ಹಂಗೋ ಹಿಂಗೋ, ಹೆಂಗೆಂಗೋ ಒದ್ದಾಡಿ ಕೊನೆಗೂ ಕರ್ನಾಟಕ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿದೆ. ಆದರೆ ಇದೇ ಸಂಪುಟ ವಿಸ್ತರಣೆ ವಿಚಾರ ಇದೀಗ ದೊಡ್ಡ ಕಿಚ್ಚು ಹೊತ್ತಿಸಿದ್ದು, ಕರ್ನಾಟಕ ಕಾಂಗ್ರೆಸ್ ನಾಯಕರು ರೊಚ್ಚಿಗೆದ್ದು ಬಹಿರಂಗವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮೂಲಕ ಮಂತ್ರಿಪಟ್ಟ ಸಿಗದ ಕೋಪ ಈಗ ಹೊಸ ಬಿರುಗಾಳಿ ಎಬ್ಬಿಸಿದ್ದು, ಸರ್ಕಾರಕ್ಕೆ ಕೂಡ ಆಪತ್ತು ಎದುರಾಗುತ್ತಾ? ಎಂಬ ಚರ್ಚೆ ಶುರು ಮಾಡಿದ್ದಾರೆ ವಿರೋಧ ಪಕ್ಷಗಳ ನಾಯಕರು. ಅದರಲ್ಲೂ, ಸಚಿವ ಸ್ಥಾನ ಸಿಗದ ಕಾರಣಕ್ಕೆ ರಾಜೀನಾಮೆ ಎಚ್ಚರಿಕೆ ನೀಡಿದ್ದ ಶಾಸಕರಿಗೆ ಬಹಿರಂಗವಾಗಿ ವಾರ್ನಿಂಗ್ ಕೊಟ್ಟಿದ್ದಾರೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು.
ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಬಂಡಾಯ ಬೆಂಕಿ ಭುಗಿಲೆದ್ದ ಪರಿಣಾಮ ಹೈಕಮಾಂಡ್ ಎದೆ ನಡುಗಿದೆ. ಯಾಕಂದ್ರೆ ಒಂದು ಕಡೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ಶಾಸಕರು & ಹಿರಿಯ ನಾಯಕರು ಪಕ್ಷದ ವಿರುದ್ಧವೇ ಆಕ್ರೋಶ ಹೊರಹಾಕಿ ರೊಚ್ಚಿಗೆದ್ದು ಕೂತಿದ್ದಾರೆ. ಒಂದೆಡೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಮತ್ತೊಂದೆಡೆ ಬೆಂಬಲಿಗರ ಪ್ರತಿಭಟನೆ ತೀವ್ರಗೊಂಡಿದೆ. ಈ ನಡುವೆ, ಪರಿಸ್ಥಿತಿ ಕೈಮೀರಿ ಹೋಗದ ರೀತಿ ತಡೆಯಲು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದು ಅಸಮಾಧಾನಿತ ನಾಯಕರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಬಿರುಗಾಳಿ!
ಹೌದು, ಕರ್ನಾಟಕ ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಬಿರುಗಾಳಿ ಎದ್ದಿದೆ. ಸಚಿವ ಸ್ಥಾನ ಸಿಗದೆ ಕಡೆಗಣಿಸಲ್ಪಟ್ಟ ಹಿರಿಯ ನಾಯಕರು ಹಾಗೇ ಶಾಸಕರು ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ನಿನ್ನೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯದ ತುತ್ತೂರಿ ಊದಿದ್ದು ಹೊಸ ತಲ್ಲಣವನ್ನೇ ಎಬ್ಬಿಸಿತ್ತು. ಕ್ಷೇತ್ರದ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆಗೆ ಚರ್ಚಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇನ್ನೊಂದು ಕಡೆ, ಮಾಜಿ ಸಚಿವ ದಿನೇಶ್ ಗುಂಡೂರಾವ್ ತಮ್ಮನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡಿ ಎಂದು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಹಾಗಿದ್ರೆ ಈಗ ಮಂತ್ರಿಪಟ್ಟ ಸಿಗದೇ ಇರುವ ಕಾರಣಕ್ಕೆ ರೊಚ್ಚಿಗೆದ್ದಿರುವ ಕಾಂಗ್ರೆಸ್ ಶಾಸಕರು ಯಾರು ಯಾರು?
ಬಂಡಾಯ ಶಾಸಕರು ಇವರೇ ನೋಡಿ!
1) ಯಶವಂತರಾಯಗೌಡ ಪಾಟೀಲ್ - ಇಂಡಿ ಶಾಸಕ
2) ಅಪ್ಪಾಜಿ ನಾಡಗೌಡ - ಮುದ್ದೇಬಿಹಾಳ ಶಾಸಕ
3) ಎನ್.ವೈ. ಗೋಪಾಲಕೃಷ್ಣ - ಮೊಳಕಾಲ್ಮೂರು ಶಾಸಕ
4) ಕೆ. ಷಡಕ್ಷರಿ - ತಿಪಟೂರು ಕ್ಷೇತ್ರದ ಶಾಸಕ
5) ಎಂ. ಕೃಷ್ಫಪ್ಪ - ವಿಜಯನಗರ ಕ್ಷೇತ್ರದ ಶಾಸಕ
6) ಮಾಲೂರು ನಂಜೇಗೌಡ - ಮಾಲೂರು ಶಾಸಕ
7) ನಾರಾಯಣಸ್ವಾಮಿ - ಬಂಗಾರಪೇಟೆ ಶಾಸಕ
8) ದಿನೇಶ್ ಗುಂಡುರಾವ್ - ಗಾಂಧಿ ನಗರ ಶಾಸಕ
9) ತನ್ವೀರ್ ಸೇಠ್ - ನರಸಿಂಹ ಕ್ಷೇತ್ರದ ಶಾಸಕ
10) ಬಿ.ಜಿ. ಗೋವಿಂದಪ್ಪ - ಹೊಸದುರ್ಗ ಶಾಸಕ
11) ಆರ್.ವಿ. ದೇಶಪಾಂಡೆ - ಹಳಿಯಾಳ ಶಾಸಕ
12) ಅಶೋಕ್ ಪಟ್ಟಣ್ - ರಾಮದುರ್ಗ ಶಾಸಕ
13) ಬಿ.ಆರ್. ಪಾಟೀಲ್ - ಆಳಂದ ಶಾಸಕ
14) ಎಚ್.ಆರ್. ಗವಿಯಪ್ಪ - ಹೊಸಪೇಟೆ ಶಾಸಕ
15) ಬಿ.ಕೆ. ಸಂಗಮೇಶ್ - ಭದ್ರಾವತಿ ಶಾಸಕ
16) ಬೇಳೂರು ಗೋಪಾಲಕೃಷ್ಣ - ಸಾಗರ ಶಾಸಕ
17) ಹಂಪನಗೌಡ ಬಾದರ್ಲಿ - ಸಿಂದಗಿ ಕ್ಷೇತ್ರದ ಶಾಸಕ
18) ಟಿ.ಬಿ. ಜಯಚಂದ್ರ - ಶಿರಾ ಕ್ಷೇತ್ರದ ಶಾಸಕ
19) ಗುಬ್ಬಿ ಶ್ರೀನಿವಾಸ್ - ಗುಬ್ಬಿ ಕ್ಷೇತ್ರದ ಶಾಸಕ
20) ಎಚ್.ಕೆ. ಪಾಟೀಲ್ - ಗದಗ ಕ್ಷೇತ್ರದ ಶಾಸಕ
21) ಆರ್.ಬಿ. ತಿಮ್ಮಾಪುರ - ಮುಧೋಳ ಶಾಸಕ
ಒಟ್ನಲ್ಲಿ ಹೀಗಿದ್ದಾಗ ಈ ಬಂಡಾಯದ ಕಿಚ್ಚು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡದಂತೆ ತಡೆಯಲು ಸಿಎಂ ಡಿ.ಕೆ. ಶಿವಕುಮಾರ್ ತಕ್ಷಣವೇ ಕಾರ್ಯಪ್ರವೃತ್ತರಾಗಿ ಹೊಸ ರಣತಂತ್ರ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಅಸಮಾಧಾನಗೊಂಡ ಹಿರಿಯ ಶಾಸಕರನ್ನ ಈಗ ಖುದ್ದು ಸಂಪರ್ಕಿಸುತ್ತಿರುವ ಸಿಎಂ ದೂರವಾಣಿ ಮೂಲಕ ಹಾಗೂ ಭೇಟಿ ಆಗಿ ಮನವೊಲಿಸಲು ಸರ್ವಪ್ರಯತ್ನ ನಡೆಸುತ್ತಿದ್ದಾರೆ. ಆದರೆ ರಾಜ್ಯಾದ್ಯಂತ ಶಾಸಕರ ಬೆಂಬಲಿಗರು ತೀವ್ರ & ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರುವುದು ಕಾಂಗ್ರೆಸ್ ನಾಯಕರಿಗೆ ಇದೀಗ ಸವಾಲಾಗಿ ಪರಿಣಮಿಸಿದೆ. ಒಟ್ನಲ್ಲಿ ಸಂಪುಟ ವಿಸ್ತರಣೆ ಸಂತಸದ ನಡುವೆಯೂ ಕಾಂಗ್ರೆಸ್ ಪಕ್ಷಕ್ಕೆ ಈ ಬಂಡಾಯದ ಬಿಸಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ಮನವೊಲಿಕೆ ತಂತ್ರ ಫಲ ನೀಡುತ್ತಾ? ಅಥವಾ ಅಸಮಾಧಾನಿತ ಶಾಸಕರ ಆಕ್ರೋಶ ಮತ್ತಷ್ಟು ಭುಗಿಲೇಳುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಎಸ್.ಎಸ್. ಮಲ್ಲಿಕಾರ್ಜುನ್ ಪಾಲಿಗೆ ಮಂತ್ರಿಪಟ್ಟ!
ದಾವಣಗೆರೆ ರಾಜಕೀಯದಲ್ಲಿ ತೀವ್ರ ಪ್ರಭಾವ ಹೊಂದಿರುವ ಶಾಮನೂರು ಕುಟುಂಬದ ವಿರೋಧ ಕಟ್ಟಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿತ್ತೇನೋ ಗೊತ್ತಿಲ್ಲ. ಇದೇ ಕಾರಣಕ್ಕೆ ಶಾಮನೂರು ಶಿವಂಕರಪ್ಪ ಅವರ ಮಗ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಆರಂಭದಲ್ಲಿ ಸಚಿವ ಸ್ಥಾನ ನೀಡಿರಲಿಲ್ಲ. ಹೀಗಿದ್ದಾಗ ಮೊನ್ನೆಯಷ್ಟೇ ಶಾಮನೂರು ಕುಟುಂಬದ ವಿರುದ್ಧ ಪರೋಕ್ಷವಾಗಿ ತೊಡೆತಟ್ಟಿದ್ದ ಜಮೀರ್ ಅಹ್ಮದ್ ಖಾನ್‌ಗೆ ಅವಕಾಶ ಸಿಕ್ಕ ಕಾರಣಕ್ಕೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಅದರಲ್ಲೂ ಎಸ್.ಎಸ್. ಮಲ್ಲಿಕಾರ್ಜುನ್ ತಮಗೆ ಸಚಿವ ಸ್ಥಾನ ಕೊಡದೇ ಇದ್ದರೇ ಮಲ್ಲಿಕಾರ್ಜುನ್ ಅವರ ಪತ್ನಿಯ ಸಂಸದರ ಸ್ಥಾನ ಹಾಗೂ ಪುತ್ರನ ಶಾಸಕ ಸ್ಥಾನವೂ ಸೇರಿ ಖುದ್ದು ತಮ್ಮ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು.
ಲಿಂಗಾಯತ ಸಮುದಾಯದ ಪ್ರಭಾವಿ ಕುಟುಂಬದ ವಿರೋಧ ಕಟ್ಟಿಕೊಳ್ಳಲು ಇಚ್ಛಿಸದ ಕಾಂಗ್ರೆಸ್ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಮಣಿದಿದೆ. ಪರಿಣಾಮ ಮೊದಲ ಪಟ್ಟಿಯಲ್ಲಿದ್ದ ಮಂಕಾಳು ವೈದ್ಯ ಅವರ ಹೆಸರನ್ನ ಕೈಬಿಟ್ಟು ಆ ಸ್ಥಾನಕ್ಕೆ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರ ಸೇರ್ಪಡೆಗೊಳಿಸಲಾಯಿತು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿರುವ ಎಸ್.ಎಸ್. ಮಲ್ಲಿಕಾರ್ಜುನ್, ಮಂಕಾಳು ವೈದ್ಯ ಅವರ ಹೆಸರು ಪಟ್ಟಿಯಲ್ಲಿ ಹೇಗೆ ಬಂತು ಎಂಬುದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಇದು ತಾಂತ್ರಿಕ ತಪ್ಪಿನಿಂದ ಆಗಿದೆ ಎಂಬ ಬಗ್ಗೆ ಸ್ಪಷ್ಟ ಮಾತಿನಲ್ಲಿ ಹೇಳಿದ್ದಾರೆ ಎಂದಿದ್ದರು. ಇಷ್ಟೆಲ್ಲದರ ನಡುವೆ ಕರ್ನಾಟಕ ಕಾಂಗ್ರೆಸ್ ಇದೀಗ ಒಡೆದ ಮನೆಯಾಗಿ, ಸಚಿವ ಸ್ಥಾನ ಸಿಗದ ಶಾಸಕರು ಕೊತ ಕೊತ ಅಂತಿದ್ದಾರೆ. ಹೀಗಾಗಿ ಇದೆಲ್ಲಾ ಯಾವಾಗ ತಣ್ಣಗಾಗುತ್ತೆ? ಎಂಬ ವಿಚಾರವನ್ನು ಕಾದು ನೋಡಬೇಕಿದೆ.