10,00,00,00,000 ರೂಪಾಯಿ ಲಾಭ ಮಾಡಿಕೊಂಡ ಸುದ್ದಿ ಬಗ್ಗೆ ಡೊನಾಲ್ಡ್ ಟ್ರಂಪ್ ಹೀಗಾ ಹೇಳೋದು... Donald Trump

New Admin | July 2, 2026 - 10:06 am

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ, ಮತ್ತೆ ಸದ್ದು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇರಾನ್ ವಿರುದ್ಧದ ಯುದ್ಧ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರ ವಿಚಾರ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿತ್ತು. ಆ ನಂತರ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕುಟುಂಬದ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಂದಲೇ ಕಳೆದ ವರ್ಷ ಸುಮಾರು 1.2 ಬಿಲಿಯನ್ ಡಾಲರ್ ಲಾಭ, ಅಂದ್ರೆ ಸುಮಾರು ₹10,000 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಗಳಿಸಿದ್ದಾರೆ ಎಂಬ ಸುದ್ದಿ ದೊಡ್ಡ ಸದ್ದು ಮಾಡುತ್ತಿದೆ. ಈ ಬಗ್ಗೆ ರಿಯಾಕ್ಷನ್ ಕೊಟ್ಟಿರುವ ಟ್ರಂಪ್ ಏನು ಹೇಳಿದ್ದಾರೆ? ಬನ್ನಿ ತಿಳಿಯೋಣ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ನಂತರ ಸಾಕಷ್ಟು ವಿವಾದಗಳು ಸೃಷ್ಟಿ ಆಗುತ್ತಿದ್ದು, ಪದೇ ಪದೇ ಈ ವಿಚಾರದಲ್ಲಿ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಡೊನಾಲ್ಡ್ ಟ್ರಂಪ್. ಅದೇ ರೀತಿಯಾಗಿ ಇದೀಗ ತಮ್ಮ ಕುಟುಂಬದ ಕ್ರಿಪ್ಟೋ ಕರೆನ್ಸಿ ವ್ಯವಹಾರಗಳಿಂದ ಕಳೆದ ವರ್ಷ ಸುಮಾರು 1.2 ಬಿಲಿಯನ್ ಡಾಲರ್ ಅಂದ್ರೆ ಸುಮಾರು ₹10,000 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಗಳಿಸಿರುವ ಸುದ್ದಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ನಾನ್ನೊಬ್ಬನೇ ಅಲ್ಲ, ಎಲ್ಲರೂ ಲಾಭ ಮಾಡಿಕೊಳ್ಳುತ್ತಿದ್ದಾರೆ... ಎಂದು ಹೇಳುವ ಮೂಲಕ ಇದೀಗ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಟ್ರಂಪ್ ಮುಂದಾಗಿದ್ದಾರೆ.


ಷೇರು ಮಾರುಕಟ್ಟೆ ಏರಿಕೆ ಕಾಣುತ್ತಿದೆ...

ಅಂದಹಾಗೆ ಕತಾರ್ ಉಡುಗೊರೆಯಾಗಿ ನೀಡಿದ ಹೊಸ ಏರ್ ಫೋರ್ಸ್ ಒನ್ ವಿಮಾನದಲ್ಲಿ ಮೊದಲ ಪ್ರಯಾಣಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್ ಅವರು, ತಮ್ಮ ಆದಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ನಾನು ಲಾಭ ಮಾಡಿಕೊಳ್ಳುತ್ತಿರುವುದು ಏಕೆ ಗೊತ್ತಾ? ಷೇರು ಮಾರುಕಟ್ಟೆ ಏರಿಕೆ ಕಾಣುತ್ತಿದೆ. ಎಲ್ಲರೂ ಲಾಭದಲ್ಲಿದ್ದಾರೆ," ಎಂದು ಟ್ರಂಪ್ ತಾವು ಹಣ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಮತ್ತೊಂದು ಕಡೆ ಅವರು, ಅಮೆರಿಕ ಅಧ್ಯಕ್ಷ ಸ್ಥಾನ ಬಳಸಿಕೊಂಡು ವೈಯಕ್ತಿಕ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೆ ತಮ್ಮ ಆಸ್ತಿ ಬ್ಲೈಂಡ್ ಟ್ರಸ್ಟ್‌ಗಳಲ್ಲಿ ಇರಿಸಲಾಗಿದ್ದು, ವೈಯಕ್ತಿಕ ಹಣಕಾಸಿನ ನಿರ್ಧಾರಗಳಲ್ಲಿ ತಾವು ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು. ನನ್ನ ಹಣವನ್ನು ಪ್ರತ್ಯೇಕ ನಿಧಿಗಳು ನಿರ್ವಹಿಸುತ್ತವೆ. ಅಧ್ಯಕ್ಷನಾಗುವ ಮೊದಲೇ ನಾನು ಸಾಕಷ್ಟು ಸಂಪತ್ತು ಗಳಿಸಿದ್ದೆ. ಅವರು ನನ್ನ ಪರವಾಗಿ ಹೂಡಿಕೆ ಮಾಡುತ್ತಾರೆ. ಈ ವಿಚಾರದಲ್ಲಿ ನಾನು ಅವರೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಟ್ರಂಪ್.

ಟ್ರಂಪ್ ಆಸ್ತಿ ಮೌಲ್ಯ 3 ಪಟ್ಟು ಏರಿಕೆ?

ಹಾಗೇ ಫೋರ್ಬ್ಸ್ ವರದಿ ಪ್ರಕಾರ, ಟ್ರಂಪ್ ಅವರ ಕ್ರಿಪ್ಟೋ ವ್ಯವಹಾರಗಳೇ ಟ್ರಂಪ್ ಅವರ ವೈಯಕ್ತಿಕ ಆಸ್ತಿಯ ಮೌಲ್ಯವು ಹೆಚ್ಚಳವಾಗಲು ಪ್ರಮುಖ ಕಾರಣವಂತೆ. ಇನ್ನು 2024ರಲ್ಲಿ 2.3 ಬಿಲಿಯನ್ ಡಾಲರ್ ಇದ್ದ ಅವರ ನಿವ್ವಳ ಆಸ್ತಿ, 2026ರ ಹೊತ್ತಿಗೆ ಸುಮಾರು 6.5 ಬಿಲಿಯನ್ ಡಾಲರ್ ಹಂತಕ್ಕೆ ಏರಿಕೆಯಾಗಿದೆ. ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 60,00,00,00,000 ರೂಪಾಯಿ ಅಂದರೆ 60 ಸಾವಿರ ಕೋಟಿ ರೂಪಾಯಿ ಆಗಿದೆ.

ಕ್ರಿಪ್ಟೋ ನಿಯಂತ್ರಣ ಸಡಿಲಿಕೆ ಬಗ್ಗೆ

ಇನ್ನೊಂದು ಕಡೆ ಅಧಿಕಾರದಲ್ಲಿರುವ ಅವಧಿಯಲ್ಲಿ ಟ್ರಂಪ್ ಕ್ರಿಪ್ಟೋ ಕರೆನ್ಸಿ ಕ್ಷೇತ್ರದ ಮೇಲಿನ ಹಲವು ನಿಯಂತ್ರಣಗಳನ್ನು ಸಡಿಲಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಪರಿಣಾಮವಾಗಿ ಡಿಜಿಟಲ್ ಆಸ್ತಿಗಳ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ವೇತಭವನ, "ಅಧ್ಯಕ್ಷ ಟ್ರಂಪ್ ಅಮೆರಿಕವನ್ನು ಹೆಮ್ಮೆಯಿಂದ ವಿಶ್ವದ ಕ್ರಿಪ್ಟೋ ರಾಜಧಾನಿಯನ್ನಾಗಿ ರೂಪಿಸಿದ್ದಾರೆ" ಎಂದು ಪ್ರತಿಕ್ರಿಯೆಯನ್ನು ನೀಡಿದೆ.