10 ಲಕ್ಷ ರೂಪಾಯಿ ಹಣ ದುಡಿಯಲು ನಿಮಗೆ ಎಷ್ಟು ವರ್ಷ ಬೇಕು? ಅದರಲ್ಲೂ ಕೂಲಿ ಮಾಡುವ ಶ್ರಮಿಕರ ಪಾಲಿಗೆ 10 ಲಕ್ಷ ರೂಪಾಯಿ ಅನ್ನೋದು ಕನಸಿನ ಮಾತೇ ಸರಿ. ಅದು ಬಿಡಿ ಐಟಿ & ಬಿಟಿ ಅಂತಾ ಜಗತ್ತಿನ ಕಣ್ಣಿಗೆ ಸಾಫ್ಟ್ ಕೆಲಸ ಮಾಡುವ ಬಹುತೇಕರ ಹಣೆಬರಹ ಕೂಡ ಇದೇ ಆಗಿರುತ್ತೆ. ಆದರೆ ಹೀಗೆ ಹತ್ತಾರು ವರ್ಷ ಕಷ್ಟಪಟ್ಟು ದುಡಿದು, ಮಗಳ ಮದುವೆಗೆ ಅಂತಾ ಕೂಡಿ ಇಟ್ಟಿದ್ದ ಬರೋಬ್ಬರಿ 10 ಲಕ್ಷ ರೂಪಾಯಿ ಹಣ ಬರೀ ಒಂದೇ ಒಂದು ಕ್ಲಿಕ್‌ನಿಂದ ಎಗರಿ ಹೋದರೆ ಏನು ಮಾಡೋದು? ಹೌದು ಇಂತಹದ್ದೇ ಒಂದು ಭೀಕರ ಘಟನೆ ನಮ್ಮ ಬೆಂಗಳೂರಿನಲ್ಲೇ ನಡೆದು ಹೋಗಿದೆ. ಈ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ ಬನ್ನಿ...
ಪ್ರಪಂಚದ ಮೂಲೆ ಮೂಲೆಯಲ್ಲೂ ಇದೀಗ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗಿದ್ದು, ಕಾಡು ತುಂಬಿದ ಜಾಗವೇ ಇರಲಿ ಅಥವಾ ಕಣ್ಣಿಗೆ ಲಕ ಲಕ ಹೊಳೆಯುವ ಸುಳ್ಳಿನ ನಗರಗಳೇ ಆಗಿರಲಿ. ಎಲ್ಲಾ ಕಡೆಯೂ ಬರೀ ಸ್ಮಾರ್ಟ್‌ಫೋನ್ ಅಬ್ಬರ ಜೋರು ಜೋರಾಗಿದ್ದು, ಅಕಸ್ಮಾತ್ ಈ ಸ್ಮಾರ್ಟ್‌ಫೋನ್ ಬಳಸಲು ಬರದೇ ಇದ್ದರೆ ಜನ ನೋಡುವ ರೀತಿಯೇ ಬೇರೆ ಎನ್ನಬಹುದು. ಇದೇ ಕಾರಣಕ್ಕೆ ಜನರು ಕೂಡ ಮರಳಾಗಿ 10,000 ರೂಪಾಯಿ ಟು 2,00,000 ತನಕ ಸ್ಮಾರ್ಟ್‌ಫೋನ್ ಖರೀದಿ ಮಾಡುವುದು ಉಂಟು. ಆದರೆ, ಹೀಗೆ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ತಂದಿದ್ದ ಮೊಬೈಲ್ ಫೋನ್ ಬೆಂಗಳೂರಿನ ವ್ಯಕ್ತಿಯೊಬ್ಬರ ಜೀವನವನ್ನೇ ಬೀದಿಗೆ ತಂದಿದೆ. ಇದರ ಜೊತೆಗೆ ಒಬ್ಬ ಹೆಣ್ಣುಮಗಳ ಮದುವೆ ಕೂಡ ನಿಲ್ಲುವಂತೆ ಮಾಡಿದೆ...
ಸೈಬರ್ ಕಳ್ಳರ ಕಾಟಕ್ಕೆ ಕೊನೆಯೇ ಇಲ್ವಾ?
ಹೌದು, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗುತ್ತಿರುವಂತೆ ಸೈಬರ್ ವಂಚಕರ ಹೊಸ ಹೊಸ ತಂತ್ರಗಳಿಗೆ ಮುಗ್ಧರೇ ಇದೀಗ ಬಲಿ ಆಗುತ್ತಿದ್ದಾರೆ. APK ಫೈಲ್‌ಗಳ ಮೂಲಕ ಬ್ಯಾಂಕ್ ಅಕೌಂಟ್‌ನ ಖಾಲಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೇ ರೀತಿಯ ಘಟನೆಯೊಂದು ಕನ್ನಡಿಗರ ರಾಜಧಾನಿ ಬೆಂಗಳೂರು ಉತ್ತರ ವಿಭಾಗದಲ್ಲಿ ನಡೆದಿದ್ದು, ದೇವನಹಳ್ಳಿ ಉಪವಲಯದಲ್ಲಿ ಅರಣ್ಯಾಧಿಕಾರಿ ರಮೇಶ್ ಅನ್ನೋರು ಸೈಬರ್ ಅಪರಾಧಿಗಳ ಕುತಂತ್ರಕ್ಕೆ ಬಲಿಯಾಗಿ ಸುಮಾರು 10 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಮತ್ತೊಂದು ನೋವಿನ ಸಂಗತಿ ಏನಂದ್ರೆ, ರಮೇಶ್ ಅವರು ಈ ಹಣವನ್ನ ತಮ್ಮ ಮಗಳ ಮದುವೆಗೆ ಅಂತಾ ಬ್ಯಾಂಕ್ ಅಕೌಂಟ್‌ನಲ್ಲಿ ಇಟ್ಟಿದ್ದರಂತೆ. ಆದರೆ 10,00,000 ರೂಪಾಯಿ ಹಣ, ಕ್ಷಣಾರ್ಧದಲ್ಲಿ ದಿಢೀರ್ ಅಂತಾ ಯಾವುದೋ ಗೊತ್ತಿಲ್ಲದ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಆಗಿಬಿಟ್ಟಿದೆ.
ಮೋಸ ಮಾಡಿದ್ದು ಹೇಗೆ ವಂಚಕರು?
ಮೊಬೈಲ್ ಫೋನ್ ಮೂಲಕ ವಂಚಕರು ಹೆಂಗೆಲ್ಲಾ ಗಾಳ ಹಾಕಿ ಖೆಡ್ಡಾ ತೋಡುತ್ತಾರೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಇದೀಗ ಸಿಕ್ಕಿದ್ದು, ಅಂದಹಾಗೆ ಸೈಬರ್ ವಂಚಕರು ಮೊದಲಿಗೆ ರಮೇಶ್ ಅವರ ಆಪ್ತ ಸ್ನೇಹಿತನ ಮೊಬೈಲ್ ನಂಬರ್ ಹ್ಯಾಕ್ ಮಾಡಿದ್ದರು. ಆ ನಂತರ ಸೈಬರ್ ವಂಚಕರು ಅದೇ ರಮೇಶ್ ಅವರ ಆಪ್ತ ಸ್ನೇಹಿತನ ಮೊಬೈಲ್ ನಂಬರ್ ಬಳಸಿ ರಮೇಶ್ ಸೇರಿದಂತೆ ಹಲವರಿಗೆ ಮದುವೆ ಇನ್ವಿಟೇಶನ್ ಕಾರ್ಡ್ ರೀತಿಯೇ ಕಾಣುವ APK ಫೈಲ್ ಅನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಪರಿಚಿತ ವ್ಯಕ್ತಿ ಕಳಿಸಿರುವ ಮೆಸೇಜ್ ಅಂತಾ ನಂಬಿದ ರಮೇಶ್ ಹಿಂದೆ ಮುಂದೆ ಯೋಚನೆ ಮಾಡದೇ ಫೈಲ್ ಓಪನ್ ಮಾಡಿದ್ದಾರೆ. ಹೀಗಿದ್ದಾಗ ಮೊಬೈಲ್‌ಗೆ ವಂಚಕರಿಂದ ಬಂದಿದ್ದ ಸಾಫ್‌ವೇರ್ ಬಗ್ ಎಂಟ್ರಿ ಪಡೆದಿದ್ದು, ದಿಢೀರ್ ದುಡ್ಡು ಎಗರಿಸಿದ್ದಾರೆ ಆನ್‌ಲೈನ್ ಕಳ್ಳ ಖದೀಮರು...
ಅಂದಹಾಗೆ ಯಾವುದೇ ಮೊಬೈಲ್ ಇರಲಿ, ನಿಮಗೆ ಪರಿಚಯ ಇಲ್ಲದ ಲಿಂಕ್‌ಗಳನ್ನ ಕ್ಲಿಕ್ ಮಾಡಿದರೆ ಇಂತಹದ್ದೇ ಪರಿಸ್ಥಿತಿ ಎದುರಾಗುತ್ತದೆ. ಹೀಗಿದ್ದಾಗಲೇ ರಮೇಶ್ ಅವರ ಮೊಬೈಲ್‌ನಲ್ಲಿ ಕೂಡ APK ಫೈಲ್ ಇನ್‌ಸ್ಟಾಲ್ ಆಗಿದ್ದೇ ತಡ ಕೆಲವೇ ನಿಮಿಷಗಳಲ್ಲಿ ಮೊಬೈಲ್ ನಿಯಂತ್ರಣ ವಂಚಕರ ಕೈ ಸೇರಿದೆ. ತಕ್ಷಣವೇ ಆನ್‌ಲೈನ್ ಖದೀಮರು ರಮೇಶ್ ಅವರ ಬ್ಯಾಂಕ್ ಅಕೌಂಟ್ ಜಾಲಾಡಿದ್ದಾರೆ, ಅಲ್ಲದೇ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ & ಒಟಿಪಿ (OTP) ಸೇರಿ ಹಲವು ಭದ್ರತಾ ವಿವರಗಳನ್ನು ಎಗರಿಸಿದ್ದಾರೆ. ಕೊನೆಗೆ ಸ್ಟೆಪ್ ಬೈ ಸ್ಟೆಪ್ ರಮೇಶ್ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ 9.96 ಲಕ್ಷ ರೂಪಾಯಿ ಅಂದ್ರೆ ಹತ್ತಿರ ಹತ್ತಿರ ಬರೋಬ್ಬರಿ 10,00,000 ರೂಪಾಯಿ ಹಣ ಎಗರಿಸಿದ್ದಾರೆ. ಈ ಮೂಲಕ 7 ಪ್ರತ್ಯೇಕ ವ್ಯವಹಾರ ಮಾಡಿರುವ ಖದೀಮರ ಗ್ಯಾಂಗ್, ನೋಡ ನೋಡುತ್ತಲೇ ಮೋಸ ಮಾಡಿ ಮಗಳ ಮದುವೆಗಾಗಿ ರಮೇಶ್ ಇಟ್ಟಿದ್ದ ಹಣವನ್ನು ಎಗರಿಸಿದೆ.