BMTC Passengers: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕೆ ಹೊಸ ಮಾರ್ಗಸೂಚಿ, ಭರ್ಜರಿ ಗುಡ್‌ನ್ಯೂಸ್!

bengaluru diaries | July 13, 2026 - 3:10 pm
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಡೀ ದೇಶದಲ್ಲೇ ಹೆಸರು ಮಾಡಿದ್ದು, ನಮ್ಮ ನಾಡಿನ ಈ ಹೆಮ್ಮೆಯ ಸಂಸ್ಥೆಯು ರೂಪುಗೊಂಡು ಇನ್ನೇನು ಮುಂದಿನ ವರ್ಷಕ್ಕೆ 30 ವರ್ಷ ತುಂಬಲಿದೆ. ಹೀಗಿದ್ದಾಗ ಮಹಿಳಾ ಪ್ರಯಾಣಿಕರು & ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ ನಂತರ ಇನ್ನಷ್ಟು ಸಹಾಯ ಆಗುತ್ತಿದೆ. ಹೀಗಿದ್ದಾಗಲೇ ಸಂಸ್ಥೆಯಲ್ಲಿ ಇರುವ ಲೋಪದೋಷ ಸರಿ ಮಾಡಲು ಸರ್ಕಾರ ಮುಂದಾಗಿದೆ. ಸಾರ್ವಜನಿಕರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಹಲವು ಹೊಸ ಆಡಳಿತಾತ್ಮಕ ಸೂಚನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲೂ ಹೊಸ ಮಾರ್ಗಸೂಚಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾಗಿದೆ, ಬನ್ನಿ ಮುಂದೆ ಓದೋಣ.

ಹೌದು, ಇತ್ತೀಚೆಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಯಾವುದೇ ವಿಶೇಷ ವ್ಯವಸ್ಥೆ ಇಲ್ಲದೆ ಸಾಮಾನ್ಯ ಪ್ರಯಾಣಿಕರ ರೀತಿ ನಮ್ಮ ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಸಂಚಾರ ಮಾಡಿದ್ದರು. ಈ ವೇಳೆ ಸಾರ್ವಜನಿಕ ಸಾರಿಗೆ ಸೇವೆಯ ವಾಸ್ತವ ಸ್ಥಿತಿಯ ಪರಿಶೀಲಿಸಿದ ಬಳಿಕ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಬಿಎಂಟಿಸಿ ಸಂಸ್ಥೆ ಪ್ರಯಾಣಿಕರ ಅನೂಲಕ್ಕಾಗಿ ವಿಶೇಷ ಗಮನ ಹರಿಸಿದೆ. ಇದೇ ಕಾರಣಕ್ಕೆ ಸಿಬ್ಬಂದಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿರುವ ಹೊಸ ನಿರ್ದೇಶನಗಳನ್ನ ಅಧಿಕಾರಿಗಳು ಹೊರಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.


ಚಿಲ್ಲರೆ ಕಿರಿಕ್ ಮಾಡದಂತೆ ಖಡಕ್ ಸೂಚನೆ
ಬಿಎಂಟಿಸಿ ಸಂಸ್ಥೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ, ಅಷ್ಟೇ ಸಮಸ್ಯೆಗಳು ಇವೆ ಎಂಬುದು ಪ್ರಯಾಣಿಕರ ದೂರು ಆಗಿತ್ತು. ಹೀಗಿದ್ದಾಗ ಸಂಸ್ಥೆಯ ಉನ್ನತ ಅಧಿಕಾರಿಗಳು ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಅಧಿಕಾರಿಗಳಿಗೆ ಪ್ರಯಾಣಿಕರ ಸೇವೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದಂತೆ ಖಡಕ್ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಚಿಲ್ಲರೆ ಹಣದ ಕೊರತೆಯಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆಯ ಸಂಪೂರ್ಣವಾಗಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಈ ಮೂಲಕ ಇನ್ನುಮುಂದೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಚಿಲ್ಲರೆ ಕಿರಿಕ್ ಇರಬಾರದು ಎಂದು ಖಡಕ್ ಆದೇಶವನ್ನು ನೀಡಲಾಗಿದೆ. ಚಿಲ್ಲರೆ ಇಲ್ಲ ಎಂಬ ನೆಪ ಹೇಳಿ ಯಾರಿಗೂ ಟಿಕೆಟ್ ನೀಡಲು ನಿರಾಕರಿಸಬಾರದು ಅಥವಾ ಬಸ್‌ನಿಂದ ಇಳಿಯುವಂತೆ ಹೇಳಬಾರದು ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಗೂಗಲ್ ಪೇ, ಫೋನ್ ಪೇ ಮಾಹಿತಿ!
ಇದರ ಜೊತೆಗೆ ಯುಪಿಐ ಮೂಲಕ ಡಿಜಿಟಲ್ ಪಾವತಿ ಬಗ್ಗೆಯೂ ಪ್ರಯಾಣಿಕರಿಗೆ ಅರಿವು ಮೂಡಿಸಲು ಹೊಸ ಸೂಚನೆ ನೀಡಲಾಗಿದೆ. ಡಿಜಿಟಲ್ ಪಾವತಿ ಹೆಚ್ಚಿಸುವ ಉದ್ದೇಶದಿಂದ, ಬಸ್‌ಗಳಲ್ಲಿ ಅಳವಡಿಸಿರುವ ಇಟಿಎಂ ಮಷಿನ್ ಮೂಲಕ ಲಭ್ಯ ಇರುವ ಡೈನಾಮಿಕ್ ಕ್ಯೂಆರ್ ಕೋಡ್ ಬಳಸಿ ಯುಪಿಐ ಪಾವತಿ ಮಾಡುವ ಬಗ್ಗೆ ಪ್ರಯಾಣಿಕರಿಗೆ ಸಾರಿಗೆ ಸಿಬ್ಬಂದಿ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಸಿಬ್ಬಂದಿ ವರ್ತನೆ ಜೊತೆಗೆ, ಚಾಲಕರು ನಿಗದಿತ ಬಸ್ ನಿಲ್ದಾಣಗಳಲ್ಲಿಯೇ ಬಸ್‌ಗಳನ್ನ ನಿಲ್ಲಿಸಬೇಕು ಎಂಬ ನಿಯಮವನ್ನು ಮತ್ತೊಮ್ಮೆ ಕಟ್ಟುನಿಟ್ಟಾಗಿ ನೆನಪಿಸಲಾಗಿದೆ. ಅಧಿಕೃತ ನಿಲ್ದಾಣಗಳನ್ನು ಬಿಟ್ಟು ಬೇರೆಡೆ ಪ್ರಯಾಣಿಕರನ್ನು ಹತ್ತಿಸುವುದು ಅಥವಾ ಇಳಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಒಟ್ನಲ್ಲಿ ಇನ್ನುಮುಂದೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಂಟಾಗುವ ಸಮಸ್ಯೆ ಸರಿ ಮಾಡೋದಕ್ಕೆ ಖಡಕ್ ಸೂಚನೆ ನಿಡಲಾಗಿದೆ. ಅಲ್ಲದೆ ಸರ್ಕಾರ ಹಾಗೂ ಸಾರಿಗೆ ಇಲಾಖೆ ಆದೇಶ ಪಾಲನೆ ಮಾಡದಿದ್ದರೆ ಸಾರಿಗೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಲಾಗಿದೆ. ಹೀಗಾಗಿ ಪ್ರಯಾಣಿಕರು ಕೂಡ ಭವಿಷ್ಯದಲ್ಲಿ ನೆಮ್ಮದಿ ಹಾಗೂ ಖುಷಿ ಖುಷಿಯಾಗಿ ಕಿರಿಕ್ ಇಲ್ಲದೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡುವ ಬಗ್ಗೆ ನಿರೀಕ್ಷೆ ಮೂಡಿದೆ.