ಬಿಪಿಎಲ್ ಅಂದ್ರೆ ಬಡವರ ಕಾರ್ಡ್ ಅಂತಾನೇ ಫೇಮಸ್, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಕೋಟಿ ಕೋಟಿ ಬಡವರ ಪಾಲಿಗೆ ಇದೇ ಬಿಪಿಎಲ್ ಕಾರ್ಡ್ ತುಂಬಾನೇ ಸಪೋರ್ಟ್ ಮಾಡ್ತಾ ಬಂದಿದೆ. ಹಾಗೇ ಆಹಾರ ಅಭಾವ ನೀಗಿಸಲು ಕೂಡ ಬಿಪಿಎಲ್ ಕಾರ್ಡ್ ಉತ್ತಮ ವೇದಿಕೆ ಒದಗಿಸುತ್ತಿದೆ. ಆದರೆ ಇದೇ ಬಿಪಿಎಲ್ ವ್ಯವಸ್ಥೆ ಕೆಲವರ ಪಾಲಿಗೆ ದುರುಪಯೋಗ ಮಾಡಿಕೊಳ್ಳಲು ಅವಕಾಶ ಒದಗಿಸುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿ ಬರ್ತಾನೇ ಇತ್ತು. ಕರ್ನಾಟಕ ಸರ್ಕಾರ ಕೂಡ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಕ್ರಮ ಕೈಗೊಳ್ಳಲು ಮುಂದಾಗಿ, ಈಗಾಗಲೇ ಬಿಪಿಎಲ್ ಕಾರ್ಡ್ ಇರುವವರನ್ನು ಮತ್ತೊಮ್ಮೆ ಫಿಲ್ಟರ್ ಮಾಡುತ್ತಿದೆ. ಇಂತಹ ಸಮಯದಲ್ಲೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಇರುವವರಿಗೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದೆ.
ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪಡಿತರದಾರರು ಕಾರ್ಡ್ ಪಡೆಯಲು ಇದ್ದ ಆದಾಯ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಗಂಭೀರ ಚಿಂತನೆಯನ್ನು ನಡೆಸುತ್ತಿದೆ. ಈಗಿನ 1.2 ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಿತಿಯನ್ನ 3 ಲಕ್ಷ ರೂಪಾಯಿಗೆ ಏರಿಕೆ ಮಾಡಲು ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆಯಂತೆ. ಈ ಹಿನ್ನೆಲೆ ಬಿಪಿಎಲ್ ಕಾರ್ಡ್ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ ಲಕ್ಷಾಂತರ ಜನರಿಗೆ ನೆಮ್ಮದಿ ಸಿಕ್ಕಂತಾಗಿದ್ದು, ಈ ಬಗ್ಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಇದು ರಾಜ್ಯದಲ್ಲೇ ಅತ್ಯಂತ ದೊಡ್ಡ ಬದಲಾವಣೆ ಆಗಲಿದ್ದು, ಭವಿಷ್ಯದ ದೃಷ್ಟಿಯಿಂದ ಕೂಡ ಪ್ರಮುಖವಾಗಿದೆ. ಹೀಗಾಗಿ ದೇಶೀಯ ಮಟ್ಟದಲ್ಲಿ ಕೂಡ ಈ ನಿರ್ಧಾರ ಗಮನ ಸೆಳೆಯುವ ನಿರೀಕ್ಷೆ ಇದೆ.
ಬಡವರ ಪಾಲಿಗೆ ದೊಡ್ಡ ಉಡುಗೊರೆ
ಆಧುನಿಕ ಕಾಲದಲ್ಲಿ ವರ್ಷಕ್ಕೆ 1.2 ಲಕ್ಷ ರೂಪಾಯಿ ಆದಾಯ ಎಂದರೆ ಅದು ತುಂಬಾನೇ ಕಡಿಮೆ ಆಗುತ್ತೆ, ಈ ಕಾರಣಕ್ಕೆ ಲಕ್ಷಾಂತರ ಜನರಿಗೆ ಬಿಪಿಎಲ್ ಕಾರ್ಡ್ ಹೊಂದುವುದಕ್ಕೆ ಅವಕಾಶವೇ ಸಿಗುವುದಿಲ್ಲ ಎಂಬ ಆಕ್ರೋಶ ಮೊಳಗಿತ್ತು. ಹೀಗಿದ್ದಾಗ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಜೊತೆಗೆ ಜಂಟಿಯಾಗಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಮಹತ್ವದ ಸುಳಿವು ನೀಡಿದ್ದಾರೆ. ಆಡಳಿತ ಸುಧಾರಣಾ ಆಯೋಗದ ಶಿಫಾರಸಿನ ಹಿನ್ನೆಲೆ ಬಿಪಿಎಲ್ ಕಾರ್ಡ್ ಅರ್ಹತಾ ಮಿತಿ 3 ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆ ಶೀಘ್ರದಲ್ಲೇ ಸಂಪುಟ ಸಭೆ ಮುಂದೆ ಮಂಡಿಸುವ ನಿರೀಕ್ಷೆ ಇದೆ.
ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲ್ಲ!
ಮತ್ತೊಂದು ಕಡೆ ತಮ್ಮ ಪಡಿತರ ಕಾರ್ಡ್ ಸಂಪೂರ್ಣ ರದ್ದಾಗುವ ಭೀತಿಯಲ್ಲಿ ಇದ್ದ ಜನರಿಗೆ ನೆಮ್ಮದಿ ಸಿಕ್ಕಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಮಾನದಂಡ ಅನ್ವಯ ಪಡಿತರ ಕಾರ್ಡ್ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಅನರ್ಹಗೊಂಡ ಅಥವಾ ಮಿತಿಮೀರಿ ಆದಾಯ ಹೊಂದಿದ ಯಾವುದೇ ಕಾರ್ಡ್ ಸಂಪೂರ್ಣ ರದ್ದುಗೊಳಿಸುವುದಿಲ್ಲ ಎಂದು ತಿಳಿಸಲಾಗಿದೆ. ಬಿಪಿಎಲ್ ಬದಲಿಗೆ ಅಂತಹ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗೆ ವರ್ಗಾಯಿಸಲಾಗುತ್ತದೆ. ಒಮ್ಮೆ ಆದಾಯ ಮಿತಿ ಏರಿಕೆ ಜಾರಿಗೆ ಬಂದ ನಂತರವಷ್ಟೇ ಎಪಿಎಲ್‌ಗೆ ವರ್ಗಾವಣೆ ಆದ ಫಲಾನುಭವಿಗಳು ಅಥವಾ ಹೊಸ ಅರ್ಹರು ಮತ್ತೆ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಲು ಇದು ಸಹಕಾರಿ ಎಂದು ಕರ್ನಾಟಕದ ಆಹಾರ ಸಚಿವರು ಮಾಹಿತಿ ನೀಡಿದ್ದಾರೆ.
1.20 ಕೋಟಿ ಬಿಪಿಎಲ್ ಕಾರ್ಡ್‌ದಾರರು
ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳ ಮೂಲಕ ಪಡಿತರ ವ್ಯವಸ್ಥೆ ಸಖತ್ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ ಇರುವ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳ ಸಂಖ್ಯೆಯು ಸುಮಾರು 1.20 ಕೋಟಿ ಆಗಿದೆ. ತೆರಿಗೆ ಪಾವತಿದಾರರು & ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಪಡೆದಿರುವುದನ್ನು ಇದೀಗ ಪತ್ತೆಹಚ್ಚಿ ಪರಿಷ್ಕರಿಸುವ ಪ್ರಕ್ರಿಯೆಯು ನಡೆದಿತ್ತು. ಹೀಗಿದ್ದಾಗಲೇ ದಿಢೀರ್ ಮಧ್ಯಮ ವರ್ಗ & ವಿವಿಧ ಸಂಘಟನೆಗಳ ಬೇಡಿಕೆ ಹಿನ್ನೆಲೆ ಆದಾಯ ಮಿತಿಯನ್ನು 3 ಲಕ್ಷ ರೂಪಾಯಿಗೆ ಹೆಚ್ಚಿಸಲು ಕರ್ನಾಟಕ ಈಗ ಸರ್ಕಾರ ಮುಂದಾಗಿದೆ, ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಅಧಿಕೃತವಾಗಿ ಈ ಬಿಪಿಎಲ್ ಸೌಲಭ್ಯ ದೊರೆಯುವ ನಿರೀಕ್ಷೆಯೂ ಮೂಡಿದೆ.
ಒಟ್ನಲ್ಲಿ ಹಲವು ವರ್ಷಗಳಿಂದ ಮಧ್ಯಮವರ್ಗ ಇಟ್ಟಿದ್ದ ಬೇಡಿಕೆ ಅಂತೂ ಇಂತೂ ಈಡೇರುವ ಸಮಯ ಈಗ ಬಂದಂತೆ ಕಾಣುತ್ತಿದೆ. ಲಕ್ಷಾಂತರ ಕುಟುಂಬಗಳ ಆದಾಯ 3 ಲಕ್ಷ ರೂಪಾಯಿ ಆಸುಪಾಸು ಇದ್ದು, ಪ್ರಜೆಗಳು ಈಗ ತಮ್ಮ ಬಿಪಿಎಲ್ ಕಾರ್ಡ್ ಕಳೆದುಕೊಳ್ಳುವ ಆತಂಕದಲ್ಲಿ ಕೂಡ ಇದ್ದರು. ಆದರೆ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗದಲ್ಲೂ ಈ ರೀತಿಯ ಮರು ಮೌಲ್ಯಮಾಪನ ಅಗತ್ಯ ಎಂಬ ಚರ್ಚೆ ಶುರುವಾಗಿದ್ದು, ಇದೀಗ ಕರ್ನಾಟಕ ಮತ್ತೊಂದು ವಿಚಾರದಲ್ಲಿ ದೇಶಕ್ಕೇ ಮಾದರಿ ಆಗುತ್ತಿದೆ.