ವಾಷಿಂಗ್ಟನ್: ಇರಾನ್.. ಇರಾನ್.. ಇರಾನ್.. ಹೀಗೆ ಕಳೆದ ಕೆಲವು ತಿಂಗಳಿಂದ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಇರಾನ್ ಬಗ್ಗೆ ಚರ್ಚೆ ಆಗುತ್ತಿದೆ. ಅದರಲ್ಲೂ ಇರಾನ್ ವಿರುದ್ಧ ಯಾವಾಗ ಅಮೆರಿಕ & ಇಸ್ರೇಲ್ ಒಂದಾಗಿ ಯುದ್ಧವನ್ನ ಸಾರಿಬಿಟ್ಟವೋ ಅಲ್ಲಿಂದ ಮುಂದಕ್ಕೆ ದೊಡ್ಡ ವಿನಾಶವನ್ನೇ ಜಗತ್ತು ನೋಡುತ್ತಿದೆ. ಒಂದು ಕಡೆ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಹಾಗೂ ಗ್ಯಾಸ್ ರೇಟ್ ಕೂಡ ಜಾಸ್ತಿ ಆಗುವ ಜೊತೆಗೆ ಇನ್ನೊಂದು ಕಡೆ ಜಗತ್ತಿನ ಆರ್ಥಿಕ ಪರಿಸ್ಥಿತಿಯು ಕೂಡ ಇದೀಗ ಹಳ್ಳ ಹಿಡಿದಿದೆ. ಇಂತಹ ಸಮಯದಲ್ಲೇ ನಿಂತಂತೆ ಮಾಡಿ ಮತ್ತೆ ಶುರುವಾಗಿರುವ ಇರಾನ್ & ಅಮೆರಿಕ ನಡುವಿನ ಯುದ್ಧ ಇನ್ನೊಮ್ಮೆ ಜಗತ್ತನ್ನು ನಡುಗಿಸಲು ಸಜ್ಜಾಗಿದೆ.
ಹೌದು, ಅಮೆರಿಕ & ಇರಾನ್ ಸಂಬಂಧ ಮತ್ತೆ ಉದ್ವಿಗ್ನ ಹಂತ ತಲುಪುತ್ತಿದೆ. ಉಭಯ ದೇಶಗಳ ನಡುವಿನ ಕದನ ವಿರಾಮವು ಇನ್ನುಮುಂದೆ ಜಾರಿಯಲ್ಲಿ ಇರಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮಧ್ಯಂತರ ತಿಳಿವಳಿಕೆ ಒಪ್ಪಂದ ಕುರಿತು ಹಿಂದೆ ನೀಡಿದ್ದ ಹೇಳಿಕೆಯನ್ನ ಮತ್ತೆ ಮತ್ತೆ ಹೇಳುವ ಮೂಲಕ ಸ್ಪಷ್ಟವಾಗಿ ಇರಾನ್ ನಾಯಕ ಪಡೆಗೆ ಖಡಕ್ ಸಂದೇಶ ರವಾನಿಸಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಅಂದಹಾಗೆ ಈಗ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ ಮೀಡಿಯಾ ವೇದಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ಅವರು, ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಲು ಮನವಿ ಮಾಡಿದ್ದು ಇರಾನ್ ನಾಯಕರೇ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಇರಾನ್ ಹಾಗೂ ಅಮೆರಿಕ ನಡುವೆ ದೊಡ್ಡ ಕಿಚ್ಚು ಹೊತ್ತಿಕೊಂಡು ಧಗಧಗಿಸುತ್ತಿದೆ.
ಮಧ್ಯಪ್ರಾಚ್ಯ ಪರಿಸ್ಥಿತಿ ಇನ್ನಷ್ಟು ಕ್ರೂರ
ಮಾರ್ಚ್ ತಿಂಗಳ ನಂತರ ಮಧ್ಯಪ್ರಾಚ್ಯಕ್ಕೆ ನೆಮ್ಮದಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು, ಒಂದು ಕಡೆ ಇರಾನ್ ರೊಚ್ಚಿಗೆದ್ದು ಕೂತಿದೆ. ಹೀಗಾಗಿ ಅಮೆರಿಕದ ಮಿತ್ರ ದೇಶಗಳಾದ ಸೌದಿ ಅರೇಬಿಯಾ, ಯುಎಇ, ಕತಾರ್ ಸೇರಿ, ಹಲವು ದೇಶಗಳಲ್ಲಿ ಇರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಕಾರಣಕ್ಕೆ ಹೊರ್ಮುಜ್ ಜಲಸಂಧಿ ಬಂದ್ ಆಗಿ ಇಡೀ ಜಗತ್ತು ವಿಲವಿಲ ಒದ್ದಾಡುತ್ತಿದೆ. ಇದು ಮತ್ತೊಮ್ಮೆ ಜಾಗತಿಕ ತೈಲ ಮಾರುಕಟ್ಟೆ ನಲುಗಿ ಹೋಗುವಂತೆ ಮಾಡಿದೆ.
ಇಸ್ರೇಲ್ ಮೇಲೆ ಕೂಡ ಇರಾನ್ ದಾಳಿ
ಇರಾನ್ ಈಗಾಗಲೇ ತನ್ನ ಬಳಿ ಇರುವ ರಾಕೆಟ್ ಬಳಸಿಕೊಂಡು ಇಸ್ರೇಲ್ ಮೇಲೆ ಕೂಡ ನಿರಂತರವಾಗಿ ದಾಳಿ ಮಾಡುತ್ತಾ ಇದೆ. ಹಾಗೇ ಇನ್ನೊಂದು ಕಡೆ ಜಲಸಂಧಿ ಕೂಡ ಬಂದ್ ಮಾಡಿರುವ ಕಾರಣಕ್ಕೆ ಯಾವ ಸಮಯದಲ್ಲಿ ಏನಾಗಬಹುದು? ಎಂಬ ಚಿಂತೆ ಜಗತ್ತನ್ನು ಕಾಡುತ್ತಿದೆ. ನೋಡ ನೋಡುತ್ತಲೇ ಮತ್ತೊಮ್ಮೆ ಹಿಂಸೆಯಲ್ಲಿ ನೊಂದು & ಬೆಂದು ಹೋಗುತ್ತಾ ಇದೆ ಮಧ್ಯಪ್ರಾಚ್ಯ. ಈ ಎಲ್ಲಾ ಬೆಳವಣಿಗೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಷೇರು ಪೇಟೆಯನ್ನು ಕೂಡ ಅಲ್ಲಾಡುವಂತೆ ಮಾಡಿದ್ದು, ಹೂಡಿಕೆದಾರರು ಈಗಾಗಲೇ ಲಕ್ಷಾಂತರ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ.