ಬೆಂಗಳೂರಿನ ಪಾಲಿಕೆಗೆ ಹಾಗೂ ವಾರ್ಡ್‌ಗಳಿಗೆ ಚುನಾವಣೆ ನಡೆದು ಇನ್ನೇನು 11 ವರ್ಷ ಕಂಪ್ಲೀಟ್ ಆಗುತ್ತಿದೆ. ಅದರಲ್ಲೂ ಈ ಹಿಂದೆ ಅಸ್ತಿತ್ವದಲ್ಲಿ ಇದ್ದ ಬಿಬಿಎಂಪಿ ಚುನಾವಣೆ 2015ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿತ್ತು. ಆ ನಂತರ ಬಿಬಿಎಂಪಿ ಅಧಿಕಾರ ಅವಧಿ 2020ಕ್ಕೆ ಮುಕ್ತಾಯವಾಗಿದೆ. ಹೀಗೆ ಜನಪ್ರತಿನಿಧಿಗಳೇ ಇಲ್ಲದೆ ಬೆಂಗಳೂರು ನಗರದ ಸ್ಥಳೀಯ ಆಡಳಿತ ಬರೋಬ್ಬರಿ 6 ವರ್ಷಗಳಿಂದ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ದೇಶದ ಅತ್ಯುನ್ನತ ಕೋರ್ಟ್ ಮಹತ್ವದ ಆದೇಶ ನೀಡಿ, ಆಗಸ್ಟ್ 31ರ ಒಳಗೆ ಹೊಸದಾಗಿ ರಚಿಸಲಾದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವ್ಯಾಪ್ತಿಯ ವಾರ್ಡ್‌ಗಳಿಗೆ ಎಲೆಕ್ಷನ್ ನಡೆಸಲು ಆದೇಶಿಸಲಾಗಿತ್ತು. ಹಾಗಾದರೆ, ಜಿಬಿಎ ಚುನಾವಣೆ ಬಗ್ಗೆ ಮಹತ್ವದ ಸುದ್ದಿ ಇಲ್ಲಿದೆ ತಿಳಿಯಿರಿ...
ಹೌದು, ಗ್ರೇಟರ್ ಬೆಂಗಳೂರು ಅಥಾರಿಟಿ ಅಂದ್ರೆ ಜಿಬಿಎ ವ್ಯಾಪ್ತಿಯ ಹೊಸ ನಗರ ಪಾಲಿಕೆಗಳ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಬಳಿ ಮನವಿ ಒಂದನ್ನ ಮಾಡಿದೆ. ನಿಗದಿತ ಅವಧಿ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಮನವಿ ಮಾಡಿ ಹೊಸ ಅರ್ಜಿ ಸಲ್ಲಿಕೆ ಮಾಡಿರುವ ರಾಜ್ಯ ಸರ್ಕಾರ, ಹೆಚ್ಚುವರಿ ಸಮಯ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈಗಾಗಲೇ ನಿಗದಿಪಡಿಸಿರುವ ಗಡುವನ್ನ ವಿಸ್ತರಿಸಿ, ಈ ವರ್ಷದ ಡಿಸೆಂಬರ್ 31 ಅಂದ್ರೆ ವರ್ಷಾಂತ್ಯದ ತನಕ ಅವಕಾಶ ನೀಡಬೇಕೆಂದು ಸರ್ಕಾರ ಅಧಿಕೃತ ಅರ್ಜಿ ಸಲ್ಲಿಸಿ ಮನವಿಯ ಮಾಡಿದೆ.
ಚುನಾವಣೆ ಮುಂದೂಡಲು ಮನವಿ ಯಾಕೆ?
ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗಳು ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಹಿನ್ನೆಲೆ ಸುಪ್ರೀಂ ಕೋರ್ಟ್ 20 ಮೇ 2026 ರಂದು ಮಹತ್ವದ ಆದೇಶ ನೀಡಿತ್ತು. ಅದರನ್ವಯ 31 ಆಗಸ್ಟ್ 2026ರ ಒಳಗಾಗಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಡೆಡ್‌ಲೈನ್ ವಿಧಿಸಿತ್ತು. ಆದರೆ ಈ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದು ಕಷ್ಟಕರ ಎಂದು ಸರ್ಕಾರ ಕೋರ್ಟ್ ಮೆಟ್ಟಿಲೇರಿ ಮನವಿ ಮಾಡಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಮುಖವಾಗಿ 3 ಆಡಳಿತಾತ್ಮಕ & ತಾಂತ್ರಿಕ ಸವಾಲುಗಳನ್ನು ಉಲ್ಲೇಖಿಸಿದೆ. ಈ ಬಗ್ಗೆ ವಿವರ ಮುಂದೆ ಇದೆ ತಿಳಿಯೋಣ ಬನ್ನಿ.
ಮೂಂದೂಡಿಕೆ ಆಗುತ್ತಾ ಎಲೆಕ್ಷನ್ ಡೆಡ್‌ಲೈನ್?
ಪ್ರಸ್ತುತ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವು ಪ್ರಗತಿಯಲ್ಲಿದೆ. ಇದು ಚುನಾವಣೆಗೆ ಮುನ್ನ ಅತ್ಯಂತ ನಿಖರವಾಗಿ ನಡೆಯಬೇಕಾದ ಪ್ರಕ್ರಿಯೆ ಆಗಿದ್ದರಿಂದ ಹೆಚ್ಚಿನ ಸಮಯದ ಅಗತ್ಯತೆ ಇದೆ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ 5 ನಗರ ಪಾಲಿಕೆಗಳಲ್ಲಿ ವಾರ್ಡ್ ವಿಂಗಡಣೆ, ಮೀಸಲಾತಿ ಹಾಗೂ ಚುನಾವಣಾ ಸಿಬ್ಬಂದಿ ನಿಯೋಜನೆಗೆ ಸಂಬಂಧಿಸಿದ ವ್ಯವಸ್ಥಾಪನಾ ಸವಾಲುಗಳು ಚುನಾವಣಾ ಸಿದ್ಧತೆಗಳ ಮೇಲೆ ನೇರ ಪರಿಣಾಮ ಬೀರುತ್ತಿವೆ. ಸಿಬ್ಬಂದಿ ಕೊರತೆ ಹಾಗೂ ಇತರೆ ತಾಂತ್ರಿಕ ಪ್ರಕ್ರಿಯೆಗಳು ಬಾಕಿ ಇರುವ ಕಾರಣಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ಅಂತ್ಯಕ್ಕೆ ಚುನಾವಣೆ ನಡೆಸುವುದು ತಾಂತ್ರಿಕವಾಗಿ ಕಷ್ಟಕರ ಎಂದು ಈಗ ರಾಜ್ಯ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು, ಇದೀಗ ಚುನಾವಣೆ ನಡೆಸಲು ನೀಡಿದ್ದ ಗಡುವು ಮುಂದೂಡಿ 2026 ಡಿಸೆಂಬರ್ 31ರ ತನಕ ಸಮಯ ನೀಡಲು ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ. ರಾಜ್ಯ ಸರ್ಕಾರದ ಈ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ರಾಜಕೀಯ ಕ್ಷೇತ್ರದ ಗಮನ ನೆಟ್ಟಿದೆ. ಸುಪ್ರೀಂ ಕೋರ್ಟ್ ಈಗ ಮತ್ತೊಮ್ಮೆ ಕಾಲಾವಕಾಶ ನೀಡುತ್ತಾ? ಅಥವಾ ಈಗಾಗಲೇ ನಿಗದಿಪಡಿಸಿರುವ ಆಗಸ್ಟ್ 31ರ ಗಡುವನ್ನೇ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.