E20 Petrol: ಕಾಕ್ರೋಚ್ ಜನತಾ ಪಾರ್ಟಿ ಆಯ್ತು ಈಗ ಕೇಂದ್ರಕ್ಕೆ E20 ಜನತಾ ಪಾರ್ಟಿ ಟೆನ್ಷನ್ ಶುರು!

bengaluru diaries | July 27, 2026 - 9:25 pm

ಭಾರತದಲ್ಲಿ ಇತ್ತೀಚೆಗಷ್ಟೇ ಬೃಹತ್ ಹೋರಾಟವು ನಡೆದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೂಡ ನೀಡಿದ್ದಾರೆ. ಹೀಗೆ ಕೇಂದ್ರ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ತಮ್ಮ ರಿಸೈನ್ ಲೆಟರ್ ಕೊಟ್ಟು ಹೋಗಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದ  ಹೋರಾಟವು ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಈ ಪ್ರತಿಭಟನೆ ಮುಗಿದು ಇನ್ನೇನು ರಾಷ್ಟ್ರ ರಾಜಧಾನಿ ದೆಹಲಿ ತಣ್ಣಗಾಗಿದೆ ಎನ್ನುವಾಗಲೇ ಮತ್ತೊಂದು ಬೃಹತ್ ಹೋರಾಟಕ್ಕೆ ಜಂತರ್ ಮಂತರ್ ಸಜ್ಜಾಯ್ತಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಈ ಬಾರಿ ಸಿಜೆಪಿ ಬದಲು ಇಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಜ್ಜಾಗಿದೆಯಂತೆ. ಹಾಗಾದ್ರೆ ಯಾವುದು ಇದು ಇಜೆಪಿ? ಇದರ ಸತ್ಯಾಸತ್ಯತೆ ಏನು? ಬನ್ನಿ ತಿಳಿಯೋಣ.

ಎಥೆನಾಲ್ ಮಿಶ್ರಿತ ಇಂಧನವನ್ನು ವಾಹನಗಳಿಗೆ ಹಾಕಿಸಬೇಕು ಎಂಬ ನಿಯಮ ಜಾರಿಗೆ ಬಂದ ನಂತರ ಭರ್ಜರಿ ಚರ್ಚೆ ಶುರುವಾಗಿದೆ. ಅಲ್ಲದೆ ಈ ಬಗ್ಗೆ ಪರ & ವಿರೋಧದ ಚರ್ಚೆಗಳು ಕೂಡ ನಡೆಯುತ್ತಿವೆ. ಹೀಗಿದ್ದಾಗಲೇ, ಎಥೆನಾಲ್ ಮಿಶ್ರಿತ ಇಂಧನ ಆಗಿರುವ E20 ಬಳಕೆಯನ್ನು ಕಡ್ಡಾಯ ಮಾಡಿರುವುದು ಆಕ್ರೋಶಕ್ಕೆ ಕೂಡ ಕಾರಣ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ ವಾಹನ ಚಾಲಕರು. ವಾಹನ ಚಾಲಕರು, ಟ್ಯಾಕ್ಸಿ ಮಾಲೀಕರು & ಕೆಲವು ಸಾರಿಗೆ ಸಂಘಟನೆಗಳು ಕೇಂದ್ರ ಸರ್ಕಾರದ ಈ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಶೇಕಡಾ 100 ರಷ್ಟು ಶುದ್ಧ ಪೆಟ್ರೋಲ್‌ ಅನ್ನು ಪರ್ಯಾಯವಾಗಿ ಲಭ್ಯವಾಗುವಂತೆ ಮಾಡಬೇಕು ಎಂಬ ಡಿಮ್ಯಾಂಡ್ ಮುಂದೆ ಇಟ್ಟಿದ್ದಾರೆ. ಈ ಕಾರಣಕ್ಕೆ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಬೃಹತ್ ಹೋರಾಟ ನಡೆಯುವ ಎಲ್ಲ ಮುನ್ಸೂಚನೆ ಸಿಕ್ಕಿದೆ. ಸಿಜೆಪಿ ಬಳಿಕ ಇದೀಗ ಇ20 ಜನತಾ ಪಾರ್ಟಿ ಕೂಡ ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತಿದೆಯಂತೆ. ಇದರ ಸತ್ಯಾಸತ್ಯತೆ ತಿಳಿಯೋಣ ಬನ್ನಿ...


ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಹೋರಾಟ?

ಅಷ್ಟಕ್ಕೂ ಇಂಧನ ಮಿಶ್ರಣ ನೀತಿ ವಿರುದ್ಧ ಅಸಮಾಧಾನಗೊಂಡ ವರ್ಗವೊಂದು ಸಾಮಾಜಿಕ ಜಾಲತಾಣದಲ್ಲಿ E20 ಜನತಾ ಪಾರ್ಟಿ ಹೆಸರಿನ ಖಾತೆ ತೆರೆದು, ಆನ್‌ಲೈನ್ ಅಭಿಯಾನ ಆರಂಭಿಸಿದೆ. ಮತ್ತೊಂದು ಕಡೆ ಈ ಅಕೌಂಟ್‌ನ ಓಪನ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಫಾಲೋವರ್ಸ್‌ ಪಡೆದುಕೊಂಡು ಭಾರಿ ಸಂಚಲನ ಸೃಷ್ಟಿಸಿದೆ. ಈ ಆಂದೋಲನದ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೂ ಒತ್ತಾಯಿಸಲಾಗುತ್ತಿದೆ, ಬೆಂಬಲ ಬೇಕು ಎಂದು ಪೋಸ್ಟ್‌ಗಳನ್ನ ಶೇರ್ ಮಾಡಲಾಗುತ್ತಿದೆ.

ಆದರೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲವಾದರೂ, ಇನ್ನೊಂದೆಡೆ ಇ20 ಮಿಶ್ರಿತ ಇಂಧನ ಬಳಕೆ ವಿರುದ್ಧ ದೆಹಲಿ ಟ್ಯಾಕ್ಸಿ & ಟೂರಿಸ್ಟ್ ಟ್ರಾನ್ಸ್‌ಪೋರ್ಟರ್ಸ್ & ಟೂರ್ ಆಪರೇಟರ್ಸ್ ಅಸೋಸಿಯೇಷನ್ ಹೋರಾಟಕ್ಕೆ ಕರೆಯ ನೀಡಿದೆ. ಈಗ ಬೃಹತ್ ಪ್ರತಿಭಟನಾ ರ‍್ಯಾಲಿಗೆ ಕರೆ ನೀಡಿದ್ದು, ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಚಾರ ಮಾಡಲು ಅಕೌಂಟ್ ಕೂಡ ತೆರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಪರ & ವಿರೋಧ ಚರ್ಚೆ ಕೂಡ ಭುಗಿಲೆದ್ದಿದ್ದು, ಸಿಜೆಪಿ ರೀತಿಯಲ್ಲೇ ಮತ್ತೊಂದು ಸೋಷಿಯಲ್ ಮೀಡಿಯಾ ಫೈಟ್ ಜೋರಾಗಿದೆ.

ಸಂಸತ್ ಭವನದವರೆಗೆ ಬೃಹತ್ ರ‍್ಯಾಲಿ?

ಆಗಸ್ಟ್ 4 ಮಂಗಳವಾರ ಸಂಸತ್ ಭವನದವರೆಗೆ ಬೃಹತ್ ರ‍್ಯಾಲಿ ನಡೆಸಿ ಆಕ್ರೋಶ ಹೊರಹಾಕಲು ನಿರ್ಧರಿಸಲಾಗಿದೆ ಎಂದು, ಇ20 ಜನತಾ ಪಾರ್ಟಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಆಗ್ರಹಿಸಲಾಗಿದೆ. ಹೀಗೆ E20 ಪೆಟ್ರೋಲ್ ಬಳಕೆ ವಿರೋಧಿ ಹೋರಾಟಕ್ಕೆ ದೇಶದ ಹಲವು ಪ್ರಮುಖ ಸಾರಿಗೆ ಸಂಘಟನೆಗಳು ಬೆಂಬಲ ನೀಡುತ್ತವಾ? ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಹೋರಾಟಗಳ ನಡುವೆ ಮತ್ತೊಂದು ಹೋರಾಟ ಕೂಡ ಭುಗಿಲೇಳುವ ಮುನ್ಸೂಚನೆ ಸಿಕ್ಕಿದೆ. ಸಾರಿಗೆ, ವಾಹನ ಸವಾರರ ವರ್ಗದಿಂದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಬಲವಾದ ಹೋರಾಟ ಶುರುವಾಗುತ್ತಾ? ಎಂಬ ಪ್ರಶ್ನೆಗಳ ನಡುವೆ ಸರ್ಕಾರ ಕೂಡ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.