BMTC Passengers: ಬಿಎಂಟಿಸಿ ಪ್ರಯಾಣಿಕರೇ ಗಮನಿಸಿ, ಬಸ್‌ಗಳಲ್ಲಿ ಶೀಘ್ರವೇ ಆಡಿಯೋ ಜಾಹೀರಾತು?

New Admin | July 5, 2026 - 11:40 am

ಬಿಎಂಟಿಸಿ ಬಹುದೊಡ್ಡ ಹೆಸರು ಮಾಡಿರುವ ಕನ್ನಡ ನಾಡಿನ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿದ್ದು, ಕೋಟ್ಯಂತರ ಜನ ಇದೇ ಬಿಎಂಟಿಸಿ ಸಾರಿಗೆ ಬಸ್‌ಗಳನ್ನು ನಂಬಿಕೊಂಡು ಸಂಚಾರ ಮಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನ ಮೂಲೆ, ಮೂಲೆಗೂ ಬಿಎಂಟಿಸಿ ಬಸ್‌ಗಳು ಸಂಪರ್ಕ ಕಲ್ಪಿಸಿ ಬೆನ್ನೆಲುಬಾಗಿ ನಿಂತಿವೆ. ಹೀಗಿದ್ದಾಗಲೇ ಶಕ್ತಿ ಯೋಜನೆ ನಂತರದಲ್ಲಿ ಬಿಎಂಟಿಸಿ ಬಸ್‌ಗಳ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಕ್ಕಿದ್ದು, ಇತ್ತೀಚೆಗೆ ವಿದ್ಯಾರ್ಥಿಗಳ ಪಾಲಿಗೂ ಫ್ರೀ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಿದ್ದಾಗ ಆರ್ಥಿಕ ನಷ್ಟ ಸರಿದೂಗಿಸಲು ಬಿಎಂಟಿಸಿ ಮಹತ್ವದ ಚಿಂತನೆ ನಡೆಸಿದ್ದು, ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದ ಶಕ್ತಿ ಯೋಜನೆ ನಂತರ ಸರ್ಕಾರ ಕೂಡ ಅನುದಾನ ಕೊಡುತ್ತಿದ್ದು, ಇದು ಸಾರಿಗೆ ಸಂಸ್ಥೆ ಬಿಎಂಟಿಸಿಗೆ ನೆರವಾಗಿದೆ. ಹೀಗಿದ್ದರೂ, ನಷ್ಟದಲ್ಲಿ ಇರುವ ಸಾರಿಗೆ ನಿಗಮವು ಭೂಮಿಯ ಆಳದಲ್ಲಿ ಚಿನ್ನ ಹುಡುಕುವಂತೆ ಆದಾಯದ ಮೂಲಗಳ ಹುಡುಕುತ್ತಲೇ ಇದ್ದು, ಇತ್ತೀಚೆಗಷ್ಟೆ ಬಸ್ ಟಿಕೆಟ್‌ಗಳ ಹಿಂಭಾಗದಲ್ಲೂ ಜಾಹೀರಾತು ಮುದ್ರಿಸಲು ಟೆಂಡರ್ ಕರೆದಿತ್ತು. ಇದೀಗ ಬಸ್ ಒಳಗೂ ಆಡಿಯೋ ರೂಪದ ಜಾಹೀರಾತು ಪ್ರಕಟಿಸಲು ಹೊರಟಿದ್ದು, ಭಾರಿ ಕುತೂಹಲ ಕೆರಳಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.


ಬಸ್ ನಿಲ್ದಾಣ ಮಾಹಿತಿ ಆಡಿಯೋದಲ್ಲಿ ಜಾಹೀರಾತು?

ಹೌದು, ಆರ್ಥಿಕ ನಷ್ಟವನ್ನು ಕಡಿಮೆ ಮಾಡಿ ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ಅಂದ್ರೆ ನಮ್ಮ ಬಿಎಂಟಿಸಿ ಹೊಸ ಜಾಹೀರಾತು ಮಾದರಿಯ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಯೋಜನೆ ಮೂಲಕ ಬಸ್ ಒಳಗೆ ಧ್ವನಿ ರೂಪದಲ್ಲಿ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಈಗಾಗಲೇ ಪ್ರಯಾಣಿಕರಿಗೆ ಮುಂದಿನ ಬಸ್ ನಿಲ್ದಾಣದ ಮಾಹಿತಿ ಘೋಷಿಸುವ ಆಡಿಯೋ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದೇ ವ್ಯವಸ್ಥೆಯನ್ನು ಬಳಸಿಕೊಂಡು, ಎರಡು ನಿಲ್ದಾಣಗಳ ನಡುವಿನ ಪ್ರಯಾಣದ ವೇಳೆ ಎಫ್‌ಎಂ ರೇಡಿಯೋ ಶೈಲಿಯಲ್ಲಿ ಜಾಹೀರಾತು ಪ್ರಸಾರ ಮಾಡಲು ಯೋಜಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ರೀತಿ ಜಾಹೀರಾತು?

ಅಂದಹಾಗೆ ಈಗಾಗಲೇ ಈ ಮಾದರಿ ದೆಹಲಿ ಮೆಟ್ರೋ & ಭಾರತೀಯ ರೈಲ್ವೆಯಲ್ಲಿ ಈಗಾಗಲೇ ಬಳಕೆಯಲ್ಲಿ ಇದ್ದು, ಸರ್ಕಾರಿ ಬಸ್ ಸೇವೆಯಲ್ಲಿ ಮೊದಲ ಬಾರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಬಿಎಂಟಿಸಿಯ ಸುಮಾರು 6,800 ಡೀಸೆಲ್ & ಎಲೆಕ್ಟ್ರಿಕ್ ಬಸ್‌ಗಳಲ್ಲಿ ಪ್ರತಿದಿನ 45 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನ ತಲುಪುವ ಅವಕಾಶ ಇರುವುದರಿಂದ ಖಾಸಗಿ ಸಂಸ್ಥೆಗಳು ಜಾಹೀರಾತಿಗೆ ಹೆಚ್ಚಿನ ಆಸಕ್ತಿಯನ್ನ ತೋರಬಹುದು ಎಂದು ಸಾರಿಗೆ ನಿಗಮ ಕೂಡ ನಿರೀಕ್ಷಿಸಿದೆ.

ಬಸ್‌ಗಳ ಹೊರಭಾಗದಲ್ಲಿ ಜಾಹೀರಾತು ಅಬ್ಬರ

ದೇಶದಲ್ಲೇ ದೊಡ್ಡ ಹೆಸರು ಮಾಡಿರುವ ಕರ್ನಾಟಕದ ಸಾರಿಗೆ ಸಂಸ್ಥೆಗಳು ಈಗಾಗಲೇ ಹಲವು ಪ್ರಶಸ್ತಿಗಳನ್ನ ತಮ್ಮದಾಗಿಸಿ ಗಮನ ಸೆಳೆದಿವೆ. ಅದರಲ್ಲೂ ಬಿಎಂಟಿಸಿ ಕೂಡ ಈಗಾಗಲೇ ಹಲವು ಅವಾರ್ಡ್ ಪಡೆದುಕೊಂಡಿದ್ದು, ಪ್ರಯಾಣಿಕರಿಗಾಗಿ ಹಲವು ಯೋಜನೆ ಜಾರಿಗೆ ತಂದಿದೆ. ಹೀಗಿದ್ದರೂ ಜಾಹೀರಾತು ವಿಚಾರದಲ್ಲಿ ಕಿರಿಕ್ ಆಗಾಗ ನಡೆಯುತ್ತಲೇ ಇರುತ್ತದೆ. ಈ ನಡುವೆ ದಿಢೀರ್ ಅಂತಾ ಆಡಿಯೋ ಮೂಲಕವೂ ಬಿಎಂಟಿಸಿ ಬಸ್‌ಗಳಲ್ಲಿ ಜಾಹೀರಾತು ಪ್ರಕಟಿಸಲು ಯೋಚಿಸುತ್ತಿರುವ ಹಿನ್ನೆಲೆ ಮತ್ತಷ್ಟು ಗಮನ ಸೆಳೆದಿದೆ.

ಬಿಎಂಟಿಸಿ ಈಗಾಗಲೇ ತನ್ನ ಬಸ್‌ಗಳ ಹೊರಭಾಗದಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಆದಾಯ ಗಳಿಸುತ್ತಿದೆ. ಹಾಗೇ ಇನ್ನೇನು ಟಿಕೆಟ್‌ಗಳ ಹಿಂಭಾಗದಲ್ಲೂ ಜಾಹೀರಾತು ಪ್ರಕಟಿಸಿ, ಇನ್‌ಕಂ ಜಾಸ್ತಿ ಮಾಡಿಕೊಳ್ಳಲು ಮುಂದಾಗಿದೆ. ಇಂತಹ ಸಮಯದಲ್ಲೇ ಹೊಸ ಆಡಿಯೋ ಜಾಹೀರಾತು ಯೋಜನೆಯಿಂದ ಆದಾಯವನ್ನ ಹೆಚ್ಚಿಸುವ ಗುರಿ ಹೊಂದಿದೆ. ಆದರೆ, ಇದು ಪ್ರಯಾಣಿಕರಿಗೆ ಅನುಕೂಲವಾಗುತ್ತೋ ಅಥವಾ ಹೆಚ್ಚುವರಿ ಕಿರಿಕಿರಿ ಉಂಟುಮಾಡುತ್ತೋ? ಅನ್ನೋದನ್ನ ಈ ಯೋಜನೆ ಜಾರಿ ಆದ ನಂತರವಷ್ಟೇ ತಿಳಿಯಬಹುದಾಗಿದೆ.