Karnataka Cabinet: ಹಳೇ ತಲೆಗಳಿಗೆ ಗೇಟ್‌ಪಾಸ್, ಮಂತ್ರಿ ಪಟ್ಟ ಕಿತ್ತಾಟದಿಂದ ಪಕ್ಷಕ್ಕೇ ಆಪತ್ತು?

bengaluru diaries | July 19, 2026 - 11:11 am
ಆ ಒಂದು.. ಆ ಎರಡು.. ಆ ಮೂರು.. ಹೀಗೆ ಒಂದು ಕಡೆ ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ ನೇತೃತ್ವದ ವಿರೋಧ ಪಕ್ಷಗಳ ನಾಯಕರು ತಿಂಗಳು ಲೆಕ್ಕ ಹಾಕುತ್ತಾ 2028 ವಿಧಾನಸಭೆ ಚುನಾವಣೆಗೆ ಕಾಯುತ್ತಾ ಕೂತಿದ್ದಾರೆ. ಆದರೆ ಇದೇ ಸಮಯದಲ್ಲಿ ಮತ್ತೊಂದು ಕಡೆ ಕಾಂಗ್ರೆಸ್ ನಾಯಕರು ಸರ್ಕಾರದಲ್ಲಿ ರೊಚ್ಚಿಗೆದ್ದವರನ್ನ ಇದೀಗ ಸಮಾಧಾನ ಮಾಡಲು ರಣತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ಸಚಿವ ಸ್ಥಾನ ಬೇಕು ಅಂತಾ ಟವೆಲ್ ಹಾಕಿ ಕೂತಿರುವ 50 ಶಾಸಕರನ್ನು ಸಮಾಧಾನ ಮಾಡುವುದೇ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ದೊಡ್ಡ ತಲೆನೋವು ತರಿಸಿದೆ. ಹೀಗಿದ್ದಾಗಲೇ, ಹಳೇ ತಲೆಗಳಿಗೆ ಗೇಟ್‌ಪಾಸ್ & ಮಂತ್ರಿ ಪಟ್ಟ ಕಿತ್ತಾಟದಿಂದ ಪಕ್ಷಕ್ಕೇ ಆಪತ್ತು?

ಕಾಂಗ್ರೆಸ್ ನಾಯಕರಿಗೆ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗಿದೆ, ಒಂದು ಕಡೆ ಬಿಬಿಎಂಪಿ ಚುನಾವಣೆ ಅಂದ್ರೆ ಇದೀಗ ಜಿಬಿಎ ಆಗಿ ಬದಲಾಗಿರುವ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಎಲೆಕ್ಷನ್ ಎದುರಿಸೋದಕ್ಕೆ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲೇ ಮತ್ತೊಂದು ಭಾರಿ ದೊಡ್ಡ ಸವಾಲು 'ಕೈ' ಪಡೆಗೆ ಎದುರಾಗಿದ್ದು, ವಿಲವಿಲ ಒದ್ದಾಡುತ್ತಿದ್ದಾರೆ. ಅತ್ತ ಪೋದರೆ ದರಿ ಇತ್ತ ಪೋದರೆ ಪುಲಿ ಎಂಬಂತೆ ಒದ್ದಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಇದೀಗ ರಾಹುಲ್ ಗಾಂಧಿ ನೀಡಿರುವ ಹೊಸ ಆದೇಶ ಇನ್ನಷ್ಟು ಬೆಚ್ಚಿ ಬೀಳುವಂತೆ ಮಾಡಿದೆ. ಹೌದು, ಕಾಂಗ್ರೆಸ್ ಪಕ್ಕದಲ್ಲಿ ಈ ಹಿಂದೆ ಸಚಿವರಾಗಿ ಅಧಿಕಾರ ಅನುಭವಿಸಿದ್ದ ಶಾಸಕರಿಗೆ ದೊಡ್ಡ ಶಾಕ್ ಕೊಟ್ಟಿದೆ ಹೈಕಮಾಂಡ್.



ಹೊಸ ಮುಖಗಳು ಎಲ್ಲಿದ್ದಾವೆ ರೀ??
ಅಧಿಕಾರದ ಆಸೆಗೆ ರಾಜಕೀಯ ನಾಯಕರು ಏನು ಬೇಕಾದರೂ ಮಾಡುತ್ತಾರೆ ಎಂಬ ಆರೋಪ ಇದೆ. ಆದರೆ ಈ ಮಾತು ಕೆಲವರ ವಿಚಾರದಲ್ಲಿ ಸುಳ್ಳಾದರೂ, ಅಧಿಕಾರ ಅನುಭವಿಸಲು ಕಿತ್ತಾಡುವುದಕ್ಕೆ ರಾಜಕಾರಣಿಗಳು ಸದಾ ಸಿದ್ಧ ಎಂಬುದು ಸತ್ಯ. ಹೀಗಿದ್ದಾಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೆಳಗೆ ಇಳಿದು ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ ನಂತರ ದೊಡ್ಡ ದೊಡ್ಡ ಬದಲಾವಣೆ ಆಗುತ್ತಿದೆ. ಈ ಪೈಕಿ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಶಾಸಕರಾಗಿ ಗೆದ್ದು, ಸಚಿವರಾಗಿ ಮಂತ್ರಿ ಪಟ್ಟದಲ್ಲಿ ಕೂತು ಅಧಿಕಾರ ಅನುಭವಿಸಿದ್ದವರಿಗೆ ದೊಡ್ಡ ಆಘಾತ ಎದುರಾಗಿದೆ. ಅದು ಏನಂದ್ರೆ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ನೀಡಿದ್ದ ಪಟ್ಟಿಯಲ್ಲಿ ಈಗಾಗಲೇ ಸಚಿವರಾಗಿದ್ದ ಹಲವು ಶಾಸಕರ ಹೆಸರು ಇತ್ತಂತೆ. ಈ ಪಟ್ಟಿಯನ್ನ ನೋಡಿದ ರಾಹುಲ್ ಗಾಂಧಿ ರೊಚ್ಚಿಗೆದ್ದಿದ್ದಾರೆ ಎನ್ನಲಾಗಿದೆ.

ಹೌದು, ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ಕರ್ನಾಟಕ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಹೊಸ ಆದೇಶ ಹೊರಡಿಸಿದ್ದಾರೆ. ಅಷ್ಟಕ್ಕೂ ಈಗಾಗಲೇ ಮಂತ್ರಿ ಆಗಿದ್ದ ಶೇಕಡಾ 60 ರಷ್ಟು ಶಾಸಕರನ್ನು ಸಚಿವ ಸಂಪುಟದಿಂದ ದೂರ ಇಡಲು ಆದೇಶಿಸಿದ್ದಾರೆ ಎನ್ನಲಾಗಿದೆ. ಹಾಗೇ ಭಾರಿ ದೊಡ್ಡ ಪ್ರಮಾಣದಲ್ಲಿ ಹೊಸ ಮುಖಗಳಿಗೆ ಅಂದ್ರೆ ಹೊಸ ಹೊಸ ಶಾಸಕರಿಗೆ ಅವಕಾಶ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ 2 ಅಥವಾ 3ಕ್ಕೂ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆ ಆಗಿ, ಈವರೆಗೂ ಸಚಿವ ಸ್ಥಾನ ಪಡೆಯದೇ ಇರುವವರಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ನಂತರ ಅಲ್ಲೋಲ & ಕಲ್ಲೋಲ?
ನಿಮಗೆಲ್ಲಾ ಗೊತ್ತಿರುವಂತೆ 2023ರ ವಿಧಾನಸಭೆ ಚುನಾವಣೆ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ದೊಡ್ಡ ಬದಲಾವಣೆ ಮಾಡಲಾಗಿತ್ತು. ಅದರಲ್ಲೂ ಎಚ್.ಕೆ. ಪಾಟೀಲ್, ಬಸವರಾಜ ರಾಯರೆಡ್ಡಿ ರೀತಿ ತುಂಬಾ ಅನುಭವ ಇರುವ ಹಿರಿಯ ನಾಯಕರನ್ನೇ ದೂರ ಇಟ್ಟು ಸರ್ಕಾರ ರಚನೆ ಮಾಡಲಾಗಿತ್ತು. ಹೀಗಿದ್ದಾಗ ಇದೀಗ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರೆಲ್ಲಾ ಇದ್ದಾರೆ, ಹಿರಿಯ ಶಾಸಕರ ದೊಡ್ಡ ಬೆಟಾಲಿಯನ್ ಮಂತ್ರಿ ಸ್ಥಾನಕ್ಕಾಗಿ ಕಾಯುತ್ತಾ ಕೂತಿದೆ. ಆದರೆ ಇದೀಗ ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿರುವ ಕಾಂಗ್ರೆಸ್ ನಾಯಕರು ದಿಢೀರ್ ದೊಡ್ಡ ಶಾಕ್ ಕೊಟ್ಟಿದ್ದಾರೆ, ಈ ಮೂಲಕ ಪಕ್ಷದಲ್ಲಿ ಅಧಿಕಾರ ಸಿಗದೇ ಇರುವವರಿಗೆ ಅಧಿಕಾರ ನೀಡಲು ಮುಂದಾಗಿದ್ದಾರೆ.

ಮತ್ತೊಂದು ಕಡೆ ಕಾಂಗ್ರೆಸ್ ವರಿಷ್ಠರ ಇದೇ ನಿರ್ಧಾರ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವ, ಆ ಮೂಲಕ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗುವಂತೆ ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ ಎನ್ನಲಾಗ್ತಿದೆ. ಈ ನಡುವೆ ಅಧಿಕಾರ ಸಿಗದೇ ಇದ್ದರೆ ಹಲವು ಶಾಸಕರು ಪಕ್ಷ ಬಿಟ್ಟು ಹೋಗುತ್ತಾರಾ? ಎಂಬ ಚರ್ಚೆ ಕೂಡ ಇದೀಗ ಹಲ್‌ಚಲ್ ಎಬ್ಬಿಸಿದೆ. ಇದಕ್ಕೆಲ್ಲಾ ಸಿದ್ಧವಾಗಿಯೇ ಇರಿ ಎಂದು ಕೂಡ ರಾಹುಲ್ ಗಾಂಧಿ ಇದೀಗ ಸೂಚನೆಯನ್ನು ನೀಡಿರುವುದು ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಇನ್ನಷ್ಟು ಇರಿಸು & ಮುರಿಸು ತರಿಸಿದೆ. ಮತ್ತೊಂದು ಕಡೆ ಬಿಜೆಪಿ & ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದಾರೆ.

2029ರ ಲೋಕಸಭೆ ಚುನಾವಣೆ ಟಾರ್ಗೆಟ್?
ಕರ್ನಾಟಕ ಸರ್ಕಾರದಲ್ಲಿ ಈ ಬಾರಿಯ ಸಂಪುಟ ವಿಸ್ತರಣೆಯು ಕೇವಲ ಜಾತಿ, ಜಿಲ್ಲಾವಾರು, ಪ್ರಾದೇಶಿಕ ಅಥವಾ ಭಾಷಾ, ಧರ್ಮದ ಲೆಕ್ಕದಲ್ಲಷ್ಟೇ ನಡೆಯುತ್ತಿಲ್ಲ ಎಂಬುದನ್ನ ಅರಿಯಬೇಕಿದೆ. ಯಾಕಂದ್ರೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ದೊಡ್ಡ ಸವಾಲು ಎದುರಿಸುತ್ತಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿನ ಸೋಲು ಭಾರಿ ಆಘಾತ ನೀಡಿದೆ. ಹೀಗಿದ್ದಾಗ 2029ರ ಲೋಕಸಭೆ ಚುನಾವಣೆ ಟಾರ್ಗೆಟ್ ಮಾಡಿ ಈ ಬಾರಿ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. 2028ರ ವಿಧಾನಸಭೆ ಚುನಾವಣೆ ಜೊತೆಯಲ್ಲೇ, 2029ರ ಲೋಕಸಭೆ ಚುನಾವಣೆ ಟಾರ್ಗೆಟ್ ಮಾಡಲಾಗಿದೆ.

ಲೋಕಸಭೆಯಲ್ಲಿ ಗೆದ್ದು ತೋರಿಸುವ ಸಾಮರ್ಥ್ಯ ಇರುವ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಈ ಸಮಯದಲ್ಲಿ ಅತ್ತ ಜಮೀರ್ ಅಹ್ಮದ್ ಖಾನ್, ಬಸವರಾಜ ರಾಯರೆಡ್ಡಿ, ಎಚ್.ಕೆ. ಪಾಟೀಲ್ ರೀತಿಯ ಹಿರಿಯ ಶಾಸಕರಿಗೆ ಮತ್ತೊಮ್ಮೆ ಮಂತ್ರಿ ಪಟ್ಟ ಸಿಗುವುದು ಡೌಟ್ ಆಗಿದೆ. ಹಾಗೇ ಇನ್ನೊಂದು ಕಡೆ ರಾಘವೇಂದ್ರ ಹಿಟ್ನಾಳ್, ಗೋಪಾಲಕೃಷ್ಣ ಬೇಳೂರು ಸೇರಿ ರಮೇಶ್ ಬಂಡಿಸಿದ್ದೇಗೌಡ, ನಾಗೇಂದ್ರ, ಗುಬ್ಬಿ ವಾಸು, ನಂಜೇಗೌಡ ಹಾಗೂ ಇತರರು ಈಗಾಗಲೇ ಸಚಿವ ಸ್ಥಾನಕ್ಕೆ ಟವೆಲ್ ಹಾಕಿ ಕಾಯುತ್ತಿದ್ದಾರೆ. ಆದರೆ ಯಾರ ಹಣೆಯಲ್ಲಿ ಮಂತ್ರಿ ಸ್ಥಾನದ ಅದೃಷ್ಟವನ್ನು ಕೇಂದ್ರ ಕಾಂಗ್ರೆಸ್ ಹೈಕಮಾಂಡ್ ಬರೆಯುತ್ತೋ? ಎಂಬುದನ್ನ ಕಾದು ನೋಡಬೇಕಾಗಿದೆ.