ಅಕ್ಕಿ, ಬೇಳೆ, ಬೆಲ್ಲ, ಅಡುಗೆ ಎಣ್ಣೆ, ಮೊಟ್ಟೆ, ಮಾಂಸ.. ಹೀಗೆ ಎಲ್ಲವೂ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿವೆ. ಹೀಗೆಲ್ಲಾ ದಿನನಿತ್ಯ ಬಳಸುವ ಪದಾರ್ಥಗಳ ಬೆಲೆ ಏರಿಕೆ ಕಂಡರೂ ಸಂಬಳ ಮಾತ್ರ, ಇದ್ದಲ್ಲೇ ಇದೆ ಏನು ಮಾಡುವುದು? ಅಂತಾ ಒದ್ದಾಡುತ್ತಿದ್ದಾರೆ ಮಧ್ಯಮ ವರ್ಗದ ಜನ ಹಾಗೂ ಬಡವರು. ಇಂತಹ ಪರಿಸ್ಥಿತಿಯಲ್ಲಿ ಇರಾನ್ & ಅಮೆರಿಕ ನಡುವಿನ ಯುದ್ಧ ಕೂಡ ದೊಡ್ಡ ಕಿಚ್ಚು ಹೊತ್ತಿಸಿದ್ದು, ಈ ಯುದ್ಧದ ನಂತರ ಭಾರಿ ನಷ್ಟ ಉಂಟಾಗಿ ಮತ್ತೊಮ್ಮೆ ಬೆಲೆ ಏರಿಕೆಯ ಬಲೆ ಬಡವರನ್ನು ನಲುಗಿ ಹೋಗುವ ರೀತಿ ಮಾಡುತ್ತಿದೆ. ಇಂದಿನಿಂದಲೇ ದುನಿಯಾ ಮತ್ತಷ್ಟು ದುಬಾರಿ ಆಗುತ್ತಿದ್ದು, ನೀವು ದಿನನಿತ್ಯ ಬಳಸುವ ವಸ್ತುಳಿಂದ ಹಿಡಿದು ಹಲವು ವಸ್ತುಗಳ ಬೆಲೆ ಭರ್ಜರಿ ಏರಿಕೆ ಕಾಣುತ್ತಿವೆ.
ಹೌದು, ಇರಾನ್ & ಅಮೆರಿಕ ಯುದ್ಧ ಶುರುವಾದ ನಂತರ ಹಲವು ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯು ಸಂಭವಿಸಿದೆ. ಏಕೆಂದರೆ ಇರಾನ್ & ಅಮೆರಿಕ ಯುದ್ಧದ ಪರಿಣಾಮ ಈಗಾಗಲೇ ತೈಲ ಉತ್ಪಾದನೆ ಮಾಡುವ ಮಧ್ಯಪ್ರಾಚ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ತೈಲ & ಅನಿಲ ಸರಬರಾಜು ವ್ಯತ್ಯಯವಾಗಿ ನೂರಾರು ಸಮಸ್ಯೆ ಎದುರಾಗಿದೆ. ಹೀಗಿದ್ದಾಗ ಜಾಗತಿಕ ಆರ್ಥಿಕತೆ ಕೂಡ ನಲುಗಿದ್ದು, ಹಲವು ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಮಾರುಕಟ್ಟೆ ಅಸ್ಥಿರತೆ & ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನೆಲೆ, ಇಂದಿನಿಂದ ಅಗತ್ಯ ವಸ್ತುಗಳ ಹಾಗೂ ವಿವಿಧ ಗ್ರಾಹಕ ಬಳಕೆದಾರ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿದೆ. ಇದು ಮೊದಲೇ ಸಂಕಷ್ಟದಲ್ಲಿ ಪರದಾಡುತ್ತಿದ್ದ ಬಡವರು ಹಾಗೂ ಮಧ್ಯಮ ವರ್ಗದ ಪ್ರಜೆಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗ್ರಾಹಕ ಬಳಕೆ ಉತ್ಪನ್ನಗಳ ಬೆಲೆ ಏರಿಕೆ
ಅಂದಹಾಗೆ ಇದೀಗ ಬೆಲೆ ಏರಿಕೆಯ ಪರಿಣಾಮವನ್ನು ಬಹುತೇಕ ವಲಯಗಳು ಎದುರಿಸಲಿವೆ. ಎಫ್‌ಎಂಸಿಜಿ ಉತ್ಪನ್ನಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್ ಹಾಗೂ ಕಾರುಗಳ ರೇಟ್ ಗಗನಕ್ಕೆ ಏರಿದ್ದು, ಇದು ಕುಟುಂಬಗಳ ಮಾಸಿಕ ಬಜೆಟ್‌ಗೆ ತೀವ್ರ ಹೊರೆ ಉಂಟುಮಾಡಿದೆ. ಅಲ್ಲದೇ ಕೆಲಸ ಇಲ್ಲದೆ & ಕಡಿಮೆ ಸಂಬಳ ಪಡೆಯುವ ಕಾರ್ಮಿಕರು ತಲೆಮೇಲೆ ಕೈಹೊತ್ತು ಕೂರುವ ವಾತಾವರಣ ಸೃಷ್ಟಿ ಮಾಡಿದೆ. ಹಾಗೇ ಈ ಬಾರಿ ಶ್ರೀಮಂತರಿಗೆ ಕೂಡ ದುಬಾರಿ ದುನಿಯಾದ ಬಿಸಿ ತಾಗಲಿದೆ.
ಗ್ರಾಹಕ ಬಳಕೆ ಉತ್ಪನ್ನಗಳ (FMCG) ವಿಭಾಗದಲ್ಲಿ ಟೀ ಪುಡಿ, ಸ್ನಾನದ ಸೋಪು, ಹೇರ್ ಆಯಿಲ್ & ಪ್ಯಾಕೇಜ್ಡ್ ಆಹಾರ ಪದಾರ್ಥಗಳು ಸೇರಿ ಹಲವು ವಸ್ತುಗಳ ದರ ಶೇ.6 ಟು 8ರಷ್ಟು ಹೆಚ್ಚಳ ಕಂಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಉತ್ಪಾದನಾ ವೆಚ್ಚದ ಹೆಚ್ಚಳವು ಈ ರೀತಿಯ ದರ ಪರಿಷ್ಕರಣೆಗೆ ಕಾರಣವಾಗಿದೆ ಎಂದು ಇದೀಗ ಉದ್ಯಮ ವಲಯಗಳು ಬೆಲೆ ಏರಿಕೆ ಸಮರ್ಥಿಸಿಕೊಂಡಿವೆ. ಆದರೆ ದಿಢೀರ್ ಬೆಲೆ ಏರಿಕೆ ಪರಿಣಾಮವನ್ನು, ಕೋಟ್ಯಂತರ ಜನರು ಇದೀಗ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೇ ಕಾರಣಕ್ಕೆ ಆದಷ್ಟು ಬೇಗ, ಇರಾನ್ & ಅಮೆರಿಕ ನಡುವೆ ಶಾಂತಿ ಮೂಡಲಿ ಎಂಬ ಕೋರಿಕೆ ಜನರದ್ದಾಗಿದೆ.
ಕಚ್ಚಾ ತೈಲ ಬೆಲೆ ಏರಿಕೆ ಎಫೆಕ್ಟ್?
ಅಮೆರಿಕ & ಇರಾನ್ ನಡುವೆ ತಿಕ್ಕಾಟ ಜೋರಾದ ನಂತರ ಹಲವು ಬದಲಾವಣೆಗಳು ಜಗತ್ತಿನ ಆರ್ಥಿಕತೆಯ ಜೀವ ಹಿಂಡುತ್ತಿದ್ದು, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಬದಲಾವಣೆ ಕೂಡ ಬೆಲೆ ಏರಿಕೆಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಒಂದು ಎನ್ನಲಾಗಿದೆ. ಈ ಮೂಲಕ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ ಆಮದು ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಿವೆ ಉದ್ಯಮಗಳು. ಮತ್ತೊಂದು ಕಡೆ ಆರ್ಥಿಕ ತಜ್ಞರ ಪ್ರಕಾರ, ಈ ಬೆಲೆ ಏರಿಕೆಗೆ ಹಲವು ಅಂಶ ಕಾರಣವಾಗಿವೆ. ಪಶ್ಚಿಮ ಏಷ್ಯಾದಲ್ಲಿ ಉಂಟಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಜಾಗತಿಕ ಪೂರೈಕೆ ಸರಪಳಿಯ ವ್ಯತ್ಯಯ, ಕಚ್ಚಾ ತೈಲ ಹಾಗೂ ಪಾಮ್ ಆಯಿಲ್ ದರಗಳ ಏರಿಳಿತ, ಸಮುದ್ರ ಸಾರಿಗೆ ವೆಚ್ಚ ಹೆಚ್ಚಳ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ದುಬಾರಿ ಬೆಲೆ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿವೆ.