ಬೆಂಗಳೂರು: ಇಡೀ ದೇಶದಲ್ಲಿ ಬಿಜೆಪಿ ಪಕ್ಷ ದೊಡ್ಡ ಮಟ್ಟದ ಹೆಸರು ಮಾಡಿದ್ದು, ದೇಶದ ಮೂಲೆ ಮೂಲೆಯಲ್ಲಿಯೂ ಅಧಿಕಾರದ ಬಾವುಟ ಹಾರಿಸುತ್ತಾ ಗೆಲುವಿನ ನಗೆ ಬೀರುತ್ತಿದೆ ಕೇಸರಿ ಪಕ್ಷ. ಆದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಸ್ಥಿತಿ ಬೇರೆಯೇ ಆಗಿಬಿಟ್ಟಿದೆ ಈಗ. ಒಂದು ಕಡೆ 2023 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕರ್ನಾಟಕ ಬಿಜೆಪಿ ನಾಯಕರನ್ನು ಕಂಗೆಡಿಸಿತ್ತು, ಆ ನಂತರ ಎದುರಾದ ಸವಾಲುಗಳು ಕೂಡ ಪಕ್ಷವನ್ನು ಕಂಗೆಡಿಸಿವೆ. ಇದೆಲ್ಲವೂ ಸಾಲದು ಎನ್ನುವಂತೆ ಪಕ್ಷದಲ್ಲಿ ಆಂತರಿಕ ಭಿನ್ನಮತ ಕೊತ ಕೊತ ಕುದಿಯುತ್ತಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಈ ಬೆಳವಣಿಗೆ ಕಂಗೆಟ್ಟು ಹೋಗುವಂತೆ ಮಾಡಿದೆ.
ಅಂದಹಾಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು ಸೇರಿ ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಯ ಕಾರ್ಯವೈಖರಿ ಪ್ರಮುಖ ಚರ್ಚೆಯ ವಿಷಯಗಳಾಗಿದ್ದವು. ಮತ್ತೊಂದು ಕಡೆ ಹಿರಿಯ ನಾಯಕರು ರಾಜ್ಯ ಘಟಕದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗೇ ಕರ್ನಾಟಕದ ಬಿಜೆಪಿ ಘಟಕದಲ್ಲಿ ಘಟಾನುಘಟಿ ನಾಯಕರೇ ತಿಕ್ಕಾಟ ನಡೆಸುತ್ತಿರುವುದು, ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಇದೀಗ ದಾರಿ ಮಾಡಿಕೊಟ್ಟಿದೆ.
ಸುಧಾಕರ್ & ವಿಶ್ವನಾಥ್ ನಡುವೆ ಸಂಧಾನ
ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನಡುವಿನ ಸಾರ್ವಜನಿಕ ವಾಗ್ವಾದಕ್ಕೂ ಇಂದಿನ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೆರೆಯನ್ನ ಎಳೆಯಲಾಯಿತು. ಹಿರಿಯ ನಾಯಕರು ಇಬ್ಬರನ್ನೂ ಮುಖಾಮುಖಿ ಕೂರಿಸಿ ಮಾತುಕತೆ ನಡೆಸಿದ ಬಳಿಕ, ಇನ್ಮುಂದೆ ವೈಯಕ್ತಿಕ ಭಿನ್ನಾಭಿಪ್ರಾಯವನ್ನ ಬಹಿರಂಗವಾಗಿ ವ್ಯಕ್ತಪಡಿಸದೇ ಪಕ್ಷದ ವೇದಿಕೆಯಲ್ಲೇ ಚರ್ಚಿಸುವಂತೆ ಸೂಚನೆ ನೀಡಿದರು. ಬಳಿಕ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ವಿವಾದಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದಾರೆ. ಹೀಗಿದ್ದರೂ ಪರಿಸ್ಥಿತಿ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇದೆ ಎನ್ನಲಾಗಿದೆ.
ಇಬ್ಬರೂ ನಾಯಕರಿಗೆ ಖಡಕ್ ಎಚ್ಚರಿಕೆ
ಪಕ್ಷದ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವ ಇಬ್ಬರು ನಾಯಕರು ಹಿಂಗೆ ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುವುದು ಯಾರಿಗೂ ಶೋಭೆ ತರುವುದಿಲ್ಲ. ಹೈಕಮಾಂಡ್ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ, ಎಂದು ಪ್ರಲ್ಹಾದ್ ಜೋಷಿ ಅವರು ಈ ಇಬ್ಬರೂ ನಾಯಕರಿಗೆ ಕಟು ಶಬ್ದಗಳಲ್ಲಿ ಕಿವಿಮಾತು ಹೇಳಿದರು. ಹಾಗೇ ಇನ್ಮುಂದೆ ಇಬ್ಬರೂ ಪರಸ್ಪರರ ವಿರುದ್ಧ ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡಬಾರದು, ಏನೇ ಭಿನ್ನಾಭಿಪ್ರಾಯ ಇದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು ಎಂದು ಖಡಕ್ ಆಗಿ ತಾಕೀತು ಮಾಡಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು.
ಅಡ್ಡಮತದಾನ ವಿಚಾರವಾಗಿ ಭರ್ಜರಿ ಚರ್ಚೆ
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ವಿಚಾರ ಇದೇ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಬೆಳವಣಿಗೆಯಿಂದ ಪಕ್ಷದ ಪ್ರತಿಷ್ಠೆಗೆ ಧಕ್ಕೆ ಆಗಿದೆ ಎಂದು ಹಿರಿಯರು ಅಭಿಪ್ರಾಯಪಟ್ಟರು. ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕರ ಮೇಲಿನ ಅತಿಯಾದ ನಂಬಿಕೆ ಪರಿಣಾಮ ಹಿನ್ನಡೆ ಆಗಿದ್ದು, ಅಡ್ಡಮತದಾನದ ಬಗ್ಗೆ ಯಾವುದೇ ಮುನ್ಸೂಚನೆ ಸಿಕ್ಕಿರಲಿಲ್ಲ ಎಂದಿದ್ದಾರೆ. ಈ ಸಂಬಂಧ ಸಿ.ಟಿ. ರವಿ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯ ಆಧಾರದ ಮೇಲೆ ಮುಂದಿನ ಶಿಸ್ತು ಕ್ರಮದ ಕುರಿತು ಚರ್ಚೆ ನಡೆಯಿತು.
ಹಾಗೇ ಇದೇ ಸಮಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಸಮನ್ವಯದ ಕೊರತೆಯ ಬಗ್ಗೆಯೂ ಸಭೆಯಲ್ಲಿ ಗಂಭೀರ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿ ಪಕ್ಷದ ಕರ್ನಾಟಕ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಸರ್ಕಾರದ ವಿರುದ್ಧದ ಹೋರಾಟಗಳಲ್ಲಿ ಉಭಯ ಪಕ್ಷಗಳು ಪ್ರತ್ಯೇಕವಾಗಿ ನಡೆದುಕೊಳ್ಳುತ್ತಿರುವ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಎಲ್ಲಾ ರಾಜಕೀಯ ಚಟುವಟಿಕೆಗಳು ಮತ್ತು ಪ್ರತಿಭಟನೆಗಳನ್ನ ಜಂಟಿಯಾಗಿ ನಡೆಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಇನ್ನು ಈ ಸಭೆಯ ಅಂತ್ಯದಲ್ಲಿ ಮೈತ್ರಿ ಪಕ್ಷದೊಂದಿಗೆ ಇನ್ನಷ್ಟು ಸಮನ್ವಯ ಸಾಧಿಸಿ ಒಗ್ಗಟ್ಟಿನ ಸಂದೇಶ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ನಾಯಕರಿಗೆ ಭರವಸೆಯನ್ನ ನೀಡಿದ್ದಾರೆ.