ಲಿಂಗಾಯತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದವರಿಗಿಂತ, ಸ್ವಂತ ಪಕ್ಷದವರೇ ಕಾಟ ಕೊಟ್ಟಿದ್ದು ಹೆಚ್ಚು ಎಂಬ ಆರೋಪ ಇದೆ. ಅದರಲ್ಲೂ ಬಿ.ಎಸ್. ಯಡಿಯೂರಪ್ಪ 2 ಬಾರಿ ಸಿಎಂ ಸ್ಥಾನ ಬಿಟ್ಟು ಕೊಡಲು ಕೂಡ ಕರ್ನಾಟಕ ಬಿಜೆಪಿ ಒಳಗಿನ ನಾಯಕರ ಅಸೂಯೆ ಕಾರಣ ಎಂಬ ಆರೋಪಗಳ ಮಧ್ಯೆ, ಈಗಾಗಲೇ ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆದಿದ್ದಾರೆ. ಹೀಗಿದ್ದರೂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಕೂಡ ಪಕ್ಷದ ಒಳಗೆ ಶತ್ರುಗಳ ಕಾಟ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಹೌದು, ಹೇಗಾದರೂ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನ ಕೆಳಗೆ ಇಳಿಸಬೇಕು ಎಂದು ದೊಡ್ಡ ಮಟ್ಟದ ಲಾಬಿ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರದ್ದು ಎಂದು ಆರೋಪಿಸಲಾಗಿದ್ದ ಆಡಿಯೋ ಒಂದು ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಇಷ್ಟೆಲ್ಲದರ ನಡುವೆಯೇ ಇದೀಗ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಜಾಗಕ್ಕೆ ದಿಢೀರ್ ಸೋಮಣ್ಣ ಎಂಟ್ರಿ ಫಿಕ್ಸ್? ಮುಂದೆ ಓದಿ.
ವಿಜಯೇಂದ್ರ ಜಾಗಕ್ಕೆ ಸೋಮಣ್ಣ ಎಂಟ್ರಿ?
ಅಂದಹಾಗೆ ಇದೀಗ ಕರ್ನಾಟಕ ರಾಜ್ಯದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯಲ್ಲಿ ಬದಲಾವಣೆ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಮತ್ತೆ ಭಾರಿ ದೊಡ್ಡ ಮಟ್ಟದಲ್ಲಿಯೇ ಚರ್ಚೆ ಆರಂಭವಾಗಿದೆ. ಪಕ್ಷದೊಳಗೆ ಹೊಸ ನಾಯಕತ್ವಕ್ಕಾಗಿ ಒತ್ತಾಯ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವರಾದ ವಿ. ಸೋಮಣ್ಣ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಮೊದಲಿನಿಂದಲೂ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬಿ.ಎಸ್. ಯಡಿಯೂರಪ್ಪ ಅವರ ವಿರೋಧಿ ಬಣದಲ್ಲೇ ಗುರುತಿಸಿಕೊಂಡು ಬಂದು ದೊಡ್ಡ ಸದ್ದು ಮಾಡಿದ್ದರು. ಹೀಗಿದ್ದಾಗ ದಿಢೀರ್ ಅಂತಾ ವಿ. ಸೋಮಣ್ಣ ಅವರ ಹೆಸರು ಮುನ್ನೆಲೆಗೆ ಬಂದಿದೆ, ಅಲ್ಲದೆ ಈ ಬಗ್ಗೆ ಸೋಮಣ್ಣ ಅವರು ಹೇಳಿರುವುದು ಏನು? ಬನ್ನಿ ತಿಳಿಯೋಣ.
ಸಚಿವ ವಿ. ಸೋಮಣ್ಣ ಹೇಳಿದ್ದು ಏನು?
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವಾಗಲೇ ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಕೇಂದ್ರ ಸಚಿವ ವಿ. ಸೋಮಣ್ಣ, ತಾವು ಪಕ್ಷದ ಶಿಸ್ತಿಗೆ ಬದ್ಧ ಕಾರ್ಯಕರ್ತನಾಗಿದ್ದು, ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿ ನಿಷ್ಠೆಯಿಂದ ನಿರ್ವಹಿಸುವೆ ಎಂದಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ವರುಣ ಕ್ರೇತ್ರದ ಸ್ಪರ್ಧೆ ಹಾಗೂ ತುಮಕೂರಿನಲ್ಲಿ ಪಕ್ಷದ ಸೂಚನೆಯಂತೆ ಸ್ಪರ್ಧಿಸಿ ಕಾರ್ಯನಿರ್ವಹಿಸಿದ್ದನ್ನು ಸೋಮಣ್ಣ ನೆನಪಿಸಿಕೊಂಡು ಪರೋಕ್ಷವಾಗಿ ಬಿಎಸ್‌ವೈ ಹಾಗೂ ವಿಜಯೇಂದ್ರ ಬಣಕ್ಕೆ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಬಿಜೆಪಿ ಘಟಕದ ನೇತೃತ್ವದಲ್ಲಿ ಬದಲಾವಣೆ ಕುರಿತು ಬಿಜೆಪಿ ರಾಷ್ಟ್ರೀಯ ನಾಯಕರು ಈಗಾಗಲೇ ಚರ್ಚೆ ಆರಂಭ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಕೂಡ ಕರ್ನಾಟಕದ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಲಿಂಗಾಯತ ಸಮುದಾಯದ ನಾಯಕತ್ವದ ದೃಷ್ಟಿಯಿಂದಲೂ ವಿ. ಸೋಮಣ್ಣ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಈಗ ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.