ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಸಾಲು, ಸಾಲು ಸವಾಲು ಎದುರಾಗುತ್ತಿದೆ. ಅದರಲ್ಲೂ ಮೊಟ್ಟ ಮೊದಲ ಸವಾಲು ಎಂಬಂತೆ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ಸ್ವಂತ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದು ದೊಡ್ಡ ಸುದ್ದಿಯಾಗಿತ್ತು. ಇನ್ನು ಬೆಂಗಳೂರು ನಗರದ ಅಭಿವೃದ್ಧಿ ಖಾತೆ ವಿಚಾರವಾಗಿ ಹೈಕಮಾಂಡ್ ತನಕ ವಿಷಯ ಮುಟ್ಟಿತ್ತು. ಇನ್ನೇನು ಎಲ್ಲವೂ ತಣ್ಣಗಾಗಿ, ಎಲ್ಲಾ ಸೈಲೆಂಟ್ ಆಗಲಿದೆ ಎಂದು ಲೆಕ್ಕಾಚಾರ ಹಾಕುವ ಸಮಯದಲ್ಲೇ ಮತ್ತೊಂದು ಬಿರುಗಾಳಿ ಎದ್ದೇಳುವ ಮುನ್ಸೂಚನೆ ಇದೀಗ ಸಿಕ್ಕಿದೆ. ಹೌದು, ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸಂಪುಟ ವಿಸ್ತರಣೆಯೇ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಗಂಭೀರ ಚರ್ಚೆಯನ್ನು ಆರಂಭಿಸಿದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ವೇಗ ಪಡೆದುಕೊಳ್ಳುತ್ತಿದ್ದಂತೆ, ಹಿರಿಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ಹೆಸರು ಮತ್ತೆ ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದು ಗಮನ ಸೆಳೆದಿದೆ. ಅಂದಹಾಗೆ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಸಾಮಾನ್ಯ ನಾಯಕರಿಗೆ ಅವಕಾಶ ಕಲ್ಪಿಸುವ ಚಿಂತನೆ ನಡುವೆ, ಕರ್ನಾಟಕ ಕಾಂಗ್ರೆಸ್ ಇನ್ನಷ್ಟು ಗಟ್ಟಿಯಾಗಲು ಬೇಕಾದ ಎಲ್ಲಾ ನಿರ್ಧಾರಗಳನ್ನು ಇದೀಗ ಹೈಕಮಾಂಡ್ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಮಾಜಿ ಸಿಎಂ ಮಗ ದಿನೇಶ್ ಗುಂಡೂರಾವ್‌ಗೆ ಸಚಿವ ಸ್ಥಾನ ಹಾಗೂ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಏನು? ಎಂಬುದನ್ನ ಇಲ್ಲಿ ತಿಳಿಯೋಣ ಬನ್ನಿ.
ಮಾಜಿ ಮುಖ್ಯಮಂತ್ರಿ ಮಗನಿಗೆ ಉನ್ನತ ಸ್ಥಾನ?
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು 2 ವರ್ಷಗಳು ಮಾತ್ರ ಬಾಕಿ ಇದೆ, 2028ರ ಕರ್ನಾಟಕ ವಿಧಾನಸಭೆಯ ಎಲೆಕ್ಷನ್ ಗೆದ್ದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಪ್ಲಾನ್ ಮಾಡುತ್ತಿದೆ. ಇದೇ ಸಮಯದಲ್ಲಿ 2029ರ ಲೋಕಸಭೆ ಚುನಾವಣೆಗೆ ಕೂಡ ಈಗಿನಿಂದಲೇ ಸಿದ್ಧತೆಗಳು ಆರಂಭ ಆಗುತ್ತಾ ಇದ್ದು, ಮುಂದೆ ಏನು? ಎಂಬ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲೇ, ಅತ್ತ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಅನುಭವ ಮತ್ತು ಆಡಳಿತ ಸಾಮರ್ಥ್ಯ ಪರಿಗಣಿಸಿ ಶಾಸಕರಿಗೆ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಲೆಕ್ಕಾಚಾರ ಹಾಕುತ್ತಿದೆ. ಈ ಸಮಯದಲ್ಲೇ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಪುತ್ರರಾದ ದಿನೇಶ್ ಗುಂಡೂರಾವ್ ಅವರಿಗೆ ಉನ್ನತ ಸ್ಥಾನ ಸಿಗುವ ನಿರೀಕ್ಷೆ ಮೂಡಿದೆ.
ದಿನೇಶ್ ಗುಂಡೂರಾವ್‌ಗೆ ಹೆಚ್ಚಿನ ಜವಾಬ್ದಾರಿ?
ಮತ್ತೊಂದು ಕಡೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಕಾವು ಏರುತ್ತಿದ್ದಂತೆಯೇ, ಅನುಭವಿ ನಾಯಕ ದಿನೇಶ್ ಗುಂಡೂರಾವ್‌ಗೆ ಸಚಿವ ಸಂಪುಟದಲ್ಲಿ ಅವಕಾಶವನ್ನ ಕಲ್ಪಿಸಲು ಎಐಸಿಸಿ ಹೈಕಮಾಂಡ್ ಒಲವು ತೋರಿಸಿದೆ. ಹಾಗೇ, ಮೊದಲ ಹಂತದ ಸಂಪುಟ ರಚನೆ ವೇಳೆ ಅವಕಾಶ ಸಿಗದಿದ್ದರೂ, ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಪ್ರಮುಖ ಸ್ಥಾನ ನೀಡುವ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ & ರಾಹುಲ್ ಗಾಂಧಿ ಅವರ ಮಟ್ಟದಲ್ಲಿ ಗಂಭೀರ ಚರ್ಚೆ ಈಗಾಗಲೇ ನಡೆದಿದೆಯಂತೆ. ಮತ್ತೊಂದು ಲೆಕ್ಕಾಚಾರದ ಪ್ರಕಾರ ಬ್ರಾಹ್ಮಣ ಸಮುದಾಯದಿಂದ ಪ್ರಬಲ ನಾಯಕರಿಗೆ ಉತ್ತಮ ಸ್ಥಾನ ನೀಡುವುದು ಕೂಡ ಈಗಿನ ಮಾಸ್ಟರ್ ಪ್ಲಾನ್ ಆಗಿದೆ.
ಅಂದಹಾಗೆ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಪೀಳಿಗೆಯ ಯುವ & ಸಕ್ರಿಯ ನಾಯಕನ ಬೆಳೆಸಬೇಕು, ಎಂಬುದು ರಾಹುಲ್ ಗಾಂಧಿ ಸ್ಪಷ್ಟ ನಿಲುವು. ಬ್ರಾಹ್ಮಣ ಸಮುದಾಯದ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರಿಗೆ, ವಯೋಸಹಜ ಕಾರಣಕ್ಕೆ ಮಣೆ ಹಾಕುವುದು ಕಷ್ಟ ಆಗಬಹುದು. ಹೀಗಾಗಿ ಅದೇ ಸಮುದಾಯದ ಕ್ರಿಯಾಶೀಲ ನಾಯಕರಾದ ದಿನೇಶ್ ಗುಂಡೂರಾವ್ ಅವರಿಗೆ ಅವಕಾಶ ನೀಡಲು ವರಿಷ್ಠರು ಒಲವು ತೋರಿದ್ದಾರೆ. ಹಾಗೇ ಬೆಂಗಳೂರು ಭಾಗದಲ್ಲಿ ಕೂಡ, ಸಾಕಷ್ಟು ಹಿಡಿತವನ್ನ ಹೊಂದಿರುವ ದಿನೇಶ್ ಗುಂಡೂರಾವ್ ಅವರಿಗೆ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಸಾಮರ್ಥ್ಯ ಕೂಡ ಇದೆ ಎಂಬುದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಯಾಗಿದೆ.