GBA Elections 2026: 'ಎಸ್ಐಆರ್' ವಾರ್ ನಡುವೆಯೇ ಜಿಬಿಎ ಚುನಾವಣೆ ಬಿರುಗಾಳಿ!

New Admin | July 4, 2026 - 2:35 pm
ಬೆಂಗಳೂರು ನಗರ ಇದೀಗ ಆಡಳಿತದ ಕಾರಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಂದ್ರೆ ಜಿಬಿಎ ಆಗಿ ವಿಭಜನೆ ಆಗಿದೆ. ಇದೇ ಸಮಯದಲ್ಲಿ ಕಳೆದ 10 ವರ್ಷಗಳ ಹಿಂದೆ ನಡೆದಿದ್ದ ಸ್ಥಳೀಯ ಪಾಲಿಕೆ ಚುನಾವಣೆ ಮತ್ತೊಮ್ಮೆ ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಸುಪ್ರೀಂ ಕೋರ್ಟ್ ಆಗಸ್ಟ್ 30ರ ಒಳಗಾಗಿ ಜಿಬಿಎ ಚುನಾವಣೆ ನಡೆಸುವಂತೆ ಗಡುವು ನೀಡಿರುವ ಹಿನ್ನೆಲೆ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ 'ಎಸ್ಐಆರ್' (ವಿಶೇಷ ಮತಪಟ್ಟಿ ಪರಿಷ್ಕರಣೆ) ಜಟಾಪಟಿ ತಾರಕಕ್ಕೇರಿದೆ.

ಬಿಬಿಎಂಪಿಯನ್ನು ಪುನರ್ ರಚಿಸಿ ಜಿಬಿಎ ಜಾರಿಗೆ ತಂದಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಈ ಹಿಂದೆ ತಮಿಳುನಾಡು & ಪಶ್ಚಿಮ ಬಂಗಾಳದಲ್ಲಿ, ಎಸ್ಐಆರ್ ಪ್ರಕ್ರಿಯೆ ಪರಿಣಾಮ ಆಡಳಿತ ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿವೆ ಎಂಬ ಚರ್ಚೆ ಜೋರಾಗಿದೆ. ಇದೇ ಹಿನ್ನೆಲೆ ಕರ್ನಾಟಕದಲ್ಲಿ ಆ ಇತಿಹಾಸ ಮರುಕಳಿಸದಂತೆ ತಡೆಯಲು ಕಾಂಗ್ರೆಸ್ ಸರ್ಕಾರ ಎಸ್ಐಆರ್ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.


ಕಲ್ಯಾಣ ಮಂಟಪ & ಮಸೀದಿಗಳಲ್ಲಿ ಅರ್ಜಿ?
ಮತಪಟ್ಟಿ ಪರಿಷ್ಕರಣೆ ಈಗ ತೀವ್ರ ಚರ್ಚೆಗೆ ಗುರಿಯಾಗಿದ್ದು, ಬಿಎಲ್‌ಒಗಳು ಮನೆ ಮನೆಗೆ ತೆರಳುತ್ತಾ ಪರಿಶೀಲಿಸುವ ಬದಲಿಗೆ ರಾಮನಗರ, ಕನಕಪುರ, ಬೆಂಗಳೂರು, ಯಾದಗಿರಿ, ಕುಣಿಗಲ್ ಸೇರಿದಂತೆ ಹಲವೆಡೆ ಕಲ್ಯಾಣ ಮಂಟಪ, ಮಸೀದಿ ಮತ್ತು ಮನೆಗಳಲ್ಲಿ ಜನರನ್ನು ಗುಂಪು ಗುಂಪಾಗಿ ಸೇರಿಸಿ ಗಣತಿ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಮತ್ತೊಮ್ಮೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜಟಾಪಟಿ ದೊಡ್ಡ ಮಟ್ಟದ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿದೆ.

ಕೇಂದ್ರ ಗೃಹ ಸಚಿವರಿಗೆ ದೂರು?
ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ನ ನಾಯಕರು, ಬಾಂಗ್ಲಾ ಪ್ರಜೆಗಳನ್ನ ಅಕ್ರಮವಾಗಿ ಓಟರ್ ಲಿಸ್ಟ್‌ಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆರೋಪವನ್ನು ಮಾಡಿದ್ದಾರೆ. ಈ ಸಂಬಂಧ ಪ್ರತಿಪಕ್ಷಗಳು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಖುದ್ದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ. ಆ ಮೂಲಕ ಕರ್ನಾಟಕದ ವಿಶೇಷ ಮತಪಟ್ಟಿ ಪರಿಷ್ಕರಣೆ ಜಟಾಪಟಿ ಇದೀಗ ಕೇಂದ್ರದ ತನಕ ಮುಟ್ಟುತ್ತಿದೆ.

ಗೆಲ್ಲಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ
ಜಿಬಿಎ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್ ಮುಂದಿದ್ದು, ಒಂದು ವೇಳೆ ಸೋತರೆ ಸರ್ಕಾರಕ್ಕೆ ಭಾರಿ ಮುಖಭಂಗ ಆಗಲಿದೆ. ಇದೇ ಕಾರಣಕ್ಕೆ, ಸರ್ಕಾರ ಎಸ್ಐಆರ್ ಪ್ರಕ್ರಿಯೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂಬುದು ವಿಪಕ್ಷಗಳ ನಾಯಕರ ಆರೋಪ. ಆದರೆ ಕಾಂಗ್ರೆಸ್ ಸರ್ಕಾರ ಸರಿಯಾದ ಕ್ರಮದಲ್ಲಿ, ನ್ಯಾಯಯುತವಾಗಿ ಪ್ರಕ್ರಿಯೆಯನ್ನ ನಡೆಸುತ್ತಿದೆ ಎಂದು. 'ಕೈ' ಪಡೆಯ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಜಿಬಿಎ ಚುನಾವಣೆಗೆ ಮೊದಲೇ ದೊಡ್ದದಾಗಿ ಚರ್ಚೆ ನಡೆಯುತ್ತಿದ್ದು, ತಿಕ್ಕಾಟವು ಕೂಡ ಜೋರಾಗಿದೆ.

ಒಟ್ಟಾರೆ ಜಿಬಿಎ ಚುನಾವಣೆ ಘೋಷಣೆಯಾಗುವ ಮೊದಲೇ ಆರಂಭವಾಗಿರುವ ಈ 'ಮತಪಟ್ಟಿ' ರಾಜಕಾರಣ ಕರ್ನಾಟಕದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಯನ್ನು ಮತ್ತಷ್ಟು ರೋಚಕಗೊಳಿಸಿದೆ. ಇದರ ಜೊತೆಗೆ ಸುಪ್ರೀಂ ಕೋರ್ಟ್ ಹೇಳಿದಂತೆ ಆಗಸ್ಟ್ 30ರ ಒಳಗೆ ಜೆಬಿಎ ಚುನಾವಣೆ ನಡೆಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಬೆಂಗಳೂರು ನಗರದ ನಿವಾಸಿಗಳ ಸಮಸ್ಯೆ ಬಗೆಹರಿಸಲು ಸ್ಥಳೀಯ ಪ್ರತಿನಿಧಿಗಳು ಬೇಕೆ ಬೇಕು ಅನ್ನೋದು ಜನರ ಆಗ್ರಹವಾಗಿದೆ. ಮತ್ತೊಂದು ಕಡೆ ಈಗಾಗಲೇ ಸಾವಿರಾರು ಟಿಕೆಟ್ ಆಕಾಂಕ್ಷಿಗಳು ಜಿಬಿಎ ಚುನಾವಣೆ ಘೋಷಣೆಯಾದರೆ ಸ್ಪರ್ಧೆ ಮಾಡಿ, ಪಾಲಿಕೆಯ ಮೆಟ್ಟಿಲು ಏರಲು ಭರ್ಜರಿಯಾಗಿ ಇದೀಗ ಸಿದ್ಧತೆಯನ್ನ ನಡೆಸುತ್ತಿದ್ದಾರೆ.