Gautam Gambhir: ಭಾರತದಲ್ಲಿ ಕ್ರಿಕೆಟ್‌ಗೆ ಎದುರಾಯ್ತಾ ಕಂಟಕ? ರೊಚ್ಚಿಗೆದ್ದ ಕೋಟಿ ಕೋಟಿ ಫ್ಯಾನ್ಸ್...

bengaluru diaries | July 24, 2026 - 12:25 pm

ಭಾರತದಲ್ಲಿ ಕ್ರಿಕೆಟ್ ಅಂದ್ರೆ ಧರ್ಮ ಅಂತಾ ಪೂಜೆ ಮಾಡುವ ಅಭಿಮಾನಿಗಳೇ ಹೆಚ್ಚು, ಅದರಲ್ಲೂ ಭಾರತ ಅತಿಹೆಚ್ಚು ಕ್ರಿಕೆಟ್ ಫ್ಯಾನ್ಸ್ ಹೊಂದಿರುವ ದೇಶವಾಗಿದೆ. ಹೀಗಿದ್ದಾಗ ಕ್ರಿಕೆಟ್ ಆಟಗಾರರನ್ನು ದೇವರು ಅಂತಾ ಪೂಜಿಸುವ & ಪ್ರೀತಿಸುವ ಅಭಿಮಾನಿಗಳ ದೊಡ್ಡ ಪಡೆಯೇ ಇಲ್ಲಿದೆ. ಹೀಗಿದ್ದಾಗ ಕಳೆದ ಕೆಲವು ದಿನಗಳಿಂದ, ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳು ದೊಡ್ಡ ಬಿರುಗಾಳಿ ಎಬ್ಬಿಸಿವೆ. ಆ ಮೂಲಕ ಭಾರತದ ನೆಲದಲ್ಲಿ ಕ್ರಿಕೆಟ್ ಕಥೆ ಮುಗಿದೇ ಹೋಯ್ತಾ? ಎಂಬ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ರೊಚ್ಚಿಗೆದ್ದ ಕೋಟಿ ಕೋಟಿ ಫ್ಯಾನ್ಸ್ ಹೇಳುತ್ತಿರುವುದು ಅದೊಂದೇ ಒಂದು ಮಾತು...

ಕಳೆದ ಕೆಲವು ದಶಕಗಳಿಂದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಅವರಂತಹ ದಿಗ್ಗಜರ ಸಾರಥ್ಯದಲ್ಲಿ ಭಾರತೀಯ ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿತ್ತು. ಜಾಗತಿಕ ಕ್ರಿಕೆಟ್ ಅಖಾಡದಲ್ಲಿ ಟೀಮ್ ಇಂಡಿಯಾ ಹೆಸರು ಕೇಳಿದರೆ ಎದುರಾಳಿ ಪಡೆಗಳು ಬೆದರುತ್ತಿದ್ದ ಕಾಲ ಕೂಡ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಕೈಗೊಂಡ ಕೆಲ ತಪ್ಪು ನಿರ್ಧಾರಗಳು & ತಂಡದ ಕಳಪೆ ಪ್ರದರ್ಶನವು ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಹಾಗೇ ಭಾರತೀಯ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶದ ಕಹಳೆ ಕೂಡ ಮೊಳಗಿದೆ.


ಇಂಗ್ಲೆಂಡ್ ಸರಣಿ ಸೋಲಿನಿಂದ ತಲ್ಲಣ

ಭಾರತ ಕ್ರಿಕೆಟ್ ತಂಡದಲ್ಲಿ ಮನಸ್ಸಿಗೆ ಬಂದಂತೆ ಬದಲಾವಣೆ ತಂದ ಗೌತಮ್ ಗಂಭೀರ್, ಈಗಾಗಲೇ ಹಲವು ಹಿರಿಯ ಆಟಗಾರರನ್ನು ಮೂಲೆಗುಂಪು ಮಾಡಿರುವ ಆರೋಪ ಕೂಡ ಎದುರಿಸುತ್ತಿದ್ದಾರೆ. ಇಂತಹ ಗಂಭೀರ ಸಮಯದಲ್ಲೇ, ಇಂಗ್ಲೆಂಡ್ & ಐರ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡ ಅನುಭವಿಸಿದ ಸಾಲು ಸಾಲು ಸೋಲುಗಳು ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ. ಟಿ20 ವರ್ಲ್ಡ್ ಕಪ್ ಗೆದ್ದು ಬೀಗಿದ್ದ ತಂಡವೇ ಇದು? ಎಂದು ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ರೀತಿ ಆಟಗಾರರು ಹೀನಾಯ ಪ್ರದರ್ಶನ ನೀಡುತ್ತಾ ಇದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಪರಿಣಾಮ ಉಂಟಾಗಿರುವ ಗೊಂದಲ, ಮೂರೂ ಫಾರ್ಮ್ಯಾಟ್‌ಗಳಿಗೆ ಸ್ಪಷ್ಟ ಹಾಗೂ ಸ್ಥಿರ ನಾಯಕನನ್ನು ರೂಪಿಸುವಲ್ಲಿ ಬಿಸಿಸಿಐ ವಿಫಲವಾಗಿದೆ. ದಿನಕ್ಕೊಬ್ಬ ನಾಯಕ, ಸರಣಿಗೊಬ್ಬ ನಾಯಕ ಎಂಬ ಪರಿಸ್ಥಿತಿ ನಿರ್ಮಾಣವಾಗಿ ಭಾರತೀಯ ಕ್ರಿಕೆಟ್ ತಂಡದ ಸಮತೋಲನವನ್ನೇ ಇದೀಗ ಭಂಗಗೊಳಿಸಿದೆ.

ಗೌತಮ್ ಗಂಭೀರ್ ವಿರುದ್ಧ ಬಿಸಿಸಿಐ ಸಿಟ್ಟು?

ಭಾರತದಲ್ಲಿ ಕ್ರಿಕೆಟ್ ಬಲವಾಗಿ ಬೆಳೆಯಲು 1983ರ ವಿಶ್ವಕಪ್ ಗೆಲುವು & ಕಪಿಲ್ ದೇವ್ ನಾಯಕತ್ವ ಪ್ರಮುಖ ಕಾರಣ ಆಗಿತ್ತು. ಆ ನಂತರ ಸಚಿನ್ ತೆಂಡೂಲ್ಕರ್ ಅವರ ಆಟ ಇಡೀ ಜಗತ್ತಿನ ಮನಸ್ಸು ಗೆದ್ದಿತ್ತು. ನಂತರ, ವಿರಾಟ್ ಕೋಹ್ಲಿ ಆಟಕ್ಕೆ ಇಡೀ ಜಗತ್ತೇ ಇದೀಗ ಮನಸೋತು ಹೋಗಿತ್ತಾದರೂ ವಿರಾಟ್ ಕೊಹ್ಲಿ, ಗಂಭೀರ್‌ಗೆ ಟಾರ್ಗೆಟ್ ಆಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಪ್ರಮುಖ ವಿಚಾರ ಏನೆಂದರೆ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರೀತಿ ಹಿರಿಯ ಹಾಗು ಅನುಭವಿ ಆಟಗಾರರ ಬಿಸಿಸಿಐ ಹಂತ ಹಂತವಾಗಿ ಮೂಲೆಗುಂಪು ಮಾಡುತ್ತಿದೆ ಎಂಬ ಭಾವನೆ ಕೋಟ್ಯಂತರ ಅಭಿಮಾನಿಗಳಲ್ಲಿ ಬಲವಾಗುತ್ತಿದೆ. ಅನುಭವಕ್ಕೆ ಸೂಕ್ತವಾದ ಮಾನ್ಯತೆ ನೀಡದಿರುವುದು ತಂಡದ ಕಷ್ಟದ ಸಮಯದಲ್ಲಿ ಹಿನ್ನಡೆಯಾಗಿ ಪರಿಣಮಿಸುತ್ತಿದೆ. ಮತ್ತೊಂದೆಡೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದ ಮೇಲೆಯೂ ಬಿಸಿಸಿಐ ಕೆಂಗಣ್ಣು ಬೀರಿದೆ ಎನ್ನಲಾಗಿದೆ.  

ಗೌತಮ್ ಗಂಭೀರ್ ಹೊರಗೆ ಹೋಗ್ತಾರಾ?

ಒಟ್ನಲ್ಲಿ ಇದೆಲ್ಲವನ್ನೂ ನೋಡುತ್ತಿದ್ದರೆ ಗೌತಮ್ ಗಂಭೀರ್ ಆದಷ್ಟು ಬೇಗ ಟೀಂ ಇಂಡಿಯಾ ಬಿಟ್ಟು ಹೊರಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಬಹುದು ಎನ್ನಲಾಗಿದೆ. ಗಂಭೀರ್ ಮತ್ತು ಬಿಸಿಸಿಐ ನಡುವೆ ಒಪ್ಪಂದ 2027 ತನಕ ಇದೆಯಾದರೂ, ಇತ್ತೀಚಿನ ಸರಣಿ ಸೋಲುಗಳ ಹಿನ್ನೆಲೆ ಅವರ ಪಾತ್ರ ಮತ್ತು ನಿರ್ಧಾರಗಳ ಪರಿಶೀಲನೆಗೆ ಬಿಸಿಸಿಐ ಮುಂದಾಗಿದೆ. ಸಹಾಯಕ ಸಿಬ್ಬಂದಿ & ತರಬೇತುದಾರರಿಗೂ ಮೇಜರ್ ಸರ್ಜರಿ ಕಾದಿದೆ? ಎಂಬ ಪ್ರಶ್ನೆ ಇದೇ ಸಮಯದಲ್ಲಿ ಮೂಡಿದೆ. ಹಾಗೇ, ಕಮರ್ಷಿಯಲ್ ಆಟ ಎಂದೇ ಹೆಸರು ಮಾಡಿರುವ ಐಪಿಎಲ್‌ ಅಖಾಡದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಆಟಗಾರರು, ಅದ್ಭುತ ಪ್ರದರ್ಶನ ನೀಡುವ ಪ್ರಮುಖ ಪ್ಲೇಯರ್ಸ್ ಈಗ  ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಸೋತು ಸುಣ್ಣವಾಗುತ್ತಿದ್ದಾರೆ.

ಹಾಗೇ ಇನ್ನೊಂದು ಕಡೆ ಸಾಲು ಸಾಲು ಗಾಯದ ಸಮಸ್ಯೆಗಳಿಂದ ಬಳಲುತ್ತಿರುವುದು ದೊಡ್ಡ ಚಿಂತೆ ತರಿಸಿಬಿಟ್ಟಿದೆ ಬಿಸಿಸಿಐ ಆಡಳಿತ ಮಂಡಳಿಗೆ. ಇದರ ಜೊತೆಗೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಯಾವುದೇ ಸಮಯಕ್ಕೆ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸುವ ವಾತಾವರಣ ನಿರ್ಮಾಣ ಆಗಿದೆ. ಇದೆಲ್ಲವನ್ನೂ ಲೆಕ್ಕಾ ಹಾಕಿ ಹೇಳುವುದಾದರೆ, ಗೌತಮ್ ಗಂಭೀರ್ ಕಾರಣಕ್ಕೆ ಇಷ್ಟೆಲ್ಲಾ ಆಗುತ್ತಿದೆ ಎಂದು ಫ್ಯಾನ್ಸ್ ಆರೋಪ ಕೂಡ ಮಾಡುತ್ತಿದ್ದಾರೆ. ಅಲ್ಲದೆ ಆಟಗಾರರ ನಿರ್ವಹಣೆಯಲ್ಲಿ ಬಿಸಿಸಿಐ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಹೀಗೆ ಮುಂದುವರಿದರೆ 2027 ಏಕದಿನ ವಿಶ್ವಕಪ್‌ಗೆ ಬಲವಾದ ತಂಡವನ್ನು ಕಟ್ಟಲು ಸಾಧ್ಯವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಕ್ರಿಕೆಟ್ ಮ್ಯಾಚ್ ಮರೆತು ಹೋಗುತ್ತಿರುವ ಜನ!

ಇದೆಲ್ಲಕ್ಕಿಂತ ಮತ್ತೊಂದು ಶಾಕಿಂಗ್ ವಿಚಾರ ಏನೆಂದರೆ, ಭಾರತದಲ್ಲಿ ಕ್ರಿಕೆಟ್ ಆಟ ನೋಡುವವರ ಸಂಖ್ಯೆಗೂ ಇದೀಗ ಕುತ್ತು ಬಂದಿದೆ. ಅದು ಏನೆಂದರೆ ಒಂದು ಕಾಲದಲ್ಲಿ ಭಾರತ ತಂಡಕ್ಕೆ ವರ್ಷಪೂರ್ತಿ ಮ್ಯಾಚ್ ಇದ್ದರೂ ಅದರ ಟೈಂ ಟೇಬಲ್ ನೆನಪಿಟ್ಟುಕೊಂಡು ಸಂಭ್ರಮಿಸುತ್ತಿದ್ದ ಜನ, ಇಂದು ಇಂಡಿಯಾ ಮ್ಯಾಚ್ ಇದೆಯಾ? ಎಂದು ಕೇಳುವ ಪರಿಸ್ಥಿತಿ ಬಂದಿದೆ. ಬಿಸಿಸಿಐ ಧೋರಣೆ & ಆಟಗಾರರ ನೀರಸ ಪ್ರದರ್ಶನ ಪರಿಣಾಮ ಕ್ರಿಕೆಟ್ ಮೇಲಿನ ಕ್ರೇಜ್ ಕಡಿಮೆಯಾಗುತ್ತಿದೆ. ಭಾರತದ ಯುವಜನತೆ ಈಗ ಫಿಫಾ ಫುಟ್‌ಬಾಲ್ ವಿಶ್ವಕಪ್ ಸೇರಿ ಇತರ ಕ್ರೀಡೆಗಳತ್ತ ಗಮನವನ್ನ ಹರಿಸುತ್ತಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ಫುಟ್‌ಬಾಲ್ ಸೆಲೆಬ್ರೇಷನ್ ಸಾಕ್ಷಿ.

ಬಿಸಿಸಿಐ ಈ ತಕ್ಷಣ ಎಚ್ಚೆತ್ತುಕೊಂಡು ಹಿರಿಯ ಆಟಗಾರರಿಗೆ ಗೌರವ ನೀಡಿ, ನಾಯಕತ್ವದಲ್ಲಿ ಸ್ಪಷ್ಟತೆ ತಂದು 2027 ವಿಶ್ವಕಪ್ ದೃಷ್ಟಿಯಿಂದ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಭಾರತದಲ್ಲಿ ಕ್ರಿಕೆಟ್ ಎಂಬ ಧರ್ಮವೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೇ ಭವಿಷ್ಯದಲ್ಲಿ ಕ್ರಿಕೆಟ್ ಆಟಗಾರರ ಬೆಂಬಲಕ್ಕೆ ಅಭಿಮಾನಿಗಳು ಕೂಡ ನಿಲ್ಲುವಿದಲ್ಲ ಎಂಬುದು ತಜ್ಞರ ವಾದ. ಹೀಗಾಗಿ ಗೌತಮ್ ಗಂಭೀರ್ ಸೇರಿ ತಂಡದ ಒಳಗೆ ಗೊಂದಲ ಉಂಟು ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡುತ್ತಿರುವ ಫ್ಯಾನ್ಸ್, ವಿರಾಟ್ ಕೊಹ್ಲಿಯನ್ನ ಮತ್ತೆ ಕ್ಯಾಪ್ಟನ್ ಮಾಡಿ ಅಂತಿದ್ದಾರೆ.