HD Devegowda: ದೇವೇಗೌಡರ ಪ್ರೀತಿಯ ಗೌಡತಿಯ ಹೆಜ್ಜೆ ಗುರುತುಗಳು, ಚೆನ್ನಮ್ಮರಿಗೆ ಎಷ್ಟು ಮಕ್ಕಳು? ಮೊಮ್ಮಕ್ಕಳೆಷ್ಟು?

bengaluru diaries | July 20, 2026 - 6:25 pm
ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜಕೀಯ ಸಾಧನೆಗಳ ಹಿಂದೆ ಗಟ್ಟಿಯಾಗಿ ನಿಂತಿದ್ದ ಅಪ್ರತಿಮ ಶಕ್ತಿ, ಎಚ್‌ಡಿಡಿ ಅವರ ಪತ್ನಿ ಚೆನ್ನಮ್ಮ ಅವರು ವಿಧಿವಶರಾಗಿದ್ದಾರೆ. ಇದರೊಂದಿಗೆ ಇಡೀ ದೊಡ್ಡಗೌಡರ ಕುಟುಂಬದ ಪ್ರೀತಿಯ ಆಧಾರಸ್ತಂಭವಾಗಿದ್ದ, ಸಂಸಾರದ ದಾರಿ ದೀಪವಾಗಿದ್ದ ಜ್ಯೋತಿ ಆರಿ ಹೋಗಿದೆ. ರಾಜಕಾರಣ ಬಿರುಗಾಳಿಗಳ ನಡುವೆಯೂ ತುಂಬು ಕುಟುಂಬವನ್ನ ಶಿಸ್ತು, ಸಂಸ್ಕಾರದಿಂದ ಮುನ್ನಡೆಸಿದ ಚೆನ್ನಮ್ಮ ಅವರ ಜೀವನದ ಹಾದಿ ಈಗಿನ ಆಧುನಿಕ ಜಗತ್ತಿಗೆ ಮಾದರಿಯಾಗಿದೆ. ಇಡೀ ಕನ್ನಡ ನಾಡು ಹಾಗೂ ದೇಶವೇ ಚೆನ್ನಮ್ಮ ಅವರ ಅಗಲಿಕೆಗೆ ಸಂತಾಪ ಸೂಚಿಸಿದೆ.

ಅದು 1954ರ ಕಾಲಘಟ್ಟ, ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಹರದನಹಳ್ಳಿಯ ಯುವ ಇಂಜಿನಿಯರ್ ದೊಡ್ಡೇಗೌಡರ ಮಗ ಎಚ್.ಡಿ. ದೇವೇಗೌಡರ ಕೈಹಿಡಿದು ಸಪ್ತಪದಿ ತುಳಿದಿದ್ದರು. ತಾವು ಕಾಲಿಡುತ್ತಿರುವುದು ಕೇವಲ ಒಂದು ತುಂಬು ಸಂಸಾರಕ್ಕೆ ಮಾತ್ರವಲ್ಲ, ಬದಲಾಗಿ ನಮ್ಮ ದೇಶದ ರಾಜಕೀಯದ ಬಹುದೊಡ್ಡ ಇತಿಹಾಸಕ್ಕೆ ಎನ್ನುವ ಸಂಗತಿ ಅಂದು ಚೆನ್ನಮ್ಮ ಅವರಿಗೆ ತಿಳಿದಿರಲಿಲ್ಲ. ಇನ್ನು ಮದುವೆಯಾದ ಹೊಸತರಲ್ಲೇ ಎಚ್.ಡಿ. ದೇವೇಗೌಡರು ಸಾರ್ವಜನಿಕ ಜೀವನಕ್ಕೆ ಎಂಟ್ರಿ ಕೊಟ್ಟು ರಾಜಕೀಯಕ್ಕೆ ಧುಮುಕಿದರು. ಪತಿಯು ಸದಾ ಜನ, ರಾಜಕೀಯ, ಹೋರಾಟ ಎಂದು ಬ್ಯುಸಿಯಾದಾಗ ಚೆನ್ನಮ್ಮ ಸಂಸಾರದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹೊತ್ತರು. ಹೆಂಡತಿಯ ನಿಸ್ವಾರ್ಥ ಬೆಂಬಲವೇ ತಮಗೆ ಪ್ರಧಾನಿ ಸ್ಥಾನ ತನಕ ಬೆಳೆಯಲು ಸಾಧ್ಯವಾಗಿಸಿತು ಎಂದು ಸ್ವತಃ ಎಚ್.ಡಿ. ದೇವೇಗೌಡ ಅವರೇ ಹಲವು ಬಾರಿ ನೆನೆದಿದ್ದಾರೆ.



ವಿಧಾನಸೌಧ ಹಾಗೂ ಸಂಸತ್ತಿನಲ್ಲಿ ದೇವೇಗೌಡರು ಘರ್ಜಿಸುತ್ತಿದ್ದರೆ, ಇತ್ತ ಚೆನ್ನಮ್ಮ ಅವರು ತಮ್ಮ ಕುಟುಂಬದಲ್ಲಿ 6 ಮಕ್ಕಳಿಗೆ ಅಮ್ಮನಾಗಿ ಶಿಸ್ತು ಮತ್ತು ಸಂಸ್ಕಾರದ ಪಾಠ ಹೇಳಿಕೊಡುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಕಣ್ಣಿಟ್ಟು ಎಲ್ಲರನ್ನೂ ಉನ್ನತ ಸ್ಥಾನಕ್ಕೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾದರೆ ಎಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮ ದಂಪತಿಗೆ ಎಷ್ಟು ಜನ ಮಕ್ಕಳು? ಮಾಜಿ ಸಿಎಂ ಕುಮಾರಸ್ವಾಮಿ & ಎಚ್.ಡಿ. ರೇವಣ್ಣ ಅವರಿಗೆ ಎಷ್ಟು ಸಹೋದರ & ಸಹೋದರಿಯರು? ಬನ್ನಿ ಮಾಹಿತಿ ಇಲ್ಲಿ ತಿಳಿಯೋಣ.

ದೇವೇಗೌಡ ಅವರದ್ದು ತುಂಬು ಕುಟುಂಬ
ಚೆನ್ನಮ್ಮ ಹಾಗೂ ದೇವೇಗೌಡ ದಂಪತಿಗೆ ನಾಲ್ವರು ಗಂಡು ಮಕ್ಕಳು: ಎಚ್.ಡಿ. ರೇವಣ್ಣ (ಹಿರಿಯ ಮಗ, ಶಾಸಕ), ಎಚ್.ಡಿ. ಕುಮಾರಸ್ವಾಮಿ (ಹಾಲಿ ಕೇಂದ್ರ ಸಚಿವ), ಎಚ್.ಡಿ. ಬಾಲಕೃಷ್ಣ (ನಿವೃತ್ತ ಕೆಎಎಸ್ ಅಧಿಕಾರಿ), ಮತ್ತು ಡಾ. ಎಚ್.ಡಿ. ರಮೇಶ್ (ವೈದ್ಯರು). ಅನಸೂಯ ಮತ್ತು ಶೈಲಜಾ ಎಂಬ ಇಬ್ಬರು ಹೆಣ್ಣು ಮಕ್ಕಳು. ಸೊಸೆಯರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ & ಅಳಿಯರಾದ ಡಾ. ಸಿ.ಎನ್. ಮಂಜುನಾಥ್ (ಖ್ಯಾತ ಹೃದಯ ರೋಗ ತಜ್ಞರು). ಇನ್ನು ಮೊಮ್ಮಕ್ಕಳು ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಡಾ. ಸೂರಜ್ ರೇವಣ್ಣ ಸೇರಿದಂತೆ ಹತ್ತು ಮಂದಿ ಮೊಮ್ಮಕ್ಕಳ ತುಂಬು ಸಂಸಾರ ಚೆನ್ನಮ್ಮ ಅವರದ್ದು.

ದೊಡ್ಡಗೌಡರ ಬಾಳಿಗೆ ಚೆನ್ನಮ್ಮ ಅವರು ಅದೃಷ್ಟಲಕ್ಷ್ಮಿ
1975ರ ನ್ಯಾಷನಲ್ ಎಮರ್ಜೆನ್ಸಿಯ ಅಂದ್ರೆ ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಹೇರಿಕೆ ಮಾಡಿದ್ದ ತುರ್ತು ಪರಿಸ್ಥಿತಿ ಹೇರಿದ್ದ ಸಮಯದಲ್ಲಿ ದೇವೇಗೌಡರನ್ನು ಜೈಲಿಗೆ ಕಳುಹಿಸಿದ್ದಾಗ, ಚೆನ್ನಮ್ಮ ಅವರಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಚೆನ್ನಮ್ಮ ಅವರು ಧೃತಿಗೆಡದೆ ಮಕ್ಕಳನ್ನು ಸಾಕಿ ಸಲಹಿದರು. ಅಷ್ಟೇ ಅಲ್ಲದೇ ದೇವೇಗೌಡರ ಆರಂಭಿಕ ರಾಜಕೀಯ ದಿನಗಳಲ್ಲಿ ಬೆಳವಣಿಗೆಗಾಗಿ ಮತ್ತು ಆರ್ಥಿಕ ಸಂಕಷ್ಟಗಳು ಎದುರಾದ ವೇಳೆ ತಮ್ಮ ಚಿನ್ನದ ಒಡವೆ ಅಥವಾ ಆಭರಣಗಳನ್ನು ತಂದುಕೊಟ್ಟು ಸಂಕಷ್ಟ ಬಗೆಹರಿಸಿದ್ದರು. ಆಸ್ತಿ & ಅಂತಸ್ತಿನ ಆಸೆ ಪಡದ ಚೆನ್ನಮ್ಮ ಅವರು, ದೊಡ್ಡ ಗೌಡರ ಪಾಲಿಗೆ ಅದೃಷ್ಟಲಕ್ಷ್ಮಿಯೇ ಆಗಿದ್ದರು.

ಕುಮಾರಸ್ವಾಮಿ ಅವರು ಜೆಡಿಎಸ್ & ಬಿಜೆಪಿ ಮೈತ್ರಿ ಸರ್ಕಾರ ರಚಿಸಿ, ದೇವೇಗೌಡರ ಇಚ್ಛೆಗೆ ವಿರುದ್ಧವಾಗಿ ಹೆಜ್ಜೆ ಇಟ್ಟಾಗ ಗೌಡರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇನ್ನು ಆ ಕಷ್ಟದ ದಿನಗಳಲ್ಲಿ ಚೆನ್ನಮ್ಮ ಅವರೇ ಗೌಡರಿಗೆ ಧೈರ್ಯ ತುಂಬಿ ಜೊತೆಯಾಗಿ ನಿಲ್ಲದಿದ್ದರೆ, ಗೌಡರ ಆರೋಗ್ಯ ಅಂದೇ ಕ್ಷೀಣಿಸುತ್ತಿತ್ತು ಎಂದು ಕುಟುಂಬಸ್ಥರು ನೆನೆಯುತ್ತಾರೆ. ಈ ಎಲ್ಲಾ ಕಷ್ಟಗಳಲ್ಲೂ ಪತಿಯ ಬೆನ್ನಿಗೆ ನಿಂತು, ಎಲ್ಲವನ್ನೂ ನಿಭಾಯಿಸಿದ್ದ ಚೆನ್ನಮ್ಮ ಅವರ ಅಗಲಿಕೆ ತೀವ್ರವಾಗಿ ನೋವು ತಂದಿದೆ ದೊಡ್ಡಗೌಡರಿಗೆ. ಮುಕ್ಕಾಲು ಶತಮಾನಗಳ ಕಾಲ ತಮ್ಮ ಕಷ್ಟ & ಸುಖದಲ್ಲಿ ಜೊತೆ ಜೊತೆಯಾಗಿ ಇದ್ದ ಪತ್ನಿಯನ್ನು ಕಳೆದುಕೊಂಡು ಇದೀಗ ಮಾಜಿ ಪ್ರಧಾನಿ ದೇವೇಗೌಡರು ನೋವಿನ ಸಾಗರದಲ್ಲಿ ಒದ್ದಾಡುವಂತೆ ಆಗಿದೆ.

ಚೆನ್ನಮ್ಮ ಅವರ ಮೇಲೆ ದಾಳಿ ಆಗಿತ್ತು
2001 ಫೆಬ್ರವರಿ 21ರ ಮಹಾಶಿವರಾತ್ರಿಯಂದು ಈ ಕುಟುಂಬದ ಮೇಲೆ ಕರಾಳ ನೆರಳು ಬಿದ್ದಿತ್ತು. ಹರದನಹಳ್ಳಿ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೇವೇಗೌಡರ ತಮ್ಮನ ಮಗ ಲೋಕೇಶ್ ಎಂಬಾತ ಚೆನ್ನಮ್ಮ ಹಾಗೂ ಹಿರಿಯ ಸೊಸೆ ಭವಾನಿ ರೇವಣ್ಣ ಅವರ ಮೇಲೆ ಏಕಾಏಕಿ ಆಸಿಡ್ ದಾಳಿ ನಡೆಸಿದ್ದ. ಆದರೆ ಅದೃಷ್ಟವಶಾತ್ ಅಂದು ಸುಟ್ಟಗಾಯಗಳಾಗಿದ್ದರೂ ಜೀವ ಅಪಾಯದಿಂದ ಪಾರಾಗಿದ್ದರು ಚೆನ್ನಮ್ಮ ಅವರು. ಹೀಗೆ ಆ ಘೋರ ಘಟನೆ ನಡೆದು ಆರೋಪಿಗೆ 8 ವರ್ಷಗಳ ಶಿಕ್ಷೆಯಾದರೂ, ಕೊನೆಗೆ ದೇವೇಗೌಡರು ಕೇಸ್ ವಾಪಸ್ ಪಡೆದಾಗಲೂ ಚೆನ್ನಮ್ಮ ಅವರು ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಬದಲಾಗಿ ತಮ್ಮ ಪತಿ ಎಚ್.ಡಿ. ದೇವೇಗೌಡರ ತೀರ್ಮಾನಕ್ಕೇ ತಲೆಬಾಗಿದ್ದರು. ಅಂದು ಭೀಕರ ಘಟನೆಯಲ್ಲಿ ಸಾವು ಗೆದ್ದು ಬಂದಿದ್ದ ಚೆನ್ನಮ್ಮ ಅವರು, ಇಂದು ಸುದೀರ್ಘ ಪಯಣ ಮುಗಿಸಿ ವಿಧಿಯ ಕರೆಗೆ ಓಗೊಟ್ಟಿದ್ದಾರೆ.

ಮಗ ಸಿಎಂ ಆಗಲಿದೆ ಎಂದು ಹರಕೆ
ಎಚ್.ಡಿ. ದೇವೇಗೌಡ ಅವರಂತೆಯೇ ಮಹಾನ್ ದೈವಭಕ್ತೆ ಆಗಿದ್ದ ಚೆನ್ನಮ್ಮ ಅವರು, 9 ವರ್ಷಗಳ ಹಿಂದೆ ಅಂದರೆ 2017 ಜನವರಿ 14ರಂದು ಕೊಪ್ಪಳದ ಪ್ರಸಿದ್ಧ ಗವಿಮಠದ ಗವಿಸಿದ್ದೇಶ್ವರ ರಥೋತ್ಸವಕ್ಕೆ ದೇವೇಗೌಡರ ಜೊತೆಗೆ ಆಗಮಿಸಿ ದರ್ಶನ ಪಡೆದಿದ್ದರು. ಅಂದು ದೇವೇಗೌಡರು ಗವಿಸಿದ್ದೇಶ್ವರನ ಪಲ್ಲಕ್ಕಿ ಹೊತ್ತಿದ್ದರೆ, ಚೆನ್ನಮ್ಮ ಅವರು ತಮ್ಮ ಪುತ್ರ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಹಾಗೇ ಈ ವೇಳೆ ಮತ್ತೊಂದು ಆಶ್ಚರ್ಯ ಸೃಷ್ಟಿಸುವ ಘಟನೆ ನಡೆದಿತ್ತು. ಆ ರಥೋತ್ಸವ ಮುಗಿದು 1 ವರ್ಷ ಕಳೆಯುವ ಒಳಗಾಗಿ ಭಾರಿ ದೊಡ್ಡ ಪವಾಡವೇ ನಡೆದು ಹೋಗಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ & ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಅವರು 2ನೇ ಬಾರಿಗೆ 2018ರ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು.

ಒಟ್ನಲ್ಲಿ ಚೆನ್ನಮ್ಮ ಅವರ ಜೀವನ ಆಧುನಿಕ ಜೀವನಕ್ಕೆ ಮಾದರಿ ಆಗಿದೆ, ಏಕೆಂದರೆ ಈಗಿನ ಸಂಸಾರಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆಗಳು ನಡೆದು ಸಂಸಾರವೇ ಮುರಿದು ಬೀಳುತ್ತದೆ. ಆದರೆ ಕೌಟುಂಬಿಕ ಕಲಹ, ರಾಜಕೀಯ ಏಳುಬೀಳು, ಆಸಿಡ್ ದಾಳಿಯಂತಹ ಕಠಿಣ ಪ್ರಸಂಗಗಳ ನಡುವೆ ಕೂಡ ಸೌಮ್ಯತೆಯಿಂದಲೇ ಎಲ್ಲಾ ಸಮಸ್ಯೆ ಎದುರಿಸಿದ ಚೆನ್ನಮ್ಮ ಅವರು ತಮ್ಮ ಪತಿ ಎಚ್.ಡಿ. ದೇವೇಗೌಡ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಆದರೆ ಇದೀಗ ಅವರು ಇಲ್ಲ ಎಂಬ ನೋವು ಅವರ ಇಡೀ ಕುಟುಂಬವನ್ನು ಕಾಡುತ್ತಾ ಇದೆ. ಚೆನ್ನಮ್ಮ ಅವರ ಅಗಲಿಕೆ ಇಡೀ ಎಚ್‌ಡಿಡಿ ಪರಿವಾರವನ್ನು ಕಣ್ಣೀರಲ್ಲಿ ಮುಳುಗಿಸಿದೆ.