ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕುವಂತೆ, ಇರಾನ್ ವಿರುದ್ಧ ಇರುವ ಕೋಪಕ್ಕೆ ಡೊನಾಲ್ಡ್ ಟ್ರಂಪ್ ಅವರು ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಪರಿಣಾಮ ಇರಾನ್ ಅಲ್ಲ ಜಗತ್ತಿನ ಇತರ ದೇಶಗಳು ತೊಂದರೆ ಅನುಭವಿಸುವಂತೆ ಆಗಿದೆ. ಇನ್ನೇನು ಇರಾನ್ & ಅಮೆರಿಕ ನಡುವೆ ಯುದ್ಧ ನಿಂತೇ ಹೋಯ್ತು ಎಂಬ ನಿರೀಕ್ಷೆ ಮೂಡಿದ ಸಮಯದಲ್ಲೇ ಮತ್ತೆ ಮತ್ತೆ ತಿಕ್ಕಾಟ ಜೋರಾಗುತ್ತಿದೆ. ಹೀಗಿದ್ದಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಆಘಾತ ನೀಡಿದ್ದಾರೆ. ಮಧ್ಯಪ್ರಾಚ್ಯದ ಬೆಳವಣಿಗೆಗಳ ನಡುವೆಯೇ ದಿಢೀರ್ ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಹೊಸ ಘೋಷಣೆ ತಲ್ಲಣ ಎಬ್ಬಿಸಿದೆ.
ಹೌದು, ಇರಾನ್ ನಿಯಂತ್ರಣದಲ್ಲಿ ಇರುವ ಹಾರ್ಮುಜ್ ಜಲಸಂಧಿ ಭದ್ರತಾ ಜವಾಬ್ದಾರಿಯನ್ನು ಅಮೆರಿಕ ವಹಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ಆದರೆ ಇದೇ ಘೋಷಣೆ ಇದೀಗ ಜಗತ್ತಿಗೆ ಮತ್ತೊಂದು ಭಾರಿ ದೊಡ್ಡ ಆಘಾತವನ್ನೂ ನೀಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಪ್ರಯಾಣ ಮಾಡುವ ಸರಕು ಸಾಗಾಣಿಕೆಯ ಹಡಗುಗಳು ಶೇಕಡಾ 20 ರಷ್ಟು ತೆರಿಗೆ ಪಾವತಿ ಮಾಡಲು ಆದೇಶಿಸಿದ್ದಾರೆ. ಈ ಮೂಲಕ ಇರಾನ್‌ಗೆ ಕೂಡ ದುಡ್ಡು ಕೊಟ್ಟು, ಟ್ರಂಪ್ ಅವರ ಸರ್ಕಾರಕ್ಕೂ ಟೋಲ್ ರೂಪದಲ್ಲಿ ತೆರಿಗೆ ಪಾವತಿಸುವ ಅನಿವಾರ್ಯತೆ ಇದೀಗ ಎದುರಾಗಿದೆ. ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಘೋಷಣೆ ಮಾಡುತ್ತಿದ್ದಂತೆ ಭಾರಿ ದೊಡ್ಡ ಬಿರುಗಾಳಿ ಎದ್ದಿದೆ.
ಶೇಕಡಾ 20 ಹೊಸ ತೆರಿಗೆ ಘೋಷಣೆ!
ಪ್ರಪಂಚದ ಶೇಕಡಾ 20ಕ್ಕೂ ಹೆಚ್ಚು ಕಚ್ಚಾತೈಲ ಹಾಗೂ ಗ್ಯಾಸ್ ಸರಬರಾಜು ಇದೇ ಮಾರ್ಗವಾಗಿ ಸಾಗುತ್ತದೆ. ಹೀಗಿದ್ದಾಗ ಇಡೀ ಜಗತ್ತು ಹಾರ್ಮುಜ್ ಜಲಸಂಧಿ ಮೇಲೆ ಅವಲಂಬಿತವಾಗಿದೆ ಎನ್ನಬಹುದು. ಇಡೀ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವಾಣಿಜ್ಯ ಮಾರ್ಗಗಳಲ್ಲಿ ಇದು ಒಂದಾಗಿದೆ. ಪರ್ಷಿಯನ್ ಕೊಲ್ಲಿಯಿಂದ ಹೊರಡುವ ತೈಲ & ಅನಿಲ ಸಾಗಣೆಯ ಬಹುಪಾಲು ಈ ಮಾರ್ಗದ ಮೂಲಕ ನಡೆಯುವುದರಿಂದ, ಅಲ್ಲಿ ಯಾವುದೇ ನೀತಿ ಬದಲಾವಣೆ ಆದರೂ ಅಥವಾ ಉದ್ವಿಗ್ನತೆ ನಿರ್ಮಾಣ ಆದರೂ ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇಂತಹ ಸೂಕ್ಷ್ಮ ಸಮಯದಲ್ಲೇ ಟ್ರಂಪ್ ಅವರ ಈ ಘೋಷಣೆ ಇಂಧನ ಕ್ಷೇತ್ರ, ಸಾಗಣೆ ಉದ್ಯಮ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ತಲ್ಲಣ ಎಬ್ಬಿಸಿದೆ.
ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜಗತ್ತು
ಜಾಗತಿಕ ಮಟ್ಟದಲ್ಲಿ ಎಂತಹ ವಾತಾವರಣ ನಿರ್ಮಾಣ ಆಗಿದೆ ಅಂದ್ರೆ ಯುದ್ಧ ಶುರುವಾದ ನಂತರ ಇರಾನ್ ಸಂಪೂರ್ಣವಾಗಿ ನಾಶವಾಗುವ ಹಂತಕ್ಕೆ ತಲುಪಿದೆ. ಇಂತಹ ಸಮಯದಲ್ಲಿ ಅಮೆರಿಕ ವಿರುದ್ಧದ ಸೇಡನ್ನು ಇರಾನ್ ಈಗ ಜಗತ್ತಿನ ಎಲ್ಲಾ ದೇಶಗಳ ವಿರುದ್ಧ ತೀರಿಸಿಕೊಳ್ಳಲು ಮುಂದಾಗಿದೆ. ಇದರ ಪರಿಣಾಮ ಹೊರ್ಮುಜ್ ಜಲಸಂಧಿ ಕೂಡ ಬಂದ್ ಆಗಿದ್ದು, ಈ ಎಲ್ಲಾ ಬೆಳವಣಿಗೆ ಪರಿಣಾಮ ಜಾಗತಿಕ ಆರ್ಥಿಕ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪುತ್ತಿದೆ. ಕೊರೊನಾ ನಂತರ ನೂರಾರು ಸಮಸ್ಯೆ ಎದುರಿಸಿದ್ದ ಜಾಗತಿಕ ಆರ್ಥಿಕ ವ್ಯವಸ್ಥೆ ಇದೀಗ ಮತ್ತೊಂದು ಕಾರಣಕ್ಕೆ ನರಳುವಂತೆ ಆಗಿದೆ. ಇದು ಸಾಲದೆಂಬ ರೀತಿ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅವರು ಕಿರಿಕ್ ತೆಗೆದಿರುವುದು ತೀವ್ರ ಚರ್ಚೆಗೆ ದಾರಿಮಾಡಿ ಕೊಟ್ಟಿದೆ.