Gruha Jyothi Scheme: ಬಾಡಿಗೆದಾರರಿಗೆ ಗೃಹ ಜ್ಯೋತಿ ಟೆನ್ಷನ್, ಕುಟುಂಬಗಳಿಗೆ ಅದೊಂದೇ ಆತಂಕ...

bengaluru diaries | July 6, 2026 - 10:50 am

ಗೃಹ ಜ್ಯೋತಿ ಯೋಜನೆ ಕೋಟ್ಯಂತರ ಮನೆಗಳಿಗೆ ಈಗ ಉಚಿತವಾಗಿ ಬೆಳಕು ನೀಡುತ್ತಿದ್ದು, ಇದರಿಂದ ಹಳ್ಳಿಗಳಲ್ಲಿ ಭಾರಿ ದೊಡ್ಡ ಕ್ರಾಂತಿ ಉಂಟಾಗಿದೆ. ಕರ್ನಾಟಕ ರಾಜ್ಯ ಈ ಮೂಲಕ ಇಡೀ ದೇಶದಲ್ಲಿ ಮಾದರಿ ರಾಜ್ಯವಾಗಿದ್ದು, ಕರ್ನಾಟಕ ರಾಜ್ಯದ ಗೃಹ ಜ್ಯೋತಿ ಯೋಜನೆಯನ್ನು ಹಲವು ರಾಜ್ಯಗಳಲ್ಲಿ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. 2023 ವಿಧಾನಸಭೆ ಚುನಾವಣೆ ಗೆದ್ದ ನಂತರ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, 5 ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡ ಒಂದಾಗಿತ್ತು. ಇಂತಹ ಸಮಯಕ್ಕೆ ಸರಿಯಾಗಿ ಗೃಹ ಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಆಗಿದ್ದು, ರಾಜ್ಯದ ಜನರು ಈ ಸುದ್ದಿಯನ್ನ ತಪ್ಪದೇ ಓದಿ.

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯನ್ನ ಪರಿಶೀಲಿಸುವ ಕಾರ್ಯಕ್ಕೆ ಇಂಧನ ಇಲಾಖೆ ವೇಗ ನೀಡಿದೆ. ಪರಿಶೀಲನೆ ಆರಂಭವಾದ ನಂತರ, ಹಲವು ಕುಟುಂಬಗಳು ಹೊಸ ಆಡಳಿತಾತ್ಮಕ ಸಮಸ್ಯೆ ಎದುರಿಸುತ್ತಿದ್ದು, ವಿಶೇಷವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹಾಗೂ ಕುಟುಂಬದ ಹೆಸರಿನ ಬದಲಾವಣೆ ಮಾಡಿಸದವರು ಗೊಂದಲದಲ್ಲಿದ್ದಾರೆ. ಗೃಹ ಜ್ಯೋತಿ ಯೋಜನೆ ಲಾಭವನ್ನ ಪಡೆಯಲು, ವಿದ್ಯುತ್ ಸಂಪರ್ಕದ ಆರ್‌.ಆರ್. ಸಂಖ್ಯೆ & ಆಧಾರ್ ವಿವರಗಳು ಸರಿಯಾಗಿ ಹೊಂದಿಕೆ ಆಗಿರುವುದು ಕಡ್ಡಾಯವಾಗಿದೆ. ಆದ್ರೆ ಈಗ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಮನೆಗೆ ಸ್ಥಳಾಂತರವಾಗುವ ಸಂದರ್ಭದಲ್ಲಿ ಅನೇಕರು ಹಿಂದಿನ ಮನೆಯ ನೋಂದಣಿಯನ್ನ ರದ್ದು ಮಾಡದೇ ಬಿಡುತ್ತಿರುವುದು ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.


ಹೊಸ ನಿಯಮ ಹೇಳುವುದು ಏನು?

ಗೃಹ ಜ್ಯೋತಿ ಯೋಜನೆ ವಿಚಾರದಲ್ಲಿ ಇಂಧನ ಇಲಾಖೆ ನಿಯಮಗಳ ಪ್ರಕಾರ, ಈಗಾಗಲೇ ಒಂದು ಆರ್‌.ಆರ್. ಸಂಖ್ಯೆಗೆ ನೋಂದಾಯಿಸಿರುವ ಫಲಾನುಭವಿಯ ವಿವರ ತೆಗೆದು ಹಾಕದಿದ್ದರೆ ಅದೇ ಸಂಪರ್ಕ ಸಂಖ್ಯೆಗೆ ಮತ್ತೊಬ್ಬರು ಹೊಸದಾಗಿ ಗೃಹ ಜ್ಯೋತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದರಿಂದ, ಹೊಸ ಬಾಡಿಗೆದಾರರು ಸೇವಾ ಸಿಂಧು ಪೋರ್ಟಲ್‌ ಮೂಲಕ ತಮ್ಮ ಆಧಾರ್ ಸಂಖ್ಯೆಯ ಜೋಡಿಸಲು ಸಾಧ್ಯವಾಗದೇ ಉಚಿತ ವಿದ್ಯುತ್ ಯೋಜನೆ ಲಾಭದಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ. ಹಿಂದಿನ ನಿವಾಸಿಗಳ ಮಾಹಿತಿಯನ್ನ ತೆಗೆದು ಹಾಕುವ ಪ್ರಕ್ರಿಯೆ ಸುಲಭವಾಗಿಲ್ಲ ಎಂಬುದು ಸಾರ್ವಜನಿಕರ ಪ್ರಮುಖ ಅಸಮಾಧಾನವಾಗಿದೆ.

ಇಷ್ಟೇ ಅಲ್ಲದೆ ಇನ್ನೊಂದು ಕಡೆ ಮನೆಯ ವಿದ್ಯುತ್ ಸಂಪರ್ಕ ಕುಟುಂಬದ ಹಿರಿಯ ಸದಸ್ಯರ ಹೆಸರಿನಲ್ಲಿ ಇದ್ದು, ಅವರು ನಿಧನರಾದ ಸಂದರ್ಭದಲ್ಲೂ ಸಮಸ್ಯೆ ಎದುರಾಗುತ್ತಿವೆ. ಅಂತಹ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನ ಕಾನೂನು ಬದ್ಧ ವಾರಸುದಾರರ ಹೆಸರಿಗೆ ವರ್ಗಾಯಿಸುವುದು ಅಗತ್ಯ. ಆದರೆ ಈ ಪ್ರಕ್ರಿಯೆಯ ಬಗ್ಗೆ ಬಹುತೇಕ ಜನರಿಗೆ ಸ್ಪಷ್ಟವಾದ ಮಾಹಿತಿ ಇಲ್ಲದಿರುವುದರಿಂದ, ಹಲವು ಬಾರಿ ಬೆಸ್ಕಾಂ & ಹೆಸ್ಕಾಂ ಸೇರಿ ವಿದ್ಯುತ್ ಸರಬರಾಜು ಸಂಸ್ಥೆಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಡಿ-ಲಿಂಕ್ ವ್ಯವಸ್ಥೆ ಕಲ್ಪಿಸಲು ಒತ್ತಾಯ

ಮತ್ತೊಂದು ಕಡೆ ಕರ್ನಾಟಕದ ಇಂಧನ ಇಲಾಖೆ ಅಧಿಕಾರಿಗಳು ಇದೀಗ ನಡೆಸುತ್ತಿರುವ ಮನೆ-ಮನೆ ಪರಿಶೀಲನೆಯ ವೇಳೆ ದಾಖಲೆಗಳು, ಫಲಾನುಭವಿಯ ವಿವರಗಳು ಹಾಗೂ ಅರ್ಹತೆ ಪರಿಶೀಲಿಸಲಾಗುತ್ತಿದೆ. ಹಾಗೂ ಅಗತ್ಯ ದಾಖಲೆ ಸಲ್ಲಿಸಲು ವಿಫಲವಾದರೆ ಅಥವಾ ನಿಯಮಕ್ಕೆ ಹೊಂದಿಕೆಯಾಗದ ಮಾಹಿತಿ ಕಂಡುಬಂದರೆ, ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತವಾಗುವ ಸಾಧ್ಯತೆ ಇದೆ ಎಂಬ ಆತಂಕವೂ ಫಲಾನುಭವಿಗಳಲ್ಲಿ ಹೆಚ್ಚಾಗಿದೆ. ಈ ಎಲ್ಲಾ ಕಾರಣಕ್ಕೆ ಈಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹಳೆಯ ಫಲಾನುಭವಿ ಮಾಹಿತಿಯನ್ನು ಆನ್‌ಲೈನ್ ಮೂಲಕ ಡಿ-ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಬೇಕು & ಬಾಡಿಗೆದಾರರ ನೋಂದಣಿ ಪ್ರಕ್ರಿಯೆ ಸರಳಗೊಳಿಸಬೇಕು ಎಂಬ ಬೇಡಿಕೆ ಜನರದ್ದು. ಇದರ ಜೊತೆ ಹೆಸರು ವರ್ಗಾವಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.