ಕನ್ನಡ ಸಿನಿಮಾ ರಂಗಕ್ಕೆ ಒಂದಾದ ನಂತರ ಒಂದೊಂದು ಸಮಸ್ಯೆಗಳು ಎದುರಾಗುತ್ತಿದ್ದು, ಸಾಲು ಸಾಲು ಸಿನಿಮಾಗಳು ಸೋತು ಹೋಗುತ್ತಿವೆ. ಇನ್ನೊಂದು ಕಡೆ ಥಿಯೇಟರ್‌ಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಚಿಂತೆ ಕೂಡ ಹೆಚ್ಚಾಗಿದ್ದು, ಕನ್ನಡ ಸಿನಿಮಾಗಳ ಭವಿಷ್ಯದ ಬಗ್ಗೆ ಕನ್ನಡಿಗರು ಚಿಂತೆ ಮಾಡುವಂತೆ ಆಗಿದೆ. ಹೀಗಿದ್ದಾಗ ಕನ್ನಡ ಸಿನಿಮಾ ರಂಗದಲ್ಲಿ ಇದೀಗ ತಿಕ್ಕಾಟ, ಕಿತ್ತಾಟಗಳು ಕೂಡ ಜೋರಾಗುತ್ತಾ ವಿವಾದ ಭುಗಿಲೇದ್ದಿವೆ. ಹೀಗಿದ್ದಾಗಲೇ ಕನ್ನಡ ಸಿನಿಮಾ ರಂಗದಲ್ಲಿ ಜೋರಾಯ್ತು ಕರಾವಳಿ ಕಲಹ... ಹಾಗಾದರೆ ಏನಿದು ಹೊಸ ಕಿರಿಕ್? ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಸ್ಯಾಂಡಲ್‌ವುಡ್ ಅಂದ್ರೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬಹು ನಿರೀಕ್ಷಿತ ಚಿತ್ರ ಕರಾವಳಿ ಟ್ರೇಲರ್ ರಿಲೀಸ್ ಕಾರ್ಯಕ್ರಮದ ವೇಳೆ ನಡೆದಿದ್ದ ಗಲಾಟೆ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಸಿನಿಮಾದ ಡೈರೆಕ್ಷರ್ ಗುರುದತ್ ಗಾಣಿಗ ನೀಡಿರುವ ದೂರಿನ ಹಿನ್ನೆಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ನಟ ಪ್ರಜ್ವಲ್ ದೇವರಾಜ್ & ಅವರ ಆಪ್ತರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ. ಟ್ರೇಲರ್ ರಿಲೀಸ್ ಕಾರ್ಯಕ್ರಮದ ವೇಳೆ, ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಿದ ಆರೋಪವನ್ನ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಎಂಬುವರ ವಿರುದ್ಧ ಉಪ್ಪಾರಪೇಟೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 352, 292 ಹಾಗೂ 3 (5) ರ ಅಡಿ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಪ್ರಜ್ವಲ್ ದೇವರಾಜ್ ವಿರುದ್ಧವೂ ದೂರು
ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ 'ಕರಾವಳಿ' ಸಿನಿಮಾ ಟ್ರೇಲರ್ ರಿಲೀಸ್ ವೇಳೆ ನಡೆದ ಗಲಾಟೆ ಇದೀಗ ಕಾನೂನು ಹೋರಾಟದ ಹಾದಿ ಹಿಡಿದಿದೆ. ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದ ಬಗ್ಗೆ ಸಿನಿಮಾದ ಡೈರೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಕೆಲವರ ಪಾತ್ರದ ಬಗ್ಗೆಯೂ ಕೇಳಿಬಂದ ಆರೋಪದ ಬಗ್ಗೆ ಇದೀಗ ತನಿಖೆ ಆರಂಭಿಸಲಾಗಿದೆ. ಉದ್ದೇಶಪೂರ್ವಕವಾಗಿ ಟ್ರೇಲರ್ ರಿಲೀಸ್ ಆಗುವ ಸ್ಥಳಕ್ಕೆ ನುಗ್ಗಿ ಗುಂಪು ಕಟ್ಟಿಕೊಂಡು ನಿರ್ದೇಶಕರು, ನಿರ್ಮಾಪಕರು, ಅಲ್ಲಿದ್ದ ಚಿತ್ರತಂಡಕ್ಕೆ ತೊಂದರೆಯನ್ನ ಕೊಟ್ಟಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ಸಿನಿಮಾ ತಂಡದವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.
ಸಿನಿಮಾ ಶೂಟಿಂಗ್ ಸಮಯದಲ್ಲಿ ಆಗಿದ್ದೇನು?
ಕಾರ್ಯಕ್ರಮದಲ್ಲಿ ಗಲಾಟೆ ಮಾಡಿರುವವರು ಅಭಿಮಾನಿಗಳು ಮಾತ್ರವಲ್ಲ, ಬದಲಾಗಿ ಅವರೆಲ್ಲಾ ಸ್ವತಃ ಪ್ರಜ್ವಲ್ ದೇವರಾಜ್ ಅವರ ಜೊತೆಗೆ ಕೆಲಸ ಮಾಡುವವರು ಎನ್ನಲಾಗಿದೆ. ಗಲಾಟೆ ಮಾಡಿದ ವ್ಯಕ್ತಿಗಳು ಕರಾವಳಿ ಸಿನಿಮಾದ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರಿಗೆ ವೈಯಕ್ತಿಕ ಸಹಾಯಕರಾಗಿ ಕೆಲಸ ಮಾಡಿದ್ದರು ಎಂದು ಸಿನಿಮಾ ತಂಡದ ಸದಸ್ಯರು ಆರೋಪ ಮಾಡಿದ್ದಾರೆ. ಕರಾವಳಿ ಸಿನಿಮಾದ ವ್ಯವಹಾರದಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗಿದ್ದ ಹಿನ್ನೆಲೆ, ನಟ ಪ್ರಜ್ವಲ್ ದೇವರಾಜ್ ಅವರೇ ಉದ್ದೇಶಪೂರ್ವಕವಾಗಿ ತಮ್ಮ ಆಪ್ತರನ್ನು ಕಳುಹಿಸಿ ಈ ಗಲಾಟೆ ಮಾಡಿಸಿದ್ದಾರೆ ಎಂದು ಸಿನಿಮಾ ತಂಡ ಆರೋಪಿಸಿದೆ. ಇಷ್ಟೆಲ್ಲದರ ನಡುವೆ ದಿಢೀರ್ ಅಂತಾ ಕಾನೂನು ಸಮರ ಕೂಡ ಶುರುವಾಗಿದ್ದು ಸಿನಿಮಾ ರಂಗದಲ್ಲಿ ತಲ್ಲಣ ಎಬ್ಬಿಸಿದೆ.
ಒಟ್ನಲ್ಲಿ ಕೊರೊನಾ ಅಪ್ಪಳಿಸಿದ ನಂತರ ಕನ್ನಡ ಸಿನಿಮಾ ರಂಗ ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಆನ್‌ಲೈನ್ ಹಾಗೂ ಓಟಿಟಿ ಅಬ್ಬರ ಶುರುವಾದ ನಂತರ ಮತ್ತಷ್ಟು ಸಮಸ್ಯೆ ಎದುರಾಗಿವೆ. ಇಂತಹ ಸಮಯದಲ್ಲೇ ಕನ್ನಡ ಸಿನಿಮಾ ರಂಗದಲ್ಲಿ ತಿಕ್ಕಾಟ ಜೋರಾಗಿರುವುದು ಅಭಿಮಾನಿಗಳಿಗೆ ಕೂಡ ಬೇಸರ ತರಿಸಿರುವುದು ಸುಳ್ಳಲ್ಲ. ಆದರೆ ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತೆ? ಕರಾವಳಿ ಸಿನಿಮಾ ಕಲಹ ಇಲ್ಲಿಗೆ ನಿಲ್ಲುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.