ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ. ಅದರಲ್ಲೂ 20 ವಿದ್ಯಾರ್ಥಿಗಳ ಜೀವನದ ಪಯಣವನ್ನೇ ಮುಗಿಯುವಂತೆ ಮಾಡಿರುವ ಈ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗುವ ಜೊತೆಗೆ, ದೊಡ್ಡ ಪ್ರತಿಭಟನೆ ಮೂಲಕ ವಿದ್ಯಾರ್ಥಿಗಳು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಆರಂಭಿಸಿದ್ದರು. ಅಂತಿಮವಾಗಿ ವಿದ್ಯಾರ್ಥಿಗಳು ಹಾಗೂ ಭಾರತದ ಯುವ ಸಮೂಹದ ಆಕ್ರೋಶಕ್ಕೆ ಕೇಂದ್ರ ಸರ್ಕಾರ ಮಣಿದು, ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ಹೀಗಿದ್ದಾಗ ಪ್ರಲ್ಹಾದ್ ಜೋಶಿ ನೂತನ ಶಿಕ್ಷಣ ಸಚಿವರಾಗಿ ಹೆಚ್ಚಿನ ಜವಾಬ್ದಾರಿಯನ್ನ ಹೊತ್ತಿದ್ದಾರೆ, ಹಾಗಾದ್ರೆ ವಿದ್ಯಾರ್ಥಿಗಳು ಏನಂದ್ರು?
ಅಂದಹಾಗೆ ಭಾರತದ ಮೂಲೆ ಮೂಲೆಯಲ್ಲೂ ದೊಡ್ಡ ಸಂಚಲನ ಮೂಡಿಸಿದ್ದ ಪರೀಕ್ಷಾ ಅಕ್ರಮಗಳು ದೇಶದಲ್ಲಿ ವಿದ್ಯಾರ್ಥಿಗಳು ರೊಚ್ಚಿಗೇಳುವಂತೆ ಮಾಡಿತ್ತು. ಹೀಗಾಗಿಯೇ ರಾಷ್ಟ್ರ ರಾಜಧಾನಿ ದೆಹಲಿ ನೆಲದಲ್ಲಿ ಕಠಿಣವಾದ ಹೋರಾಟ ಆರಂಭವಾಗಿ, ಜಂತರ್ ಮಂತರ್ ಲಕ್ಷಾಂತರ ಹೋರಾಟಗಾರರ ನೆಲೆಯಾಗಿತ್ತು. ಕೊನೆಗೆ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಅಂತಿಮವಾಗಿ ಪ್ರತಿಭಟನೆ ಈಗ ನಿಲ್ಲುವಂತೆ ಮಾಡಿದೆ. ನೈತಿಕ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಚಿವ ಸ್ಥಾನ ತ್ಯಜಿಸಿದ್ದಾರೆ. ಪ್ರಧಾನ್ ರಾಜೀನಾಮೆ ಪತ್ರವನ್ನ ರಾಷ್ಟ್ರಪತಿಗಳು ನಿನ್ನೆಯೇ ಅಂಗೀಕರಿಸಿ ತೆರವಾದ ಮಹತ್ವದ ಖಾತೆ ಜವಾಬ್ದಾರಿಯನ್ನ ಕರ್ನಾಟಕದ ಹಿರಿಯ ಸಂಸದ & ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ವಹಿಸಿದ್ದಾರೆ.
ಪ್ರಲ್ಹಾದ್ ಜೋಶಿ ಎದುರು ಸಾವಿರ ಸವಾಲು
ನೀಟ್ ಪ್ರಶ್ನೆ ಪತ್ರಿಕೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುವ ಮೂಲಕ ದೊಡ್ಡ ಸಂಚಲನ ಸೃಷ್ಟಿಯಾಗಿದೆ ದೇಶಾದ್ಯಂತ. ಕರ್ನಾಟಕ ರಾಜ್ಯದಲ್ಲು ಕೂಡ ಇದೇ ರೀತಿಯ ಅಕ್ರಮಗಳು ನಡೆದಿದ್ದು, ಅದರ ವಿಚಾರವಾಗಿ ಕೂಡ ಕ್ರಮ ಕೈಗೊಳ್ಳಿ ಎಂಬ ಆಗ್ರಹ ವಿದ್ಯಾರ್ಥಿ ಸಮೂಹದಿಂದ ಕೇಳಿಬರ್ತಾ ಇದೆ. ಹೀಗಿದ್ದಾಗಲೇ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೂಡ ನೀಡಿದ್ದಾರೆ. ಇಷ್ಟೆಲ್ಲದರ ನಡುವೆ ಪ್ರಲ್ಹಾದ್ ಜೋಶಿ ನೂತನ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಸಾಲು ಸಾಲು ಸವಾಲು ಎದುರಾಗುವ ಸಾಧ್ಯತೆ ಇದ್ದು, ಈಗಾಗಲೇ ಮೊದಲ ಹಂತದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ ಸಚಿವ ಪ್ರಲ್ಹಾದ್ ಜೋಶಿ ಅವರು.
ಮತ್ತೊಂದು ಕಡೆ ನಿನ್ನೆ ಮಧ್ಯಾಹ್ನ ಕೇಂದ್ರ ಶಿಕ್ಷಣ ಇಲಾಖೆ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಪತ್ರ ಪರೆದಿದ್ದರು. ತಮ್ಮ ಹುದ್ದೆಯಿಂದ ಪ್ರಧಾನ್ ಹಿಂದೆ ಸರಿದ ಹಿನ್ನೆಲೆ ಅದನ್ನು ರಾಷ್ಟ್ರಪತಿಗಳು ರಾಜೀನಾಮೆ ಅಂಗೀಕರಿಸಿದ್ದು, ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯದ ಕಾರ್ಯನಿರ್ವಹಣೆ ವಿಚಾರದಲ್ಲಿ ಇನ್ನು ಯಾವುದೇ ವ್ಯತ್ಯಯ ಉಂಟಾಗದಂತೆ ತಕ್ಷಣ ಹೊಸ ಆಡಳಿತಾತ್ಮಕ ವ್ಯವಸ್ಥೆ ರೂಪಿಸಿ, ಪ್ರಲ್ಹಾದ್ ಜೋಶಿ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ. ಹಾಗಾದ್ರೆ ಇದೀಗ ಯಾವೆಲ್ಲಾ ಸಚಿವಾಲಯ ನೋಡಿಕೊಳ್ಳುತ್ತಿದ್ದಾರೆ ಜೋಶಿ ಅವರು? ಮಾಹಿತಿಗಾಗಿ ಮುಂದೆ ಓದಿ...
ಹಲವು ಜವಾಬ್ದಾರಿಗಳ ನಡುವೆ ಹೆಚ್ಚಿನ ಹೊಣೆ
ಮತ್ತೊಂದು ಕಡೆ ಈಗಾಗಲೇ ಹಲವು ಸಚಿವಾಲಯದ ಜವಾಬ್ದಾರಿಗಳು ಇದೇ ಜೋಶಿ ಅವರ ಮೇಲೆ ಇದ್ದು, ಗ್ರಾಹಕ ವ್ಯವಹಾರಗಳು, ಆಹಾರ & ಸಾರ್ವಜನಿಕ ವಿತರಣೆ ಸಚಿವಾಲಯದ ಜೊತೆಗೇ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಜವಾಬ್ದಾರಿಯನ್ನ ಅವರು ನೋಡಿಕೊಳ್ಳುತ್ತಿದ್ದಾರೆ. ಹಾಗೇ ಇದೀಗ ಶಿಕ್ಷಣ ಸಚಿವಾಲಯದ ಹೊಣೆ ಕೂಡ ನೀಡಲಾಗಿದ್ದು, ಮೊದಲನೇ ಸಭೆಯನ್ನು ನಡೆಸಿ ಮಹತ್ವದ ಮಾಹಿತಿ ಪಡೆದಿದ್ದಾರೆ ನೂತನ ಶಿಕ್ಷಣ ಸಚಿವರು. ಶಿಕ್ಷಣ ಕ್ಷೇತ್ರದ ವಿಶ್ವಾಸಾರ್ಹತೆ ದೇಶದ ಭವಿಷ್ಯದ ಜೊತೆಗೆ ನೇರವಾಗಿ ಸಂಬಂಧ ಹೊಂದಿರುವುದರಿಂದ, ಕೇಂದ್ರ ಸರ್ಕಾರದ ಮುಂದಿನ ಕ್ರಮಗಳ ಮೇಲೆ ವಿದ್ಯಾರ್ಥಿಗಳು & ಪೋಷಕರು ಹಾಗೂ ಶಿಕ್ಷಣ ತಜ್ಞರ ಚಿತ್ತ ನೆಟ್ಟಿದೆ.