ರೈತರು ಭಾರಿ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಕರ್ನಾಟಕದಲ್ಲಿ ಮಳೆ ಕೈಕೊಟ್ಟ ಕಾರಣಕ್ಕೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದ್ದ ಬೀಜ ಮೊಳಕೆ ಕಾಣದೆ ಒಣಗಿ ಹೋಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಭೀಕರವಾದ ನೆರೆ ಕಾರಣಕ್ಕೆ ಸಮಸ್ಯೆ ಎದುರಿಸಿದ್ದ ಕರ್ನಾಟಕದ ರೈತರಿಗೆ ಇದೀಗ ಬರದ ಏಟು ಜೋರಾಗಿದ್ದು, ಚಿಂತೆ ಹೆಚ್ಚಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲೇ ರೈತರ ಸಾಲ ಮನ್ನಾ ಮಾಡಲು ಕೂಡ ಒತ್ತಾಯ ಕೇಳಿಬಂದಿತ್ತು ಕಳೆದ ಕೆಲವು ದಿನಗಳಿಂದ. ಹೀಗಿದ್ದಾಗಲೇ, ರೈತರ ಸಾಲ ಮನ್ನಾ ಬಗ್ಗೆ ಸದ್ಯದಲ್ಲೇ ಗುಡ್‌ನ್ಯೂಸ್ ಸಿಗುತ್ತಾ? ಬನ್ನಿ ಆ ಬಗ್ಗೆ ತಿಳಿಯೋಣ.
ರಾಜ್ಯದಲ್ಲಿ ಮಳೆ ಕೊರತೆ ಪರಿಣಾಮ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾದ ಹಿನ್ನೆಲೆಯಲ್ಲಿ ರೈತರ ಸಂಕಷ್ಟ ನಿವಾರಣೆಗೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಪರಿಗಣಿಸುತ್ತಿದೆ. ಅದೇ ರೀತಿಯಾಗಿ ರೈತರ ಸಾಲಮನ್ನಾ ಬೇಡಿಕೆಯನ್ನೂ ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದ್ದು, ಸಂಪೂರ್ಣ ಮಾಹಿತಿ ಸಂಗ್ರಹಿಸಿ ಬಳಿಕ ಸೂಕ್ತ ನಿರ್ಧಾರವನ್ನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇದರ ಜೊತೆಗೆ, ರೈತರಿಗೆ ನೆರವಾಗುವ ಉದ್ದೇಶದಿಂದಲೇ ಶೀಘ್ರದಲ್ಲೇ ಸುಮಾರು 215 ಕೋಟಿ ರೂಪಾಯಿ ಮೊತ್ತದ ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಇದು ಸಂಕಷ್ಟದಲ್ಲಿ ಇದ್ದ ರೈತರಿಗೆ ಉಸಿರು ನೀಡಿದಂತೆ ಆಗಿದ್ದು, ಅನ್ನದಾತರಿಗೆ ಇದರಿಂದ ಭಾರಿ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ.
215 ಕೋಟಿ ರೂಪಾಯಿ ರಿಲೀಸ್
ಕರ್ನಾಟಕದ ರೈತರಿಗೆ ತಕ್ಷಣ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದಲೇ ಬಾಕಿ ಉಳಿದಿರುವ ಬೆಳೆ ವಿಮೆ ಪರಿಹಾರ ಆದಷ್ಟು ಬೇಗ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 215 ಕೋಟಿ ರೂಪಾಯಿ ಮೊತ್ತ ಶೀಘ್ರವೇ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಅಂದಹಾಗೆ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ವಿಭಾಗದ ಪ್ರಗತಿ ಪರಿಶೀಲನಾ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ಬಗ್ಗೆ ಮಹತ್ವದ ಮಾಹಿತಿಯನ್ನ ಹಂಚಿಕೊಂಡರು. ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸುವುದು ಸರ್ಕಾರದ ಆದ್ಯತೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ಖಡಕ್ ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಗೆ ಸಿಎಂ ಖಡಕ್ ವಾರ್ನಿಂಗ್
ಅಲ್ಲದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯಲ್ಲ ಎಂಬ ಎಚ್ಚರಿಕೆಯನ್ನು ಕೂಡ ಸಿಎಂ ಡಿ.ಕೆ. ಶಿವಕುಮಾರ್ ಅವರು ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು & ರೈತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯ ನೇರ ಮಾಹಿತಿ ಪಡೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿ ಚಿಂತೆ ಮಾಡುತ್ತಿದ್ದ ರೈತರಿಗೆ ಶೀಘ್ರದಲ್ಲೇ ಸಾಲಮನ್ನಾ ವಿಚಾರವಾಗಿ ಸಖತ್ ಖುಷಿ ನೀಡುವ ಸುದ್ದಿ ಸಿಗುವ ಸಾಧ್ಯತೆ ಇದೀಗ ದಟ್ಟವಾಗಿದೆ.