Chamundeshwari Temple: ಚಾಮುಂಡಿ ತಾಯಿಗೆ ವಿಶೇಷ ಪೂಜೆ, ಪವಿತ್ರ ಬೆಟ್ಟದಲ್ಲಿ ಭಕ್ತ ಸಾಗರ

bengaluru diaries | July 17, 2026 - 4:30 pm
ಚಾಮುಂಡೇಶ್ವರಿ ತಾಯಿ ಕರುನಾಡ ನಾಡದೇವತೆ, ಹೀಗೆ ಕೋಟಿ ಕೋಟಿ ಭಕ್ತರು ಜಗತ್ತಿನ ಮೂಲೆ ಮೂಲೆಯಿಂದ ನಮ್ಮ ಮೈಸೂರಿಗೆ ಬಂದು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಅದರಲ್ಲೂ ಆಷಾಢ ಮಾಸದ ಪವಿತ್ರ ಶುಕ್ರವಾರದ ದಿನ ಚಾಮುಂಡೇಶ್ವರಿ ದೇವಿ ಭಕ್ತರಿಗೆ ತುಂಬಾ ವಿಶೇಷವಾಗಿದೆ, ಲಕ್ಷಾಂತರ ಭಕ್ತರು ತಾಯಿ ದರ್ಶನ ಪಡೆಯಲು ಬರುತ್ತಾರೆ. ಇದೇ ಕಾರಣಕ್ಕೆ ಬೆಳಗ್ಗೆಯಿಂದಲೇ ದೇವಾಲಯ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ಇಡೀ ಬೆಟ್ಟವು ಭಕ್ತಿ ಹಾಗೂ ಧಾರ್ಮಿಕ ಆಚರಣೆಗಳಿಂದ ಕಂಗೊಳಿಸಿತು. ಮತ್ತೊಂದು ಕಡೆ ಆಷಾಢ ಶುಕ್ರವಾರವಾದ ಕಾರಣಕ್ಕೆ ವಿಶೇಷ ಪೂಜೆ ನೆರವೇರಿಸಿ ಮತ್ತು ವಿಶೇಷ ಅಲಂಕಾರ ಕೂಡ ಮಾಡಲಾಗಿತ್ತು.

ಮೊದಲೇ ಹೇಳಿದಂತೆ ಆಷಾಢ ಮಾಸ ಎಂದರೆ ಚಾಮುಂಡಿ ತಾಯಿ ಭಕ್ತರಿಗೆ ಅತ್ಯಂತ ವಿಶೇಷವಾದ ದಿನಗಳಾಗಿವೆ. ಈ ಬಾರಿ ಆಷಾಢ ಶುಕ್ರವಾರ ಅಂಗವಾಗಿ ತಾಯಿ ಚಾಮುಂಡೇಶ್ವರಿಗೆ ವಿಶೇಷವಾದ ಹಸಿರು ಬಣ್ಣದ ಸೀರೆ ಉಡಿಸಿ, ನಾಗಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ 3.30ಕ್ಕೆ ಪ್ರಧಾನ ಅರ್ಚಕರಿಂದ ಪೂಜಾ ಕೈಂಕರ್ಯ ಆರಂಭವಾಗಿತ್ತು, ಬೆಳಗ್ಗೆ 5.30 ರಿಂದಲೇ ಭಕ್ತರಿಗೆ ದೇವಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಿಯ ದಿವ್ಯ ಅಲಂಕಾರ ಕಣ್ತುಂಬಿಕೊಳ್ಳಲು ಬೆಳಗ್ಗಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಬೆಟ್ಟದಲ್ಲಿ ವಿಶೇಷ ಭದ್ರತೆ ಕೂಡ ಕಲ್ಪಿಸಲಾಗಿತ್ತು, ಈ ನಡುವೆ ವಾಹನ ಸಂಚಾರಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.



ವಿಜಯಲಕ್ಷ್ಮಿ ದರ್ಶನ್ ಅವರಿಂದ ಪೂಜೆ
ಇನ್ನು, ಆಷಾಢ ಶುಕ್ರವಾರದ ವಿಶೇಷ ಸಂದರ್ಭದಲ್ಲಿ ದೇವಿಯ ದರ್ಶನ ಪಡೆದ ಭಕ್ತರು ಕುಟುಂಬದ ಸುಖ & ಸಮೃದ್ಧಿ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ನಂಬಿಕೆ, ಭಕ್ತಿ ಮತ್ತು ಸಂಪ್ರದಾಯದ ಸಂಗಮವಾಗಿರುವ ಈ ಆಚರಣೆ ಕನ್ನಡ ನಾಡಿನ ಆಧ್ಯಾತ್ಮಿಕ ವೈಭವವ ಮತ್ತೊಮ್ಮೆ ಪ್ರತಿಬಿಂಬಿಸಿತು. ಚಾಮುಂಡಿ ಬೆಟ್ಟದಲ್ಲಿ ದಿನವಿಡೀ ಭಕ್ತರ ಓಡಾಟ ಮುಂದುವರಿದಿತ್ತು, ನಾಡದೇವಿಯ ದರ್ಶನ ಪಡೆದು ಭಕ್ತರು ಖಷಿ ಖುಷಿಯಾಗಿ ಮರಳಿದರು. ಹಾಗೇ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ರಾಜಕೀಯ ನಾಯಕರ ಕುಟುಂಬಗಳು ಕೂಡ ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಅದರಲ್ಲೂ ನಟ ದರ್ಶನ್ ತೂಗುದೀಪ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಕೂಡ ಇಂದು ಚಾಮುಂಡಿ ತಾಯಿಯ ದರ್ಶನ ಪಡೆದರು.

ಆಷಾಢ ಮಾಸದ ಶುಭ ಶುಕ್ರವಾರ
ಒಟ್ನಲ್ಲಿ ಶ್ರಾವಣ ಮಾಸ ಆರಂಭಕ್ಕೆ ಮುನ್ನ ಬರುವ ಆಷಾಢ ಮಾಸ ಕರುನಾಡಿನ ನಾಡ ದೇವತೆ ಚಾಮುಂಡೇಶ್ವರಿ ತಾಯಿ ಭಕ್ತರಿಗೆ ಸಾಕಷ್ಟು ವಿಶೇಷವಾಗಿದೆ. ಅದರಲ್ಲೂ ಆಷಾಢ ಮಾಸದ ಅಷ್ಟೂ ಶುಕ್ರವಾರಗಳು ವಿಶೇಷ ಪೂಜೆ ಮತ್ತು ಅಲಂಕಾರಕ್ಕೆ ಸಾಕ್ಷಿ ಆಗಲಿದೆ. ಹೀಗಾಗಿ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಚಾಮುಂಡಿ ತಾಯಿ ನೆಲೆಸಿರುವ ಬೆಟ್ಟಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಹೀಗಾಗಿ ಇನ್ನೂ ಒಂದು ತಿಂಗಳ ಕಾಲ ವಿಶೇಷ ಪೂಜೆ ಹಿನ್ನೆಲೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಭಕ್ತರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.