Donald Trump: ಇರಾನ್ & ಅಮೆರಿಕ ನಡುವೆ ಭೀಕರ ಯುದ್ಧ ಪುನಾರಂಭ!

bengaluru diaries | July 8, 2026 - 10:00 pm
ಇರಾನ್ & ಅಮೆರಿಕ ನಡುವೆ ಭೀಕರ ಯುದ್ಧ ಪುನಾರಂಭಗೊಂಡು, ಘೋರ ಪರಿಸ್ಥಿತಿ ನಿರ್ಮಾಣ ಆಗಿದೆ. ಭೀಕರ ದಾಳಿ ಹಾಗೂ ಪ್ರತಿದಾಳಿ ಆರಂಭಿಸಿದ ಎರಡೂ ದೇಶಗಳು ದೊಡ್ಡ ತಿಕ್ಕಾಟಕ್ಕೆ ಮತ್ತೊಮ್ಮೆ ಸಜ್ಜಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಮತ್ತೊಮ್ಮೆ ಸೇನಾ ದಾಳಿ ನಡೆಸುವ ಸಾಧ್ಯತೆ ಸೂಚಿಸಿದ್ದಾರೆ. ಇರಾನ್‌ ಜೊತೆಗೆ ನಡೆದಿದ್ದ ಯುದ್ಧ ವಿರಾಮ ಒಪ್ಪಂದವು ತಮ್ಮ ಪಾಲಿಗೆ ಮುಕ್ತಾಯವಾಗಿದೆ ಎಂದು ಹೇಳಿದ ಕೆಲವೇ ಗಂಟೆಗಳ ಬಳಿಕ, ನಿನ್ನೆ ರಾತ್ರಿ ನಾವು ಅವರಿಗೆ ಭಾರೀ ಹೊಡೆತ ನೀಡಿದ್ದೇವೆ. ಬಹುಶಃ ಇಂದೂ ರಾತ್ರಿ ಮತ್ತೆ ದಾಳಿ ನಡೆಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಅಮೆರಿಕದ ಅಧ್ಯಕ್ಷರು.

ಹೌದು, ಇರಾನ್ ತಮ್ಮ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಅಮೆರಿಕ ಪದೇ, ಪದೇ ವಾರ್ನಿಂಗ್ ಕೊಡುತ್ತಲೇ ಇತ್ತು. ಅದರಲ್ಲೂ ಕದನ ವಿರಾಮ ಮಾಡಿಕೊಂಡಿದ್ದರೂ ಅಮೆರಿಕ & ಇರಾನ್ ನಡುವೆ ಯಾವುದೇ ಕ್ಷಣದಲ್ಲಿ ದಿಢೀರ್ ಅಂತ ಮತ್ತೊಮ್ಮೆ ಯುದ್ಧದ ಕಿಚ್ಚು ಹೊತ್ತಿಕೊಳ್ಳುವ ಆತಂಕ ಆವರಿಸಿತ್ತು. ಹೀಗಿದ್ದಾಗಲೇ ಅಮೆರಿಕ & ಇರಾನ್ ನಡುವೆ ದಾಳಿ ಹಾಗೂ ಪ್ರತಿದಾಳಿ ಆರಂಭವಾಗಿದೆ. ಇನ್ನು ಹೊರ್ಮುಜ್ ಜಲಸಂಧಿಯಲ್ಲಿ ಸಾಗರ ಭದ್ರತೆಗೆ ಧಕ್ಕೆ ಉಂಟುಮಾಡುವ ರೀತಿ ನಡೆದಿರುವ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ಸೇನೆ ತೀವ್ರ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂಬ ಆರೋಪ ಹಿನ್ನೆಲೆ ಅಮೆರಿಕ ದಾಳಿ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕ ನೆಲೆಗಳ ಮೇಲೆ & ಹಡಗುಗಳ ಮೇಲೆ ದಾಳಿ ನಡೆಸುತ್ತಿದೆ.


ನ್ಯಾಟೋ ಶೃಂಗಸಭೆಯಲ್ಲಿ ಟ್ರಂಪ್ ಭಾಗಿ
ಡೊನಾಲ್ಡ್ ಟ್ರಂಪ್ ಅವರು ಇದೀಗ 2026ರ ನ್ಯಾಟೋ ಶೃಂಗಸಭೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಭೇಟಿ ಮಾಡುವ ಮುನ್ನ ಮಾತನಾಡಿದ ಟ್ರಂಪ್, ಇರಾನ್ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಧ್ಯಪ್ರಾಚ್ಯದಲ್ಲಿ ಇರಾನ್ ದಬ್ಬಾಳಿಕೆ ನಡೆಸುತ್ತಿತ್ತು. ಆದರೆ ಈಗ ಅದು ಸಾಧ್ಯವೇ ಇಲ್ಲ ಎಂದು ಹೇಳಿದ್ದು, ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿಯ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಂದಹಾಗೆ ಇದೀಗ ಅಮೆರಿಕದ ದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ಪ್ರಮುಖ ಗುರಿಯಾಗಿದ್ದು, ಇದರ ಜೊತೆ ರಾಡಾರ್ ಕೇಂದ್ರಗಳು ಹಾಗೂ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಬಳಸುತ್ತಿದ್ದ 60ಕ್ಕೂ ಹೆಚ್ಚು ಸಣ್ಣ ದೋಣಿಗಳನ್ನ ಗುರಿಯಾಗಿಸಿಯೂ ದಾಳಿ ಮಾಡಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ
ಅಮೆರಿಕ ಮತ್ತು ಇರಾನ್ ನಡುವಿನ ದಾಳಿಯಲ್ಲಿ ಇಡೀ ಜಗತ್ತು ಮತ್ತೊಮ್ಮೆ ನಲುಗಿ ಹೋಗಿರುವ ಸಮಯದಲ್ಲೇ, ಈಗ ಯುದ್ಧ ಭೀತಿ ಹಿನ್ನೆಲೆ ಹೂಡಿಕೆದಾರರು ಕೂಡ ಹೆದರಿ ಕೂತಿದ್ದಾರೆ. ಅದರಲ್ಲೂ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಉಂಟಾಗಿ, ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 1,677.12 ಅಂಕ ನಷ್ಟವಾಗಿ 76,503 ಅಂಕಗಳಿಗೆ ಕುಸಿತ ಕಂಡಿದೆ. ಹಾಗೇ ನಿಫ್ಟಿ-50 ಕೂಡ 516 ಅಂಕಗಳನ್ನು ಕಳೆದುಕೊಂಡಿದೆ. ಒಂದೇ ದಿನ ಲಕ್ಷಾಂತರ ಕೋಟಿ ರೂಪಾಯಿ ನಷ್ಟವನ್ನ ಅನುಭವಿಸಿದ್ದಾರೆ ಹೂಡಿಕೆದಾರರು. ಹಾಗೇ ಅಮೆರಿಕದ ಷೇರು ಮಾರುಕಟ್ಟೆಯ ಪರಿಸ್ಥಿತಿ ಕೂಡ ಇದೇ ರೀತಿ ಇದ್ದು, ಯುದ್ಧ ಭೀತಿಯಲ್ಲಿ ಷೇರುಪೇಟೆ ಕುಸಿತ ಕಾಣುತ್ತಿದೆ. ಹಾಗೇ ಕೆಲ ದಿನಗಳ ಹಿಂದೆ ಅಮೆರಿಕ & ಇರಾನ್‌ನ ನಡುವೆ ನಡೆದಿದ್ದ ಕದನ ವಿರಾಮ ಒಪ್ಪಂದವೂ ವ್ಯರ್ಥವಾಗಿ ಹೊಗಿ, ಕಚ್ಚಾ ತೈಲ ಬೆಲೆಯೂ ಹೆಚ್ಚಳವಾಗುವ ಭೀತಿ ಇದೀಗ ಆವರಿಸಿದೆ.