ಡೊನಾಲ್ಡ್ ಟ್ರಂಪ್ ಸಹವಾಸ ಬೇಡ ಅಂತಿದ್ದಾರೆ ಶೇಕಡಾ 76ರಷ್ಟು ಜನ! Donald Trump

New Admin | June 25, 2026 - 11:29 am

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನಾದರೂ ಒಂದು ಕಿರಿಕ್ ಮಾಡಿಕೊಂಡು ಪದೇ ಪದೇ ಸದ್ದು ಮಾಡುತ್ತಲೇ ಇದ್ದಾರೆ. ಅದರಲ್ಲೂ ಇರಾನ್ ವಿರುದ್ಧ ದಿಢೀರ್ ಯುದ್ಧ ಸಾರಿ, ಆ ನಂತರ ಸ್ವತಃ ಅಮೆರಿಕದಲ್ಲೇ ದೊಡ್ಡ ಮಟ್ಟದಲ್ಲಿ ವಿರೋಧ ಎದುರಿಸಿದ ನಂತರ ಡೊನಾಲ್ಡ್ ಟ್ರಂಪ್ ಸ್ವಲ್ಪ ತಣ್ಣಗಾಗಿದ್ದಾರೆ. ಇಂತಹ ಸಮಯದಲ್ಲೇ ಇರಾನ್ ಜೊತೆಗೆ ಶಾಂತಿ ಮಾತುಕತೆ ಮಾಡಿಕೊಂಡು ಪರಿಸ್ಥಿತಿ ತಣ್ಣಗಾಗಿಸುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ. ಹೀಗೆ ಭಾರಿ ಮಹತ್ವದ ಸಮಯದಲ್ಲೇ ದಿಢೀರ್ ಡೊನಾಲ್ಡ್ ಟ್ರಂಪ್ ಸಹವಾಸ ಬೇಡ ಅಂತಿದ್ದಾರೆ ಶೇಕಡಾ 76ರಷ್ಟು ಜನ!

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಯಕತ್ವದ ಮೇಲಿನ ಜಾಗತಿಕ ವಿಶ್ವಾಸ ಭಾರಿ ದೊಡ್ಡ ಪ್ರಮಾಣದಲ್ಲಿ ಇದೀಗ ಕುಸಿತ ಕಂಡಿದೆಯಂತೆ. ಈ ಬಗ್ಗೆ ಜಗತ್ತಿನ ಶೇಕಡಾ 76 ರಷ್ಟು ಜನ, ಟ್ರಂಪ್ ಅವರ ಮೇಲೆ ಯಾವುದೇ ವಿಶ್ವಾಸ ಹೊಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಇದೀಗ ಪ್ಯೂ ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದ ಹೊಸ ಸಮೀಕ್ಷೆ ಮೂಲಕ ಬಯಲಾಗಿದೆ.


ಸಮೀಕ್ಷೆ ಪ್ರಕಾರ ವಿಶ್ವ ವ್ಯವಹಾರ ಸಮರ್ಥವಾಗಿ ನಿಭಾಯಿಸುವ ಟ್ರಂಪ್ ಅವರ ಸಾಮರ್ಥ್ಯದ ಮೇಲೆ ಈಗ ಕೇವಲ ಶೇಕಡಾ 23 ರಷ್ಟು ಜನ ಮಾತ್ರ ವಿಶ್ವಾಸ ಹೊಂದಿದ್ದಾರಂತೆ. ಫೆಬ್ರವರಿ 8ರಿಂದ ಮೇ 13, 2026ರ ತನಕ ನಡೆಸಿದ್ದ ಈ ಸಮೀಕ್ಷೆಯಲ್ಲಿ 36 ದೇಶಗಳ 42,151 ಜನರು ಭಾಗವಹಿಸಿದ್ದರು. ಇರಾನ್ ಮತ್ತು ಅಮೆರಿಕ ನಡುವೆ ಕೆಲವು ತಿಂಗಳ ಹಿಂದಷ್ಟೇ ಯುದ್ಧ ಆರಂಭವಾಗಿ, ನಂತರ ಇದೀಗ ಯುದ್ಧ ನಿಂತು ಶಾಂತಿ ಮೂಡಿದೆ. ಇಂತಹ ಸಮಯದಲ್ಲೇ ಟ್ರಂಪ್ ಅವರ ಮೇಲಿನ ವಿಶ್ವಾಸ ಕಡಿಮೆ ಆಗಿದೆ ಎಂಬ ವರದಿಯನ್ನು ಹೊಸ ಸಮೀಕ್ಷೆ ಹೊರಹಾಕಿದೆ.

ಭಾರತದಲ್ಲೂ ಟ್ರಂಪ್ ಫುಲ್ ಡಲ್!

ಭಾರತದಲ್ಲಿ ಶೇಕಡಾ 39 ರಷ್ಟು ಮಂದಿ ಟ್ರಂಪ್ ಅವರ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದರೆ, ಶೇಕಡಾ 36 ರಷ್ಟು ಮಂದಿ ಯಾವುದೇ ವಿಶ್ವಾಸ ಇಲ್ಲವೆಂದು ಹೇಳಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಟ್ರಂಪ್ ಪರ ವಿಶ್ವಾಸ ಹೊಂದಿದ್ದವರ ಪ್ರಮಾಣ ಶೇಕಡಾ 51 ಆಗಿತ್ತು. ಇದೇ ವೇಳೆ, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಭಾರತೀಯರಲ್ಲಿ ಶೇಕಡಾ 51 ರಷ್ಟು ಮಂದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಜಾಗತಿಕ ವ್ಯವಹಾರ ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ನಲ್ಲಿ ಟ್ರಂಪ್‌ಗೆ ಭಾರಿ ಬೆಂಬಲ

ಭಾರತ ಸೇರಿದಂತೆ ಜಗತ್ತಿನ ಇತರ ದೇಶಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಹವಾ ಕಡಿಮೆ ಆಗಿದ್ದರೂ, ಇಸ್ರೇಲ್‌ನಲ್ಲಿ ಮಾತ್ರ ಇದು ಉಲ್ಟಾ ಆಗಿದೆ. ಅಂದಹಾಗೆ ಇಸ್ರೇಲ್‌ನಲ್ಲಿ ಶೇಕಡಾ 81 ರಷ್ಟು ಜನ ಅಮೆರಿಕ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊಂದಿದ್ದು, ಶೇಕಡಾ 66 ರಷ್ಟು ಮಂದಿ ಜಾಗತಿಕ ವ್ಯವಹಾರಗಳಲ್ಲಿ ಟ್ರಂಪ್ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗೆ ಒಳಪಟ್ಟ 36 ದೇಶಗಳಲ್ಲಿ ಸರಾಸರಿ ಶೇಕಡಾ 32 ರಷ್ಟು ಮಂದಿ, ಅಮೆರಿಕ ತನ್ನ ವಿದೇಶಾಂಗ ನೀತಿಯಲ್ಲಿ ತಮ್ಮ ದೇಶಗಳ ಹಿತಾಸಕ್ತಿಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ನಲ್ಲಿ ಈ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು, ದಿನದಿಂದ ದಿನಕ್ಕೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಈ ಸಮೀಕ್ಷೆಯ ಮೂಲಕ ಕೇಳಿಬಂದಿದೆ. ಮುಂಬರುವ ದಿನಗಳಲ್ಲಿ ಇದನ್ನು ಸರಿ ಮಾಡಿಕೊಳ್ಳಲು ಟ್ರಂಪ್ ಯಾವ ರೀತಿಯ ಕ್ರಮವನ್ನ ಕೈಗೊಳ್ಳುತ್ತಾರೆ? ಎಂಬುದನ್ನ ಕಾದು ನೋಡಬೇಕಿದೆ.