ವಿಜಯ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನಟ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಅಭಿಮಾನಿಗಳ ಪಡೆ ಹೊಂದಿದ್ದಾರೆ. ಇದೇ ಕಾರಣಕ್ಕೆ ರಾಜಕಾರಣಕ್ಕೆ ಧುಮುಕಿ ಭರ್ಜರಿ ಯಶಸ್ಸು ಕಂಡು, ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿ ತಮಿಳುನಾಡು ಸಿಎಂ ಆಗಿದ್ದಾರೆ. ವಿಜಯ್ ಅವರು ಸಿಎಂ ಆಗಿದ್ದು ಅವರ ಅಭಿಮಾನಿಗಳಿಗೆ ಇನ್ನೂ ದೊಡ್ಡ ಮಟ್ಟದಲ್ಲಿ ಸಂಭ್ರಮ ತಂದಿದ್ದು, ದೊಡ್ಡ ಮಟ್ಟದಲ್ಲಿ ಸಂಭ್ರಮಾಚರನೆ ನಡೆದಿತ್ತು. ಆದರೆ ಒಂದೇ ಒಂದು ಆಸೆ ಮಾತ್ರ ಹಾಗೇ ಬಾಕಿ ಉಳಿದಿತ್ತು, ಅದೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಯಾವಾಗ ರಿಲೀಸ್ ಆಗುತ್ತೆ? ಅನ್ನೋದು. ಆ ಮಹತ್ವದ ಆಸೆ ಕೂಡ ಇದೀಗ ನೆರವೇರಿದ್ದು, ವಿಜಯ್ ಕೊನೆಯ ಸಿನಿಮಾ ಹಲ್‌ಚಲ್ ಎಬ್ಬಿಸಿದೆ.
ಅಂದಹಾಗೆ ತಮಿಳು ಸಿನಿಮಾ ರಂಗದ ಸಖತ್ ಫೇಮಸ್ ನಟ & ಹಾಲಿ ರಾಜಕಾರಣಿ ನಟ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಇಂದು ಜಗತ್ತಿನಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿ ಅಬ್ಬರಿಸಿದೆ. ಈ ಪೈಕಿ ತಮಿಳುನಾಡು ಮಾತ್ರವಲ್ಲ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ವಿಜಯ್ ಸಿನಿಮಾ ಅಬ್ಬರ ಜೋರಾಗಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಚಿತ್ರಮಂದಿರಗಳ ಎದುರು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿಜಯ್ ನಟಿಸಿದ ಕೊನೇ ಸಿನಿಮಾ ಎನ್ನುವ ಕಾರಣದಿಂದ ಕೂಡ ಜನ ನಾಯಗನ್ ಭಾರಿ ದೊಡ್ಡ ಹೈಪ್ ಪಡೆದು ಅಭಿಮಾನಿಗಳ ಗಮನವನ್ನ ಸೆಳೆದಿತ್ತು. ಹಾಗೇ ಅನೇಕ ರಾಜಕೀಯ ಕಾರಣಗಳಿಂದ 'ಜನ ನಾಯಗನ್' ಸಿನಿಮಾ ಬಿಡುಗಡೆಗೆ ಪದೇ ಪದೇ ಸಮಸ್ಯೆಯು ಎದುರಾಗಿತ್ತು.
ವಿಜಯ್ ಅಬ್ಬರಕ್ಕೆ ಥಿಯೇಟರ್ ಶೇಕ್!
ಹೌದು, ಜನ ನಾಯಗನ್ ಸಿನಿಮಾ ಟಿಕೆಟ್ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತ್ತು. ಸಾವಿರ ಸಾವಿರಾರು ರೂಪಾಯಿ ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಿದರು ಅಭಿಮಾನಿಗಳು. ಜನ ನಾಯಗನ್‌ನ ವೀಕ್ಷಿಸಿದ ಪ್ರೇಕ್ಷಕರು ಚಿತ್ರ ಕಥೆ, ವಿಜಯ್ ಅವರ ಅಭಿನಯ & ತಾಂತ್ರಿಕ ಅಂಶಗಳಿಗೆ ಮೆಚ್ಚುಗೆಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಜಯ್ ಅವರ ಸಿನಿಮಾ ಕರಿಯರ್‌ನಲ್ಲಿ ಇದು ಮತ್ತೊಂದು ಅದ್ಭುತ ಎಂದಿದ್ದಾರೆ ಫ್ಯಾನ್ಸ್. ಹಾಗೇ, ತಮಿಳುನಾಡು ಇಂದು ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತ್ತು, ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಅಭಿಮಾನಿಗಳು ಬೆಳಗ್ಗೆಯಿಂದಲೇ ಚಿತ್ರಮಂದಿರಗಳ ಬಳಿ ಜಮಾಯಿಸಿ ಸಂಭ್ರಮ ಆಚರಿಸಿದರು. ಮತ್ತೊಂದು ಕಡೆ ವಿಜಯ್ ಅವರ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುವುದು, ಪಟಾಕಿ ಸಿಡಿ ಸಿಹಿ ಹಂಚಿ & ಕೇಕ್ ಕತ್ತರಿಸಿ ಫುಲ್ ಸೆಲೆಬ್ರೇಷನ್ ಮಾಡಿದರು ಫ್ಯಾನ್ಸ್.
ಸಂಕ್ರಾಂತಿ ಸಮಯದಲ್ಲೇ ರಿಲೀಸ್ ಆಗಬೇಕಿತ್ತು
2026 ಪೊಂಗಲ್ ಹಬ್ಬದ ಸಮಯದಲ್ಲೇ, ಅಂದ್ರೆ ಕನ್ನಡಿಗರ ಸಂಕ್ರಾಂತಿ ಸಂಭ್ರಮದ ಸಮಯದಲ್ಲೇ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ರಾಜಕೀಯ ಕಾರಣಗಳಿಂದ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಅಡ್ಡಿ & ಆತಂಕ ಎದುರಾಗಿತ್ತು. ಇದೆಲ್ಲವನ್ನೂ ಎದುರಿಸಿ ಇದೀಗ ಸಿನಿಮಾ ರಿಲೀಸ್ ಆಗಿ ದೊಡ್ಡ ಹಿಟ್ ಆಗುವ ಮುನ್ಸೂಚನೆ ನೀಡಿದೆ. ಹಲವು ತಿಂಗಳ ನಿರೀಕ್ಷೆಯ ನಂತರ ಇದೀಗ ಜಾಗತಿಕ ಮಟ್ಟದಲ್ಲಿ ಚಿತ್ರ ಬಿಡುಗಡೆಯಾಗಿದ್ದು ವಿಜಯ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಸಖತ್ ಖುಷಿ ತರುವ ಜೊತೆಗೇ, ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡುವ ಮುನ್ಸೂಚನೆ ನೀಡಿದೆ ಈ ಸಿನಿಮಾ. ಹಾಗೇ ಚಿತ್ರವು ಸುಮಾರು 300 ಕೋಟಿ ರೂಪಾಯಿ ಬಜೆಟ್‌ನಲ್ಲಿ ರಿಲೀಸ್ ಆಗಿದೆ ಎನ್ನಲಾಗಿದ್ದು, 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ ಅಭಿಮಾನಿಗಳಲ್ಲಿ.