ಚಿನ್ನ ಅಂದ್ರೆ ಸಾಕು ಮನುಷ್ಯರು ಬಾಯಿ ಬಾಯಿ ಬಿಡ್ತಾರೆ ಅನ್ನೋ ಮಾತು ಇದೆ, ಅದರಲ್ಲೂ ಚಿನ್ನದ ರೇಟ್ ಜಾಸ್ತಿ ಆದ ನಂತರ ಚಿನ್ನ ಕಳ್ಳತನ ಮಾಡುವುದು ಜಾಸ್ತಿ ಆಗ್ತಾನೆ ಇದೆ ಬಿಡಿ. ಕೆಲವು ದಿನಗಳ ಹಿಂದಷ್ಟೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾ & ವಜ್ರ ಆಭರಣ ಕದ್ದ ಖದೀಮರ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು. ಆದರೆ ಮುನಷ್ಯರ ಕಥೆ ಬಿಡಿ, ಇದೀಗ ಪ್ರಾಣಿಗಳು ಕೂಡ ಚಿನ್ನದ ಮೇಲೆ ಕಣ್ಣು ಹಾಕಿ ಕಳ್ಳತನ ಮಾಡಲು ಶುರು ಮಾಡಿವೆ. ಅದರಲ್ಲೂ, ಬಿಡು ಹೋಗಲಿ ಸಣ್ಣ ಇಲಿ ಅಂತಾ ನೀವು ಡೋಂಟ್ ಕೇರ್ ಮೂಡ್‌ನಲ್ಲಿ ಸುಮ್ಮನೆ ಬಿಟ್ಟರೆ ಅದೇ ಇಲಿ ನಿಮ್ಮ ಮನೆಯ ಚಿನ್ನ ಕದಿಯಬಹುದು ಹುಷಾರ್!
ಹೌದು, ನಾವು ಇಲ್ಲಿ ಹೇಳಲು ಹೊರಟಿರುವುದು ಚಿನ್ನ ಕಳ್ಳ ಇಲಿಯ ಬಗ್ಗೆ. ಅಂದಹಾಗೆ ಕಲ್ಪತರು ನಾಡು ಎಂದೇ ಹೆಸರು ಮಾಡಿರುವ ಅತಿಹೆಚ್ಚು ತೆಂಗು ಬೆಳೆಯುವ ಜಿಲ್ಲೆ ತುಮಕೂರಿನಲ್ಲಿ ವಿಚಿತ್ರವಾದ ಚಿನ್ನ ಕಳ್ಳತನ ಕೇಸ್ ಒಂದು ಇಡೀ ಜಗತ್ತಿನ ಗಮನ ಸೆಳೆದಿದೆ. ಇಷ್ಟುದಿನ ಮನುಷ್ಯರು ಮಾತ್ರ ಚಿನ್ನ ಕಳ್ಳತನ ಮಾಡುತ್ತಾರೆ, ಆ ಮೂಲಕ ಚಿನ್ನದ ಬೆಲೆ ಹೆಚ್ಚಾದಂತೆ ಮನುಷ್ಯರ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪಗಳಿಗೆ ಪ್ರಾಣಿಗಳ ಸೇರ್ಪಡೆ ಕೂಡ ಆಗಿದೆ. ಆಭರಣ ಅರ್ಥಾತ್ ಚಿನ್ನದ ಅಂಗಡಿಯಲ್ಲಿ ಮಾಯವಾಗಿದ್ದ ಚಿನ್ನ ಹುಡುಕುತ್ತಾ ಹೋದ ಮಾಲೀಕರಿಗೆ ಇಲಿ ಒಂದರ ಬಿಲದಲ್ಲೇ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ!
ಚಿನ್ನ ಕಳ್ಳ ಇಲಿಯ ಕಥೆ!
ಇಲಿ ಚಿನ್ನ ಕದ್ದ ಕಥೆ ಇದು, ತುಮಕೂರಿನ ಪ್ರತಿಷ್ಠಿತ ಆಭರಣ ಮಳಿಗೆ ಒಂದರಲ್ಲಿ ಈ ರೀತಿಯ ವಿಚಿತ್ರವಾದ ಘಟನೆ ನಡೆದಿದೆ. ಚಿನ್ನದ ಅಂಗಡಿಯಲ್ಲಿ ಬಂಗಾರ ನಾಪತ್ತೆಯಾದ ಸಮಯದಲ್ಲಿ ಇದು ಮನುಷ್ಯರಿಂದಲೇ ಆದ ಕಳ್ಳತನ ಎಂದು ಆರಂಭದಲ್ಲಿ ಭಾವಿಸಿದ್ದ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕೇ ಬಿಟ್ಟಿದೆ. ತುಮಕೂರು ನಗರದ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಪ್ರತಿದಿನದಂತೆ ಬೆಳಗ್ಗೆ ಸಿಬ್ಬಂದಿ ಅಂಗಡಿಯ ಬಾಗಿಲು ತೆರೆದಿದ್ದರು. ಆದರೆ ಅಂಗಡಿ ತೆಗೆದಾಗ ಮಾಲೀಕನ ಹೃದಯದ ಬಡಿತ ಏರುಪೇರಾಗಿದೆ, ಅಯ್ಯೋ ನನ್ನ ಬಂಗಾರ ಎಲ್ಲೋಯ್ತು? ನನ್ನ ಚಿನ್ನ ಎಲ್ಲೋಯ್ತು? ಅಂತಾ ಒದ್ದಾಡಿ ಬಿಟ್ಟಿದ್ದಾನೆ ಆ ಚಿನ್ನದ ಅಂಗಡಿ ಓನರ್.
ಹೀಗೆ ತುಮಕೂರಿನ ಚಿನ್ನದ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಚಿನ್ನ ಮಿಶ್ರಿತವಾದ ದುಬಾರಿ ವಜ್ರಾಭರಣ ಕಾಣೆಯಾಗಿಬಿಟ್ಟಿವೆ. ಇದನ್ನು ಗಮನಿಸಿದ ತಕ್ಷಣ, ಒದ್ದಾಡಿದ್ದಾನೆ ಚಿನ್ನದ ಅಂಗಡಿ ಮಾಲೀಕ. ಈ ಮೂಲಕ ಸುಮಾರು 50 ಗ್ರಾಂ ತೂಕದ ಚಿನ್ನ & ವಜ್ರಾಭರಣಗಳು, ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಒಡವೆಗಳು ನಾಪತ್ತೆ ಆಗಿರುವುದು ಗೊತ್ತಾಗಿ ಹೃದಯವೇ ಹೊಡೆದು ಹೋದಂತೆ ಆಗಿದೆ ಚಿನ್ನದ ಅಂಗಡಿ ಮಾಲೀಕನಿಗೆ. ಒಳಗೆ ಚಿನ್ನ ನಾಪತ್ತೆ ಆಗಿದ್ದರೂ, ಆ ಚಿನ್ನದ ಅಂಗಡಿಯ ಶಟರ್, ಬಾಗಿಲು & ಲಾಕರ್‌ಗಳು ಮಾತ್ರ ಇದ್ದ ಹಾಗೇ ಇದ್ದವು. ಇಲ್ಲಿ ಹೊರಗಿನಿಂದ ಮನುಷ್ಯರು ಅಂಗಡಿ ಒಳಗಡೆ ಬಂದಿದ್ದ ಯಾವುದೇ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ, ಹೀಗಿದ್ದರೂ ಚಿನ್ನಾಭರಣ ಹೋಗಿದ್ದು ಎಲ್ಲಿಗೆ? ಎಂಬ ಪ್ರಶ್ನೆ ಹಾಕಿಕೊಂಡು ಹುಡುಕಾಟ ಆರಂಭ ಆಗಿತ್ತು ನೋಡಿ...
ಇಲಿ ಬಿಲದಲ್ಲಿ 10,00,000 ರೂಪಾಯಿ ಚಿನ್ನ!
ಚಿನ್ನದ ಅಂಗಡಿಗೆ ಹೊರಗಿನಿಂದ ಯಾರೂ ಬಂದಿಲ್ಲ ಎಂಬುದು ಗೊತ್ತಾದ ತಕ್ಷಣವೇ, ಆ ಅಂಗಡಿಯ ಸಿಸಿ ಕ್ಯಾಮೆರಾ ಸೂಕ್ಷ್ಮವಾಗಿ ಚೆಕ್ ಮಾಡಲಾಗಿದೆ. ಹೀಗೆ, ಪರಿಶೀಲನೆ ಮಾಡಿದಾಗಿ ಇಲಿಯೊಂದು ನಿಧಾನವಾಗಿ ಚಿನ್ನ & ವಜ್ರಾಭರಣ ಇದ್ದ ಷೋ ಕೇಸ್ ಬಳಿ ತೆರಳುತ್ತಿರುವುದು ಗೊತ್ತಾಗಿದೆ. ಆ ನಂತರ ಅದೇ ಇಲಿಯು ತಾನೇ ತೋಡಿದ್ದ ಬಿಲದ ಒಳಗೆ ಒಂದೊಂದಾಗಿ ಬರೋಬ್ಬರಿ 10 ಉಂಗುರಗಳು & ಮೂರು ಚಿನ್ನದ ಸರಗಳನ್ನು ಸಾಗಿಸಿರುವುದು ಗೊತ್ತಾಗಿದೆ. ಕೂಡಲೇ ಆ ಇಲಿಯ ಬಿಲ ಹುಡುಕಿ ಅಗೆದು ನೋಡಿದಾಗ ಅಲ್ಲೇ ಬರೋಬ್ಬರಿ 10,00,000 ರೂಪಾಯಿ ಚಿನ್ನಾಭರಣ ಪತ್ತೆಯಾಗಿದೆ. ಈ ಮೂಲಕ ಚಿನ್ನ ಕಳ್ಳ ಇಲಿಯ ಕಥೆ ಈಗ ಇಡೀ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ.