಗೆ ಆಸ್ಪದ ಕೊಡದಂತೆ ಎಚ್‌ಡಿಕೆ ಮನವಿ ಮಾಡಿದ್ದಾರೆ, ಅಲ್ಲದೆ ಬಿಡದಿ ಭಾಗದ ರೈತರಿಗೆ ಮನವಿ ಮಾಡಿರುವ ಕೇಂದ್ರ ಸಚಿವರು ಈಗ ಪ್ರತಿಭಟನೆ ಹಿನ್ನೆಲೆಯಲ್ಲಿ ರೈತರನ್ನು ಬಂಧಿಸಿದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದ್ದಾರೆ. ಒಟ್ನಲ್ಲಿ ಬಿಡದಿ ಹೋರಾಟ ಸದ್ಯಕ್ಕೆ ಸೈಲೆಂಟ್ ಆಗುವ ಸಾಧ್ಯತೆಯು ಕಡಿಮೆ ಇದ್ದು, ಒಂದು ಕಡೆ ಸರ್ಕಾರ ಹಾಗೂ ಇನ್ನೊಂದು ಕಡೆ ಜೆಡಿಎಸ್ ನಾಯಕರು ತಿಕ್ಕಾಟ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸುತ್ತಾ? ಎಂಬುದನ್ನ ಕಾದು ನೋಡಬೇಕಿದೆ.