ಭಾರತದ ಕರೆನ್ಸಿ ಜಗತ್ತಿನ ಶಕ್ತಿಶಾಲಿ ಕರೆನ್ಸಿಗಳ ಪೈಕಿ ಒಂದಾಗಿದ್ದು, ಜಾಗತಿಕ ಮನ್ನಣೆ ಕೂಡ ನಮ್ಮ ದೇಶದ ನೋಟುಗಳಿಗೆ ಇದೆ. ನವೆಂಬರ್ 8, 2016 ಮಹತ್ವದ ಘೋಷಣೆ ಹೊರಡಿಸಿದ್ದ ಕೇಂದ್ರ ಸರ್ಕಾರವು 500 ಮತ್ತು 1,000 ರೂಪಾಯಿ ಮುಖಬೆಲೆ ನೋಟುಗಳನ್ನು ಅಮಾನ್ಯೀಕರಣ ಅಂದ್ರೆ ಬ್ಯಾನ್ ಮಾಡಿತ್ತು. ಆ ನಂತರ ಮತ್ತೆ ಹೊಸದಾಗಿ 500 & 2000 ಮುಖಬೆಲೆಯ ನೋಟುಗಳನ್ನು ಮುದ್ರಿಸಿತ್ತು. ಹೀಗಿದ್ದಾಗಲೇ ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಆರ್‌ಬಿಐ ಮೇ 19, 2023ಕ್ಕೆ ಹೊಸ ಆದೇಶ ಹೊರಡಿಸಿ 2,000 ರೂಪಾಯಿ ಮುಖಬೆಲೆ ನೋಟುಗಳನ್ನೂ ಚಲಾವಣೆಯಿಂದ ಹಿಂತೆಗೆದುಕೊಂಡಿತು. ಆದರೆ ಇದೀಗ ದಿಢೀರ್ ಮತ್ತೊಂದು ಆದೇಶ ಹೊರಬೀಳಲಿದ್ದು, ಈ ಬಾರಿ ಇತಿಹಾಸವೇ ನಿರ್ಮಾಣ ಆಗಲಿದೆ.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಬಹುಕಾಲದಿಂದ ಪರಿಗಣಿಸಿದ್ದ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳ ಮುದ್ರಣ ಮತ್ತು ಚಲಾವಣೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಂತಿಮವಾಗಿ ಹಸಿರು ನಿಶಾನೆ ತೋರಿದೆ. ಈ ಮಹತ್ವದ ಬೆಳವಣಿಗೆ ಬಗ್ಗೆ ಕೇಂದ್ರ ಹಣಕಾಸು ಇಲಾಖೆ ಸಂಸತ್‌ಗೆ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಭಾರತದಲ್ಲಿ ಈಗ ಹೊಸದಾಗಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಗೆ ಬರುವುದು ಪಕ್ಕಾ ಆಗಿದ್ದು, ಪ್ರಾಥಮಿಕ ಹಂತದಲ್ಲಿ ಕಡಿಮೆ ಮುಖಬೆಲೆ ನೋಟುಗಳು ಮುದ್ರಣ ಆಗುವುದು ಪಕ್ಕಾ ಆಗಿದೆ. ಹಾಗಾದರೆ ಭಾರತದಲ್ಲಿ ಪ್ಲಾಸ್ಟಿಕ್ ಕರೆನ್ಸಿ ನೋಟು ಯಾವಾಗಿನಿಂದ ಜಾರಿಗೆ ಬರಲಿವೆ? ಎಷ್ಟು ರೂಪಾಯಿ ಮುಖಬೆಲೆ ನೋಟುಗಳು ಮಾರುಕಟ್ಟೆಗೆ ಎಂಟ್ರಿ ಕೊಡ್ತಾ ಇವೆ? ಬನ್ನಿ ತಿಳಿಯೋಣ.
ಕರೆನ್ಸಿ ವಿಚಾರದಲ್ಲಿ ಕ್ರಾಂತಿಕಾರಿ ನಿರ್ಧಾರ!
ಭಾರತದಲ್ಲಿ ಪ್ಲಾಸ್ಟಿಕ್ ಕರೆನ್ಸಿ ಅಥವಾ ಪಾಲಿಮರ್ ನೋಟುಗಳನ್ನ ಪರಿಚಯಿಸುವ ಕುರಿತು ಹಲವು ವರ್ಷಗಳಿಂದ ಕೂಡ ಚಿಂತನೆ ನಡೆದಿದೆ. ಭಾರತದ ಕೇಂದ್ರ ಬ್ಯಾಂಕ್ ಎಂದು ಕರೆಸಿಕೊಳ್ಳುವ ಭಾರತೀಯ ರಿಸರ್ವ್ ಬ್ಯಾಂಕ್ ಇದರ ಬಗ್ಗೆ ಮಹತ್ವದ ಅಧ್ಯಯನ ನಡೆಸಿ ಅಂತಿಮವಾಗಿ ವರದಿ ಕೂಡ ಸಲ್ಲಿಸಿತ್ತು. ವಿವಿಧ ದೇಶಗಳಲ್ಲಿ ಈ ರೀತಿಯಲ್ಲಿ ಪ್ಲಾಸ್ಟಿಕ್ ಕರೆನ್ಸಿ ಯಶಸ್ವಿಯಾಗಿ ಬಳಕೆಯಲ್ಲಿರುವ ಹಿನ್ನೆಲೆ, ಭಾರತದ ನೆಲದಲ್ಲೂ ಇದೇ ರೀತಿ ವ್ಯವಸ್ಥೆ ಜಾರಿಗಾಗಿ ಹಲವು ವರ್ಷಗಳಿಂದ ಚರ್ಚೆಗಳು ನಡೆದಿದ್ದವು.
ಇದೀಗ ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು, ಕೊನೆಗೂ ಕಡಿಮೆ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ. ಮೊದಲನೇ ಹಂತದಲ್ಲಿ 10 & 20 ನೋಟುಗಳನ್ನು ಪಾಲಿಮರ್ ತಂತ್ರಜ್ಞಾನದಲ್ಲಿ ಮುದ್ರಿಸಲು ನಿರ್ಧರಿಸಲಾಗಿದೆ. ಹೀಗೆ ಆರಂಭಿಕ ಹಂತದಲ್ಲಿ ಸುಮಾರು 100 ಕೋಟಿ ನೋಟುಗಳನ್ನ ಸಿದ್ಧಪಡಿಸಿ ದೇಶದ ವಿವಿಧ ಭಾಗಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಉದ್ದೇಶಿಸಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ರೀತಿ ತಯಾರಿ, ಸಿದ್ಧತೆಗಳನ್ನು ಇದೀಗ ಅಧಿಕಾರಿಗಳು ಮಾಡಿಕೊಂಡಿದ್ದಾರೆ.
ಪ್ಲಾಸ್ಟಿಕ್ ಬಂತು, ಪೇಪರ್ ಹೋಗುತ್ತಾ?
ಪೇಪರ್ ನೋಟುಗಳು ಇಷ್ಟುದಿನ ಮುದ್ರಣ ಆಗುತ್ತಿದ್ದವು, ಆದರೆ ಇದೀಗ ಭಾರತದಲ್ಲಿ ಕರೆನ್ಸಿ ವಿಚಾರದಲ್ಲೂ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅಷ್ಟಕ್ಕೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ಮಂಡಳಿ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಲಿಮರ್ ನೋಟುಗಳು ಸಾಮಾನ್ಯ ಕಾಗದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರಲಿವೆ. ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನಗಳ ಪ್ರಕಾರ ಇವು ದೀರ್ಘಕಾಲ ಹರಿದು ಹೋಗದೆ ಅಥವಾ ನೀರಲ್ಲಿ ನೆಂದರೂ ಉತ್ತಮವಾಗಿ ಇರಲಿದ್ದು, ನಕಲಿ ನೋಟುಗಳ ಹಾವಳಿಯನ್ನ ತಡೆಯಲು ಸಹಕಾರಿ ಎಂಬ ಮಾಹಿತಿ ಇದೆ.
200 & 500 ರೂಪಾಯಿ ಯಾವಾಗ?
ಈ ಕಾರಣಕ್ಕೆ ಇದೀಗ ಪ್ಲಾಸ್ಟಿಕ್ ನೋಟುಗಳ ಮುದ್ರಣಕ್ಕೆ ತಯಾರಿಯು ಕೂಡ ಸಾಗಿದ್ದು, ಈ ವಿಚಾರ ಆರ್ಥಿಕ ವಲಯದಲ್ಲಿ ತೀವ್ರ ಕುತೂಹಲವನ್ನ ಕೆರಳಿಸಿದೆ. ಮೊದಲನೇ ಹಂತದಲ್ಲಿ 10 & 20 ನೋಟುಗಳನ್ನು ಪಾಲಿಮರ್ ತಂತ್ರಜ್ಞಾನದಲ್ಲಿ ಮುದ್ರಿಸಲು ನಿರ್ಧರಿಸಲಾಗಿದ್ದು, ಆ ನಂತರ ಹೆಚ್ಚಿನ ಮುಖಬೆಲೆಯ ನೋಟುಗಳು ಎಂದರೆ 100 ರೂಪಾಯಿ, 200 ರೂಪಾಯಿ, 500 ರೂಪಾಯಿ ನೊಟುಗಳು ಕೂಡ ಪ್ಲಾಸ್ಟಿಕ್ ಮೂಲಕ ಪ್ರಿಂಟ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಡಿಮೆ ಮುಖಬೆಲೆ ನೋಟುಗಳನ್ನು ಮುದ್ರಿಸಿ ಅದರಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಹೆಚ್ಚಿನ ಮುಖಬೆಲೆ ನೋಟು ಮುದ್ರಿಸುವಾಗ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.