ಬೆಂಗಳೂರು ಜನರಿಗೆ ದೊಡ್ಡ ಟೆನ್ಷನ್ ಎದುರಾಗಿತ್ತು, ಸ್ಥಳೀಯ ಜನಪ್ರತಿನಿಧಿಗಳು ಇಲ್ಲದೆ ಕೆಲಸಗಳು ಆಗುತ್ತಾ ಇಲ್ಲ ಎಂಬ ಚಿಂತೆ ಕಳೆದ 6 ವರ್ಷಗಳಿಂದ ನಿರಂತರವಾಗಿ ಕಾಡುತ್ತಲೇ ಇದೆ. ಯಾಕಂದ್ರೆ ಈ ಹಿಂದೆ ಬಿಬಿಎಂಪಿ ಆಗಿದ್ದ ಬೆಂಗಳೂರು ಸ್ಥಳೀಯ ಆಡಳಿತ ಮಹಾನಗರ ಪಾಲಿಕೆಯ ಅಧಿಕಾರ ಅವಧಿ ಮುಗಿದು 6 ವರ್ಷಗಳೇ ಈಗ ಕಳೆದು ಹೋಗಿದೆ. ಹೀಗಿದ್ದರೂ ಜಿಬಿಎ ಆಗಿ ಬದಲಾಗಿರುವ ಬೆಂಗಳೂರು ಸ್ಥಳೀಯ ಆಡಳಿತಕ್ಕೆ ಇನ್ನೂ ಎಲೆಕ್ಷನ್ ನಡೆದಿಲ್ಲ. ಹೀಗಿದ್ದಾಗ ಸರ್ಕಾರ ಕೂಡ ಚುನಾವಣೆ ವಿಚಾರವಾಗಿ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿ, ನಮಗೆ ಇನ್ನಷ್ಟು ಸಮಯ ನೀಡಿ ಎಂದಿತ್ತು. ಇದೀಗ ಜಿಬಿಎ ಚುನಾವಣೆಗೆ ಡೇಟ್ ಫೈನಲ್ ಆಗಿದ್ದು, 5 ತಿಂಗಳು ಸಮಯ ನೀಡಿದೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್.
ಅಂದಹಾಗೆ ಜಿಬಿಎ ಅರ್ಥಾತ್ ಗ್ರೇಟರ್ ಬೆಂಗಳೂರು ಆಗಿ ಬದಲಾಗಿರುವ ನಮ್ಮ ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳ ಚುನಾವಣೆಯ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಇದೀಗ ನೀಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಡಿಸೆಂಬರ್ ಮುಗಿಯುವ ಒಳಗಾಗಿ ನಡೆಸುವಂತೆ ಸೂಚಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣೆಯ ವೇಳಾಪಟ್ಟಿ ಮುಂದೂಡುವುದು ಸೂಕ್ತ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಈ ಬೆಳವಣಿಗೆ ಇಡೀ ದೇಶದ ಗಮನ ಸೆಳೆದಿದ್ದು, ಅಂತೂ 2026ರ ಒಳಗಾಗಿ ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಷನ್ ನಡೆಯುವುದು ಇದೀಗ ಪಕ್ಕಾ ಆಗಿದೆ.
2026 ಡಿಸೆಂಬರ್ ಒಳಗಾಗಿ ಎಲೆಕ್ಷನ್ ಪಕ್ಕಾ
ಬೆಂಗಳೂರು ಇಡೀ ಜಗತ್ತಿನಲ್ಲಿ ಹೆಸರು ಮಾಡಿರುವ ನಗರವಾಗಿದ್ದು, ಈ ಮಹಾನಗರದ ಸ್ಥಳೀಯ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರ. ಹೀಗಿದ್ದಾಗ ವಿವಿಧ ರಾಜಕೀಯ ಲೆಕ್ಕಾಚಾರಗಳು ಹಾಗೂ ಆಡಳಿತಾತ್ಮಕ ಸಿದ್ಧತೆಗಳ ನಡುವೆ ತಕ್ಷಣಕ್ಕೆ ಚುನಾವಣೆ ಎದುರಿಸಬೇಕಾಗಿಲ್ಲ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಟ್ಟುಸಿರು ಬಿಟ್ಟಿದೆ. ಸದ್ಯ ಚುನಾವಣಾ ಜವಾಬ್ದಾರಿಯಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿರುವುದು ಆಡಳಿತ ಪಕ್ಷಕ್ಕೆ ಸಮಾಧಾನ ತಂದಿದೆ. ಹಾಗೇ ಮತ್ತೊಂದು ಕಡೆ ಜಿಬಿಎ ಚುನಾವಣೆಗೆ ಸ್ಪರ್ಧೆ ಮಾಡಲು ಇಚ್ಛಿಸಿದ್ದ ಸಾವಿರಾರು ಆಕಾಂಕ್ಷಿಗಳಿಗೆ ಇನ್ನೂ ಸ್ವಲ್ಪ ಸಮಯ ಸಿಕ್ಕಂತೆ ಆಗಿದೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಎಸ್‌ಐಆರ್ ಮುಗಿದ ತಕ್ಷಣ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ 5 ಪಾಲಿಕೆಗಳಿಗೆ 2026 ಡಿಸೆಂಬರ್ ಒಳಗಾಗಿ ಎಲೆಕ್ಷನ್ ನಡೆಯುವುದು ಇದೀಗ ಪಕ್ಕಾ ಆಗಿದೆ.