ಡೊನಾಲ್ಡ್ ಟ್ರಂಪ್ ಅವರ ಜೀವನದ ಜೊತೆಗೆ ನೂರಾರು ವಿವಾದಗಳು ಬೆರೆತು ಹೋಗಿದ್ದು, ಅಮೆರಿಕ ಇತಿಹಾಸವೇ ನೆನಪು ಇಟ್ಟುಕೊಳ್ಳುವ ರೀತಿ ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ ಟ್ರಂಪ್. ಇಂತಿಪ್ಪ ಡೊನಾಲ್ಡ್ ಟ್ರಂಪ್ ಅವರಿಗೆ, ಅಮೆರಿಕ ಮಾತ್ರವಲ್ಲ ಜಗತ್ತಿನ ಹಲವು ದೇಶಗಳಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಬೆಂಬಲಿಗರು & ಅಭಿಮಾನಿಗಳು ಇದ್ದಾರೆ. ಇದೇ ಕಾರಣಕ್ಕೆ 2016 ಅಮೆರಿಕ ಚುನಾವಣೆ ಗೆದ್ದು, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನೂ ಗೆದ್ದು ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ. ಇಂತಹ ಶುಭ ಸಮಯದಲ್ಲೇ ಅಮೆರಿಕ ಕರೆನ್ಸಿ ಮೇಲೆ ಡೊನಾಲ್ಡ್ ಟ್ರಂಪ್ ಫೋಟೋ ಶೀಘ್ರದಲ್ಲೇ ಪ್ರತ್ಯಕ್ಷವಾಗಲಿದೆ ಎಂಬ ಮಾಹಿತಿ ಹಲ್‌ಚಲ್ ಎಬ್ಬಿಸಿದೆ.
ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಉತ್ತರ ಅಮೆರಿಕ ಖಂಡದ ಬಹುದೊಡ್ಡ ದೇಶ ಅಮೆರಿಕ ಸಂಯುಕ್ತ ಸಂಸ್ಥಾನ ಇದೀಗ ತನ್ನ ಸ್ವಾತಂತ್ರ್ಯ ಸಂಭ್ರಮದಲ್ಲಿ ಇದೆ. ಅದರಲ್ಲೂ ಅಮೆರಿಕದ 250ನೇ ಸ್ವಾತಂತ್ರ್ಯ ವರ್ಷಾಚರಣೆಯ ಅಂಗವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ವಿಶೇಷ ಘೋಷಣೆಗಳನ್ನು ಈಗಾಗಲೇ ಹೊರಡಿಸಿದ್ದರು. ಈ ಪೈಕಿ ಇದೀಗ ಮತ್ತೊಂದು ಸ್ಪೆಷಲ್ ಅನೌನ್ಸ್‌ಮೆಂಟ್ ಆಗಿದ್ದು, ಡೊನಾಲ್ಡ್ ಟ್ರಂಪ್ ಅವರ ಫೋಟೋ ಇರುವಂತಹ ವಿಶೇಷವಾದ 1 ಡಾಲರ್ ಸ್ಮಾರಕ ನಾಣ್ಯ ಮುದ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಹತ್ವದ ಮಾಹಿತಿ ನೀಡಿದ್ದಾರೆ.
ಪಾಸ್‌ಪೋರ್ಟ್ ಮೇಲೂ ಟ್ರಂಪ್ ಫೋಟೋ?
ಅಮೆರಿಕ ಎಂಬ ದೈತ್ಯ ದೇಶದ 45 ಹಾಗೂ 47ನೇ ಅಧ್ಯಕ್ಷರಾಗಿ ಟ್ರಂಪ್ ಅವರು ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅವರಿಗೆ ವಿಶೇಷ ಗೌರವ ಸಲ್ಲಿಸಬೇಕು ಎಂದು ಅವರ ಬೆಂಬಲಿಗರು ಆಗ್ರಹ ಮಾಡುತ್ತ ಬಂದಿದ್ದರು. ಈ ಪೈಕಿ ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಪಾಸ್‌ಪೋರ್ಟ್ ಮೇಲೂ ಟ್ರಂಪ್ ಫೋಟೋ ಹಾಕಲಾಗುತ್ತಾ? ಎಂಬ ಚರ್ಚೆ ನಡೆದಿತ್ತು. ಡೊನಾಲ್ಡ್ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಒಂದು ಫೋಟೋ ಈ ರೀತಿ ಕುತೂಹಲ ಹೆಚ್ಚು ಮಾಡಿತ್ತು. ಆದರೆ ಈಗ ಬೇರೆಯದ್ದೇ ಸುದ್ದಿ ಹೊರಗೆ ಬಿದ್ದಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದೀಗ ಡೊನಾಲ್ಡ್ ಟ್ರಂಪ್ ಅವರ ಫೋಟೋ ಇರುವಂತಹ ವಿಶೇಷವಾದ 1 ಡಾಲರ್ ಸ್ಮಾರಕ ನಾಣ್ಯ ಮುದ್ರಣಕ್ಕೆ ಸಿದ್ಧತೆ ಸಾಗಿದೆ.
ನಾಣ್ಯ ಮುದ್ರಣಕ್ಕೆ ಕಾನೂನು ತೊಡಕು?
ಮತ್ತೊಂದು ಕಡೆ ಈ ನಾಣ್ಯ ಮುದ್ರಣದ ಬಗ್ಗೆ ವಿವಾದ ಕೂಡ ಭುಗಿಲೆದ್ದಿದ್ದು, 1866ರ ಸಮಯದಲ್ಲಿ ಜಾರಿಯಾದ ಅಮೆರಿಕದ ಕಾನೂನಿನ ಪ್ರಕಾರ ಜೀವಂತ ವ್ಯಕ್ತಿ ಭಾವಚಿತ್ರ ಕರೆನ್ಸಿ ಮೇಲೆ ಬಳಸಬಾರದೆಂಬ ರೂಲ್ಸ್ ಅಮೆರಿಕದಲ್ಲಿ ಜಾರಿಯಲ್ಲಿ ಇದೆ. ಈ ಬಗ್ಗೆ ಕೂಡ ಸ್ಪಷ್ಟನೆ ನೀಡಿರುವ ಯುಎಸ್‌ಎ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಐತಿಹಾಸಿಕ ಉದಾಹರಣೆ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಅಮೆರಿಕದ 150ನೇ ವರ್ಷಾಚರಣೆ ಸಂದರ್ಭದಲ್ಲಿ ಆಗಿನ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಫೋಟೋ ಇರುವ ಸ್ಮಾರಕ ನಾಣ್ಯ ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೀವಂತ ವ್ಯಕ್ತಿಯ ಚಿತ್ರ ನಾಣ್ಯದಲ್ಲಿ ಬಳಸಲು ಅವಕಾಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಸ್ಕಾಟ್ ಬೆಸೆಂಟ್.
ಮತ್ತೊಂದು ಕಡೆ ತಮಗೆ ಸಿಗುತ್ತಿರುವ ಈ ವಿಶೇಷ ಗೌರವದ ಬಗ್ಗೆ ಸಂತಸ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರು, ನನಗೆ ವಿಶೇಷ ನಾಣ್ಯ ನೀಡುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ಅಲ್ಲದೇ ಡೊನಾಲ್ಡ್ ಟ್ರಂಪ್ ಅವರು, ನನಗೆ ಗೊತ್ತಿರುವಂತೆ ಇದು ಅತ್ಯಂತ ಅಪರೂಪದ ಗೌರವ ಎಂದು ತಿಳಿಸಿದ್ದಾರೆ. ಮತ್ತೊಂದು ಕಡೆ 1 ಡಾಲರ್ ಸ್ಮಾರಕ ನಾಣ್ಯ ಉತ್ಪಾದನಾ ಕಾರ್ಯ ಈಗಾಗಲೇ ಆರಂಭವಾಗಿದೆ ಎನ್ನಲಾಗಿದ್ದು, ಯುಎಸ್ ಮಿಂಟ್ ಘಟಕದಲ್ಲಿ ನಾಣ್ಯಗಳನ್ನ ಮುದ್ರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇದು ಸಾರ್ವಜನಿಕರಿಗೆ ಕೂಡ ಲಭ್ಯವಾಗುವ ನಿರೀಕ್ಷೆ ಇದೆ.