ಕರ್ನಾಟಕ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆಗಳು ತೀವ್ರಗೊಂಡಿದ್ದು, ಇದೇ ತಿಂಗಳ 2ನೇ ವಾರ ಅಂದ್ರೆ ಜುಲೈ 2ನೇ ವಾರ ಆರಂಭವಾಗಲಿರುವ ಆಷಾಢ ಮಾಸಕ್ಕೂ ಮೊದಲೇ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಸಖತ್ ಸದ್ದು ಮಾಡುತ್ತಿದೆ. ಈ ಮೂಲಕ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಫಿಕ್ಸ್ ಆಯ್ತಾ? ಅಂತಾ ಸಚಿವ ಸ್ಥಾನದ ಆಕಾಂಕ್ಷಿಗಳು ಖುಷಿಯಿಂದ ನೋಡುತ್ತಿದ್ದಾರೆ.
ಮುಂಗಾರು ಅಧಿವೇಶನಕ್ಕೂ ಮೊದಲೇ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಜೊತೆಗೆ ಸಜ್ಜಾಗಿ ವಿಪಕ್ಷಗಳ ಸವಾಲು ಎದುರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಜುಲೈ 12 ಅಥವಾ 14ರ ಒಳಗೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಳ್ಳುವ ಸಾಧ್ಯತೆ ಮೇಲ್ನೋಟಕ್ಕೆ ದಟ್ಟವಾಗಿ ಕಾಣುತ್ತಿದೆ.
ಹೊಸ ಮುಖಗಳಿಗೆ ಮಣೆ ಹಾಕುವುದು ಫಿಕ್ಸ್?
ಜುಲೈ 6ರಂದು ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಭಾರತಕ್ಕೆ ಮರಳಲಿದ್ದಾರೆ. ರಾಹುಲ್ ಆಗಮನದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ. ಇದಕ್ಕಾಗಿ ಜುಲೈ 7 ಅಥವಾ 8 ರಂದು ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನೊಳಗೊಂಡ ರಾಜ್ಯ ನಾಯಕರ ತಂಡ ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿದೆ. ಹೈಕಮಾಂಡ್ ಭೇಟಿ ನಂತರ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದ್ದು, ಹೊಸ ಮುಖಗಳಿಗೆ ಮಣೆ ಹಾಕುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
18 ಹೊಸ ಸಚಿವರ ಸೇರ್ಪಡೆ?
ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದ ಸಚಿವ ಸಂಪುಟದಲ್ಲಿ ಈಗ ಒಟ್ಟು 20 ಸ್ಥಾನಗಳು ಖಾಲಿ ಉಳಿದಿವೆ. ಈ ಪೈಕಿ ಎರಡು ಸ್ಥಾನಗಳನ್ನು ಭವಿಷ್ಯದ ಲೆಕ್ಕಾಚಾರಕ್ಕಾಗಿ ಕಾಯ್ದಿರಿಸಿ, 18 ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಖಾಲಿ ಇರುವ 18 ಸಚಿವ ಸ್ಥಾನಕ್ಕೆ 50ಕ್ಕೂ ಹೆಚ್ಚು ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿಲ್ಲ ಲಾಭಿ ನಡೆಸುತ್ತಿದ್ದಾರೆ.
ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಟೂರ್ ನಡೆಸಿದ್ದು, ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಂತೆ ಮತ್ತೊಂದು ಆಕಾಂಕ್ಷಿಗಳ ಗುಂಪು ದೆಹಲಿಯನ್ನು ತಲುಪುವುದು ಪಕ್ಕಾ ಆಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಇದ್ದ ಸಚಿವರಿಗೆ ಧವಢವ ಶುರುವಾಗಿದೆ. ದಿನೇಶ್ ಗುಂಡೂರಾವ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ ಲಾಡ್, ಎಂ.ಸಿ. ಸುಧಾಕರ್, ಕೆ. ವೆಂಕಟೇಶ್, ಜಮೀರ್ ಅಹ್ಮದ್ ಖಾನ್, ಹೀಗೆ ಸಿದ್ದರಾಮಯ್ಯ ಸಂಪುಟದಲ್ಲಿ ಇದ್ದಂತಹ ಸಚಿವರು ಈಗ ಡಿಕೆಶಿ ಅವರ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಯುವ & ಹೊಸ ಮುಖಗಳಿಗೆ ಮಣೆ?
ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಂಪುಟದಲ್ಲಿ ಈಗಾಗಲೇ ಹಿರಿಯ ಸಚಿವರು ಇರುವುದರಿಂದ, ಈ ಬಾರಿ ಯುವ ಮತ್ತು ಹೊಸ ಮುಖಗಳಿಗೆ ಆದ್ಯತೆ ಸಿಗುವ ನಿರೀಕ್ಷೆ ಹೆಚ್ಚಿದೆ. ಜಿಲ್ಲಾವಾರು, ಪ್ರಾದೇಶಿಕ ಹಾಗೂ ಜಾತಿವಾರು ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕಸರತ್ತು ನಡೆಯುತ್ತಿದ್ದು, ಅರ್ಹರ ಪಟ್ಟಿ ಸಿದ್ಧವಾಗುತ್ತಿದೆ.
ಇಂದಿನ ಸಂಪುಟ ಸಭೆಯಲ್ಲಿ ಮಳೆಗಾಲ ಅಧಿವೇಶನದ ದಿನಾಂಕ ನಿಗದಿಯಾಗುವ ಸಾಧ್ಯತೆಯಿದ್ದು, ಅದು ನಿರ್ಧಾರವಾದರೆ ಸಚಿವ ಸಂಪುಟ ವಿಸ್ತರಣೆಯ ದಿನಾಂಕಕ್ಕೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ. ಆಷಾಢದ ಶೂನ್ಯ ಮಾಸ ಆರಂಭವಾಗುವ ಮುನ್ನವೇ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.