ಕನ್ನಡ ಸಿನಿಮಾ ರಂಗದಲ್ಲಿ ಆಗಾಗ ಕಿರಿಕ್ ಆಗುತ್ತಲೇ ಇರುತ್ತದೆ, ಅದರಲ್ಲೂ ಸೋಷಿಯಲ್ ಮೀಡಿಯಾಗಳ ಈ ಕಾಲಘಟ್ಟದಲ್ಲಿ ಪದೇ ಪದೇ ಕಾಂಟ್ರವರ್ಸಿ ಕಾಮನ್ ಎನ್ನುವಂತೆ ಆಗಿದೆ. ಕನ್ನಡದ ಕೆಲವು ನಟ & ನಟಿಯರು ಈ ರೀತಿ ಸೋಷಿಯಲ್ ಮೀಡಿಯಾ ಕಾರಣಕ್ಕೆ ಪೊಲೀಸ್ ಠಾಣೆ ಹಾಗೂ ಕೋರ್ಟ್ ಮೆಟ್ಟಿಲು ಹತ್ತುವ ಪರಿಸ್ಥಿತಿಯು ಕೂಡ ಬಂದಿದೆ. ಒಂದು ಕಡೆ ಇದು ಟ್ರೊಲರ್ಸ್ ಹಾಗೂ ರೋಸ್ಟರ್ಸ್‌ಗೆ ಕಂಟೆಂಟ್ ಕೊಟ್ಟರೆ, ಇನ್ನೂ ಕೆಲವರು ಇದು ತಪ್ಪು ಕನ್ನಡ ಸಿನಿಮಾ ರಂಗಕ್ಕೆ ಇದರಿಂದ ಹಿನ್ನಡೆ ಆಗುತ್ತೆ ಅಂತಾರೆ. ಹೀಗಿದ್ದಾಗಲೇ, ಕನ್ನಡ ನಟ ದಿಢೀರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯಾಕೆ ತಿಳಿಯಿರಿ...
ನಟ ಧ್ರುವಂತ್ ಬಿಗ್‌ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಳ್ಳುತ್ತಲೇ ಸದ್ದು ಮಾಡಿದ್ದರು, ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಸಹ ಸ್ಪರ್ಧಿಗಳ ನಡುವೆ ಪದೇ ಪದೇ ಕಿರಿಕ್ ಆಗುತ್ತಲೇ ಇತ್ತು. ಇದೀಗ ಬಿಗ್‌ಬಾಸ್‌ನ ಅಬ್ಬರ ಮುಗಿದಿದ್ದರೂ ಹೊರಗಡೆ ನಟ ಧ್ರುವಂತ್ ಅವರ ಕಿರಿಕ್ ಅಥವಾ ಕಾಂಟ್ರವರ್ಸಿ ನಿಂತಿಲ್ಲ ಅನ್ನೋ ಚರ್ಚೆ ನಡೆಯುತ್ತಲೇ ಇದೆ. ಈ ಮಾತಿಗೆ ಬಲ ತುಂಬುವಂತೆ, ಖಾಸಗಿ ಸಂದರ್ಶನದಲ್ಲಿ ಹೆಣ್ಣು ಮಕ್ಕಳು ಹಾಗೂ ಮದುವೆ ಸಂಬಂಧದ ಕುರಿತು ನಟ ಧ್ರುವಂತ್ ನೀಡಿದ್ದ ಹೇಳಿಕೆಗಳು ದೊಡ್ಡ ವಿವಾದದ ಬಿರುಗಾಳಿ ಎಬ್ಬಿಸಿವೆ. ಹೀಗಿದ್ದಾಗಲೇ ಧ್ರುವಂತ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಪರ ವಿರೋಧದ ಚರ್ಚೆ ಜೋರಾಗಿದೆ. ಹಾಗಾದರೆ ಇದೀಗ ಧ್ರುವಂತ್ ಪೊಲೀಸ್ ಠಾಣೆಗೆ ಹೋಗಿದ್ದಾದರೂ ಯಾಕೆ? ಬನ್ನಿ ತಿಳಿಯೋಣ.
ಈಗಿನ ಕಾಲದ ಮದುವೆಗಳು ಅಂದ್ರೆ ವ್ಯವಹಾರ??
ಇತ್ತೀಚೆಗೆ ಖಾಸಗಿ ಮಾಧ್ಯಮ ಒಂದರ ಇಂಟರ್ವ್ಯೂವ್ ವೇಳೆ ನಟ ಧ್ರುವಂತ್, ಈಗಿನ ಕಾಲದ ಮದುವೆ & ಸಂಬಂಧ ಕುರಿತು ಕೆಲ ಅಭಿಪ್ರಾಯ ಹಂಚಿಕೊಂಡಿದ್ದರು. ಇಂದಿನ ದಿನಗಳಲ್ಲಿ ಮದುವೆ ಎಂಬುದು ಒಂದು ವ್ಯವಹಾರ ಆಗಿದೆ ಎಂದಿದ್ದರು. ಮದುವೆಗೂ ಮೊದಲೇ ಹಲವರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುತ್ತಾರೆ. ಮದುವೆಗೆ ಮುಂಚೆನೇ ದೈಹಿಕ ಅಥವಾ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುತ್ತಾರೆ ಎಂದೆಲ್ಲಾ ಮಾತನಾಡಿದ್ದರು. ಇದೇ ವೇಳೆ ನಟ ಧ್ರುವಂತ್ ಆಡಿದ್ದ ಕೆಲವು ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಬೆಂಕಿಯ ಕಿಡಿ ಹೊತ್ತಿಸಿಬಿಟ್ಟಿದೆ. ಇದೇ ಕಾರಣಕ್ಕೆ ಇದೀಗ ಪೊಲೀಸ್ ಠಾಣೆಗೆ ಹೋಗಿದ್ದಾರೆ ನಟ ಹಾಗೂ ಬಿಗ್‌ಬಾಸ್ ಸ್ಪರ್ಧಿ ಧ್ರುವಂತ್ ಅವರು.
ಕಿಡಿಗೇಡಿಗಳ ವಿರುದ್ಧ ರೊಚ್ಚಿಗೆದ್ದ ಧ್ರುವಂತ್
ನಟ ಧ್ರುವಂತ್ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು, ಧ್ರುವಂತ್ ಹೇಳಿಕೆ ಹೆಣ್ಣುಮಕ್ಕಳ ಅವಮಾನಿಸುವಂತಿವೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೇ ಧ್ರುವಂತ್ ಅವರನ್ನ ಈಗ ಮಹಿಳಾ ವಿರೋಧಿ ಎಂದು ಬಿಂಬಿಸಿ ಸೋಷಿಯಲ್ ಮೀಡಿಯಾಗಳ ವೇದಿಕೆಗಳಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಕೆಲವು ಕಿಡಿಗೇಡಿಗಳು, ಕೆಟ್ಟದಾಗಿ ಕಾಮೆಂಟ್‌ಗಳನ್ನೂ ಮಾಡಿ ನಿಂದಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೇ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧವಾಗಿ ರೊಚ್ಚಿಗೆದ್ದ ನಟ ಧ್ರುವಂತ್, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಿಸಿ ಬಂದಿದ್ದಾರೆ.
ಪೊಲೀಸರಿಗೆ ಧ್ರುವಂತ್ ಮನವಿ ಏನು?
ಅಂದಹಾಗೆ, ವಿವಿಧ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಕಾಮೆಂಟ್ ಬಾಕ್ಸ್‌ಗಳಲ್ಲಿ ಧ್ರುವಂತ್ ವಿರುದ್ಧ ಕೇವಲ ಟೀಕೆಗಳಷ್ಟೇ ಅಲ್ಲದೆ ಅತ್ಯಂತ ಕೀಳು ಮಟ್ಟದ & ಅವಾಚ್ಯ ಶಬ್ದಗಳಿಂದ ಕೂಡಿದ ನಿಂದನೆಗಳು ಹರಿದು ಬಂದಿದ್ದವು. ಹೀಗಿದ್ದಾಗ ಆ ಹೇಳಿಕೆಗಳನ್ನು ಮುನ್ನೆಲೆಗೆ ತಂದು, ವೈಯಕ್ತಿಕ ಬದುಕಿಗೂ ಮಸಿ ಬಳಿಯುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಮೂಹಿಕವಾಗಿ ಟಾರ್ಗೆಟ್ ಮಾಡಿ ಕೆಟ್ಟ ಕೆಟ್ಟ ಕಾಮೆಂಟ್ಸ್ ಮೂಲಕವೇ ಮಾನಸಿಕ ಕಿರುಕುಳ ನೀಡುತ್ತಿರುವವರ ವಿರುದ್ಧ ಧ್ರುವಂತ್ ಗಂಭೀರ ಹೆಜ್ಜೆ ಇಟ್ಟಿದ್ದಾರಂತೆ. ತಮ್ಮ ವಿರುದ್ಧ ಅಪಪ್ರಚಾರ ಮಾಡಿರುವ & ಅವಾಚ್ಯವಾಗಿ ನಿಂದಿಸಿದ್ದ ಕೆಲವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.