ಬೆಂಗಳೂರು ಎಂದರೆ ವೇಗ, ಬೆಂಗಳೂರು ಎಂದರೆ ಕನಸುಗಳ ನಗರಿ. ಆದರೆ ಇಂದು ಅದೇ ಬೆಂಗಳೂರಿನ ರಸ್ತೆಗಿಳಿದರೆ ಕಂಟಕ ಯಾವಾಗ ಯಾವ ರೂಪದಲ್ಲಿ ಬರುತ್ತೋ ಎಂಬ ಭೀತಿ ಪ್ರತಿ ನಾಗರಿಕನನ್ನು ಕಾಡುತ್ತಿದೆ. ಇಂದು ಬೆಳಗ್ಗೆ 8.00 ಗಂಟೆ ಸುಮಾರಿಗೆ ಕೆ.ಆರ್. ಸರ್ಕಲ್ ಸಿಗ್ನಲ್ ಬಳಿ ನಡೆದ ಬಿಎಂಟಿಸಿ ಬಸ್‌ಗಳ ಭೀಕರ ಸರಣಿ ಅಪಘಾತವು ನಮ್ಮ ಸಾರಿಗೆ ಸುರಕ್ಷತೆ ಹಡಗನ್ನು ಮುಳುಗಿಸುವಂತೆ ಮಾಡಿದೆ. ಉತ್ತರ ಕರ್ನಾಟಕದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದ ಭಾಗ್ಯಜ್ಯೋತಿ ಮಹಿಳೆಯರು, ಕರ್ತವ್ಯದಲ್ಲಿದ್ದ ಚಾಲಕ ಅಭಿಷೇಕ್ ಸೇರಿದಂತೆ ಹಲವರು ಇಂದು ರಕ್ತದ ಮಡುವಿನಲ್ಲಿ ನರಳಾಡಿದ್ದಾರೆ.
ಪದೇ ಪದೇ ಬಿಎಂಟಿಸಿ ಬಸ್‌ಗಳು ಅಪಘಾತಕ್ಕೆ ತುತ್ತಾಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು ಸೃಷ್ಟಿಸುತ್ತಿರುವ ಅಪಘಾತಗಳ ಸರಣಿ ನೋಡಿದರೆ ಎಂಥವರು ಕೂಡ ಒಂದು ಕ್ಷಣ ದಂಗಾಗುತ್ತಾರೆ. ಹಾಗಾದರೆ ಈ ರೀತಿ ನಡೆದ ಭೀಕರ ಅಪಘಾತಗಳ ಬಗ್ಗೆ ಮಾಹಿತಿ ಮುಂದೆ ಇದೆ ಓದಿ.
ಮಾರ್ಚ್ 11 (ಬನಶಂಕರಿ): ಮುಬೀನ್ ತಾಜ್ ಎಂಬ ಮಹಿಳೆಯ ಕಾಲಿನ ಮೇಲೆ ಬಸ್ ಹರಿದು ಸಾವು.
ಜೂನ್ 19 (ಜ್ಞಾನಭಾರತಿ): ನಡೆದುಕೊಂಡು ಹೋಗುತ್ತಿದ್ದ 58 ವರ್ಷದ ರಾಜು ಎಂಬುವವರ ಜೀವ ಹೋಗಿತ್ತು.
ಫೆಬ್ರವರಿ 6 (ಕೆ.ಆರ್.ಪುರಂ): 20 ವರ್ಷದ ಯುವತಿ ಹನ್ನಾ ಇನಕಾ ಬೈಕ್‌ನಲ್ಲಿ ಹೋಗುತ್ತಿದ್ದಾಗ ಇವಿ ಬಸ್ ಡಿಕ್ಕಿಯಾಗಿ ಸಾವು.
ಜುಲೈ 4 (ಇಂದು - ಕೆ.ಆರ್ ಸರ್ಕಲ್): 13 ಜನರಿಗೆ ಗಾಯ, ಚಾಲಕನ ಸಾವು ಮತ್ತು ಇಬ್ಬರು ಬದುಕು-ಸಾವಿನ ನಡುವೆ ಹೋರಾಟ.
ಪರಿಸರಸ್ನೇಹಿ ಎಂದು ತರಲಾದ ಎಲೆಕ್ಟ್ರಿಕ್ ಬಸ್‌ಗಳು ಇಂದು ಯಮನ ವಾಹನಗಳಂತೆ ಭಾಸವಾಗುತ್ತಿರುವುದಕ್ಕೆ ಕಾರಣ ಏನು? ಇವಿ ಬಸ್‌ಗಳ ಬ್ರೇಕಿಂಗ್ ವ್ಯವಸ್ಥೆಯ ಬಗ್ಗೆ ಚಾಲಕರಿಗೆ ಸೂಕ್ತ ತರಬೇತಿ ಸಿಕ್ಕಿಲ್ಲವೇ? ಅಥವಾ ಈ ಬಸ್ ನಿರ್ವಹಣೆಯ ವಿಚಾರದಲ್ಲೇ ಲೋಪವಿದೆಯೇ? ಇದಕ್ಕೆ ಬಿಎಂಟಿಸಿ ಉತ್ತರಿಸಲೇಬೇಕಿದೆ.
ಅಮಾಯಕರ ಜೀವದ ಜೊತೆ ಚೆಲ್ಲಾಟ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ಮತ್ತು ಬಿಬಿಎಂಪಿಯ ಕಸದ ವಾಹನಗಳು ರಸ್ತೆಗಿಳಿದರೆ ಸಾರ್ವಜನಿಕರು ಭಯದಿಂದ ದೂರ ಸರಿಯಬೇಕಾದ ಪರಿಸ್ಥಿತಿ ಇದೆ. ಇಕ್ಕಟ್ಟಾದ ರಸ್ತೆಗಳು, ಸಿಗ್ನಲ್ ಅವಾಂತರ ಒಂದೆಡೆಯಾದರೆ, ಚಾಲಕರ ಮೇಲಿರುವ ಸಮಯದ ಒತ್ತಡ ಮತ್ತು ಅತಿವೇಗ ಅಮಾಯಕರ ಬಲಿಗೆ ಕಾರಣವಾಗುತ್ತಿದೆ. ದಿನವಿಡೀ ಕಷ್ಟಪಟ್ಟು ದುಡಿದು ನೆಮ್ಮದಿಯ ಜೀವನ ನಡೆಸಲು ಬರುವ ಸಾಮಾನ್ಯ ಜನರೇ ಇಂತಹ ಅಪಘಾತಗಳಿಗೆ ತುತ್ತಾಗುತ್ತಿರುವುದು ಅತ್ಯಂತ ದುರದೃಷ್ಟಕರ.
ಪರಿಹಾರವೇನು? ಎಷ್ಟು ಜಾಗರೂಕರಾಗಿರಬೇಕು?
ಈ ರಸ್ತೆ ಮರಣಮೃದಂಗಕ್ಕೆ ಬ್ರೇಕ್ ಹಾಕಲು ಕೇವಲ ಸರ್ಕಾರ ಅಥವಾ ಬಿಎಂಟಿಸಿ ಅಷ್ಟೇ ಅಲ್ಲ, ಸಾರ್ವಜನಿಕರಾದ ನಾವೂ ಸಹ ಬುದ್ಧಿವಂತಿಕೆಯಿಂದ ವರ್ತಿಸಬೇಕಿದೆ. ಬಿಎಂಟಿಸಿ ಮತ್ತು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ತುರ್ತು ಕ್ರಮಗಳು, ಈ ಬಗ್ಗೆ ಮಾಹಿತಿ ಮುಂದೆ ಓದಿ.
ವಿಶೇಷ ತರಬೇತಿ (EV Training): ಇವಿ ಬಸ್‌ಗಳನ್ನು ಓಡಿಸುವ ಮುನ್ನ ಚಾಲಕರಿಗೆ ಅದರ ತಂತ್ರಜ್ಞಾನ ಮತ್ತು ಬ್ರೇಕಿಂಗ್ ವ್ಯವಸ್ಥೆಯ ಬಗ್ಗೆ ಕಡ್ಡಾಯವಾಗಿ ಕಠಿಣ ತರಬೇತಿ ನೀಡಬೇಕು.
ಮಾನಸಿಕ ಒತ್ತಡ ನಿವಾರಣೆ: ನಿಗದಿತ ಸಮಯಕ್ಕೆ ತಲುಪಲೇಬೇಕೆಂಬ (Fix Timings) ಒತ್ತಡದಿಂದ ಚಾಲಕರು ಅತಿವೇಗವಾಗಿ ಚಲಾಯಿಸುತ್ತಾರೆ. ಈ ವ್ಯವಸ್ಥೆಯನ್ನು ಸರಿಪಡಿಸಬೇಕು.
ಕಟ್ಟುನಿಟ್ಟಿನ ತಾಂತ್ರಿಕ ತಪಾಸಣೆ: ಪ್ರತಿ ನಿತ್ಯ ಬಸ್‌ಗಳು ಡಿಪೋದಿಂದ ಹೊರಡುವ ಮುನ್ನ ಬ್ರೇಕ್ ಮತ್ತು ಇಂಜಿನ್ ದಕ್ಷತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ಅವಸರವೇ ಅಪಘಾತಕ್ಕೆ ಕಾರಣ: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಪ್ರತಿಯೊಬ್ಬರೂ ಆತುರದಲ್ಲಿರುತ್ತಾರೆ. "ಐದು ನಿಮಿಷ ತಡವಾದರೂ ಪರವಾಗಿಲ್ಲ, ಸುರಕ್ಷಿತವಾಗಿ ತಲುಪಬೇಕು" ಎಂಬ ಮನೋಭಾವ ನಮ್ಮದಾಗಬೇಕು.
ದೊಡ್ಡ ವಾಹನಗಳಿಂದ ಅಂತರ ಕಾಯ್ದುಕೊಳ್ಳಿ: ಬಿಎಂಟಿಸಿ ಬಸ್, ಕಸದ ಲಾರಿ ಅಥವಾ ಟಿಪ್ಪರ್‌ಗಳ ಹಿಂದೆ ಅಥವಾ ಪಕ್ಕದಲ್ಲಿ ಚಲಿಸುವಾಗ ಕನಿಷ್ಠ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ. ಅವುಗಳ 'ಬ್ಲೈಂಡ್ ಸ್ಪಾಟ್' (Blind Spot - ಚಾಲಕನಿಗೆ ಕಾಣಿಸದ ಜಾಗ) ನಲ್ಲಿ ವಾಹನ ಚಲಾಯಿಸಬೇಡಿ.
ಸಿಗ್ನಲ್ ಜಂಪ್ ಮಾಡಬೇಡಿ: ಸಿಗ್ನಲ್ ಬೀಳುವ ಕೊನೆ ಕ್ಷಣದಲ್ಲಿ ಆತುರದಿಂದ ವಾಹನ ನುಗ್ಗಿಸುವ ಚಾಳಿ ಬಿಡಿ. ಇಂದು ನಡೆದ ಅಪಘಾತ ಕೂಡ ಸಿಗ್ನಲ್ ಬಳಿಯೇ ಆಗಿರುವುದನ್ನು ನಾವು ಮರೆಯಬಾರದು.
ರಸ್ತೆ ಸುರಕ್ಷತೆ ಎಂಬುದು ಕೇವಲ ನಿಯಮವಲ್ಲ, ಅದು ನಮ್ಮ ಮತ್ತು ನಮ್ಮನ್ನು ನಂಬಿರುವ ಕುಟುಂಬದ ಬದುಕು. ವ್ಯವಸ್ಥೆ ಕಣ್ಣು ಬಿಡುವವರೆಗೂ ನಾವು ಕಾಯುತ್ತಾ ಕೂರಲು ಸಾಧ್ಯವಿಲ್ಲ. ಚಾಲಕರು ತಮ್ಮ ಜವಾಬ್ದಾರಿಯನ್ನು ಅರಿತು, ರಸ್ತೆಯಲ್ಲಿ ಚಲಿಸುವ ಪ್ರತಿಯೊಬ್ಬ ಅಮಾಯಕ ಜೀವಕ್ಕೂ ಬೆಲೆ ಕೊಡಬೇಕು. ಬೆಂಗಳೂರಿನ ರಸ್ತೆಗಳು ಸಾವಿನ ರಸ್ತೆಗಳಾಗದಿರಲಿ, ಪ್ರತಿಯೊಬ್ಬರ ಪಯಣವೂ ಸುರಕ್ಷಿತವಾಗಿರಲಿ. ವೇಗಕ್ಕಿಂತ ವಿವೇಕ ಇರುವುದು ತುಂಬಾ ಮುಖ್ಯ. ಜೀವಕ್ಕಿಂತ ಯಾವುದು ಕೂಡ ಮುಖ್ಯವಲ್ಲ ಎನ್ನುವುದನ್ನು ಯಾರು ಕೂಡ ಮರೆಯಬಾರದು.