ಕರ್ನಾಟಕದ ರಾಜಕಾರಣದಲ್ಲಿ ಮತ್ತೊಮ್ಮೆ ಶಾಮನೂರು ಕುಟುಂಬದ ಪ್ರಭಾವ ಎಷ್ಟರ ಮಟ್ಟಿಗೆ ಇದೆ? ಎಂಬುದು ಇದೀಗ ಸಾಬೀತಾಗಿದೆ. ಸಚಿವ ಸಂಪುಟ ವಿಸ್ತರಣೆ ಆರಂಭಿಕ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ, ಕೊನೆ ಕ್ಷಣದಲ್ಲಿ ಹೆಸರು ಸೇರ್ಪಡೆಗೆ ಹೈಕಮಾಂಡ್ ಮೇಲೆ ತೀವ್ರ ಒತ್ತಡ ತಂದಿರುವುದು ಗ್ಯಾರಂಟಿ ಆಗಿದೆ. ಅದರಲ್ಲೂ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುವ ಮೂಲಕ ಹಿರಿಯ ನಾಯಕ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗಿದ್ರೆ ಶಾಮನೂರು ಕುಟುಂಬದ ರಾಜಕೀಯ ಮೇಲುಗೈ, ಲಿಂಗಾಯತ ಲಾಬಿಗೆ ಡಿಕೆಶಿ ಸರ್ಕಾರ ಶರಣು? ಬನ್ನಿ ಈ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.
ಅಷ್ಟಕ್ಕೂ ಮಧ್ಯ ಕರ್ನಾಟಕ ದಾವಣಗೆರೆ ರಾಜಕಾರಣದಲ್ಲಿ ಪ್ರಭಾವಿ ಲಿಂಗಾಯತ ಕುಟುಂಬವಾದ ಶಾಮನೂರು ಕುಟುಂಬದಿಂದ ಮೂವರು ಪ್ರಮುಖರು ಉನ್ನತ ಸ್ಥಾನದಲ್ಲಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ್ ಶಾಸಕರಾಗಿಯೂ & ಇವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾಗಿಯೂ ಹಾಗೂ ಇವರ ಮಗ ಸಮರ್ಥ್ ಮಲ್ಲಿಕಾರ್ಜುನ್ ದಾವಣಗೆರೆಯ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುವ ಮೂಲಕ ಒಂದೇ ಕುಟುಂಬದಲ್ಲಿ ಮೂವರು ಜನಪ್ರತಿನಿಧಿಗಳ ಹೊಂದಿರುವ ಅಪರೂಪದ ರಾಜಕೀಯ ದಾಖಲೆಯನ್ನು ಈ ಕುಟುಂಬ ಹೊಂದಿದೆ. ಹೀಗಿದ್ದರೂ ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಭಾರಿ ದೊಡ್ಡ ತಲ್ಲಣ ಎದ್ದಿತ್ತು.
ಲಿಂಗಾಯತ ಲಾಬಿಗೆ ಕಾಂಗ್ರೆಸ್ ಶರಣು?
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾದ ಬಳಿಕ, ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕುಟುಂಬದ ಹಿಡಿತ ಕಾಯ್ದುಕೊಳ್ಳುವುದು ಸವಾಲಾಗಿತ್ತು. ಈ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರು ಇರುವುದರಿಂದ ಇಷ್ಟು ವರ್ಷ ಹಿರಿಯ ನಾಯಕರಿಗೆ ಮತ ಹಾಕಿದ್ದೇವೆ, ಆದರೆ ಈ ಬಾರಿ ಬೈ ಎಲೆಕ್ಷನ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿ ಎಂದು ದೊಡ್ಡ ಮಟ್ಟದ ಲಾಬಿ ನಡೆದವು. ಈ ಬೆಳವಣಿಗೆ ಹಿಂದೆ ಜಮೀರ್ ಅಹ್ಮದ್ ಖಾನ್ ಪಾತ್ರವೂ ಇತ್ತು ಎಂಬ ಆರೋಪ & ಪ್ರತ್ಯಾರೋಪ ಕಿಡಿ ಹೊತ್ತಿಸಿತ್ತು ಕರ್ನಾಟಕ ಕಾಂಗ್ರೆಸ್‌ನಲ್ಲಿ. ಕುರುಕ್ಷೇತ್ರದಂತಿದ್ದ ರಾಜಕೀಯ ಬೆಳವಣಿಗೆ ನಡುವೆಯು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಮರ್ಥ್ ಮಲ್ಲಿಕಾರ್ಜುನ್ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು.
ಮಗನ ಚುನಾವಣೆ ಗೆಲುವಿನ ವೇಳೆ ಎದುರಾಗಿದ್ದ ಮುನಿಸು ಹಾಗೂ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಎಸ್. ಮಲ್ಲಿಕಾರ್ಜುನ್, ಸೀದಾ ದೆಹಲಿ ಮಟ್ಟಕ್ಕೆ ಹೋಗಿ ತೀವ್ರ ಲಾಬಿ ನಡೆಸಿದರು. ಒಂದು ವೇಳೆ ನನಗೆ ಸಚಿವ ಸ್ಥಾನ ನೀಡದಿದ್ದರೆ, ನನ್ನ ಮಗ & ಪತ್ನಿ ರಾಜೀನಾಮೆ ನೀಡಲಿದ್ದಾರೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರಂತೆ. ಈ ಬಗ್ಗೆ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ವಲಯದ ಮೂಲಕ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡಿ ಸಂಚಲನ ಮೂಡಿಸಿತ್ತು. ಇದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಎದೆ ನಡುಗಿಸಿದೆ, ಆ ತಕ್ಷಣವೇ ಪಟ್ಟಿಯಲ್ಲಿ ಹೆಸರು ಬದಲಾವಣೆ ಮಾಡಿ ಲಿಂಗಾಯತ ನಾಯಕನಿಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.
ಮಂಕಾಳು ವೈದ್ಯ ಹೆಸರು ಮಾಯ?
ಲಿಂಗಾಯತ ಸಮುದಾಯದ ಪ್ರಭಾವಿ ಕುಟುಂಬದ ವಿರೋಧ ಕಟ್ಟಿಕೊಳ್ಳಲು ಇಚ್ಛಿಸದ ಕಾಂಗ್ರೆಸ್ ಹೈಕಮಾಂಡ್, ಕೊನೆ ಕ್ಷಣದಲ್ಲಿ ಮಣಿದಿದೆ. ಪರಿಣಾಮವಾಗಿ ಮೊದಲ ಪಟ್ಟಿಯಲ್ಲಿದ್ದ ಮಂಕಾಳು ವೈದ್ಯ ಅವರ ಹೆಸರನ್ನ ಕೈಬಿಟ್ಟು ಆ ಸ್ಥಾನಕ್ಕೆ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರ ಸೇರ್ಪಡೆಗೊಳಿಸಲಾಯಿತು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್, ಮಂಕಾಳು ವೈದ್ಯ ಅವರ ಹೆಸರು ಪಟ್ಟಿಯಲ್ಲಿ ಹೇಗೆ ಬಂತು ಎಂಬುದು ನನಗೆ ಗೊತ್ತಿಲ್ಲ. ಬೆಳಗ್ಗೆಯೇ ಮುಖ್ಯಮಂತ್ರಿಗಳು ಇದು ತಾಂತ್ರಿಕ ತಪ್ಪಿನಿಂದ ಆಗಿದೆ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಯಾರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಎಲ್ಲಾ ಬಂಡಾಯ ಶಮನಗೊಳ್ಳಲಿವೆ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.