ಕರ್ನಾಟಕದ ರಾಜಕೀಯದಲ್ಲಿ ಒಂದು ಕಡೆ ಎಸ್‌ಐಆರ್ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ವಿರೋಧ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಭದ್ರ ಮಾಡಿಕೊಳ್ಳಲು ಪರದಾಡುವ ಸ್ಥಿತಿ ಇದೆ. ಅದರಲ್ಲೂ ವಿಧಾನ ಪರಿಷತ್ ಎಲೆಕ್ಷನ್‌ನ ಸಮಯದಲ್ಲಿ ಅಡ್ಡ ಮತದಾನ ಮೂಲಕ ಪೆಟ್ಟು ತಿಂದ ವಿಪಕ್ಷ ನಾಯಕರು ಮುಂದಿನ ಚುನಾವಣೆಯ ಬಗ್ಗೆ ಭಾರಿ ಚಿಂತೆ ಮಾಡುವಂತಾಗಿದೆ ಈಗ. ಇಂತಹ ಸಮಯದಲ್ಲೇ ರಾಜ್ಯ ರಾಜಕೀಯದಲ್ಲಿ ಮತ್ತೆ ಪಕ್ಷಾಂತರದ ಸಾಧ್ಯತೆಗಳ ಕುರಿತು ಚರ್ಚೆ ತೀವ್ರಗೊಂಡಿದ್ದು, ಹೀಗಿದ್ದಾಗಲೇ ಕೇಂದ್ರ ಸಚಿವ & ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಲೆಕ್ಕಾಚಾರಕ್ಕೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.
ಹೌದು, ಕರ್ನಾಟಕ ರಾಜಕೀಯದಲ್ಲಿ ಮತ್ತೆ ಪಕ್ಷಾಂತರದ ಪರ್ವ ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಇದೀಗ ಜೆಡಿಎಸ್‌ನ ಕೆಲ ಶಾಸಕರನ್ನ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಅಲೆಯನ್ನೇ ಎಬ್ಬಿಸಿದೆ. ಇಷ್ಟೆಲ್ಲದರ ನಡುವೆ, ಜೆಡಿಎಸ್‌ನ ಕೆಲ ಶಾಸಕರೊಂದಿಗೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದು, ಪಕ್ಷದ ಭವಿಷ್ಯದ ಬಗ್ಗೆ ಅನುಮಾನ ಮೂಡಿಸಿ ಕಾಂಗ್ರೆಸ್ ಸೇರುವಂತೆ ಮನವೊಲಿಸುವ ಪ್ರಯತ್ನಗಳು ಸಾಗಿವೆ ಎಂಬ ಸ್ಫೋಟಕ ಆರೋಪ ಜೆಡಿಎಸ್ ನಾಯಕರಿಂದ ಕೇಳಿಬಂದಿದೆ. ಈ ಮೂಲಕ ವಿಧಾನ ಪರಿಷತ್ ಚುನಾವಣೆಯ ಬಳಿಕ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ.
ಜೆಡಿಎಸ್ ಪಕ್ಷದ ಶಾಸಕರೇ ಟಾರ್ಗೆಟ್?
ಕಾಂಗ್ರೆಸ್‌ಗೆ ಬರಲು ಇಚ್ಛಿಸುವವರಿಗೆ ಪಕ್ಷದ ಬಾಗಿಲು ಸದಾ ತೆರೆದೇ ಇರುತ್ತದೆ ಎಂಬ ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರ ಹೇಳಿಕೆ ಉಲ್ಲೇಖಿಸಿರುವ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈ ಬೆಳವಣಿಗೆ ಬಗ್ಗೆ ಅಲರ್ಟ್ ಆಗಿದ್ದಾರೆ. ಮತ್ತೊಂದು ಕಡೆ ಅದು ಕೇವಲ ಸಾಮಾನ್ಯ ಆಹ್ವಾನವಲ್ಲ ತಮ್ಮ ಪಕ್ಷದ ಶಾಸಕರ ಗುರಿಯಾಗಿಸಿಕೊಂಡ ರಾಜಕೀಯ ಸಂದೇಶ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಈ ಆರೋಪಗಳಿಗೆ ಕಾಂಗ್ರೆಸ್ ಕೂಡ ಖಡಕ್ ಉತ್ತರ ನೀಡುತ್ತಿದೆ. ಹೀಗೆ ವಿಧಾನ ಪರಿಷತ್ ಚುನಾವಣೆ ಬಳಿಕ ಈ ತಿಕ್ಕಾಟ ಇನ್ನಷ್ಟು ಜೋರಾಗುತ್ತಿದೆ ಕೂಡ.
ಎಸ್ಐಆರ್ ಬಳಿಕ ಪಕ್ಷಾಂತರ ಫೈಟ್!
ಒಂದು ಕಡೆ ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಕೂಡ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸುತ್ತಾ ಇದೆ. ಈ ಹಿಂದೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ, ಎಸ್ಐಆರ್ ಪ್ರಕ್ರಿಯೆಯ ಪರಿಣಾಮ ಆಡಳಿತ ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿವೆ ಎಂಬ ಚರ್ಚೆ ಜೋರಾಗಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಆ ಇತಿಹಾಸ ಮರುಕಳಿಸದಂತೆ ತಡೆಯಲು ಕಾಂಗ್ರೆಸ್ ಸರ್ಕಾರ ಎಸ್ಐಆರ್ ಪ್ರಕ್ರಿಯೆ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿ ಈ ಪ್ರಕ್ರಿಯೆಯನ್ನು ಗಮನಿಸುತ್ತಿದ್ದು, ವಿರೋಧ ಪಕ್ಷಗಳ ನಾಯಕರು ಹಲವು ಆರೋಪ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ಇದೇ ಮತಪಟ್ಟಿ ಪರಿಷ್ಕರಣೆ ಈಗ ತೀವ್ರ ಚರ್ಚೆಗೆ ಗುರಿಯಾಗಿದ್ದು, ಬಿಎಲ್‌ಒಗಳು ಮನೆ ಮನೆಗೆ ತೆರಳುತ್ತಾ ಪರಿಶೀಲಿಸುವ ಬದಲಿಗೆ ರಾಮನಗರ, ಕನಕಪುರ, ಬೆಂಗಳೂರು & ಯಾದಗಿರಿ, ಕುಣಿಗಲ್ ಸೇರಿ ಹಲವೆಡೆ ಕಲ್ಯಾಣ ಮಂಟಪ, ಮಸೀದಿ ಮತ್ತು ಮನೆಗಳಲ್ಲಿ ಜನರ ಗುಂಪು ಗುಂಪಾಗಿ ಸೇರಿಸಿ ಗಣತಿ ಅರ್ಜಿ ಭರ್ತಿ ಮಾಡಿಸುತ್ತಿರುವ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜಟಾಪಟಿ ದೊಡ್ಡ ಮಟ್ಟದ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿದೆ ಎಂಬ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ಪಕ್ಷಾಂತರ ಪರ್ವದ ವಿಚಾರ ಕೂಡ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಜಿಬಿಎ ಚುನಾವಣೆ ಸಮೀಪದಲ್ಲೇ ಇರುವಾಗ ರಾಜಕೀಯ ವಲಯದಲ್ಲಿ ತಲ್ಲಣ ಎಬ್ಬಿಸಿದೆ.