Karnataka CM: ಸಿದ್ದರಾಮಯ್ಯ ಮನೆಗೆ ಸಿಎಂ ಡಿ.ಕೆ. ಶಿವಕುಮಾರ್ ಕುಟುಂಬ ಭೇಟಿ, ಕಾರಣ ತಿಳಿಯಿರಿ...

New Admin | July 3, 2026 - 3:54 pm

ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗಿ ಬರೋಬ್ಬರಿ 1 ತಿಂಗಳು ಕಳೆದು ಹೋಗಿದೆ. ನೋಡ ನೋಡ್ತಾ ಹೀಗೆ ಹೊಸ ಸಿಎಂ ಬಂದು 1 ತಿಂಗಳು ಪೂರ್ಣಗೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಈಗ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಸಿದ್ದರಾಮಯ್ಯ ಅವರ ಮನೆಗೆ ಇಂದು ದಿಢೀರ್ ಸಿಎಂ ಡಿ.ಕೆ. ಶಿವಕುಮಾರ್ ಅವರ ಕುಟುಂಬ ಭೇಟಿ ನೀಡಿ, ಮಹತ್ವದ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿ ಒಂದು ತಿಂಗಳು ಪೂರ್ಣಗೊಂಡ ಹಿನ್ನೆಲೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ಕುಟುಂಬ ಸದಸ್ಯರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಕನಕಪುರ ಪ್ರವಾಸಕ್ಕೂ ಮುನ್ನ ನಡೆದ ಈ ಭೇಟಿಯಲ್ಲಿ ಸಿಎಂ ಅವರ ಪತ್ನಿ ಉಷಾ ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಅವರು ಕೂಡ ಹಾಜರಿದ್ದು ಸಿದ್ದರಾಮಯ್ಯ ಅವರ ಜೊತೆಗೆ ಉಪಹಾರ ಸವಿದರು.


ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ ಸಮಯದಲ್ಲಿ ಡಿ.ಕೆ. ಸುರೇಶ್ ಅವರು ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದರು. ನಂತರ ಎಲ್ಲರೂ ಒಟ್ಟಾಗಿ ಉಪಹಾರ ಸೇವಿಸಿ ಕೆಲಕಾಲ ರಾಜಕೀಯ ಹಾಗೂ ಸಮಕಾಲೀನ ವಿಚಾರಗಳ ಕುರಿತಾಗಿ ಕೂಡ ಆತ್ಮೀಯವಾಗಿ ಚರ್ಚೆ ನಡೆಸಿದರು. ಹಾಗೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುಟುಂಬ, ಸಿದ್ದರಾಮಯ್ಯ ಅವರಿಗೆ ಸ್ಮರಣಿಕೆಯಾಗಿ ಉಡುಗೊರೆ ನೀಡಿ ಅಭಿನಂದಿಸಿದರು. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದಾರೆ ಸಿಎಂ ಡಿ.ಕೆ. ಶಿವಕುಮಾರ್.

ಆಶೀರ್ವಾದ ಸದಾ ಪ್ರೇರಣೆಯಾಗಿದೆ...

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್, 'ಕರ್ನಾಟಕದ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆ ಪೂರ್ಣಗೊಳಿಸಿದ ಅಂಗವಾಗಿ ಇಂದು ಕುಟುಂಬದೊಂದಿಗೆ ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು, ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳಲಾಯಿತು. ಶ್ರೀ ಸಿದ್ದರಾಮಯ್ಯನವರ ದೂರದೃಷ್ಟಿಯ ನಾಯಕತ್ವ, ಅಪಾರ ಆಡಳಿತ ಅನುಭವ ಹಾಗೂ ನಾಡಿನ ಜನರ ಅಭಿವೃದ್ಧಿಯತ್ತ ಅವರ ಅಚಲ ಬದ್ಧತೆ ನಮ್ಮ ರಾಜ್ಯದ ಪ್ರಗತಿಯ ಪಯಣಕ್ಕೆ ಸದಾ ಬಲ ತುಂಬಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿ, ಜನಕಲ್ಯಾಣ & ಸುಭದ್ರ ಭವಿಷ್ಯ ನಿರ್ಮಾಣಕ್ಕೆ ಸಿದ್ದರಾಮಯ್ಯನವರ ಮಾರ್ಗದರ್ಶನ ಮತ್ತು ಆಶೀರ್ವಾದ ಸದಾ ಪ್ರೇರಣೆಯಾಗಿದೆ. ಸಿದ್ದರಾಮಯ್ಯ ಅವರ ಆಶೀರ್ವಾದ ಮತ್ತು ನಿರಂತರ ಮಾರ್ಗದರ್ಶನಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.' ಎಂದು ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

ಜಿಬಿಎ ಚುನಾವಣೆ ಪಕ್ಕಾ ಆಯ್ತಾ?

10 ವರ್ಷಗಳಿಂದ ಬೆಂಗಳೂರಿನ ಪಾಲಿಕೆಗಳಿಗೆ ಚುನಾವಣೆ ನಡೆದಿಲ್ಲ, ಹೀಗಿದ್ದಾಗ ಮತ್ತೊಂದು ಕಡೆ ಇದೀಗ ಜಿಬಿಎ ಚುನಾವಣೆ ಬಗ್ಗೆ ಚರ್ಚೆ ಜೋರಾಗಿದೆ. ಇಂತಹ ಸಮಯದಲ್ಲೇ ಸರ್ಕಾರ ಕೂಡ ಎಲ್ಲಾ ರೀತಿಯ ಸಿದ್ಧತೆಗಳನ್ನ ಈಗ ಕೈಗೊಂಡಿದ್ದು, ಬಹುಶಃ ಇನ್ನೆರಡು ತಿಂಗಳಲ್ಲಿ ಚುನಾವಣೆ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಹಾಗೇ ಇದೇ ಸಮಯದಲ್ಲಿ ಟಿಕೆಟ್ ಆಕಾಂಕ್ಷಿಗಳು ಕೂಡ ಎಲೆಕ್ಷನ್ ನಡೆಯುವ ಮುನ್ಸೂಚನೆಯಲ್ಲಿ ಕಾಯುತ್ತಿದ್ದಾರೆ.