ಇರಾನ್ & ಅಮೆರಿಕ ನಡುವೆ ನಡೆಯುತ್ತಿರುವ ತಿಕ್ಕಾಟ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದ್ದು, ಯುದ್ಧದ ಆರ್ಭಟ ಕಡಿಮೆ ಆಗಿದ್ದರೂ ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಕಿಚ್ಚು ಹೊತ್ತಿಕೊಳ್ಳುವ ಮುನ್ಸೂಚನೆ ಇದ್ದೇ ಇದೆ. ಒಂದು ಕಡೆ ಇರಾನ್ ಕೂಡ ಈ ವಿಚಾರದಲ್ಲಿ ಮುಂದೆ ಬಂದು ಅಮೆರಿಕ ಜೊತೆಗೆ ಶಾಂತಿ ಒಪ್ಪಂದವನ್ನ ಮಾಡಿಕೊಳ್ಳಲು ತಯಾರಿಲ್ಲ, ಹಾಗೇ ಇನ್ನೊಂದು ಕಡೆ ಅಮೆರಿಕ ಇದೇ ಕಾರಣಕ್ಕೆ ಇರಾನ್ ವಿರುದ್ಧ ಆಕ್ರೋಶ ಹೊರಹಾಕಿ ದಾಳಿ ಮಾಡುತ್ತಲೇ ಇದೆ. ಆಗಾಗ ಸಣ್ಣ ಗ್ಯಾಪ್ ತೆಗೆದುಕೊಳ್ಳುವ ಅಮೆರಿಕ ಮತ್ತೆ ಮತ್ತೆ ಇರಾನ್ ನೆಲದ ಮೇಲೆ ದಾಳಿ ಮಾಡುತ್ತಿದೆ. ಇಂತಹ ಸಮಯದಲ್ಲೇ ಬಹುದೊಡ್ಡ ವಿಚಾರ ಒಂದು ಇದೀಗ ರಿವೀಲ್ ಆಗಿದ್ದು, ತಲ್ಲಣವನ್ನೇ ಎಬ್ಬಿಸಿದೆ ಜಗತ್ತಿನಾದ್ಯಂತ.
20ನೇ ಶತಮಾನದ ಆರಂಭದಲ್ಲಿ ನಡೆದ 1ನೇ ಮಹಾಯುದ್ಧ & 2ನೇ ಮಹಾಯುದ್ಧಗಳು ಕೋಟಿ ಕೋಟಿ ಜೀವಗಳ ಉಸಿರು ನಿಲ್ಲಿಸಿದ್ದವು. ಅಲ್ಲದೇ ಮನುಷ್ಯರ ಜೀವಮಾನದಲ್ಲೇ ಅತ್ಯಂತ ವಿನಾಶಕಾರಿ ಅಸ್ತ್ರಗಳೂ ಇದೇ ಯುದ್ಧಗಳ ಮೂಲಕ ಜಗತ್ತಿಗೆ ಪರಿಚಿತವಾದವು. ಇಡೀ ಪ್ರಪಂಚವನ್ನು 2 ಗುಂಪುಗಳನ್ನಾಗಿ ಪೀಸ್ ಪೀಸ್ ಮಾಡಿದ್ದ 1ನೇ & 2ನೇ ಮಹಾಯುದ್ಧಗಳು ಈಗಲೂ ಜನರ ಮನಸ್ಸಿನಿಂದ ಮಾಸಿಲ್ಲ. ಇಂತಹ ಸಮಯದಲ್ಲೇ ಮಧ್ಯಪ್ರಾಚ್ಯ ಕಿರಿಕ್ ಮೂಲಕ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾಗಿತ್ತಾ? ಎಂಬ ಪ್ರಶ್ನೆ ಮೂಡಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಭೀಕರ ದಾಳಿ ನಡೆಸಲು ಅಮೆರಿಕ ಸೇನೆಗೆ ಆದೇಶ ನೀಡಿದ ನಂತರ ತಲ್ಲಣವೇ ಏರ್ಪಟ್ಟಿತ್ತು. ಇನ್ನು ಇಸ್ರೇಲ್ ಕೂಡ ಅಮೆರಿಕ ಜೊತೆಗೆ ಸೇರಿ ಇರಾನ್ ನಾಶಕ್ಕೆ ಮುಂದಾಗಿತ್ತು, ಇದೆಲ್ಲಾ ಇಷ್ಟು ದಿನ ಮೇಲ್ನೋಟಕ್ಕೆ ಕಂಡ ವಿಚಾರಗಳು. ಆದರೆ ಮತ್ತೊಂದು ಮಹತ್ವದ ವಿಚಾರ ಇದೀಗ ಬಯಲಾಗಿದೆ...
ಅಮೆರಿಕ ಅಧ್ಯಕ್ಷರ ಮಹತ್ವದ ಮಾಹಿತಿ!
ಹೌದು, 2ನೇ ಮಹಾಯುದ್ಧದ ಬಳಿಕ ಅತಿದೊಡ್ಡ ಸೇನಾ ದಾಳಿ ನಡೆಸಲು ಅಮೆರಿಕ ಸಜ್ಜಾಗಿತ್ತು ಎಂದು ಅಮೆರಿಕ ಅಧ್ಯಕ್ಷರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ದಾಳಿಗೆ ಸಿದ್ಧತೆ ಆರಂಭವಾಗುವ ಹಂತಕ್ಕೆ ತಲುಪುತ್ತಿದ್ದಂತೆ ಇರಾನ್ ಮಾತುಕತೆಗೆ ಮುಂದಾಗಿತ್ತು, ಹೀಗಾಗಿ ಘೋರ ದಾಳಿ ತಾತ್ಕಾಲಿಕವಾಗಿ ನಿಂತಿತ್ತು ಎಂದು ಟ್ರಂಪ್ ಅವರು ತಿಳಿಸಿದ್ದು ತಲ್ಲಣ ಎಬ್ಬಿಸಿದೆ. ಅಂದಹಾಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೀಗೆ ಸ್ಫೋಟಕ ಮಾಹಿತಿ ಬಿಚ್ಚಿಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕದ ಸೇನಾ ಒತ್ತಡವೇ ಹೀಗೆ ಇರಾನ್ ನಾಯಕರನ್ನ ಸಂಧಾನಕ್ಕೆ ಬರುವಂತೆ ಮಾಡಿತ್ತು ಎಂದಿದ್ದಾರೆ. ಹಾಗೇ ಇರಾನ್ ನಾಯಕರನ್ನು ಕುಹಕವಾಡಿರುವ ಅಮೆರಿಕದ ಅಧ್ಯಕ್ಷರು, ದಯವಿಟ್ಟು ದಾಳಿ ಮಾಡಬೇಡಿ ನಾವು ಮಾತುಕತೆ ನಡೆಸೋಣ ಎಂದಿದ್ದರಂತೆ ಇರಾನ್ ನಾಯಕರು. ಟ್ರಂಪ್ ಅವರ ಈ ಹೇಳಿಕೆ ಈಗ ಬಿರುಗಾಳಿ ಎಬ್ಬಿಸಿದ್ದು, ಹೊಸ ಚರ್ಚೆಯನ್ನೂ ಹುಟ್ಟುಹಾಕಿದೆ.
ಜಲಸಂಧಿ ಈಗಲಾದರೂ ಓಪನ್ ಆಗುತ್ತಾ?
ಅಂದಹಾಗೆ ಅಮೆರಿಕ & ಇರಾನ್ ನಡುವೆ ತಿಕ್ಕಾಟ ಶುರುವಾಗಿ ಈಗಾಗಲೇ ಹತ್ತಿರ ಹತ್ತಿರ 6 ತಿಂಗಳು ಕಳೆದಿದ್ದು, ಇನ್ನೂ ಪರಿಸ್ಥಿತಿ ತಣ್ಣಗಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಯುದ್ಧದ ಸಂಕೀರ್ಣತೆ ಹೆಚ್ಚಾಗುತ್ತಿರುವ ಕಾರಣ ಜಗತ್ತಿನಾದ್ಯಂತ ಜನ ಸಾಮಾನ್ಯರು ನರಳುತ್ತಿದ್ದಾರೆ ಎಂಬ ಆರೋಪ ಇದೆ. 2026 ಫೆಬ್ರವರಿ 28 ಶನಿವಾರ ಶುರುವಾದ ಈ ಪ್ರಾದೇಶಿಕ ಸಂಘರ್ಷದ ಬಳಿಕ ಹಾರ್ಮೋಜ್ ಜಲಸಂಧಿ ಜಾಗತಿಕ ರಾಜಕೀಯ & ಆರ್ಥಿಕ ಚರ್ಚೆ ಕೇಂದ್ರಬಿಂದು ಆಗಿತ್ತು. ವಿಶ್ವದ ತೈಲ & ನೈಸರ್ಗಿಕ ಅನಿಲದ ಸುಮಾರು 5ನೇ ಒಂದು ಭಾಗ ಇದೇ ಸಮುದ್ರ ಮಾರ್ಗದ ಮೂಲಕವೇ ಸಾಗುತ್ತಿತ್ತು. ಆದರೆ ಅಮೆರಿಕ ಮತ್ತು ಇರಾನ್ ಸಂಘರ್ಷದ ನಂತರ ಹಡಗುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಹಲವು ಸಮಸ್ಯೆ ಎದುರಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಏರಿಕೆಯಾಗಿ, ನೂರಾರು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈಗಲಾದರೂ ಈ ಸಮಸ್ಯೆ ಸರಿಯಾಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ.