BMTC And KSRTC: ಬಸ್ ಟಿಕೆಟ್ ದರದಲ್ಲಿ ದಿಢೀರ್ ಏರಿಕೆ ಆಗುತ್ತಾ? ಕಾರಣ ತಿಳಿಯಿರಿ...

bengaluru diaries | July 10, 2026 - 10:35 am

ನಮ್ಮ ರಾಜ್ಯದ ಯೋಜನೆಗಳು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಾ ಇವೆ. ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಮತ್ತಷ್ಟು ಬಲ ತುಂಬಿರುವ ಕಾಂಗ್ರೆಸ್ ಸರ್ಕಾರ ಇದೀಗ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಕೆಲವು ದಿನಗಳ ಹಿಂದಷ್ಟೇ ಉಚಿತವಾಗಿ ಬಸ್ ಪ್ರಯಾಣ ಮಾಡಲು ವಿದ್ಯಾರ್ಥಿಗಳಿಗೆ ಕೂಡ ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಮತ್ತೊಂದು ಭಾರಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಹಾಗಾದರೆ, ಬಸ್ ಟಿಕೆಟ್ ದರದಲ್ಲಿ ದಿಢೀರ್ ಏರಿಕೆ ಆಗುತ್ತಾ? ಬನ್ನಿ ತಿಳಿಯೋಣ.

ಕರ್ನಾಟಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೀಘ್ರ ಮಹತ್ವದ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಟಿಕೆಟ್ ಬೆಲೆ ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. 4 ಸಾರಿಗೆ ನಿಗಮಗಳು ಟಿಕೆಟ್ ದರ ಪರಿಷ್ಕರಣೆಗೆ ಸರ್ಕಾರದ ಮೊರೆ ಹೋಗಿರುವ ಹಿನ್ನೆಲೆ ಸರ್ಕಾರ ಈ ವಿಷಯವನ್ನ ಗಂಭೀರವಾಗಿ ಪರಿಶೀಲಿಸಿದೆ. ದರ ಪರಿಷ್ಕರಣೆ ಬಗ್ಗೆ ಅಂತಿಮ ನಿರ್ಧಾರವನ್ನ ಕೈಗೊಳ್ಳುವ ಮುನ್ನ ತಜ್ಞರ ಸಮಿತಿಯನ್ನ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಹಾಗಾದರೆ ಎಷ್ಟು ಪ್ರಮಾಣದಲ್ಲಿ ಟಿಕೆಟ್ ಬೆಲೆ ಏರಿಕೆ ಆಗಬಹುದು? ಮುಂದೆ ಓದಿ.


ಸಮಿತಿಗೆ 15 ದಿನಗಳ ಕಾಲಾವಕಾಶ

ಕರ್ನಾಟಕದಲ್ಲಿ ಬಸ್ ಪ್ರಯಾಣಿಕರಿಗೆ ಹೊಸ ಟಿಕೆಟ್ ದರ ನಿಗದಿಗೆ ಮೊದಲು, ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆ ಹಾಗೂ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ಮಾಡಲು ಸಮಿತಿ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಿತಿಗೆ ಸುಮಾರು 15 ದಿನಗಳ ಕಾಲಾವಕಾಶ ನೀಡಲಾಗಲಿದ್ದು, ಈ ಅವಧಿಯಲ್ಲಿ ಸಂಸ್ಥೆಗಳ ಆದಾಯ & ವೆಚ್ಚ, ನಿರ್ವಹಣಾ ವೆಚ್ಚ, ಇಂಧನ ದರ & ಭವಿಷ್ಯದ ಅಗತ್ಯಗಳನ್ನ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈ ವರದಿ ಆಧಾರದ ಮೇಲೆ ಅಂತಿಮ ತೀರ್ಮಾನ ಪ್ರಕಟಿಸಲಿದೆ. ಹಾಗಾದರೆ ಈಗಿನ ಪರಿಸ್ಥಿತಿಯಲ್ಲಿ ಟಿಕೆಟ್ ಬೆಲೆ ಎಷ್ಟು ಏರಿಕೆ ಆಗಬಹುದು? ಮುಂದೆ ಓದಿ.

ಟಿಕೆಟ್ ಬೆಲೆಯಲ್ಲಿ ಎಷ್ಟು ಏರಿಕೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚರಿಸುವ ಬಿಎಂಟಿಸಿ ತನ್ನ ಪ್ರಸ್ತಾವನೆಯಲ್ಲಿ ಟಿಕೆಟ್ ದರವನ್ನ ಗರಿಷ್ಠ ಅಂದ್ರೆ ಶೇ. 44 ರಷ್ಟು ಪರಿಷ್ಕರಿಸಲು ಮನವಿ ಮಾಡಿದೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ & ಕೆಕೆಆರ್‌ಟಿಸಿ ಸಂಸ್ಥೆಗಳು ಸುಮಾರು ಶೇಕಡಾ 33ರ ಆಸುಪಾಸು ದರ ಏರಿಕೆ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆಯಂತೆ. ಆದರೆ ಈ ಬಗ್ಗೆ ಸರ್ಕಾರ ಸಮಿತಿ ರಚಿಸಿ ಪರಿಶೀಲನೆ ನಡೆಸುತ್ತಿದ್ದು, ಸಮಿತಿ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಬಸ್ ಟಿಕೆಟ್ ಬೆಲೆ ಏರಿಕೆ ಬಗ್ಗೆ ಪರ & ವಿರೋಧದ ಚರ್ಚೆ ಕೂಡ ಜೋರಾಗಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೆಲೆ ಏರಿಕೆಗೆ ಕಾರಣ ಏನು?

ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರ ಗಣನೀಯವಾಗಿ ಹೆಚ್ಚಾಗಿರುವುದು ರಾಜ್ಯ ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಹೆಚ್ಚುವರಿ ಹೊರೆ ತಂದಿದೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು ಭತ್ಯೆಗಳ ಹೆಚ್ಚಳದಿಂದಾಗಿ ವೆಚ್ಚ ದುಬಾರಿಯಾಗಿದೆ. ಹೊಸ ಬಸ್‌ಗಳ ಖರೀದಿ, ಹಳೇ ಬಸ್‌ಗಳ ದುರಸ್ತಿ, ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ನಿಗಮಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಎಲ್ಲಾ ಕಾರಣಗಳಿಂದ ಒಂದೋ ಟಿಕೆಟ್ ದರ ಏರಿಕೆಗೆ ಅನುಮತಿ ನೀಡಬೇಕು, ಇಲ್ಲವಾದರೆ ನೇರವಾಗಿ ಸರ್ಕಾರವೇ ಸಾರಿಗೆ ನಿಗಮಗಳನ್ನು ನಷ್ಟದಿಂದ ಪಾರು ಮಾಡಲು ನೇರ ಆರ್ಥಿಕ ಸಹಾಯ ಘೋಷಿಸಬೇಕು ಎಂದು ಸಾರಿಗೆ ಸಂಸ್ಥೆಗಳು ಈಗಾಗಲೇ ಸರ್ಕಾರದ ಮುಂದೆ ಬಿಗಿಪಟ್ಟು ಹಿಡಿದಿದ್ದವು.